ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | 1,373 ಕೋವಿಡ್‌ ಪ್ರಕರಣಗಳು ಪತ್ತೆ, 9 ದಿನಗಳಲ್ಲಿ 82 ಸೋಂಕಿತರ ಸಾವು

ನಗರದಲ್ಲಿ ಸೋಂಕಿತರ ಸಂಖ್ಯೆ 13,882ಕ್ಕೆ ಏರಿಕೆ
Last Updated 10 ಜುಲೈ 2020, 3:40 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಗುರುವಾರ ಮತ್ತೆ 1,373 ಮಂದಿ ಕೋವಿಡ್ ಪೀಡಿತರಾಗಿ ವಿವಿಧ ಆಸ್ಪತ್ರೆಗಳನ್ನು ಸೇರಿದ್ದಾರೆ. ಇದರಿಂದಾಗಿ ಸೋಂಕಿತರ ಸಂಖ್ಯೆ 13,882ಕ್ಕೆ ತಲುಪಿದೆ.

ಕೇವಲ 9 ದಿನಗಳಲ್ಲಿ ನಗರದಲ್ಲಿ 9,327 ಮಂದಿಗೆ ಸೋಂಕು ತಗುಲಿದೆ. ಇದೇ ಅವಧಿಯಲ್ಲಿ 82 ಮಂದಿ ಕೊನೆಯುಸಿರೆಳೆದಿದ್ದಾರೆ. ಕೋವಿಡ್‌ನಿಂದ ಜನ ಸಾಯುವುದನ್ನು ತಡೆಯುವ ನಿಟ್ಟಿನಲ್ಲಿ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುತ್ತಿದೆ. ಇದರಿಂದಾಗಿಯೇ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಕೂಡ ಅಧಿಕವಾಗುತ್ತಿದೆ.ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಶೇ 44 ರಷ್ಟು ಪ್ರಕರಣಗಳು ನಗರದಲ್ಲೇ ವರದಿಯಾಗಿವೆ.ರೋಗಿಗಳ ಸಂಖ್ಯೆ ಹೆಚ್ಚಿದಂತೆ ಚೇತರಿಸಿಕೊಂಡವರನ್ನು ಮನೆಗೆ ಕಳುಹಿಸಲಾಗುತ್ತಿದ್ದು, ಗುರುವಾರ ಒಂದೇ ದಿನ 606 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ನಗರದ ವಿವಿಧ ಆಸ್ಪತ್ರೆಗಳು ಹಾಗೂ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಸದ್ಯ 10,870 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳ ಸಂಖ್ಯೆ ಏರಿಕೆಯಾಗುತ್ತಿರುವ ಪರಿಣಾಮ ಕೋವಿಡ್‌ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ದಿನದಿಂದ ದನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಇನ್ನೊಂದೆಡೆ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗುವ ರೋಗಿಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಸದ್ಯ 292 ರೋಗಿಗಳಿಗೆ ಐಸಿಯುವಿನಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ.

ರಜೆಗೆ ಮನವಿ: ರಾಜ್ಯದ ಪ್ರಥಮ ಕೋವಿಡ್ ಆಸ್ಪತ್ರೆಯಾದ ವಿಕ್ಟೋರಿಯಾದಲ್ಲಿ ಬಹುತೇಕ ಹಾಸಿಗೆಗಳು ಭರ್ತಿಯಾಗಿವೆ. ಇದರಿಂದಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಅಲ್ಲಿನ ಶುಶ್ರೂಷಕರು, ಆರೋಗ್ಯ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಹಾಗೂ ವಾಹನ ಚಾಲಕರಿಗೆ ಬಿಡುವು ಇಲ್ಲದಂತಾಗಿದೆ. ಹೀಗಾಗಿ ಒಂದು ವಾರ ರಜೆ ನೀಡುವಂತೆ ಸಿಬ್ಬಂದಿ ಮನವಿ ಮಾಡಿಕೊಂಡಿದ್ದಾರೆ.

‘ನಿರಂತರ ಕೆಲಸದಿಂದ ಮಾನಸಿಕ ಒತ್ತಡ ಹೆಚ್ಚುತ್ತಿದೆ. ಕುಟುಂಬದ ಸದಸ್ಯರಿಂದಲೂ ದೂರವಾಗುತ್ತಿದ್ದೇವೆ.ನಮಗೂ ಸೋಂಕು ತಗುಲುವ ಭಯದಲ್ಲಿದ್ದೇವೆ.ನಮಗೆ ಕನಿಷ್ಠ ಒಂದು ವಾರವಾದರೂ ರಜೆ ಕೊಡಬೇಕು’ ಎಂದು ಸಿಬ್ಬಂದಿ ಮನವಿ ಮಾಡಿದ್ದಾರೆ.

ಕೆ.ಸಿ.ಜನರಲ್ 8 ಸಿಬ್ಬಂದಿಗೆ ಸೋಂಕು

ನಗರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಒಂದೇ ದಿನ ಎಂಟು ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಬ್ಬರು ಪ್ರಾಧ್ಯಾಪಕ ಸಿಬ್ಬಂದಿ, ಆರು ಮಂದಿ ಶುಶ್ರೂಷಕರು ಹಾಗೂ ಒಬ್ಬ ಗ್ರೂಪ್ ‘ಡಿ’ ಸಿಬ್ಬಂದಿ ಸೋಂಕಿತರಾಗಿದ್ದಾರೆ. ಇವರು ರೋಗಿಗಳಿಗೆ ಆರೈಕೆ ಮಾಡುತ್ತಿದ್ದರು. ಇದರಲ್ಲಿ ಪ್ರಾಧ್ಯಾಪಕರು ಮನೆ ಆರೈಕೆಗೆ ಒಳಗಾಗಿದ್ದಾರೆ. ಆಸ್ಪತ್ರೆಯಲ್ಲಿ ಈವರೆಗೆ 15 ಮಂದಿ ಸೋಂಕಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT