ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ದಿನ ಸಮಯ ಕೇಳಿದ ಶ್ರೀರಾಮುಲು; ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪ

Last Updated 21 ಸೆಪ್ಟೆಂಬರ್ 2020, 22:36 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯಕ್ಕೆ ಕೋವಿಡ್‌ ಬಂದಂದಿನಿಂದ ಇಲ್ಲಿಯವರೆಗೆ ಆಸ್ಪತ್ರೆಗಳಲ್ಲಿ ಮೂಲಸೌಲಭ್ಯ ಹೆಚ್ಚಿಸಲು ಮಂಜೂರು ಮಾಡಿದ ಮತ್ತು ವೆಚ್ಚವಾದ ಹಣ, ವೈರಸ್‌ ಪತ್ತೆಗಿರುವ ಪ್ರಯೋಗಾಲಯ ಸಂಖ್ಯೆ, ಕೋವಿಡ್‌ ಆರೈಕೆ ಕೇಂದ್ರಗಳಿಗೆ ಸಂಬಂಧಿಸಿದ ಮಾಹಿತಿ ನೀಡಲು 15 ದಿನಗಳ ಕಾಲಾವಕಾಶ ನೀಡುವಂತೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಮಾಡಿದ ಮನವಿಗೆ ವಿರೋಧ ಪಕ್ಷಗಳ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗ ವಿಧಾನಪರಿಷತ್‌ನಲ್ಲಿ ಸೋಮವಾರ ನಡೆಯಿತು.

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ಸಿನ ಮೋಹನ್‌ಕುಮಾರ್‌ ಕೊಂಡಜ್ಜಿ ಕೇಳಿದ ಪ್ರಶ್ನೆಗೆ ಉತ್ತರ ನೀಡದ ಶ್ರೀರಾಮುಲು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ, ‘ನಿಗದಿಪಡಿಸಿದ ಎಂಟು ದಿನಗಳ ಅಧಿವೇಶನ ಅವಧಿಯನ್ನೇ ಮೊಟಕುಗೊಳಿಸುತ್ತಿರುವಾಗ, 15 ದಿನಗಳ ಕಾಲಾವಕಾಶ ಕೇಳುತ್ತಿದ್ದೀರಿ. ಕೇವಲ ಆರು ತಿಂಗಳ ಅವಧಿಯ ಮಾಹಿತಿ ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲವೆಂದರೆ ಏನಿದು’ ಎಂದು ಪ್ರಶ್ನಿಸಿದರು. ಅವರ ಮಾತಿಗೆ ಇತರ ಸದಸ್ಯರೂ ದನಿಗೂಡಿಸಿದ್ದರಿಂದ ಕೆಲಹೊತ್ತು ಗದ್ದಲ ಉಂಟಾಯಿತು.

ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ, ‘ಸಮಯ ಕೇಳುವುದು ಸರಿಯಲ್ಲ’ ಎಂದು ಸಚಿವರಿಗೆ ಸೂಚನೆ ನೀಡಿದರು. ಅದಕ್ಕೆ ಶ್ರೀರಾಮುಲು, ‘10 ದಿನಗಳ ಒಳಗೆ ವರದಿ ಕೊಡುತ್ತೇನೆ’ ಎಂದರು. ಅದಕ್ಕೂ ವಿರೋಧ ಪಕ್ಷಗಳ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಮಧ್ಯಪ್ರವೇಶಿಸಿದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ‘ಅಧಿವೇಶನ ಮುಗಿಯುವುದರ ಒಳಗೆ ಉತ್ತರ ಕೊಡಿಸುತ್ತೇನೆ, ಅದರಲ್ಲಿ ಎರಡು ಮಾತಿಲ್ಲ. ಸರ್ಕಾರ ಯಾವುದನ್ನೂ ಮುಚ್ಚಿಡುವುದಿಲ್ಲ. ವಿರೋಧ ಪಕ್ಷದ ಸದಸ್ಯರಿಗೆ ಸಮಾಧಾನವಾಗುವಂಥ ಉತ್ತರವನ್ನೇ ಸಚಿವರು ನೀಡಲಿದ್ದಾರೆ’ ಎಂದು ಸಮಾಧಾನಪಡಿಸಿದರು.

‘ಕೊರೊನಾದಿಂದಸಾಮಾಜಿಕ ಬಹಿಷ್ಕಾರ’
‘ಕೋವಿಡ್–19 ಅಪಾಯಕಾರಿ ಕಾಯಿಲೆ. ಕಾಯಿಲೆ ಬಂದವರು ಒಂದು ರೀತಿಯಲ್ಲಿ ಸಾಮಾಜಿಕ ಬಹಿಷ್ಕಾರ ಎದುರಿಸುವಂತಹ ಸನ್ನಿವೇಶವಿದೆ’ ‌‌‌ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಅಗಲಿದ ಗಣ್ಯರಿಗೆ ವಿಧಾನಸಭೆಯಲ್ಲಿ ಸೋಮವಾರ ಸಂತಾಪ ಸೂಚಿಸಿ ಮಾತನಾಡಿ, ‘ನನಗೆ ಕೆಲವು ದಿನಗಳ ಹಿಂದೆ ಕೊರೊನಾ ಬಂದಿತ್ತು. ಬಳಿಕ ಹೆಂಡತಿ, ಮಕ್ಕಳಿಗೂ ಬಂತು. ಮನೆ ಕೆಲಸದವರಿಗೂ ಸೋಂಕು ತಗುಲಿತು. ಮನೆಯಲ್ಲಿ ಅಡುಗೆ ಮಾಡುವವರೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಮೈಸೂರಿನಿಂದ ಅಡುಗೆಯವರನ್ನು ಕರೆಸಿಕೊಳ್ಳಬೇಕಾಯಿತು. ಈ ಕಾಯಿಲೆ ಕುಟುಂಬದ ಸಂಬಂಧವನ್ನೇ ಕಡಿದು ಹಾಕುತ್ತದೆ’ ಎಂದರು.

‘ಜನರು ಕಾಯಿಲೆ ಬಾರದಂತೆ ಎಚ್ಚರ ವಹಿಸಬೇಕು. ಮಾಸ್ಕ್‌ ಹಾಕಿಕೊಳ್ಳಬೇಕು ಹಾಗೂ ಕೈಗಳನ್ನು ಪದೇ ಪದೇ ಸ್ಯಾನಿಟೈಸ್‌ ಮಾಡಿಕೊಳ್ಳಬೇಕು. ನಮ್ಮ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಮೊದಲು ಮಾಸ್ಕ್‌ ಹಾಕದೆ ಓಡಾಡುತ್ತಿದ್ದರು. ಮಾಸ್ಕ್‌ ಹಾಕಿಕೊಳ್ಳಿ ಎಂದರೂ ಕೇಳುತ್ತಿರಲಿಲ್ಲ. ಕೊರೊನಾ ಸೋಂಕು ತಗುಲಿದ ಬಳಿಕ ಮಾಸ್ಕ್‌ ಹಾಕುವ ಅಭ್ಯಾಸ ಮಾಡಿಕೊಂಡಿದ್ದಾರೆ’ ಎಂದರು.

ಬಿಜೆಪಿಯ ಆರಗ ಜ್ಞಾನೇಂದ್ರ ಮಾತನಾಡಿ, ‘ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಗಲಿರುಳು ದುಡಿಯುತ್ತಿದ್ದಾರೆ. ಕೊರೊನಾ ಸೋಂಕು ತಗುಲಿ ಅನೇಕ ಕಾರ್ಯಕರ್ತೆಯರು ಮೃತಪಟ್ಟಿದ್ದಾರೆ. ಅವರಿಗೆ ವಿಶೇಷ ನೆರವು ನೀಡಬೇಕು’ ಎಂದು ಒತ್ತಾಯಿಸಿದರು.

87 ಮಂದಿಗೆ ಕೋವಿಡ್‌ ದೃಢ
ವಿಧಾನಮಂಡಲ ಅಧಿವೇಶನದ ಕಾರಣಕ್ಕೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಚಿವರು, ಶಾಸಕರು, ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ನಡೆಸಿದ ಕೋವಿಡ್‌ ತಪಾಸಣೆಯಿಂದ (ಆರ್‌ಟಿಪಿಸಿಆರ್) ಈವರೆಗೆ 87 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ.

‘ಶುಕ್ರವಾರದಿಂದ ಸೋಮವಾರದರೆಗೆ ಒಟ್ಟು 2,149 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಸಂಗ್ರಹಿಸಲಾಗಿದೆ. ಕೋವಿಡ್‌ ದೃಢಪಟ್ಟವರಲ್ಲಿ ಇಬ್ಬರು ಶಾಸಕರು, ಒಬ್ಬರು ಅಧೀನ ಕಾರ್ಯದರ್ಶಿ. ಉಳಿದವರ ಪೈಕಿ ಸಚಿವಾಲಯದ ಸಿಬ್ಬಂದಿ, ಕೆಲ ಪತ್ರಕರ್ತರು ಇದ್ದಾರೆ’ ಎಂದು ವಿಧಾನಸೌಧ ಸಚಿವಾಲಯದ ಮೂಲಗಳು ತಿಳಿಸಿವೆ.

‘ಶುಕ್ರವಾರದಿಂದ ಮೂರು ದಿನಗಳವರೆಗೆ ಒಟ್ಟು 1,897 ಮಂದಿ ಗಂಟಲು ದ್ರವ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿತ್ತು. ಈ ಪೈಕಿ, ಸೋಮವಾರ ಬೆಳಗ್ಗಿನವರೆಗೆ ಬಂದ ವರದಿ ಪ್ರಕಾರ 1,480 ಮಂದಿಗೆ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. ಒಬ್ಬರ ವರದಿಯ ಪ್ರಕಾರ ಗಂಟಲು ದ್ರವ ಮಾದರಿ ಸಂಗ್ರಹಿಸಿದ ರೀತಿ ಸರಿಯಾಗಿಲ್ಲ. ಒಬ್ಬರ ಆ್ಯಂಟಿಜನ್‌ ಟೆಸ್ಟ್‌ ಪಾಸಿಟಿವ್‌ ಬಂದಿದೆ’ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ಡಾ. ಶಿವೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT