ಮಂಗಳವಾರ, ಜುಲೈ 27, 2021
21 °C

ಬೆಂಗಳೂರು: ಲಾಕ್‌ಡೌನ್‌ನಲ್ಲೇ 10,808 ಪ್ರಕರಣಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಲಾಕ್ ಡೌನ್ ಮತ್ತೆ ಜಾರಿಯಾದ ಬಳಿಕ ಆರು ದಿನಗಳಲ್ಲೇ 10,808 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 

ಕೆಲ ದಿನಗಳಿಂದ ಪ್ರಕರಣಗಳ ಸಂಖ್ಯೆ ನಿತ್ಯ ಎರಡು ಸಾವಿರದ ಗಡಿ ದಾಟುತ್ತಿದೆ. ಭಾನುವಾರ ಮತ್ತೆ 2,156 ಪ್ರಕರಣಗಳು ದೃಢಪಟ್ಟಿವೆ. 36 ಮಂದಿ ಸಾವಿಗೀಡಾಗಿದ್ದಾರೆ. ಇದರಿಂದಾಗಿ ನಗರದಲ್ಲಿ ಸೋಂಕಿತರ ಸಂಖ್ಯೆ 31,777 ಹಾಗೂ ಮೃತರ ಸಂಖ್ಯೆ 667ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ವರದಿಯಾದ ಒಟ್ಟು ಪ್ರಕರಣಗಳಲ್ಲಿ ಸುಮಾರು ಅರ್ಧದಷ್ಟು ಪ್ರಕರಣಗಳು ಬೆಂಗಳೂರಿನವು.

ಇದನ್ನೂ ಓದಿ: ಲಕ್ಷಣ ಇರುವ ಸೋಂಕಿತರಿಗೆ ಆದ್ಯತೆ ನೀಡಿ: ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಸೂಚನೆ

ಇನ್ನೊಂದೆಡೆ ಹೊಸದಾಗಿ ವರದಿಯಾಗುತ್ತಿರುವ ಬಹುತೇಕ ಪ್ರಕರಣಗಳಲ್ಲಿ ಸೋಂಕಿನ ಲಕ್ಷಣಗಳೇ ಬಹಿರಂಗವಾಗಿ ಗೋಚರಿಸುತ್ತಿಲ್ಲ ಎನ್ನುವುದು ಆರೋಗ್ಯ ಇಲಾಖೆಯ ಕೋವಿಡ್ ವಾರ್‌ ರೂಮ್ ವಿಶ್ಲೇಷಣೆಯಿಂದ ದೃಢಪಟ್ಟಿದೆ. ಹೀಗಾಗಿ ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವವರನ್ನು ಗುರುತಿಸುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. 

ಸೋಂಕಿತರ ಸಂಖ್ಯೆ ಹೆಚ್ಚಿದಂತೆ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳುವವರ ಸಂಖ್ಯೆಯೂ ಅಧಿಕವಾಗಿದೆ. 253 ಮಂದಿ ಭಾನುವಾರ ಗುಣಮುಖರಾಗಿದ್ದಾರೆ. ಇದರಿಂದಾಗಿ ಚೇತರಿಸಿಕೊಂಡವರ ಸಂಖ್ಯೆ 6,793ಕ್ಕೆ ತಲುಪಿದೆ. ಚಿಕಿತ್ಸೆ ಪಡೆದುಕೊಳ್ಳುತ್ತಿರುವ ರೋಗಿಗಳಲ್ಲಿ 579 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಹೊಸದಾಗಿ ವರದಿಯಾದ ಸಾವು ಪ್ರಕರಣಗಳಲ್ಲಿ ಇಬ್ಬರು ಮಾತ್ರ 50 ವರ್ಷದೊಳಗಿನವರಾಗಿದ್ದಾರೆ. 50 ವರ್ಷ ಮೇಲ್ಪಟ್ಟವರಲ್ಲಿ ಬಹುತೇಕರು ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಮಸ್ಯೆ ಸೇರಿದಂತೆ ವಿವಿಧ ಕಾಯಿಲೆಗಳನ್ನು ಹೊಂದಿದ್ದರು. 

480 ಹಾಸಿಗೆಗಳು ಮಾತ್ರ ಖಾಲಿ: ನಗರದಲ್ಲಿನ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ 480 ಹಾಸಿಗೆಗಳು ಮಾತ್ರ ಖಾಲಿ ಇವೆ. ಉಳಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ 370, ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 19, ಖಾಸಗಿ ಆಸ್ಪತ್ರೆಯಲ್ಲಿ 4,104 ಹಾಗೂ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ 739 ಹಾಸಿಗೆಗಳು ಲಭ್ಯವಿದೆ. ಕೋವಿಡ್ ಆರೈಕೆ ಕೇಂದ್ರಗಳಲ್ಲಿ 2,144 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳು ಸದ್ಯ 729 ರೋಗಿಗಳನ್ನು ದಾಖಲಿಸಿಕೊಂಡಿವೆ. 

ಮನೆಯಲ್ಲೇ ಆರೈಕೆ: ‘ಸ್ವಾಸ್ಥ್‌’ ಸಹಭಾಗಿತ್ವ

ಮನೆ ಆರೈಕೆಗೆ ಒಳಪಡುವ ಕೊರೊನಾ ಸೋಂಕಿತರಿಗೆ ವಿವಿಧ ಸೇವೆಗಳನ್ನು ಒದಗಿಸುವ ಜತೆಗೆ ಅವರ ಆರೋಗ್ಯದ ಮೇಲ್ವಿಚಾರಣೆಯನ್ನು ಲಾಭರಹಿತ ಸಂಸ್ಥೆಯಾದ ಸ್ವಾಸ್ಥ್‌ ನೋಡಿಕೊಳ್ಳಲಿದೆ. ಈ ಸಂಬಂಧ ಆರೋಗ್ಯ ಇಲಾಖೆಯ ಆಯುಕ್ತರಾದ ಪಂಕಜ್ ಕುಮಾರ್ ಪಾಂಡೆ ಅವರು ಸಂಸ್ಥೆಯ ಪ್ರತಿನಿಧಿಗಳ ಜತೆಗೆ ಮಾತುಕತೆ ನಡೆಸಿ, 10 ದಿನಗಳ ಆರೈಕೆ ಪ್ಯಾಕೇಜ್‌ ಅನುಷ್ಠಾನಗೊಳಿಸುವಂತೆ ಸೂಚಿಸಿದ್ದಾರೆ.

ವೈದ್ಯರಿಂದ ನಿತ್ಯ ಆರೋಗ್ಯದ ವಿಚಾರಣೆ, ತುರ್ತು ಸಂದರ್ಭದಲ್ಲಿ ವೈದ್ಯಕೀಯ ಸೇವೆಯನ್ನು ಸಹ ಒದಗಿಸಲಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಆರೈಕೆಗೆ ಒಳಪಡುವ ವ್ಯಕ್ತಿಯ ಮನೆಯನ್ನು ಪರಿಶೀಲಿಸಿ, ಸೂಕ್ತ ಸೌಲಭ್ಯವಿದ್ದಲ್ಲಿ ಮಾತ್ರ ಅವಕಾಶ ನೀಡುತ್ತಾರೆ. ಈ ರೀತಿ ಆರೈಕೆಗೆ ಒಳಗಾದವರ ವಿವರವನ್ನು ಸ್ವಾಸ್ಥ್‌ನಲ್ಲಿ ನಮೂದಿಸಲಾಗುತ್ತದೆ. ಸಂಸ್ಥೆಯು ಆರೋಗ್ಯ ಸೇವೆಗಳ ಪೂರೈಕೆದಾರರಿಗೆ ಮನೆ ಆರೈಕೆಗೆ ಒಳಗಾದವರ ವಿವರವನ್ನು ನೀಡಲಿದೆ.

ಆಸ್ಪತ್ರೆ ಆವರಣದಲ್ಲಿ ಜಟಾಪಟಿ

ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ರೋಗಿಯೊಬ್ಬರ ನರಳಾಟದ ಬಗ್ಗೆ ವರದಿ ಮಾಡಲು ಹೋಗಿದ್ದ ಮಾಧ್ಯಮದವರು ಹಾಗೂ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ನಡುವೆ ಭಾನುವಾರ ಬೆಳಿಗ್ಗೆ ಜಟಾಪಟಿ ನಡೆಯಿತು.

ಅನಾರೋಗ್ಯಕ್ಕೆ ತುತ್ತಾಗಿದ್ದ ಬನಶಂಕರಿ ನಿವಾಸಿ 53 ವರ್ಷದ ಪ್ರಕಾಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿರಲಿಲ್ಲ. ಉಸಿರಾಟದ ಸಮಸ್ಯೆಯಿಂದಾಗಿ ಪ್ರಕಾಶ್, ಆಟೊದಲ್ಲಿ ನರಳಾಡುತ್ತಿದ್ದರು. ಆ ಬಗ್ಗೆ ವರದಿ ಮಾಡಲು ಮಾಧ್ಯಮ ಪ್ರತಿನಿಧಿಗಳು, ಆಸ್ಪತ್ರೆ ಆವರಣಕ್ಕೆ ಹೋಗಿದ್ದರು. ಅವರನ್ನು ತಡೆದ ಭದ್ರತಾ ಸಿಬ್ಬಂದಿ, ‘ಮಾಧ್ಯಮದವರನ್ನು ಒಳಗೆ ಬಿಡದಂತೆ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಒಳಗೆ ಬಿಡುವುದಿಲ್ಲ’ ಎಂದು ಹೇಳಿ ತಳ್ಳಾಡಿದರು. ಕ್ಯಾಮೆರಾ ಕಸಿದುಕೊಳ್ಳಲು ಯತ್ನಿಸಿದರು. ಇದೇ ವೇಳೆ ಜಟಾಪಟಿ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು