ಶುಕ್ರವಾರ, ಜನವರಿ 27, 2023
27 °C
ತಮ್ಮನ ಜೊತೆ ತಂಡ ಕಟ್ಟಿದ್ದ ಗುತ್ತಿಗೆ ನೌಕರ * ಶೇ 50–60ರಷ್ಟು ಕಮಿಷನ್

ಕಮಿಷನ್ ಆಸೆ: ಅನರ್ಹರ ಪಾಲಾದ ವಿದ್ಯಾರ್ಥಿವೇತನ

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಗುತ್ತಿಗೆ ನೌಕರ ಮುಜಾಹಿದ್ ಪಾಷಾ, ಕಾರ್ಮಿಕರ ಮಕ್ಕಳಿಗಾಗಿ ನೀಡುತ್ತಿದ್ದ ವಿದ್ಯಾರ್ಥಿವೇತನವನ್ನು ಲಪಟಾಯಿಸಲು ತಮ್ಮನ ಜೊತೆ ಸೇರಿ ತಂಡ ಕಟ್ಟಿದ್ದರು. ಶೇ 50–60ರಷ್ಟು ಕಮಿಷನ್ ಆಸೆಗಾಗಿ ವಿದ್ಯಾರ್ಥಿವೇತನವನ್ನು ಅನರ್ಹರ ಪಾಲಾಗಿಸಿದ್ದರು’ ಎಂಬ ಸಂಗತಿ ತನಿಖೆಯಿಂದ ಹೊರಬಿದ್ದಿದೆ.

ತುಮಕೂರು ಜಿಲ್ಲೆಯ ಕ್ಯಾತ್ಸಂದ್ರ ಠಾಣೆಯಲ್ಲಿ ದಾಖಲಾಗಿದ್ದ ವಿದ್ಯಾರ್ಥಿವೇತನ ವಂಚನೆ ಪ್ರಕರಣದಲ್ಲಿ ಮುಜಾಹಿದ್ ಪಾಷಾನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

‘ತುಮಕೂರಿನ ಎಚ್‌ಎಂಎಸ್‌ಐಟಿ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿದ್ದ ಮುಜಾಹಿದ್, ಕಾರ್ಮಿಕರ ಕಲ್ಯಾಣ ಮಂಡಳಿಯ ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್ (ಎಸ್‌ಎಸ್‌ಪಿ) ವಿಭಾಗದಲ್ಲಿ ಗುತ್ತಿಗೆ ನೌಕರನಾಗಿ ಕೆಲಸಕ್ಕೆ ಸೇರಿದ್ದ. ಮಂಡಳಿಯಿಂದ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ಮಂಜೂರು ಮಾಡುವ ತಂಡದಲ್ಲಿದ್ದ. ಈತನ ಮೇಲೆ ನೋಡಲ್ ಅಧಿಕಾರಿಯೊಬ್ಬರು ಕೆಲಸ ಮಾಡುತ್ತಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಎಸ್‌ಎಸ್‌ಪಿ ಮೂಲಕ ಬರುವ ಅರ್ಜಿಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳ ಖಾತೆಗೆ ಹಣ ಜಮೆ ಮಾಡುವ ವ್ಯವಸ್ಥೆ ಬಗ್ಗೆ ಮುಜಾಹಿದ್ ತಿಳಿದುಕೊಂಡಿದ್ದ. ಹೀಗಾಗಿ, ತಮ್ಮನಾದ ಮೊಹಮ್ಮದ್ ಅಜೀಮ್ ಜೊತೆ ವಿದ್ಯಾರ್ಥಿವೇತನ ದೋಚಲು ಸಂಚು ರೂಪಿಸಿದ್ದ’ ಎಂದು ತಿಳಿಸಿದರು.

ಕಮಿಷನ್ ಆಸೆಗೆ ಕೃತ್ಯ: ‘ತುಮಕೂರು ಎಚ್‌ಎಂಎಸ್‌ಐಟಿ ಸೇರಿದಂತೆ ಹಲವು ಕಾಲೇಜುಗಳಿಗೆ ಹೋಗುತ್ತಿದ್ದ ಆರೋಪಿಗಳು, ಅಲ್ಲಿಯ ವಿದ್ಯಾರ್ಥಿಗಳನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ಕಟ್ಟಡ ಕಾರ್ಮಿಕರ ಮಕ್ಕಳಲ್ಲದಿದ್ದರೂ ಅವರ ಆಧಾರ್ ಹಾಗೂ ಇತರೆ ದಾಖಲೆಗಳನ್ನು ಪಡೆಯುತ್ತಿದ್ದರು. ತಂದೆಯ ದಾಖಲೆಗಳನ್ನೂ ಸಂಗ್ರಹಿಸುತ್ತಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ನಕಲಿ ದಾಖಲೆ ಮೂಲಕ ಕಾರ್ಮಿಕರ ನೋಂದಣಿಯ ಗುರುತಿನ ಚೀಟಿ ಸಿದ್ಧಪಡಿಸಿ, ವಿದ್ಯಾರ್ಥಿಗಳ ಹೆಸರಿನಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕುತ್ತಿದ್ದರು. ವಿದ್ಯಾರ್ಥಿಗಳ ಪಟ್ಟಿಯನ್ನು ಮುಜಾಹಿದ್‌ಗೆ ಕಳುಹಿಸುತ್ತಿದ್ದರು. ಎಸ್‌ಎಸ್‌ಪಿ ವಿಭಾಗಕ್ಕೆ ಬರುತ್ತಿದ್ದ ಅರ್ಜಿಗಳನ್ನು ಪರಿಶೀಲನೆ ನಡೆಸದೇ ಮುಂದಕ್ಕೆ ಕಳುಹಿಸುತ್ತಿದ್ದ ಮುಜಾಹಿದ್, ವಿದ್ಯಾರ್ಥಿಗಳ ಖಾತೆಗೆ ಹಣ ಜಮೆಯಾಗುವಂತೆ ನೋಡಿಕೊಳ್ಳುತ್ತಿದ್ದರು. ನಂತರ, ವಿದ್ಯಾರ್ಥಿಗಳ ಬಳಿಯಿಂದ ಶೇ 50ರಿಂದ ಶೇ 60ರಷ್ಟು ಕಮಿಷನ್
ಪಡೆಯುತ್ತಿದ್ದರು.’

‘ಎಂಜಿನಿಯರಿಂಗ್, ವೈದ್ಯಕೀಯ, ಪದವಿ ಸೇರಿ ಹಲವು ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ 100ಕ್ಕೂ ಹೆಚ್ಚು ಅನರ್ಹ ವಿದ್ಯಾರ್ಥಿಗಳಿಗೆ ತಲಾ ₹50 ಸಾವಿರದಿಂದ ₹75 ಸಾವಿರ ವಿದ್ಯಾರ್ಥಿವೇತನ ಮಂಜೂರು ಮಾಡಿಸಿರುವ ಆರೋಪಿಗಳು, ಮಂಡಳಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಮಾಹಿತಿ ಇದೆ. ಕೃತ್ಯದಲ್ಲಿ ಬೇರೆ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದನ್ನು ತಿಳಿಯಲು ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

‘ಕಾರ್ಮಿಕ ಅಧಿಕಾರಿಗಳೊಂದಿಗೆ ಸೇರಿ ವಸೂಲಿ: ವಿದ್ಯಾರ್ಥಿ ದೂರು’

‘ಕಟ್ಟಡ ಕಾರ್ಮಿಕರೊಬ್ಬರ ಮಗ, ಎಚ್‌ಎಂಎಸ್‌ಐಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರಿಗೆ ಮಂಡಳಿಯಿಂದ ₹ 50 ಸಾವಿರ ವಿದ್ಯಾರ್ಥಿವೇತನ ಮಂಜೂರಾಗಿತ್ತು. ಇವರನ್ನು ಸಂಪರ್ಕಿಸಿದ್ದ ಆರೋಪಿಗಳು, ‘ನಾವೇ ವಿದ್ಯಾರ್ಥಿವೇತನ ಕೊಡಿಸಿದ್ದೇವೆ. ಕಮಿಷನ್ ₹ 30,000 ಕೊಡು’ ಎಂಬುದಾಗಿ ಹೇಳಿ ಪೀಡಿಸುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕಮಿಷನ್ ನೀಡಲು ಒಪ್ಪದ ವಿದ್ಯಾರ್ಥಿ, ‘ನಮ್ಮ ತಂದೆ ಕಟ್ಟಡ ಕಾರ್ಮಿಕ. ವಿದ್ಯಾರ್ಥಿವೇತನಕ್ಕೆ ನಾನು ಅರ್ಹನಿದ್ದೇನೆ. ಯಾವುದೇ ಕಮಿಷನ್ ನೀಡುವುದಿಲ್ಲ’ ಎಂದಿದ್ದರು. ಕೋಪಗೊಂಡ ಆರೋಪಿಗಳು ಕೊಲೆ ಬೆದರಿಕೆಯೊಡ್ಡಿದ್ದರು. ಬೇಸತ್ತ ವಿದ್ಯಾರ್ಥಿ ಕ್ಯಾತ್ಸಂದ್ರ ಠಾಣೆಗೆ ದೂರು ನೀಡಿದ್ದರು.

’ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಸೇರಿಕೊಂಡು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಬೆದರಿಸಿ ಆರೋಪಿಗಳು ಹಣ ವಸೂಲಿ ಮಾಡುತ್ತಿದ್ದಾರೆ’ ಎಂದು ವಿದ್ಯಾರ್ಥಿ ಆರೋಪಿಸಿದ್ದರು. ಆರೋಪಿಗಳಾದ ಮೊಹಮ್ಮದ್ ಅಜೀಮ್, ರಹೀಮ್ ಬೇಗ್, ಎಂ. ವಸೀಮ್ ಹಾಗೂ ಮುಫೀಜ್ ಎಂಬುವರನ್ನು ಬಂಧಿಸಲಾಗಿತ್ತು. ಪ್ರಮುಖ ಆರೋಪಿ ಮುಜಾಹೀದ್ ಪಾಷಾ ತಲೆಮರೆಸಿಕೊಂಡಿದ್ದ. ಇದೀಗ ಸಿಕ್ಕಿಬಿದ್ದಿದ್ದಾನೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಸದ್ಯಕ್ಕೆ ಯಾವುದೇ ಪುರಾವೆಗಳು ಸಿಕ್ಕಿಲ್ಲ’ ಎಂದು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು