ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ– ಮೋಡ ಹಲವು ಪ್ರಶ್ನೆ...

ಮೋಡದ ಮೋಡಿಯ ನಿಗೂಢ ಬೆನ್ನಟ್ಟಿದ ವಿಜ್ಞಾನಿ ಅಗಸ್ತ್ಯ
Last Updated 11 ಆಗಸ್ಟ್ 2019, 20:19 IST
ಅಕ್ಷರ ಗಾತ್ರ

ಬೆಂಗಳೂರು: ಮೋಡ ರೂಪುಗೊಳ್ಳುವುದು ಹೇಗೆ? ಮೋಡ ಬಿತ್ತನೆ ಮಾಡಿ ಮಳೆ ತರಿಸಿದಂತೆ, ಮಳೆಯಾಗುವುದನ್ನು ನಿಲ್ಲಿಸುವ ಉಪಾಯಗಳೇನಾದರೂ ಇವೆಯೇ. ಮೋಡವನ್ನು ಬೇಕಾದ ಕಡೆಗೆ ಸೆಳೆದೊಯ್ಯಲು ಸಾಧ್ಯವೆ?

ಮೋಡದ ಕುರಿತ ನಿಗೂಢ ಸಂಗತಿಗಳ ಕುರಿತು ವಿಜ್ಞಾನಾಸಕ್ತರ ಪ್ರಶ್ನೆಗಳ ‘ಸುರಿ ಮಳೆ’ ಇದು. ಇಟಲಿಯ ರೋಮ್‌ ವಿಶ್ವವಿದ್ಯಾಲಯದಲ್ಲಿ ‘ಫ್ಲುಯಿಡ್‌ ಡೈನಾಮಿಕ್ಸ್‌’ ಕುರಿತ ಸಂಶೋಧನೆಯಲ್ಲಿ ತೊಡಗಿರುವ ಹವಾಮಾನ ವಿಜ್ಞಾನಿ ಲೋಕಹಿತ ಅಗಸ್ತ್ಯ ಅವರು ಮೋಡಗಳ ಕುರಿತ ಕುತೂಹಲಕಾರಿ ಅಂಶಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

‘ಮುನ್ನೋಟ’ ಪುಸ್ತಕ ಮಳಿಗೆ ಭಾನುವಾರ ಏರ್ಪಡಿಸಿದ್ದ ಮಾತುಕತೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀರಾವಿಯು ಮೋಡವಾಗಿ ಮೈದಳೆಯುವ ಬಗೆ, ಮೋಡ ಕರಗಿ ಮಳೆಯಾಗುವ ಹಿಂದಿನ ವಿಸ್ಮಯಗಳ ಕುರಿತು ವಿವರಿಸಿದರು.

‘ತಾಪಮಾನ ಹೆಚ್ಚಳದಿಂದ ಭೂಮಿಯ ನೀರು ಆವಿಯಾಗಿ ವಾತಾವರಣ ಸೇರುತ್ತದೆ. ತಾಪಮಾನ ಕಡಿಮೆ ಆದಾಗ ಅದು ದ್ರವ ರೂಪ ತಳೆಯುವ ಸಾಧ್ಯತೆ ಹೆಚ್ಚು. ಆವಿ ನೀರಾಗುವಿಕೆಗೆ ಒಂದು ಆಧಾರ ಬೇಕು. ವಾಯುಮಂಡಲದಲ್ಲಿ ತೇಲಾಡುವ ದೂಳು, ಲವಣಾಂಶಗಳು ನೀರಿನ ಈ ಸಾಂದ್ರೀಕರಣ ಪ್ರಕ್ರಿಯೆಗೆ ಅವಶ್ಯಕ’ ಎಂದರು.

‘ವಾತಾವರಣದ ತೇವಾಂಶ ಸಾಕಷ್ಟು ಹೆಚ್ಚು ಇದ್ದು ಮತ್ತು ತಾಪಮಾನ ಸಾಕಷ್ಟು ಕಡಿಮೆ ಇದ್ದಾಗ ಸೂಕ್ತ ದೂಳಿನ ಅಥವಾ ಉಪ್ಪಿನ ಕಣವಿದ್ದರೆ ನೀರಾವಿ ದ್ರವ ರೂಪ ಪಡೆದು ನೀರಿನ ಹನಿ ಸೃಷ್ಟಿ ಆಗುತ್ತದೆ. ಇದರ ಗಾತ್ರ ಸುಮಾರು 1 ಮೈಕ್ರೋಮೀಟರ್‌ನಿಂದ 10 ಮೈಕ್ರೋಮೀಟರ್‌ಗಳಷ್ಟಿರುತ್ತದೆ. ಈ ಕಣವನ್ನು ಸಾಂದ್ರೀಕರಣ ಕೇಂದ್ರ ಎನ್ನಬಹುದು. ಪರಸ್ಪರ ಡಿಕ್ಕಿ ಹೊಡೆಯುವ ಇಂತಹ ನೀರಿನ ಹನಿಗಳೇ, ನಂತರ ದೊಡ್ಡ ಹನಿಗಳಾಗಿ ಮಳೆ ರೂಪದಲ್ಲಿ ಭೂಮಿಗೆ ಬೀಳುತ್ತವೆ’ ಎಂದು ಅವರು ವಿವರಿಸಿದರು.

ಮೋಡ ಬಿತ್ತನೆ–ಏನಿದರ ಮರ್ಮ?

ವಾಯುಮಂಡಲದ ತೇವಾಂಶ ಹೆಚ್ಚು ಇದ್ದರೂ ಒಮ್ಮೊಮ್ಮೆ ಮಳೆ ಬರುವಷ್ಟು ಮೋಡದ ಹನಿಗಳು ಸೃಷ್ಟಿ ಆಗುವುದಿಲ್ಲ. ಹೆಚ್ಚು ನೀರು ಅನಿಲ ರೂಪದಲ್ಲೇ ಉಳಿಯುತ್ತದೆ. ಅದನ್ನು ದ್ರವ ರೂಪಕ್ಕೆ ತರುವುದಕ್ಕೆ ಇನ್ನಷ್ಟು ಸಾಂದ್ರೀಕರಣ ಕೇಂದ್ರಗಳ ಅವಶ್ಯಕತೆ ಇದೆ. ವಿಮಾನದ ಮೂಲಕ ಮೋಡದ ಬಳಿ ಸೂಕ್ತ ರಾಸಾಯನಿಕಗಳ ಕಣಗಳನ್ನು ಚದುರಿಸುವುದನ್ನೇ ಮೋಡ ಬಿತ್ತನೆ ಎನ್ನಬಹುದು ಎಂದು ಅಗಸ್ತ್ಯ ತಿಳಿಸಿದರು.

‘ಬರಗಾಲದಲ್ಲಿ ಇದು ಉಪಯೋಗಕ್ಕೆ ಬರುವುದಿಲ್ಲ. ಮುಂಗಾರಿನಲ್ಲಿ ಮಳೆ ಹೆಚ್ಚಿಸಲು ಖಂಡಿತ ನೆರವಾಗುತ್ತದೆ. ಒಂದು ಮೋಡದಿಂದ ಎಷ್ಟು ಮಳೆ ಆಗುತ್ತದೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಹಾಗಾಗಿ ಮೋಡ ಬಿತ್ತನೆಯ ಪರಿಣಾಮವನ್ನು ಅಳೆಯುವುದು ಸುಲಭವಲ್ಲ’ ಎಂದರು.

‘ಮಳೆ ನೀರನ್ನು ಶುದ್ಧೀಕರಿಸದೆ ಕುಡಿಯಬೇಡಿ’

‘ಮಳೆ ನೀರು ಪರಿಶುದ್ಧವಾದುದು. ಅದನ್ನು ನೇರವಾಗಿ ಸೇವಿಸಬಹುದು ಎಂಬ ಭಾವನೆ ಹಲವರಲ್ಲಿದೆ. ಇದು ಸರಿಯಲ್ಲ. ಮಳೆ ನೀರಿನ ಜೊತೆ ಸಾಕಷ್ಟು ರಾಸಾಯನಿಕಗಳು ಬೆರೆತಿರುವ ಸಾಧ್ಯತೆಯೂ ಇರುತ್ತದೆ. ಕೈಗಾರಿಕೆಗಳ ಆಸುಪಾಸಿನಲ್ಲಿ ಬೀಳುವ ಮಳೆ ನೀರು ಸದಾ ಕಲುಷಿತಗೊಂಡಿರುತ್ತದೆ. ಶುದ್ಧೀಕರಿಸದೆ ಅದನ್ನು ಸೇವಿಸುವುದು ಒಳ್ಳೆಯದಲ್ಲ’ ಎಂದು ಅಗಸ್ತ್ಯ ತಿಳಿಸಿದರು.

* ಮೋಡ ಬಿತ್ತನೆಗೆ ಕಾಡುಗಳಿಗಿಂತ ಉತ್ತಮವಾದ ಸಾಧನ ಇಲ್ಲ. ಕಾಂಕ್ರೀಟ್‌ ಕಟ್ಟಡಗಳ ಜಾಗದಲ್ಲಿ ಗಿಡ ಮರವಿರುತ್ತಿದ್ದರೆ ಇಲ್ಲಿನ ಮಳೆಯ ಚಕ್ರ ಬೇರೆಯೇ ಆಗುತ್ತಿತ್ತು

- ಲೋಕಹಿತ ಅಗಸ್ತ್ಯ, ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT