ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಟ್ಟೆಯಲ್ಲಿ ₹ 11ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ!

Last Updated 21 ಆಗಸ್ಟ್ 2021, 21:02 IST
ಅಕ್ಷರ ಗಾತ್ರ

ಬೆಂಗಳೂರು: ಕಿಡ್ನಿ ಶಸ್ತ್ರಚಿಕಿತ್ಸೆಗೆಂದು ವೀಸಾ ಪಡೆದು ನಗರಕ್ಕೆ ಬಂದಿದ್ದ ಆಫ್ರಿಕಾ ಪ್ರಜೆಯೊಬ್ಬರ ಹೊಟ್ಟೆಯಲ್ಲಿ ₹ 11 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದ್ದು, ಆತನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

‘ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ಬಂದಿಳಿದಿದ್ದ ಆಫ್ರಿಕಾ ಪ್ರಜೆಯನ್ನು ಪರಿಶೀಲನೆಗೆ ಒಳಪಡಿಸಲಾಗಿತ್ತು. ಆತನ ಹೊಟ್ಟೆಯಲ್ಲಿ 1 ಕೆ.ಜಿ 300 ಗ್ರಾಂ ತೂಕದ ಕೊಕೇನ್ ಮಾತ್ರೆಗಳು ಸಿಕ್ಕಿವೆ. ಆತ, ಅಂತರರಾಷ್ಟ್ರೀಯ ಮಾದಕ ವಸ್ತು ಸಾಗಣೆದಾರನೆಂಬ ಅನುಮಾನವಿದೆ. ತನಿಖೆ ಮುಂದುವರಿದಿದೆ’ ಎಂದು ಮೂಲಗಳು ಹೇಳಿವೆ.

‘ವಿಮಾನದ ಮೂಲಕ ಡ್ರಗ್ಸ್ ಸಾಗಿಸುತ್ತಿದ್ದ ಬಗ್ಗೆ ಡಿಆರ್‌ಐ ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು. ನಿಲ್ದಾಣದಲ್ಲಿ ಮೊಕ್ಕಾಂ ಹೂಡಿದ್ದ ಅಧಿಕಾರಿಗಳು, ಪ್ರಯಾಣಿಕರ ಮೇಲೆ ಕಣ್ಣಿಟ್ಟಿದ್ದರು. ಆಫ್ರಿಕಾದಿಂದ ಬಂದಿದ್ದ 30 ವರ್ಷದ ವ್ಯಕ್ತಿ, ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಆತನನ್ನು ವಿಚಾರಿಸಿದಾಗ, ವೈದ್ಯಕೀಯ ವೀಸಾ ತೋರಿಸಿದ್ದ. ಕಿಡ್ನಿ ಶಸ್ತ್ರಚಿಕಿತ್ಸೆಗಾಗಿ ನಗರಕ್ಕೆ ಬಂದಿರುವುದಾಗಿ ಹೇಳಿದ್ದ. ಹೊಟ್ಟೆ ನೋವೆಂದು ನರಳಾಡಿದ್ದ.’

‘ನರಳಾಟ ನೋಡಿದ್ದ ಅಧಿಕಾರಿಗಳು, ತಿಂಡಿ ಹಾಗೂ ನೀರು ಕೊಟ್ಟಿದ್ದರು. ಎರಡನ್ನೂ ನಿರಾಕರಿಸಿದ್ದ ಆರೋಪಿ, ತನ್ನನ್ನು ನಿಲ್ದಾಣದಿಂದ ಹೊರಗೆ ಕಳುಹಿಸುವಂತೆ ಹೇಳಿದ್ದ. ಆತನ ನಡೆಯಿಂದ ಅಧಿಕಾರಿಗಳಿಗೆ ಅನುಮಾನ ಬಂದಿತ್ತು. ಕೂಡಲೇ ಆತನನ್ನು ವಶಕ್ಕೆ ಪಡೆದ ಅಧಿಕಾರಿಗಳು, ದೇಹದ ಸ್ಕ್ಯಾನಿಂಗ್‌ಗೆ ಒಳಪಡಿಸಿದ್ದರು. ಅದೇ ವೇಳೆಯೇ ಆತನ ಹೊಟ್ಟೆಯಲ್ಲಿ ಮಾತ್ರೆಗಳು ಇರುವುದು ಪತ್ತೆಯಾಯಿತು. ವೈದ್ಯರ ಸಹಾಯದಿಂದ ಮಾತ್ರೆಗಳನ್ನು ಹೊರಗೆ ತೆಗೆದಾಗ, ಅವು ಕೊಕೇನ್ ಮಾತ್ರೆಗಳೆಂಬುದು ತಿಳಿಯಿತು’ ಎಂದೂ ಮೂಲಗಳು ತಿಳಿಸಿವೆ.

‘ಆರೋಪಿ ಇದುವರೆಗೂ ಹಲವು ಬಾರಿ ನಗರಕ್ಕೆ ಬಂದು ಹೋಗಿರುವ ಮಾಹಿತಿ ಇದೆ. ನಗರದ ವ್ಯಕ್ತಿಯೊಬ್ಬರಿಗೆ ಡ್ರಗ್ಸ್ ಕೊಡಲು ಬಂದಿದ್ದ ಅನುಮಾನವಿದೆ. ಆ ವ್ಯಕ್ತಿ ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT