ಗುರುವಾರ , ಜುಲೈ 29, 2021
27 °C

ಇಂದಿರಾ ಕ್ಯಾಂಟೀನ್‌: ಉಚಿತ ಆಹಾರ ಮುಂದುವರಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ನಿಯಂತ್ರಣಕ್ಕಾಗಿ ಜಾರಿಗೊಂಡಿದ್ದ ಲಾಕ್‌ಡೌನ್‌ ತೆರವಾಗುತ್ತಿದ್ದಂತೆಯೇ ಬಿಬಿಎಂಪಿಯು ಇಂದಿರಾ ಕ್ಯಾಂಟೀನ್‌ಗಳಲ್ಲಿ ಬಡವರಿಗೆ ಉಚಿತ ಆಹಾರ ಪೊಟ್ಟಣಗಳನ್ನು ನೀಡುವುದನ್ನು ಸೋಮವಾರದಿಂದ ದಿಢೀರ್‌ ಸ್ಥಗಿತಗೊಳಿಸಿದೆ.

ಲಾಕ್‌ಡೌನ್‌ ತೆರವಾದರೂ ಅನೇಕ ಕೂಲಿ ಕಾರ್ಮಿಕರು ಈಗಲೂ ಒಪ್ಪೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ. ಇನ್ನೂ ನಾಲ್ಕೈದು ದಿನಗಳವರೆಗಾದರೂ ಉಚಿತ ಆಹಾರ ಪೊಟ್ಟಣ ನೀಡುವುದನ್ನು ಮುಂದುವರಿಸಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ.

‘ಉಚಿತ ಆಹಾರ ಸಿಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡು ಇಂದೂ ಕೆಲವರು ನಮ್ಮ ಕ್ಯಾಂಟೀನ್‌ಗೆ ಬಂದರು. ಇವತ್ತಿನಿಂದ ಹಣ ನೀಡಿ ಆಹಾರ ಪಡೆಯಬೇಕೆಂದು ತಿಳಿಸಿದೆವು. ಕೆಲವರ ಬಳಿ ₹ 10 ಕೂಡಾ ಇರಲಿಲ್ಲ. ಲಾಕ್‌ಡೌನ್‌ ತೆರವಾದರೂ ಬಡವರ ಸ್ಥಿತಿ ಸುಧಾರಿಸಲು ಇನ್ನಷ್ಟು ಸಮಯ ಬೇಕು. ಇನ್ನೂ ಒಂದು ವಾರ ಕಾಲ ಉಚಿತ ಆಹಾರ ಪೊಟ್ಟಣ ನೀಡುವುದನ್ನು ಮುಂದುವರಿಸಿದ್ದರೆ ಒಳ್ಳೆಯದಿತ್ತು’ ಎಂದು ರಾಜಾಜಿನಗರದ ಇಂದಿರಾ ಕ್ಯಾಂಟೀನ್‌ನ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಾಕ್‌ಡೌನ್‌ ತೆರವಾದರೂ ನಮಗೆ ಇನ್ನೂ ಕೆಲಸ ಸಿಗುತ್ತಿಲ್ಲ. ಜನಜೀವನ ಸಹಜ ಸ್ಥಿತಿಗೆ ಬರಲು ಇನ್ನೂ ನಾಲ್ಕೈದು ದಿನಗಳಾದರೂ ಬೇಕು. ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ನೀಡಿದ್ದರಿಂದ ನಮಗೆ ಅನುಕೂಲವಾಗುತ್ತಿತ್ತು. ಇನ್ನೂ ಸ್ವಲ್ಪ ದಿನ ಉಚಿತವಾಗಿ ಆಹಾರ ನೀಡಬೇಕು’ ಎಂದು ಕೂಲಿ ಕಾರ್ಮಿಕ ಸಿದ್ದಯ್ಯ ಒತ್ತಾಯಿಸಿದರು.

‘ಈ ಬಗ್ಗೆ ನಮ್ಮ ಹಂತದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಸರ್ಕಾರ ತೀರ್ಮಾನ ಕೈಗೊಂಡರೆ ಉಚಿತ ಆಹಾರ ನೀಡುವುದನ್ನು ಮುಂದುವರಿಸಬಹುದು’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

91.86 ಲಕ್ಷ ಆಹಾರ ಪೊಟ್ಟಣ ಉಚಿತ ವಿತರಣೆ

‘ಲಾಕ್‌ಡೌನ್‌ ಸಂದರ್ಭದಲ್ಲಿ ಬಿಬಿಎಂ‍ಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳಲ್ಲಿ 40 ದಿನಗಳಲ್ಲಿ ಒಟ್ಟು 91.86 ಲಕ್ಷ ಆಹಾರದ ಪೊಟ್ಟಣಗಳನ್ನು ಬಡವರಿಗೆ ಉಚಿತವಾಗಿ ವಿತರಿಸಲಾಗಿದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಉಚಿತ ಆಹಾರ ವಿತರಣೆಯ ಕೊನೆಯ ದಿನವಾದ ಭಾನುವಾರ 96,742 ಮಂದಿ ಬೆಳಗ್ಗಿನ ಉಪಾಹಾರ, 74,236 ಮಂದಿ ಮಧ್ಯಾಹ್ನದ ಊಟ ಹಾಗೂ 57,166 ಮಂದಿ ರಾತ್ರಿ ಊಟವನ್ನು ಇಂದಿರಾ ಕ್ಯಾಂಟೀನ್‌ನಲ್ಲಿ ಪಡೆದುಕೊಂಡಿದ್ದಾರೆ. ನಿತ್ಯವೂ ಬೆಳಿಗ್ಗೆ ಸರಾಸರಿ 97 ಸಾವಿರ ಉಪಾಹಾರ, ಮಧ್ಯಾಹ್ನ 80 ಸಾವಿರ ಊಟ ಹಾಗೂ ರಾತ್ರಿ 59 ಸಾವಿರ ಊಟದ ಪೊಟ್ಟಣಗಳನ್ನು ಹಂಚಲಾಗಿದೆ’ ಎಂದು ಅವರು ವಿವರಿಸಿದರು.

‘ಆಹಾರವನ್ನು ಉಚಿತವಾಗಿ ವಿತರಿಸಲು ಆರಂಭಿಸಿದ ಬಳಿಕ ಬೇಡಿಕೆ ಹೆಚ್ಚಾಗಿತ್ತು. ಸೋಮವಾರ ಬೇಡಿಕೆ ಕಡಿಮೆ ಇತ್ತು’ ಎಂದು ತಿಳಿಸಿದರು. 

ಅಂಕಿ ಅಂಶ

37.78 ಲಕ್ಷ : ಲಾಕ್‌ಡೌನ್‌ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳಲ್ಲಿ 40 ದಿನಗಳಲ್ಲಿ ವಿತರಿಸಿದ ಬೆಳಗ್ಗಿನ ಉಪಾಹಾರದ ಪೊಟ್ಟಣಗಳು

31.20 ಲಕ್ಷ: 40 ದಿನಗಳಲ್ಲಿ ಮಧ್ಯಾಹ್ನ ವಿತರಿಸಿದ ಆಹಾರದ ಪೊಟ್ಟಣಗಳು 

22.88 ಲಕ್ಷ:40 ದಿನಗಳಲ್ಲಿ ರಾತ್ರಿ ವಿತರಿಸಿದ ಆಹಾರದ ಪೊಟ್ಟಣಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು