ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದ್ರೋಗ ತಜ್ಞನಾಗಿ ವೃತ್ತಿ ಮುಂದುವರಿಸುವೆ: ಡಾ.ಸಿ.ಎನ್. ಮಂಜುನಾಥ್

Published 24 ಜನವರಿ 2024, 16:16 IST
Last Updated 24 ಜನವರಿ 2024, 16:16 IST
ಅಕ್ಷರ ಗಾತ್ರ

ಬೆಂಗಳೂರು: ‘ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಮುಂದುವರಿಸುವುದು ನನ್ನ ಮೊದಲ ಆಯ್ಕೆಯಾಗಿದ್ದು, ರಾಜಕೀಯದಲ್ಲಿ ಯಾವುದೇ ಆಸಕ್ತಿ ಹೊಂದಿಲ್ಲ. ಆದ್ದರಿಂದ ಯಾವುದೇ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಲ್ಲ’ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು. 

ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗೆ ಸಂಬಂಧಿಸಿದಂತೆ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಅವರು, ‘ನಿರ್ದೇಶಕನಾಗಿದ್ದ 16 ವರ್ಷಗಳ ಅವಧಿಯಲ್ಲಿ ಸಂಸ್ಥೆ ಶೇ 500ರಷ್ಟು ಪ್ರಗತಿ ಹೊಂದಿದೆ. ನಾನು ಅಧಿಕಾರ ವಹಿಸಿಕೊಂಡಾಗ ಸಂಸ್ಥೆ 300 ಹಾಸಿಗೆಗಳನ್ನು ಒಳಗೊಂಡಿತ್ತು. ಈಗ ಆ ಸಂಖ್ಯೆ ಎರಡು ಸಾವಿರಕ್ಕೆ ಏರಿಕೆಯಾಗಿದೆ. ಇಡೀ ದಕ್ಷಿಣ ಏಷ್ಯಾದಲ್ಲಿ ಅತೀ ದೊಡ್ಡ ಹೃದ್ರೋಗ ಸಂಸ್ಥೆಯಾಗಿ ಹೊರಹೊಮ್ಮಿದೆ. ನನ್ನ ಅಧಿಕಾರವಧಿ ಇದೇ 31ರಂದು ಮುಕ್ತಾಯವಾಗುತ್ತಿದ್ದು, ಹೃದ್ರೋಗ ತಜ್ಞನಾಗಿ ವೃತ್ತಿಯನ್ನು ಮುಂದುವರಿಸುತ್ತೇನೆ’ ಎಂದು ಹೇಳಿದರು. 

‘ಈ ಸಂಸ್ಥೆಯನ್ನು ಪಂಚತಾರಾ ಆಸ್ಪತ್ರೆಯನ್ನಾಗಿ ಬೆಳೆಸಿ, ನಿರ್ವಹಣೆ ಮಾಡಬೇಕು ಎಂಬ ಕನಸನ್ನು ಹೊಂದಿದ್ದೆ. ಅದು ಸಾಕಾರಗೊಂಡಿದೆ. ಬಡವರು, ನಿರ್ಗತಿಕರಿಗೂ ಶ್ರೀಮಂತರಿಗೆ ದೊರೆಯುವ ಚಿಕಿತ್ಸೆ ಒದಗಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದೇನೆ. ನನ್ನನ್ನು ಈ ಸ್ಥಾನದಲ್ಲಿ ಮುಂದುವರಿಸಲು ಯಾರ ಮೇಲೆಯೂ ಒತ್ತಡ ಹಾಕಿಲ್ಲ’ ಎಂದು ತಿಳಿಸಿದರು.

‘ನಿರ್ದೇಶಕನಾಗಿದ್ದ ಅವಧಿಯಲ್ಲಿ ಸಂಸ್ಥೆಯ ಮೂಲಕ 75 ಲಕ್ಷ ಹೊರರೋಗಿಗಳಿಗೆ ಚಿಕಿತ್ಸೆ ಒದಗಿಸಲಾಗಿದೆ. 8 ಲಕ್ಷ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. ಕಳೆದ ವರ್ಷ ಮೇ 25ರಂದು ಇಲ್ಲಿಗೆ ಭೇಟಿ ನೀಡಿದ ಕೇಂದ್ರೀಯ ಸಂಸದೀಯ ಸಂಸ್ಥೆಯು ಇಲ್ಲಿಯ ಗುಣಮಟ್ಟದ ಚಿಕಿತ್ಸೆ, ಸ್ವಚ್ಛತೆ, ಪಾರದರ್ಶಕ ಆಡಳಿತ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿ, ದೇಶದ ಎಲ್ಲ ಸರ್ಕಾರಿ ಆಸ್ಪತ್ರೆಗಳು ಈ ಮಾದರಿಯನ್ನು ಅಳವಡಿಸಿಕೊಳ್ಳಬೇಕೆಂದು ಸೂಚಿಸಿತ್ತು. ಇದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.

‘ಕಲಬುರಗಿಯ ಜಯದೇವ ಶಾಖೆ ನಿರ್ಮಾಣ ಕಾರ್ಯ ಶೇ 85ರಷ್ಟಾಗಿದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ನನ್ನ ಅವಧಿಯಲ್ಲಿಯೇ ಈ ಶಾಖೆ ಉದ್ಘಾಟನೆ ಆಗಬೇಕು ಎಂಬ ಕನಸನ್ನು ಹೊಂದಿದ್ದೆ’ ಎಂದು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT