ಬುಧವಾರ, ಮಾರ್ಚ್ 29, 2023
30 °C
ಕಡಿಮೆ ತಾಪಮಾನದಿಂದ ತಣ್ಣನೆಯ ಗಾಳಿ

ಬೆಂಗಳೂರಿನಲ್ಲಿ ಚಳಿಯ ವಾತಾವರಣ: ಕಡಿಮೆ ತಾಪಮಾನದಿಂದ ತಣ್ಣನೆಯ ಗಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಮೂರು ದಿನಗಳಿಂದ ತಂಪಾದ ವಾತಾವರಣ ಕಂಡುಬರುತ್ತಿದ್ದು, ರಾತ್ರಿ ವೇಳೆಗೆ ಕ್ರಮೇಣ ಚಳಿ ಆವರಿಸಿಕೊಂಡ ಅನುಭವವಾಗುತ್ತಿದೆ.  

ಒಂದು ವಾರದಿಂದ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಸಹಿತ ಆಗಾಗ ಜಿಟಿಜಿಟಿ ಮಳೆಯಾಗುತ್ತಿದೆ. ಇದರಿಂದ ತಾಪಮಾನ ಕುಸಿತಗೊಂಡು ಬೀಸುತ್ತಿರುವ ತಣ್ಣನೆಯ ಗಾಳಿಯಿಂದ ಜನ ಮೈನಡುಗುವ ಚಳಿಯ ಅನುಭವ ಪಡೆಯುತ್ತಿದ್ದಾರೆ.

‘ವಾತಾವರಣದಲ್ಲಿ ತಾಪಮಾನ ಕುಸಿತವಾದರೆ, ತಂಪಿಗೆ ಪೂರಕವಾದ ಸ್ಥಿತಿ ಉಂಟಾಗುತ್ತದೆ. ಹಾಗಾಗಿ, ಚಳಿಯ ಅನುಭವ ಆಗುತ್ತಿರಬಹುದು. ಆದರೆ, ಇದನ್ನು ಆಧರಿಸಿ ಚಳಿಗಾಲ ಆರಂಭವಾಗಿದೆ ಎಂದು ಭಾವಿಸುವಂತಿಲ್ಲ’ ಎನ್ನುತ್ತಾರೆ ಹವಾಮಾನ ತಜ್ಞರು.

‘ಬೆಂಗಳೂರಿನಲ್ಲಿ ಈ ವಾರದಿಂದ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಈ ಅವಧಿಯಲ್ಲಿ ಹವಾಮಾನದಲ್ಲಿ ಈ ಬದಲಾವಣೆ ಸಾಮಾನ್ಯ. ತಾಪಮಾನ ಕುಸಿತಗೊಂಡಾಗ ತಂಪಾದ ವಾತಾವರಣ ಕಾಣಬಹುದು. ಆಗ ಬೀಸುವ ಗಾಳಿಯೂ ತಣ್ಣನೆಯ ರೂಪ ಪಡೆಯುತ್ತದೆ. ಅದು, ಜನರಿಗೆ ಚಳಿಯ ಅನುಭವ ನೀಡುತ್ತಿರಬಹುದು’ ಎಂದು ಹವಾಮಾನ ಇಲಾಖೆಯ ತಜ್ಞ ಸದಾನಂದ ಅಡಿಗ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಾಪಮಾನ ಹೆಚ್ಚಾಗಿದ್ದರೆ, ಬೀಸುವ ಗಾಳಿ ತಂಪಾಗಿರುವುದಿಲ್ಲ. ವಾರದಿಂದ ಬೆಂಗಳೂರಿನಲ್ಲಿ ಬಿಸಿಲು ಕಡಿಮೆ ಇದೆ. ಮೋಡ ಆವರಿಸಿದ ವಾತಾವರಣದೊಂದಿಗೆ ದಿನಪೂರ್ತಿ ಕಡಿಮೆ ತಾಪಮಾನ ಇರುವುದರಿಂದ ಸಂಜೆ ಮತ್ತು ರಾತ್ರಿ ವೇಳೆ ತಂಪು ಗಾಳಿ ಬೀಸುತ್ತಿದೆ. ಇದನ್ನು ಕಂಡು ಚಳಿಗಾಲ ಶುರುವಾಗಿದೆ ಎಂದು ಜನ ಭಾವಿಸಬಾರದು. ಮುಂದಿನ ವಾರದವರೆಗೆ ನಗರದಲ್ಲಿ ಇದೇ ರೀತಿಯ ವಾತಾವರಣ ಇರಲಿದೆ’ ಎಂದು ವಿವರಿಸಿದರು.

‘ನಗರದಲ್ಲಿ ಸಾಮಾನ್ಯವಾಗಿ ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಚಳಿ ಕಾಣಿಸಿಕೊಳ್ಳುತ್ತದೆ. ಉತ್ತರ ದಿಕ್ಕಿನಿಂದ ಗಾಳಿ ಬೀಸಿದಾಗ ಚಳಿಯ ತೀವ್ರತೆ ಹೆಚ್ಚಾಗುತ್ತದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು