ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ: ಗುರಿ ಸಾಧನೆಗೂ ಕೊರೊನಾ ಬಾಧೆ

ಬಿಬಿಎಂಪಿ: ₹ 1704.28 ಕೋಟಿ ಆಸ್ತಿ ತೆರಿಗೆ ಸಂಗ್ರಹ ಬಾಕಿ
Last Updated 31 ಮಾರ್ಚ್ 2020, 20:36 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಬಿಬಿಎಂಪಿಯ ಆಸ್ತಿ ತೆರಿಗೆ ಸಂಗ್ರಹದ ಗುರಿ ಸಾಧಿಸುವುದಕ್ಕೂ ಕೊರೊನಾ ಬಾಧೆ ತಟ್ಟಿದೆ. 2019–20ನೇ ಆರ್ಥಿಕ ವರ್ಷ ಮಂಗಳವಾರಕ್ಕೆ ಮುಕ್ತಾಯವಾಗಿದ್ದು, ಬಿಬಿಎಂಪಿ ಈ ಸಾಲಿನಲ್ಲೂ ತೆರಿಗೆ ಸಂಗ್ರಹದ ಗುರಿ ತಲುಪಲು ಸಾಧ್ಯವಾಗಿಲ್ಲ. ಈ ವರ್ಷದಲ್ಲಿ ನಿಗದಿತ ಮೊತ್ತದಲ್ಲಿ ₹ 1,704.28 ಕೋಟಿಯನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ.

ಹಿಂದಿನ ವರ್ಷಗಳ ಬಾಕಿ ₹ 2,480.58 ಕೋಟಿಯೂ ಸೇರಿದಂತೆ 2019–20ನೇ ಸಾಲಿನಲ್ಲಿ ಒಟ್ಟು ₹ 4,929.89 ತೆರಿಗೆ ಸಂಗ್ರಹಿಸುವ ಗುರಿಯನ್ನು ಬಿಬಿಎಂಪಿ ಹೊಂದಿತ್ತು. ಆದರೆ ಸಂಗ್ರಹಿಸಿದ್ದು ₹ 2,647.83 ಕೋಟಿ ಮಾತ್ರ.

ಈ ಸಾಲಿನಲ್ಲಿ ₹ 2,449.31 ಕೋಟಿ ತೆರಿಗೆ ಸಂಗ್ರಹಿಸುವ ಗುರಿಯಲ್ಲಿ ₹ 2,034.10 ಕೋಟಿ ಮಾತ್ರ ಸಂಗ್ರಹವಾಗಿದೆ. ಇದರಲ್ಲಿ ನಿಷ್ಕ್ರಿಯ ಹಾಗೂ ಸಂಯೋಜನೆಗೊಂಡ ಖಾತೆಗಳ ಮೊತ್ತ ₹152.70 ಕೋಟಿ ಇದೆ.

ಹಳೆ ತೆರಿಗೆ ಸಂಗ್ರಹವಾಗಿದ್ದು ₹ 613.73 ಕೋಟಿ ಮಾತ್ರ. ₹ 1,226.43 ಕೋಟಿ ಮೊತ್ತ ಸಂಗ್ರಹ ಸಾಧ್ಯವಾಗಿಲ್ಲ. ಇದರಲ್ಲಿ ನಿಷ್ಕ್ರಿಯ ಹಾಗೂ ಸಂಯೋಜನೆಗೊಂಡ ಖಾತೆಗಳ ಮೊತ್ತ ₹ 958. 77 ಕೋಟಿಗಳಷ್ಟು ಇದೆ.

‘ಏಪ್ರಿಲ್‌ ತಿಂಗಳಲ್ಲಿ ತೆರಿಗೆ ಪಾವತಿಸಿದವರಿಗೆ ಶೇ 5ರಷ್ಟು ರಿಯಾಯಿತಿ ಸಿಗುತ್ತದೆ. ಆ ತಿಂಗಳು ತೆರಿಗೆ ಹೆಚ್ಚು ಸಂಗ್ರಹವಾಗುತ್ತದೆ. ನಂತರ ಅತಿ ಹೆಚ್ಚು ತೆರಿಗೆ ಸಂಗ್ರಹವಾಗುವುದು ಆರ್ಥಿಕ ವರ್ಷ ಕೊನೆಗೊಳ್ಳುವ ಮಾರ್ಚ್‌ ತಿಂಗಳಲ್ಲಿ. ಈ ಬಾರಿ ಮಾರ್ಚ್‌ ತಿಂಗಳಲ್ಲಿ ಕೊರೊನಾ ಸೋಂಕು ಹರಡುವ ಭೀತಿಯಿಂದ ಸರ್ಕಾರ ಘೋಷಿಸಿದ ಲಾಕ್‌ಡೌನ್‌ನಿಂದಾಗಿ ತೆರಿಗೆ ಸಂಗ್ರಹಕ್ಕೆ ಸ್ವಲ್ಪ ಹೊಡೆತ ಬಿತ್ತು’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವರ್ಷ ಪೂರ್ತಿ ಬಾಕಿ ತೆರಿಗೆ ವಸೂಲಿಗೆ ಕಂದಾಯ ಅಧಿಕಾರಿಗಳು ಸಾಕಷ್ಟು ಶ್ರಮ ಹಾಕಿದ್ದರು. ಕಂದಾಯ ವಸೂಲಿ ಅಭಿಯಾನಗಳನ್ನು ಹಮ್ಮಿಕೊಂಡಿದ್ದರು. ಆದರೆ, ಕೊರೊನಾ ಹಾವಳಿಯಿಂದಾಗಿ 15 ದಿನಗಳಿಂದ ಕಂದಾಯ ಅಧಿಕಾರಿಗಳು ತೆರಿಗೆ ಸಂಗ್ರಹ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಕ್ಕೇ ಆಗಿಲ್ಲ’ ಎಂದು ಅವರು ವಿವರಿಸಿದರು.

ಹಳಿ ತಪ್ಪಲಿದೆ ಅಭಿವೃದ್ಧಿ
ಮಾರ್ಚ್‌ ಅಂತ್ಯದ ಒಳಗೆ ಪಾಲಿಕೆ ಬಜೆಟ್‌ ಮಂಡನೆಯಾಗಬೇಕಿತ್ತು. ಆದರೆ, ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಬಜೆಟ್‌ ಮಂಡನೆಯನ್ನು ಪಾಲಿಕೆ ಮುಂದೂಡಿದೆ. ಇನ್ನೊಂದೆಡೆ, ತೆರಿಗೆ ಸಂಗ್ರಹದಲ್ಲೂ ನಿರೀಕ್ಷಿತ ಪ್ರಗತಿ ಆಗಿಲ್ಲ. ಹಾಗಾಗಿ 2020–21ನೇ ಸಾಲಿನಲ್ಲಿ ಬಿಬಿಎಂಪಿಯ ಅಭಿವೃದ್ಧಿ ಹಳಿ ತಪ್ಪುವ ಎಲ್ಲ ಲಕ್ಷಣಗಳಿವೆ.

ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಅಂಗೀಕಾರ ಪಡೆದ ಬಜೆಟ್‌ಗೆ ಸರ್ಕಾರದ ಅನುಮೋದನೆ ನೀಡಿದ ಬಳಿವಷ್ಟೇ ಅದರ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಲಿವೆ. ಬಜೆಟ್‌ಗೆ ಸರ್ಕಾರ ದಿಂದ ಅನುಮೋದನೆ ಸಿಗುವಾಗ 2–3 ತಿಂಗಳು ವಿಳಂಬ ಸಾಮಾನ್ಯ ಎಂಬಂತಾಗಿದೆ. 2020ರ ಸೆಪ್ಟೆಂಬರ್‌ನಲ್ಲಿ ಪಾಲಿಕೆಯ ಕೌನ್ಸಿಲ್‌ನ ಅವಧಿ ಪೂರ್ಣಗೊಳ್ಳಲಿದ್ದು, ಅಷ್ಟರೊಳಗೆ ಚುನಾವಣೆ ಎದುರಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT