ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಂಟದಲ್ಲಿ ರಿವಾಲ್ವರ್: ಪಿಎಸ್‌ಐ ಸೇರಿ ನಾಲ್ವರು ಅಮಾನತು

Published 20 ಏಪ್ರಿಲ್ 2024, 15:59 IST
Last Updated 20 ಏಪ್ರಿಲ್ 2024, 15:59 IST
ಅಕ್ಷರ ಗಾತ್ರ

ಬೆಂಗಳೂರು: ಸೊಂಟದಲ್ಲಿ ರಿವಾಲ್ವರ್ ಇಟ್ಟುಕೊಂಡು ರಿಯಾಜ್ ಅಹಮ್ಮದ್ ಎಂಬಾತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೂವಿನ ಹಾರ ಹಾಕಿ ಸನ್ಮಾನಿಸಿದ್ದ ಪ್ರಕರಣದಲ್ಲಿ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್‌ಐ) ಸೇರಿ ನಾಲ್ವರು ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರ ಮತಯಾಚಿಸಲು ಸಿದ್ದಾಪುರ ಠಾಣೆ ವ್ಯಾಪ್ತಿಯ ಭೈರಸಂದ್ರದಲ್ಲಿ ಏಪ್ರಿಲ್ 8ರಂದು ಮುಖ್ಯಮಂತ್ರಿಯವರು ರೋಡ್ ಶೋ ನಡೆಸಿದ್ದರು. ಇದೇ ಸಂದರ್ಭದಲ್ಲಿ ರಿಯಾಜ್ ಅಹಮ್ಮದ್, ಸೊಂಟದಲ್ಲಿ ರಿವಾಲ್ವರ್ ಇಟ್ಟುಕೊಂಡು ತೆರೆದ ವಾಹನ ಏರಿ ಸನ್ಮಾನಿಸಿದ್ದರು.

ಭದ್ರತಾ ಲೋಪ ಉಂಟಾಗಿದ್ದ ಬಗ್ಗೆ ತನಿಖೆ ನಡೆಸುವಂತೆ ಕಮಿಷನರ್ ಆದೇಶ ಹೊರಡಿಸಿದ್ದರು. ‍ಪ್ರಾಥಮಿಕ ತನಿಖೆ ನಡೆಸಿದ್ದ ದಕ್ಷಿಣ ವಿಭಾಗದ ಡಿಸಿಪಿ ಹಾಗೂ ಹೆಚ್ಚುವರಿ ಪೊಲೀಸ್ ಕಮಿಷನರ್ ಅವರು ಇತ್ತೀಚೆಗೆ ವರದಿ ಸಲ್ಲಿಸಿದ್ದರು.

ವರದಿ ಪರಿಶೀಲಿಸಿದ್ದ ಕಮಿಷನರ್ ಬಿ. ದಯಾನಂದ್, ಸಿದ್ದಾಪುರ ಠಾಣೆಯ ಪಿಎಸ್‌ಐ ಮೆಹಬೂಬ್ ಹುಡ್ದ, ಹೆಡ್‌ ಕಾನ್‌ಸ್ಟೆಬಲ್ ಮಂಜು ನಾಯಕ್, ಕಾನ್‌ಸ್ಟೆಬಲ್ ಸಚಿನ್ ಹಾಗೂ ಎಎಸ್‌ಐಯೊಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿದ್ದ ತೆರೆದ ವಾಹನದ ಸುತ್ತಲೂ ಪಿಎಸ್‌ಐ ಮೆಹಬೂಬ್ ಹಾಗೂ ಇತರರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಮುಖ್ಯಮಂತ್ರಿ ಅವರ ಬಳಿ ಹೋಗುವವರನ್ನು ತಪಾಸಣೆ ನಡೆಸುವ ಜವಾಬ್ದಾರಿಯೂ ಇವರದ್ದಾಗಿತ್ತು. ರಿಯಾಜ್ ಅಹಮ್ಮದ್ ಸೊಂಟದಲ್ಲಿ ರಿವಾಲ್ವರ್ ಇಟ್ಟುಕೊಂಡು ಮುಖ್ಯಮಂತ್ರಿ ಬಳಿ ಹೋಗುವಾಗ ಯಾರೊಬ್ಬರೂ ತಡೆದಿರಲಿಲ್ಲವೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT