ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಔಷಧಿಗೂ ತಟ್ಟಿದ ಬಿಸಿ, ಕಚ್ಚಾ ಪದಾರ್ಥಗಳ ಪೂರೈಕೆಯಲ್ಲಿ ವ್ಯತ್ಯಯ

Last Updated 18 ಫೆಬ್ರುವರಿ 2020, 21:46 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ (ಕೊರೊನಾ) ವೈರಸ್‌ನ ಕರಿ ನೆರಳು ಔಷಧಿಗಳ ತಯಾರಿಕೆಯ ಮೇಲೂ ಬಿದ್ದಿದ್ದು, ಕಚ್ಚಾ ಪದಾರ್ಥಗಳ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಔಷಧಿಗಳ ತಯಾರಿಕೆಯಲ್ಲಿ ಅರ್ಧದಷ್ಟು ಕುಸಿತವಾಗಿದೆ.

ರಾಜ್ಯದಲ್ಲಿನ 31 ಔಷಧಿ ತಯಾರಕರು ಔಷಧಿಗಳ ಪೂರೈಕೆಗೆ ಇಲ್ಲಿನ ಹಾಗೂ ವಿವಿಧ ರಾಜ್ಯ ಸರ್ಕಾರಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ, ಕಳೆದ ಎರಡು ವಾರಗಳಿಂದ ಔಷಧಿಗಳ ತಯಾರಿಕೆಯಲ್ಲಿ ಗಣನೀಯ ಕುಸಿತವಾಗಿದೆ.

ಚೀನಾದಲ್ಲಿ ಕಾಣಿಸಿಕೊಂಡ ಕೋವಿಡ್‌ ವೈರಸ್‌ನಿಂದಾಗಿ ಈ ದೇಶಕ್ಕೆ ಬರುವ ಕಚ್ಚಾ ಪದಾರ್ಥಗಳ ಆಮದು ಸ್ಥಗಿತವಾಗಿದೆ. ಇದರಿಂದಾಗಿ ಔಷಧಿಗಳ ಬೆಲೆಯಲ್ಲಿಯೂ ಒಂದೇ ಸಮನೆ ಏರಿಕೆಯಾಗುತ್ತಿದೆ. ಅಸ್ತಮಾ, ನೋವು ನಿವಾರಕ ಔಷಧಿ, ಬ್ಯಾಕ್ಟೀರಿಯಾದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಬಳಸುವ ಔಷಧಿಗಳಿಗೆ ಈಗಾಗಲೇ ಕಚ್ಚಾ ಪದಾರ್ಥಗಳ ಕೊರತೆ ಎದುರಾಗಿದೆ.

ಕ್ಲೋರಂ ಫೆನಿಕೋಲ್, ಟೆಟ್ರಾಸೈಕ್ಲಿನ್, ಅಜಿಥ್ರೊಮೈಸಿನ್, ಜೆಂಟಾ ಮೈಸಿನ್, ಡಾಕ್ಸಿಸೈಕ್ಲಿನ್, ನಾರ್ಫ್ಲೋಕ್ಸಾಸಿನ್, ಟಿನಿಡಾ ಜೋಲ್, ನಿಮೆಸುಲೈಡ್ ಸೇರಿದಂತೆ 30ಕ್ಕೂ ಅಧಿಕ ಔಷಧಿಗಳ ದರದಲ್ಲಿ ಶೇ 4ರಿಂದ ಶೇ 167ರ ವರೆಗೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.

ಕರ್ನಾಟಕ ಔಷಧಿ ಉತ್ಪಾದಕರ ಸಂಘಟನೆಯ ಅಧ್ಯಕ್ಷ ಸುನಿಲ್‌ ಅತ್ತಾವರ್‌, ‘ಹೊಸ ವರ್ಷದ ಪ್ರಯುಕ್ತ ಜನವರಿ ತಿಂಗಳು ಚೀನಾದಲ್ಲಿ ರಜೆ ಇರಲಿದೆ. ಹಾಗಾಗಿ ಹೆಚ್ಚುವರಿಯಾಗಿ ಔಷಧಿಗಳನ್ನು ದಾಸ್ತಾನು ಮಾಡಿಕೊಳ್ಳಲಾಗುತ್ತದೆ. ಮಾರ್ಚ್‌ ವೇಳೆಗೆ ಪರಿಸ್ಥಿತಿ ತಿಳಿಗೊಳ್ಳಲಿದಿದ್ದರೆ ಗಂಭೀರ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ’ ಎಂದು ತಿಳಿಸಿದರು.

‘ತಮಿಳುನಾಡು ಸರ್ಕಾರಕ್ಕೆ ರಾಷ್ಟ್ರೀಯ ಜಂತುಹುಳು ನಿವಾರಣೆ ಕಾರ್ಯಕ್ರಮಕ್ಕೆ ಮಕ್ಕಳಿಗೆ ವಿತರಿಸಲು ಅಲ್ಬೆಂಡಜೋಲ್ ಮಾತ್ರೆಗಳನ್ನು ಪೂರೈಸಬೇಕು. ಆದರೆ, ಚೀನಾದಿಂದ ಕಚ್ಚಾ ಪದಾರ್ಥಗಳು ಬರದ ಹಿನ್ನೆಲೆ ನೀರಿಕ್ಷಿತ ಮಟ್ಟದಲ್ಲಿ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಔಷಧಿ ತಯಾರಕ ಹರೀಶ್ ಜೈನ್ ಅವರು ಈ ಕುರಿತು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT