ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊರೆಯೆಂದು ಅಲ್ಪಸಂಖ್ಯಾತರು ಬಿಂಬಿತ: ಮುಜಾಫರ್ ಅಸ್ಸಾದಿ

‘ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು’ ಗೋಷ್ಠಿಯಲ್ಲಿ ಮುಜಾಫರ್ ಅಸ್ಸಾದಿ ಅಭಿಮತ
Published 25 ಫೆಬ್ರುವರಿ 2024, 15:43 IST
Last Updated 25 ಫೆಬ್ರುವರಿ 2024, 15:43 IST
ಅಕ್ಷರ ಗಾತ್ರ

ಬೆಂಗಳೂರು: ‘ಇವತ್ತಿನ ಸಂದರ್ಭದಲ್ಲಿ ಅಲ್ಪಸಂಖ್ಯಾತರು ಅಭಿವೃದ್ಧಿಗೆ ಕೊಡುಗೆ ನೀಡುತ್ತಿಲ್ಲ, ಅವರು ಈ ಸಮಾಜಕ್ಕೆ ಹೊರೆ ಎಂಬ ಸಂಗತಿಯನ್ನು ‘ವಾಟ್ಸ್‌ಆ್ಯಪ್’ ವಿಶ್ವವಿದ್ಯಾಲಯಗಳಲ್ಲಿ ಹರಡಲಾಗುತ್ತಿದೆ. ಆದರೆ, ಇದು ವಾಸ್ತವವಲ್ಲ’ ಎಂದು ಅಂಕಣಕಾರ ಮುಜಾಫರ್ ಅಸ್ಸಾದಿ ತಿಳಿಸಿದರು. 

ಸಮಾಜ ಕಲ್ಯಾಣ ಇಲಾಖೆ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ’ದಲ್ಲಿ ‘ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು’ ಗೋಷ್ಠಿಯಲ್ಲಿ ಮಾತನಾಡಿದರು.

‘ಕರ್ನಾಟಕದ ಸಂದರ್ಭದಲ್ಲಿ ಅಲ್ಪಸಂಖ್ಯಾತರು ಅಭಿವೃದ್ಧಿಯ ಭಾಗವಾಗಿದ್ದಾರೆ. ಅಲ್ಪಸಂಖ್ಯಾತರ ಮಾದರಿಗಳಲ್ಲಿ ದಕ್ಷಿಣ ಕನ್ನಡದ ಮಂಗಳೂರಿನ ಬ್ಯಾರಿ ಸಮುದಾಯ ಉತ್ತಮ ಉದಾಹರಣೆ. ಸಣ್ಣ ವ್ಯಾಪಾರ ಮಾಡುತ್ತಿದ್ದ ಈ ಸಮುದಾಯದವರು ಈಗ ದೊಡ್ಡದಾಗಿ ಬೆಳೆದಿದ್ದಾರೆ. ಕರ್ನಾಟಕ ಹಾಗೂ ಮಂಗಳೂರಿನ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ವಿಶ್ವವಿದ್ಯಾಲಯ, ಎಂಜಿನಿಯರಿಂಗ್ ಕಾಲೇಜು, ಸಮುದಾಯ ಭವನಗಳನ್ನು ನಿರ್ಮಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಅಲ್ಪಸಂಖ್ಯಾತರಲ್ಲಿ ಬಹುತ್ವವಿಲ್ಲ, ಪ್ರತಿಯೊಬ್ಬ ಅಲ್ಪಸಂಖ್ಯಾತನೂ ಏಕರೂಪಿ ಎಂಬ ಪರಿಕಲ್ಪನೆ ಹೊಂದಲಾಗುತ್ತಿದೆ. ಒಂದೇ ಧರ್ಮ, ಒಂದೇ ಸಾಮಾಜಿಕ ಮೌಲ್ಯ ಹೊಂದಿದ ಸಮುದಾಯವೆಂದು ಚಿತ್ರಿಸಲಾಗುತ್ತಿದೆ. ಇದು ಒಂದು ರೀತಿಯ ತಪ್ಪು ಕಲ್ಪನೆ‘ ಎಂದರು. 

‘ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚಿಸುವಾಗ ಅಲ್ಪಸಂಖ್ಯಾತರ ಕೊಡುಗೆಗಳನ್ನೂ ಸ್ಮರಿಸಬೇಕು. ಅವರನ್ನು ಕೇವಲ ಮೀಸಲಾತಿ ಪಡೆದ ಸಮುದಾಯವೆಂದು ನೋಡಬಾರದು’ ಎಂದು ಹೇಳಿದರು. 

ಸಾಮಾಜಿಕ ಹೋರಾಟಗಾರ್ತಿ ದು. ಸರಸ್ವತಿ, ‘ಟಾಟಾ, ಬಿರ್ಲಾ ಅವರ ಪರಂಪರೆಯಿಂದ ಅಂಬಾನಿ, ಅದಾನಿ ಅವರ ಪರಂಪರೆಗೆ ಬಂದಿದ್ದೇವೆ. ಎಲ್ಲ ಸಾರ್ವಜನಿಕ ಉದ್ದಿಮೆಗಳು ಸ್ಥಗಿತವಾಗಿ ಮೂರ್ನಾಲ್ಕು ದಶಕಗಳಾಗಿವೆ. ಖಾಸಗಿ ವಲಯದಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವುದು ಅಪಹಾಸ್ಯವಾಗಿದೆ. ಅಸಂಘಟಿತ ವಲಯದಲ್ಲಿ ಹೆಚ್ಚಿನ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಗಾರ್ಮೆಂಟ್ಸ್‌ ಉದ್ಯಮದಲ್ಲಿ ಶ್ರಮಿಸುತ್ತಿರುವ ಮಹಿಳೆಯರಿಗೆ ಕನಿಷ್ಠ ವೇತನವೂ ಸಿಗುತ್ತಿಲ್ಲ. ನಗರದ ಸ್ವಚ್ಛತೆಗೆ ದುಡಿಯುತ್ತಿರುವ ಪೌರಕಾರ್ಮಿಕರಿಗೆ ಸೂಕ್ತ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿಲ್ಲ. ಆಶಾ, ಅಂಗನವಾಡಿ, ಬಿಸಿಯೂಟದ ಕಾರ್ಯಕರ್ತೆಯರಿಗೆ ಸಹಾಯಧನ ಮಾತ್ರ ಒದಗಿಸಲಾಗುತ್ತಿದೆ. ಅಗತ್ಯವಿರುವ ಕೆಲಸಕ್ಕೆ ಕನಿಷ್ಠ ವೇತನವನ್ನೂ ಒದಗಿಸದಿರುವುದೂ ವಿಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸಿದರು. 

‌ಅಂಕಣಕಾರ ಕೆ.ಎನ್. ಲಿಂಗಪ್ಪ, ‘ಶಾಶ್ವತ ಹಿಂದುಳಿದ ಆಯೋಗವು ಪ್ರತಿ ವರ್ಷ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮಾಡಬೇಕು. ಆದರೆ, ಆ ಸಮೀಕ್ಷೆ ನಡೆದಿಲ್ಲ. ಅಲೆಮಾರಿ, ಅರೆ ಅಲೆಮಾರಿಗಳ ಸ್ಥಿತಿ ಶೋಚನೀಯವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT