ಮಂಗಳವಾರ, ಜೂನ್ 2, 2020
27 °C

ತುರ್ತು ಸೇವೆಗೆ ನಿಂತಿರುವ ಕೊರೊನಾ ವಾರಿಯರ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದಾದ್ಯಂತ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು 21 ದಿನಗಳ ಕಾಲ ಸರ್ಕಾರ ದಿಗ್ಬಂಧನ ವಿಧಿಸಿದೆ. ಈ ದಿನಗಳಲ್ಲಿ ಸಾರ್ವಜನಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ತುರ್ತು ಸಂದರ್ಭದಲ್ಲಿ ಜನರಿಗೆ ಬೇಕಾಗುವ ಅಗತ್ಯ ಸೇವೆಗಳಿಗೆ ನೆರವಾಗಲು ಆರೋಗ್ಯ ಇಲಾಖೆ,  ಪೊಲೀಸ್ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳು ಅಹರ್ನಿಶವಾಗಿ ಶ್ರಮಿಸುತ್ತಿವೆ.

ಇಂಥ ಶ್ರಮಜೀವಿಗಳಿಗೆ ತಮ್ಮ ಕೈಲಾದ ಸಹಾಯ ಮಾಡಲು ಈಗ ‘ಕೊರೊನಾ ವಾರಿಯರ್ಸ್‌’ (ಕೊರೊನಾ ಸೈನಿಕರು) ಜೊತೆಗೂಡಿದ್ದಾರೆ. 

ಹೌದು, ರಾಜ್ಯದಾದ್ಯಂತ 10 ಸಾವಿರಕ್ಕೂ ಹೆಚ್ಚು ಜನ ‘ಕೊರೊನಾ ವಾರಿಯರ್ಸ್‌’, ಸರ್ಕಾರದ ಇಲಾಖೆಗಳ ಜತೆಗೆ ಕೆಲಸ ಮಾಡುತ್ತಿದ್ದಾರೆ. ಇವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ, ಸ್ವಯಂ ಪ್ರೇರಣೆಯಿಂದ ಸೇವೆ ಸಲ್ಲಿಸಲು ಆರಂಭಿಸಿದ್ದಾರೆ. ಇದರಲ್ಲಿ ಕೆಲವರು ಆರೋಗ್ಯ ಇಲಾಖೆ ಜತೆಗೆ ಕೈಜೋಡಿಸಿದರೆ, ಇನ್ನೂ ಕೆಲವರು ಪೊಲೀಸ್ ಸೇರಿದಂತೆ ಬೇರೆ ಬೇರೆ ಇಲಾಖೆಗಳಿಗೆ ನೆರವಾಗುತ್ತಿದ್ದಾರೆ. ಇವೆರಲ್ಲರೂ ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಇಲಾಖೆ, ಪೊಲೀಸ್‌ ಇಲಾಖೆ, ಇಂಡಿಯನ್‌ ರೆಡ್‌ಕ್ರಾಸ್‌ ಸೊಸೈಟಿ ಜೊತೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಟ್ವಿಟರ್‌ಗೆ ಬಂದ ಪ್ರತಿಕ್ರಿಯೆ

ವಾರ್ತಾ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್ ಅವರು ಕೊರೊನಾ ಸೈನಿಕರಾಗಿ ಕೆಲಸ ಮಾಡುವಂತೆ ಸಾರ್ವಜನಿಕರಿಗೆ ಟ್ವಿಟರ್‌ನಲ್ಲಿ ಕರೆ ನೀಡಿದ್ದರು. ಇದಕ್ಕೆ ಸ್ಪಂದಿಸಿದ 10 ಸಾವಿರಕ್ಕೂ ಹೆಚ್ಚು ಜನರು ರಾಜ್ಯದಾದ್ಯಂತ ಆನ್‌ಲೈನ್‌ ಮೂಲಕ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ.

ವಲಸೆ ಕಾರ್ಮಿಕರಿಗೆ ಆಹಾರ ಹಂಚುವುದು, ಗಾಳಿ ಸುದ್ದಿಗಳನ್ನು ಪರಾಮರ್ಶೆಗೆ ಒಳಪಡಿಸಿ, ಸತ್ಯ ಸುದ್ದಿಗಳನ್ನು ಜನರಿಗೆ ತಲುಪಿಸುವಂತಹ ಕಾರ್ಯಗಳಲ್ಲಿ (ಫ್ಯಾಕ್ಟ್‌ ಚೆಕ್ಕಿಂಗ್ ನ್ಯೂಸ್‌) ಈ ಸ್ವಯಂ ಸೇವಕರು ಭಾಗಿಯಾಗಿದ್ದಾರೆ. 

ಇವರು ಹೇಗೆ ಕೆಲಸ ಮಾಡುತ್ತಾರೆ?

ಆನ್‌ಲೈನ್‌ ನೋಂದಣಿ ಮಾಡಿಕೊಂಡ ಸದಸ್ಯರಿಗೆ ಟೆಲಿಗ್ರಾಂ ಆ್ಯಪ್‌ ಗ್ರೂಪ್‌ನ ಲಿಂಕ್‌ ಕಳುಹಿಸಲಾಗುತ್ತದೆ. ಗ್ರೂಪ್‌ಗೆ ಸೇರಿದ ಸದಸ್ಯರನ್ನು ಅವರ ವಯಸ್ಸು ಹಾಗೂ ಅವರ ಕೆಲಸ, ಉದ್ಯೋಗ, ಲಭ್ಯತೆ ಆಧಾರದ ಮೇಲೆ ಬೇರೆ ಬೇರೆ ವಾಟ್ಸ್‌ಆ್ಯಪ್‌ ಗುಂಪುಗಳಿಗೆ ಸೇರಿಸಲಾಗುತ್ತದೆ. ಅವರನ್ನು ಅವರ ವಾಸಿಸುವ ವ್ಯಾಪ್ತಿಯಲ್ಲಿರುವ ಪೊಲೀಸ್‌ ಇಲಾಖೆ ಜೊತೆ ಸೇರಿ ತುರ್ತು ಸಂದರ್ಭದಲ್ಲಿ ಕೆಲಸ ಮಾಡುವಂತೆ ನಿಯೋಜನೆ ಮಾಡಲಾಗುತ್ತದೆ. ಈ ತಂಡದ ಸದಸ್ಯರು ಯಾವುದೇ ಸಮಯದಲ್ಲಿ ಇಲಾಖೆ ಜೊತೆ ನೆರವಾಗಬೇಕು. 

ಎರಡು ದಿನಗಳ ತರಬೇತಿ

ನೋಂದಾಯಿತ ಸದಸ್ಯರಿಗೆ  ಮಾಹಿತಿ ಹಾಗೂ ತಂತ್ರಜ್ಞಾನ ಇಲಾಖೆ ಎರಡು ದಿನಗಳ ತರಬೇತಿ ನೀಡಿದೆ. ಮಾರ್ಚ್‌ 20, 21ರಂದು ಮಿನ್ಸ್ಕ್‌ ಸ್ಕ್ವೇರ್‌ನ  ವಾರ್ತಾಭವನದ ಸುಲೋಚನಾ ಆಡಿಟೋರಿಯಂನಲ್ಲಿ ಈ ತರಬೇತಿ ನೀಡಲಾಗಿತ್ತು. ಈ ತರಬೇತಿಯಲ್ಲಿ ಸ್ವಯಂ ಸೇವರಿಗೆ  ಶುಚಿತ್ವ ಕಾಪಾಡಿಕೊಳ್ಳುವುದು, ಸಾಮಾಜಿಕ ಅಂತರ ಎಂದರೇನು ? ಅದನ್ನು ಪಾಲಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಲಾಯಿತು. 

‘ಸ್ವಯಂ ಸೇವಕರಿಗೆ ಏಪ್ರಾನ್‌, ಗ್ಲೌಸ್‌, ಮಾಸ್ಕ್‌, ಸ್ಯಾನಿಟೈಸರ್‌ಗಳನ್ನು ನೀಡುತ್ತಾರೆ. ನಾವು ನಮ್ಮ ಬಗ್ಗೆ ಎಲ್ಲಾ ಬಗೆಯ ಮುಂಜಾಗ್ರತೆ ತೆಗೆದುಕೊಂಡು ನಂತರ ಕೆಲಸದಲ್ಲಿ ತೊಡಗುತ್ತೇವೆ’ ಎಂದು ಕೊರೊನಾ ವಾರಿಯರ್ಸ್‌ ಆಗಿ ಕೆಲಸ ಮಾಡುತ್ತಿರುವ, ಡಿಆರ್‌ಡಿಒ ಅಸಿಸ್ಟೆಂಟ್‌ ಸೈಂಟಿಸ್ಟ್‌ ವಿನೋದ್‌ ಕರ್ತವ್ಯ, ತಮ್ಮ ಕಾರ್ಯನಿರ್ವಹಣೆ ಬಗ್ಗೆ ‘ಪ್ರಜಾವಾಣಿ‘ಗೆ ಮಾಹಿತಿ ನೀಡಿದರು. 

ವಿನೋದ್‌ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಸಂಬಂಧ ಹರಿದಾಡುತ್ತಿರುವ ಸುದ್ದಿಗಳ ಕುರಿತಾಗಿ ಕೆಲಸ ಮಾಡುವ ಜವಾಬ್ದಾರಿ ವಹಿಸಲಾಗಿದೆ. ಸುಳ್ಳು ಸುದ್ದಿಗಳ ಮೂಲ ಪತ್ತೆ ಹಚ್ಚಿ, ನಿಜಾಂಶವನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಜತೆಗೆ ಸರ್ಕಾರ ಕೈಗೊಂಡ ಕ್ರಮವನ್ನು ಜನರಿಗೆ ತಲುಪಿಸುವ ಜವಾಬ್ದಾರಿಯೂ ಇವರ ತಂಡದ್ದು. ಇದರ ಜೊತೆಗೆ ನಗರದ ಬೇರೆ ಬೇರೆ ಭಾಗಗಳಿಗೆ ತೆರಳಿ ವಲಸೆ ಕಾರ್ಮಿಕರಿಗೆ ಆಹಾರ ಪೊಟ್ಟಣಗಳನ್ನು ವಿತರಿಸುವ ಕೆಲಸಕ್ಕೂ ಕೈ ಜೋಡಿಸಿದ್ದಾರೆ. ಸ್ವಯಂ ಸೇವಕರಾಗಿ ಗುರುತಿಸಿಕೊಂಡವರು ತುರ್ತು ಸಂದರ್ಭದಲ್ಲಿ ಎಲ್ಲಾ ರೀತಿಯ ಕೆಲಸಕ್ಕೂ ಸಿದ್ಧರಿರಬೇಕು ಎಂಬುದು ಅವರ ಮಾತು. 

ಕೊರೊನಾ ಸೈನಿಕರ ಕೆಲಸಗಳು

ಪೊಲೀಸ್‌, ಆರೋಗ್ಯ ಇಲಾಖೆ ಜೊತೆ ಕೆಲಸ ಮಾಡುವ ಕೊರೊನಾ ಸೈನಿಕರಿಗೆ ಜನರಿಗೆ ಶುಚಿತ್ವ, ಮಾಸ್ಕ್‌ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿವಹಿಸಿದ್ದಾರೆ. ಬೇರೆ ಬೇರೆ ಆಸ್ಪತ್ರೆಗಳು, ಪೊಲೀಸ್‌ ಇಲಾಖೆಗೆ ಬರುವ ಕೊರೊನಾ ಸೋಂಕಿತರ ಬಗ್ಗೆ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ತಲುಪಿಸಬೇಕು. ಇದರಿಂದ ಸರ್ಕಾರಕ್ಕೆ ದಿನನಿತ್ಯದ ಕೊರೊನಾ ಸೋಂಕಿತರ ಸ್ಪಷ್ಟವಾದ ಸಂಖ್ಯೆ ಸಿಗುವಂತೆ ನೋಡಿಕೊಳ್ಳಬೇಕು ಎಂಬ ಜವಾಬ್ದಾರಿ ಕೊಟ್ಟಿದ್ದಾರೆ.

ಕ್ವಾರಂಟೇನ್‌ ಆಗಿರುವವರನ್ನು ಆಪ್ತ ಸಲಹೆ ಮೂಲಕ ಮಾನಸಿಕವಾಗಿ ಸದೃಢರನ್ನಾಗಿಸುವುದು, ಕ್ವಾರಂಟೇನ್‌ ಆಗಿರುವ ಜನರು ಮನೆಯಿಂದ ಹೊರಗೆ ಬಾರದಂತೆ ತಿಳಿವಳಿಕೆ ಮೂಡಿಸುವುದನ್ನು ಮಾಡುತ್ತಾರೆ. ಅಷ್ಟೇ ಅಲ್ಲ ಇವರು ಮನೆಯ ಅಕ್ಕಪಕ್ಕದವರೊಂದಿಗೆ ಸಂಪರ್ಕದಲ್ಲಿದ್ದು, ಒಂದು ವೇಳೆ ಕ್ವಾರಂಟೇನ್‌ ರೋಗಿ ಮನೆಯಿಂದ ಹೊರಬಂದರೆ ಮಾಹಿತಿ ಪಡೆದು, ಪೊಲೀಸ್‌ ಸಿಬ್ಬಂದಿಗೆ ತಿಳಿಸಬೇಕು‘ ಎಂಬ ಮಾಹಿತಿ ನೀಡುತ್ತಿದ್ದಾರೆ.  

ತಂಡದಲ್ಲಿ ಯಾರು ಯಾರು ಇದ್ದಾರೆ?

ವೈದ್ಯರು, ಎಂಜಿನಿಯರ್‌ಗಳು, ಟೆಕಿಗಳು, ಐಎಎಸ್‌ ಅಧಿಕಾರಿಗಳು, ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರು... ಹೀಗೆ ಹಲವು ಕ್ಷೇತ್ರಗಳ ಜನರಿದ್ದಾರೆ. ಅವರಿಗೆ ಅವರ ಕ್ಷೇತ್ರದ ಅನುಭವಕ್ಕೆ ತಕ್ಕಂತೆ ಕೆಲಸ ನೀಡಲಾಗುತ್ತಿದೆ. ‘ಆಯಾ ಕ್ಷೇತ್ರದ ಅವಶ್ಯಕತೆ ತಕ್ಕಂತೆ  ಸಂದೇಶಗಳು ಬಂದಾಗ, ಆ ಕ್ಷಣದಲ್ಲಿ ಯಾರಿಗೆ ಸಾಧ್ಯವಿರುತ್ತದೋ, ಅವರು ಸೇವೆಗೆ ತೆರಳುತ್ತಾರೆ. ಹಾಗೆಯೇ ಎಕ್ಸ್‌ಎಲ್‌ ಶೀಟ್‌, ಡೇಟಾ ಕಲೆಕ್ಟ್‌ ಮುಂತಾದ ಕೆಲಸಕ್ಕೆ ಟೆಕಿಗಳು ಹೋಗುತ್ತಾರೆ.  ಒಂದು ಸಮಯಕ್ಕೆ 5 ರಿಂದ 10 ಜನಕ್ಕೆ ಕೆಲಸವಿರುತ್ತದೆ. ಆದರೆ, ಇಲ್ಲೂ ಹೆಚ್ಚು ಜನ ಸೇರುವಂತಿಲ್ಲ’ ಎಂದು ತಮ್ಮ ಕೆಲಸದ ಬಗ್ಗೆ ಮಾಹಿತಿ ಹಂಚಿಕೊಂಡರು ವಿನೋದ್‌. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು