ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಪಾದಚಾರಿ ಮಾರ್ಗ ಒತ್ತುವರಿ ತೆರವು

ನಗರದ ಹಲವೆಡೆ ಕಾರ್ಯಾಚರಣೆ; ವ್ಯಾಪಾರಸ್ಥರು, ಬಿಬಿಎಂಪಿ ಸಿಬ್ಬಂದಿ ನಡುವೆ ವಾಗ್ವಾದ
Published 9 ನವೆಂಬರ್ 2023, 16:22 IST
Last Updated 9 ನವೆಂಬರ್ 2023, 16:22 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹಲವು ಭಾಗಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಆರಂಭಿಸಿದೆ. 

ಮಹದೇವಪುರ, ಬೊಮ್ಮನಹಳ್ಳಿ, ಪಶ್ಚಿಮ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ ಹಾಗೂ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಬಿಬಿಎಂಪಿ ಸಿಬ್ಬಂದಿ ಗುರುವಾರ ರಸ್ತೆ ಹಾಗೂ ಪಾದಚಾರಿ ಮಾರ್ಗದಲ್ಲಿದ್ದ ಅಂಗಡಿಗಳನ್ನು ತೆರವು ಮಾಡಿದರು.

ಕಾರ್ಯಾಚರಣೆ ವೇಳೆ ಅಂಗಡಿಗಳನ್ನು ತೆರವು ಮಾಡದಂತೆ ವ್ಯಾಪಾರಿಗಳು ಬಿಬಿಎಂಪಿ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು. ಮೊದಲೇ ನೋಟಿಸ್‌ ನೀಡಿ ಎಚ್ಚರಿಕೆ ನೀಡಲಾಗಿದೆ. ಸಾಕಷ್ಟು ಸಮಯ ನೀಡಿಯೇ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಬಿಬಿಎಂಪಿ ಸಿಬ್ಬಂದಿ ಹೇಳಿದರು.

ಮಹದೇವಪುರ ಟ್ರೇಡರ್ಸ್‌ ಅಸೋಸಿಯೇಷನ್‌ ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಮನವಿ ಹಾಗೂ ಹೈಕೋರ್ಟ್‌ ಆದೇಶದಂತೆ, ಇಬ್ಬಲೂರಿನಿಂದ ಕಾಡುಬೀಸನಹಳ್ಳಿ, ಕಾರ್ತಿಕ್‌ನಗರ ಮಾರ್ಗವಾಗಿ ಲೌರಿ ಜಂಕ್ಷನ್‌ವರೆಗೆ ಸುಮಾರು 4 ಕಿ.ಮೀ ಪಾದಚಾರಿ ಮಾರ್ಗ ತೆರವು ಮಾಡಲಾಗಿದೆ.

ಲೌರಿ ಜಂಕ್ಷನ್‌ನಿಂದ ಗರುಡಾಚಾರ್‌ಪಾಳ್ಯ ಮೆಟ್ರೊ ನಿಲ್ದಾಣ, ಶಾಂತಿನಿಕೇತನ, ಬಿಪಿಎಲ್ ಮೆಟ್ರೊ ನಿಲ್ದಾಣದವರೆಗೆ ಸುಮಾರು 3 ಕಿ.ಮೀ, ಎಚ್ಎಎಲ್ ಅಂಡರ್‌ಪಾಸ್‌, ಸುರಂಜನ್‌ದಾಸ್ ಜಂಕ್ಷನ್‌ನಿಂದ ಯಮಲೂರು ಜಂಕ್ಷನ್, ಯಶೋಮತಿ ಆಸ್ಪತ್ರೆ, ಸಿದ್ದಾಪುರ ಜಂಕ್ಷನ್, ವರ್ತೂರು ಕೋಡಿ, ಸ್ವಸ್ಥಾ ಆಸ್ಪತ್ರೆ, ಹೋಪ್‌ಫಾರಂ ಮಾರ್ಗವಾಗಿ ಸಾಯಿಬಾಬಾ ಜಂಕ್ಷನ್‌ವರೆಗೆ ಸುಮಾರು 3 ಕಿ.ಮೀ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು  ಮಾಡಲಾಗಿದೆ. ಅಂಗಡಿ, ಅನುಪಯುಕ್ತ ತಳ್ಳುವ ಗಾಡಿಗಳು, ಹಣ್ಣಿನ ಬಾಕ್ಸ್‌ಗಳನ್ನು ತೆರವುಗೊಳಿಸಲಾಗಿದೆ.

ರಾಜರಾಜೇಶ್ವರಿ ನಗರ ವಲಯ: ಕೆಂಗೇರಿ ವಿಭಾಗದಲ್ಲಿ ವಾರ್ಡ್ ಸಂಖ್ಯೆ 130 ಮತ್ತು 159ರಲ್ಲಿನ ಕೆಂಗೇರಿ ಹೊರವರ್ತುಲ ರಸ್ತೆಯ ಪಾದಚಾರಿ ಮಾರ್ಗದಲ್ಲಿದ್ದ ವ್ಯಾಪಾರಿಗಳನ್ನು ತೆರವುಗೊಳಿಸಲಾಯಿತು. ಈ ರಸ್ತೆಯನ್ನು ‘ಮಾದರಿ ರಸ್ತೆ’ಯನ್ನಾಗಿ ಮಾಡಲು ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದ್ದ, ಕಬ್ಬಿಣದ ಪೆಟ್ಟಿಗೆ(ಮಳಿಗೆ)ಗಳನ್ನು ತೆರವುಗೊಳಿಸಲಾಯಿತು. ಕಾರ್ಯಾಚರಣೆಯಲ್ಲಿ ಶಾಶ್ವತವಾಗಿ ನಿರ್ಮಾಣ ಮಾಡಿದ್ದ 10 ಕಬ್ಬಿಣದ ಪೆಟ್ಟಿಗೆಗಳು ಹಾಗೂ 46 ತಾತ್ಕಾಲಿಕ ಶೆಡ್‌ಗಳು, ತಳ್ಳುವ ಗಾಡಿಗಳನ್ನು ತೆರವುಗೊಳಿಸಲಾಯಿತು.

ಬೊಮ್ಮನಹಳ್ಳಿ ವಲಯ: ಬೆಂಗಳೂರು ದಕ್ಷಿಣ ವಿಭಾಗ, ಅಂಜನಾಪುರ ಉಪ ವಿಭಾಗದ ವಾರ್ಡ್ ನಂ.196 ಅಂಜನಾಪುರದ ಅಮೃತನಗರ ಮುಖ್ಯರಸ್ತೆ, ಕೋಣನಕುಂಟೆ ಸರ್ಕಾರಿ ಆಸ್ಪತ್ರೆ ಎದುರು ರಸ್ತೆಯಲ್ಲಿನ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಚರಣೆ ನಡೆಸಲಾಯಿತು.

ಪಶ್ಚಿಮ ವಲಯ: ರಾಜಾಜಿನಗರದ ಶ್ರೀರಾಮ ಮಂದಿರ ವಾರ್ಡ್‌ನ 10ನೇ ಮುಖ್ಯರಸ್ತೆ, ಭಾಷ್ಯಂ ವೃತ್ತದಿಂದ ಇ.ಎಸ್.ಐ ಆಸ್ಪತ್ರೆ, 12ನೇ ಮುಖ್ಯರಸ್ತೆಯವರೆಗೆ, 4 ತಳ್ಳುವ ಗಾಡಿಗಳು ಹಾಗೂ ಅಂಗಡಿಗಳ ಮೆಟ್ಟಿಲುಗಳನ್ನು ತೆರವುಗೊಳಿಸಲಾಗಿದೆ.

ಮಲ್ಲೇಶ್ವರದ ಕಾಡುಮಲ್ಲೇಶ್ವರ ವಾರ್ಡ್‌ನ  6, 7 ಮತ್ತು 8ನೇ ಅಡ್ಡರಸ್ತೆ, ಮಾರ್ಗೋಸಾ ರಸ್ತೆಯಿಂದ ಸಂಪಿಗೆ ರಸ್ತೆಯವರೆಗೆ ಸುಮಾರು 2.1 ಕಿ.ಮೀ ಉದ್ದದ ರಸ್ತೆಯಲ್ಲಿ 50 ತಳ್ಳುವ ಗಾಡಿಗಳನ್ನು ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

ಒಎಫ್‌ಸಿ ಕೇಬಲ್ ತೆರವು:

ದಕ್ಷಿಣ ವಲಯದ ವಿಜಯನಗರ ವ್ಯಾಪ್ತಿಯ ಹೊರ ಪಶ್ಚಿಮ ಕಾರ್ಡ್ ರಸ್ತೆಯ ಸರ್ವಿಸ್ ರಸ್ತೆ ಅನಧಿಕೃತವಾಗಿ ಅಳವಡಿಸಿರುವ ಒಎಫ್‌ಸಿ ಕೇಬಲ್‌ಗಳನ್ನು ತೆರವುಗೊಳಿಸಲಾಗಿದೆ. ಟೋಲ್ ಗೇಟ್ ಜಂಕ್ಷನ್‌ನಿಂದ ವಿಜಯನಗರ ಮೆಟ್ರೊ ನಿಲ್ದಾಣದವರೆಗೂ 1.3 ಕಿ.ಮೀ ರಸ್ತೆಯಲ್ಲಿ ಅಳವಡಿಸಿದ್ದ ಅನಧಿಕೃತ ಒಎಫ್‌ಸಿ ಕೇಬಲ್‌ಗಳನ್ನು ಕತ್ತರಿಸಿ 4 ಟ್ರ್ಯಾಕ್ಟರ್ ಲೋಡ್‌ಗಳಲ್ಲಿ ಸಂಗ್ರಹಿಸಿ ಸಾಗಿಸಲಾಗಿದೆ. ಮುಂದಿನ ದಿನಗಳಲ್ಲಿ ಅನಧಿಕೃತ ಕೇಬಲ್‌ಗಳನ್ನು ಅಳವಡಿಸಿದಲ್ಲಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ಸಂಬಂಧಪಟ್ಟ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ವಲಯ ಜಂಟಿ ಆಯುಕ್ತ ಡಾ. ಜಗದೀಶ್.ಕೆ.ನಾಯ್ಕ ತಿಳಿಸಿದ್ದಾರೆ. ಪೂರ್ವ ವಲಯ ವ್ಯಾಪ್ತಿಯಲ್ಲಿ ಟೆಂಡರ್ ಶೂ‌ರ್ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ಅಭಿವೃದ್ಧಿಗೊಳಿಸಿರುವ ರಸ್ತೆಗಳಲ್ಲಿ ಡಕ್ಟ್‌ಗಳಿದ್ದು ಅಲ್ಲಿಂದಲೇ ಕೇಬಲ್‌ ಅಳವಡಿಸಬೇಕು. ಅನಧಿಕೃತವಾಗಿ ಮೇಲ್ಭಾಗದಲ್ಲಿ ಅಳವಡಿಸಿರುವ ಕೇಬಲ್‌ಗಳನ್ನು ಟೆಲಿಕಾಂ ಸಂಸ್ಥೆಗಳು ತೆರವುಗೊಳಿಸಬೇಕು ಎಂದು ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT