ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವರ್ಣಾಹತುಶಾಹಿ’ ವ್ವವಸ್ಥೆ ಇನ್ನೂ ಮುಂದುವರಿದಿದೆ: ಸಾಹಿತಿ ಬರಗೂರು ರಾಮಚಂದ್ರಪ್ಪ

‘ಮಹಾಡ್‌ ಸತ್ಯಾಗ್ರಹ: ಇತಿಹಾಸ ಮತ್ತು ವರ್ತಮಾನದ ಭಾರತ’ ವಿಚಾರಸಂಕಿರಣದಲ್ಲಿ ಬರಗೂರು
Published 30 ಮಾರ್ಚ್ 2024, 14:34 IST
Last Updated 30 ಮಾರ್ಚ್ 2024, 14:34 IST
ಅಕ್ಷರ ಗಾತ್ರ

ಬೆಂಗಳೂರು: ವಸಾಹತುಶಾಹಿ ವ್ಯವಸ್ಥೆ ಕೊನೆಗೊಂಡಿದ್ದರೂ ‘ವರ್ಣಾಹತುಶಾಹಿ’ (ವರ್ಣಾಶ್ರಮ) ವ್ಯವಸ್ಥೆ ಮುಂದುವರಿದಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಮಹಾಡ್‌ ಸತ್ಯಾಗ್ರಹ: ಇತಿಹಾಸ ಮತ್ತು ವರ್ತಮಾನದ ಭಾರತ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಬೇಡ್ಕರ್‌ ಅವರು ಚೌಡರ್ ಕೆರೆಗೆ ಇಳಿದು ನೀರನ್ನು ಎತ್ತಿ ಹಿಡಿದು ಮಹಾಡ್ ಸತ್ಯಾಗ್ರಹದ ಮೂಲಕ ವರ್ಣಾಶ್ರಮದ ವಿರುದ್ಧ ಸಮರ ಸಾರಿದರು. ಮಹಾತ್ಮ ಗಾಂಧೀಜಿ ಸಮುದ್ರದ ಬದಿಯಲ್ಲಿ ಉಪ್ಪನ್ನು ಎತ್ತಿ ಹಿಡಿದು ಉಪ್ಪಿನ ಸತ್ಯಾಗ್ರಹದ ಮೂಲಕ ವಸಾಹತುಶಾಹಿ ವಿರುದ್ಧ ಸಮರ ಸಾರಿದರು. ಉಪ್ಪಿನ ಸತ್ಯಾಗ್ರಹ ಈಗ ಇತಿಹಾಸವಾಗಿದೆ. ಆದರೆ, ಮಹಾಡ್‌ ಸತ್ಯಾಗ್ರಹ ಇಂದಿಗೂ ಪ್ರಸ್ತುತವಾಗಿದೆ. ಇದಕ್ಕೆ ಜಡ ಸಂಪ್ರದಾಯವಾದಿಗಳು ಸ್ವಾತಂತ್ರ್ಯೋತ್ತರ ಭಾರತದಲ್ಲಿಯೂ ತಾರತಮ್ಯ ಮುಂದುವರಿಸಿರುವುದು ಕಾರಣ’ ಎಂದು ವಿಶ್ಲೇಷಿಸಿದರು.

‘ಕೇಂದ್ರ ಸಚಿವರಾಗಿದ್ದ ಬಾಬು ಜಗಜೀವನ್‌ರಾಂ ದೇವಸ್ಥಾನ ಉದ್ಘಾಟಿಸಿ ತೆರಳಿದ ಮರುಕ್ಷಣವೇ ಶುದ್ಧಗೊಳಿಸಲಾಯಿತು. ಇಂದಿರಾ ಗಾಂಧಿಯವರನ್ನು ಪುರಿ ಜಗನ್ನಾಥ ದೇವಾಲಯಕ್ಕೆ ಬಿಡಲೇ ಇಲ್ಲ. ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಭಾಷಣ ಮಾಡಿದ ಸ್ಥಳವನ್ನು ಶುದ್ಧಗೊಳಿಸಲಾಯಿತು. ಬೆಳಿಗ್ಗೆ ಎದ್ದರೆ ಕೃಷ್ಣನ ನಾಮಸ್ಮರಣೆ ಮಾಡುವ ಜೇಸುದಾಸ್‌ ಅವರಿಗೆ ಇಲ್ಲಿವರೆಗೆ ಗುರುವಾಯೂರು ದೇವಸ್ಥಾನಕ್ಕೆ ಪ್ರವೇಶ ಸಿಕ್ಕಿಲ್ಲ. ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ಸಿಕ್ಕಿಲ್ಲ. ಇವೆಲ್ಲ ಜಡ ಸಂಪ್ರದಾಯ ಮುಂದುವರಿದಿರುವುದಕ್ಕೆ ಸಾಕ್ಷಿ’ ಎಂದು ತಿಳಿಸಿದರು.

ಚಿಂತಕ ಬಿ.ಶ್ರೀಪಾದ ಭಟ್‌ ಮಾತನಾಡಿ, ‘ಅಂಬೇಡ್ಕರ್‌ ಸಾಮಾಜಿಕವಾಗಿ ಎರಡೇ ಚಳವಳಿಗಳನ್ನು ಮಾಡಿದ್ದರು. ಚೌಡರ್‌ ಕೆರೆ ನೀರು ಕುಡಿಯುವ ಮಹಾಡ್‌ ಸತ್ಯಾಗ್ರಹ ಮತ್ತು ಕಾಳರಾಂ ದೇವಸ್ಥಾನ ಪ್ರವೇಶ. ಉಳಿದೆಲ್ಲವೂ ಕಾನೂನಾತ್ಮಕ ಹೋರಾಟಗಳು. ಚೌಡರ್‌ ಕೆರೆ ಮುಟ್ಟಿದ್ದಕ್ಕಾಗಿ ಹಲ್ಲೆ ಮಾಡಿದವರಲ್ಲಿ ಮುಸ್ಲಿಮರೂ ಇದ್ದರು. ಯಾಕೆಂದರೆ ಈ ಕೆರೆಯ ನೀರನ್ನು ಮೇಲ್ಜಾತಿಯಿಂದ ಮುಸ್ಲಿಮ್‌ ಆಗಿ ಮತಾಂತರಗೊಂಡವರು ಮುಟ್ಟಬಹುದಿತ್ತು. ಕೆಳಜಾತಿಯಿಂದ ಮತಾಂತರಗೊಂಡವರು ಮುಟ್ಟುವಂತಿರಲಿಲ್ಲ’ ಎಂದು ವಿವರಿಸಿದರು.

ಹೋರಾಟಗಾರ್ತಿ ದು. ಸರಸ್ವತಿ ವಿಷಯ ಮಂಡಿಸಿ, ‘ದಲಿತರು ಒಟ್ಟಾಗಿ ಮಾಡಿದ ಮೊದಲ ಬಂಡಾಯದ ಹೋರಾಟವೇ ಮಹಾಡ್‌ ಸತ್ಯಾಗ್ರಹ. ಭಾರತದ ಮೊದಲ ನಾಗರಿಕ ಹಕ್ಕುಗಳ ಹೋರಾಟ’ ಎಂದು ಬಣ್ಣಿಸಿದರು.

ದಸಂಸ (ಅಂಬೇಡ್ಕರ್‌ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್‌ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಅಕಾಡೆಮಿ ನಿಯೋಜಿತ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್‌ ಅವರನ್ನು ಸನ್ಮಾನಿಸಲಾಯಿತು. ವಿ.ಎಲ್‌. ನರಸಿಂಹಮೂರ್ತಿ ವಿಷಯ ಮಂಡನೆ ಮಾಡಿದರು. ಕೆಐಎಡಿಬಿ ನಿವೃತ್ತ ಅಧಿಕಾರಿ ಟಿ.ಆರ್‌.ಸ್ವಾಮಿ, ಚಿಂತಕರಾದ ರಮೇಶ್‌ ಡಾಕುಳಕಿ, ಕಾರಳ್ಳಿ ಶ್ರೀನಿವಾಸ್‌, ಎಚ್‌.ಆರ್‌.ಸ್ವಾಮಿ, ನಿರ್ಮಲಾ, ಚಂದ್ರಶೇಖರಯ್ಯ ಪ್ರತಿಕ್ರಿಯಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT