ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: 2ನೇ ದಿನವೂ 700ಕ್ಕೂ ಅಧಿಕ ಸೋಂಕಿತರು

ಅಧಿಕ ಸಂಖ್ಯೆಯಲ್ಲಿ ಮಧ್ಯವಯಸ್ಕರಿಗೇ ಕೋವಿಡ್‌–19
Last Updated 29 ಜೂನ್ 2020, 21:02 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸತತ ಎರಡನೇ ದಿನವಾದ ಸೋಮವಾರ ಸಹ ಕೋವಿಡ್ ದೃಢಪಟ್ಟ ಪ್ರಕರಣಗಳ ಸಂಖ್ಯೆ 700ರ ಗಡಿ (738) ದಾಟಿದ್ದು, ಭಾನುವಾರಕ್ಕೆ ಹೋಲಿಸಿದರೆ (783) ಕೊಂಚ ಇಳಿಕೆ ಕಂಡುಬಂದಿದೆ.‌

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರದಿಂದೀಚೆಗೆ ರೋಗಿಗಳ ಸಂಪರ್ಕ ಮಾಹಿತಿ ನೀಡುವುದನ್ನು ಸ್ಥಗಿತಗೊಳಿಸಿದೆ. ಬಿಬಿಎಂಪಿ ಸಹ ಪ್ರದೇಶವಾರು ಸೋಂಕಿತರ ಮಾಹಿತಿ ನೀಡಲು ನಿರಾಕರಿಸಿದೆ. ಹೀಗಾಗಿ‌ ಕೋವಿಡ್‌ ಪ್ರಕರಣಗಳು ನಗರದ ಯಾವ ಭಾಗದಲ್ಲಿ, ಯಾಕಾಗಿ ಹೆಚ್ಚಾಗಿದೆ ಎಂಬ ಮಾಹಿತಿ ಸಾರ್ವಜನಿಕರಿಗೆ ತಿಳಿಯದಂತಾಗಿದೆ.

‘ನಗರದಲ್ಲಿ ಶೀತಜ್ವರ ಸಂಬಂದಿತ ಲಕ್ಷಣ (ಐಎಲ್‌ಐ), ತೀವ್ರ ಉಸಿರಾಟದ ತೊಂದರೆ (ಸಾರಿ) ಪ್ರಕರಣಗಳೇ ಅಧಿಕ ಇದ್ದು, ಕೋವಿಡ್‌ನ ಮೂಲವನ್ನು ಕಂಡುಹಿಡಿಯುವುದು ಕಷ್ಟವಾಗುತ್ತಿದೆ’ ಎಂದು ಇಲಾಖೆಯ ನಿರ್ದೇಶಕ ಡಾ.ಓಂಪ್ರಕಾಶ‌್ ಪಾಟೀಲ ತಿಳಿಸಿದ್ದಾರೆ.‌

ಮಧ್ಯವಯಸ್ಕರೇ ಸೋಂಕಿತರು: ಸೋಮವಾರದ ನೂತನ ಕೋವಿಡ್‌ ಸೋಂಕಿತರ ಪೈಕಿ 490 ಮಂದಿ ಪುರುಷರು ಹಾಗೂ 248 ಮಹಿಳೆಯರು. ಪುರುಷರ ಪೈಕಿ 107 ಮಂದಿ 40ರ ಆಸುಪಾಸಿನಲ್ಲಿ ಇರುವವರು ಎಂಬುದು ವಿಶೇಷ. ಅದಕ್ಕಿಂತಲೂ ಆತಂಕಕಾರಿ ಸಂಗತಿ ಎಂದರೆ 20ರಿಂದ 30 ವರ್ಷದೊಳಗಿನ 58 ಮಂದಿ ಮಹಿಳೆಯರು ಸೋಂಕಿತರಾಗಿರುವುದು.

ಖಾಸಗಿ ಆಸ್ಪತ್ರೆಗಳಿಂದಲೂ ವರದಿ: ಒಟ್ಟು ಸೋಂಕು ಪ್ರಕರಣಗಳ ಪೈಕಿ 153 ಪ್ರಕರಣಗಳು ಖಾಸಗಿ ಆಸ್ಪತ್ರೆಗಳಿಂದ ವರದಿಯಾಗಿದೆ.

ನಗರದಲ್ಲಿ ಒಟ್ಟು ನಾಲ್ವರು ಮೃತಪಟ್ಟಿದ್ದು, ಅದರಲ್ಲಿ 40 ವರ್ಷದ ಪುರುಷರೊಬ್ಬರು ಸೇರಿದ್ದಾರೆ. ಉಳಿದಂತೆ 60 ಮತ್ತು 67 ವರ್ಷದ ಪುರುಷರು ಹಾಗೂ 80 ವರ್ಷದ ವೃದ್ಧೆ ಸೇರಿದ್ದಾರೆ.

9 ಆಸ್ಪತ್ರೆಗಳಿಗೆ ಅಲೆದಾಡಿದ ಸೋಂಕಿತ
45 ವರ್ಷದ ಕೊರೊನಾ ಸೋಂಕಿತರೊಬ್ಬರು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಯೂ ಸೇರಿ ಒಂಬತ್ತು ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ.

ಗೊಟ್ಟಿಗೆರೆಯ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಇರುವುದು ಶುಕ್ರವಾರ ದೃಢಪಟ್ಟಿತು. ಇದಾದ ಬಳಿಕ ರೋಗಿಯನ್ನು ದಾಖಲಿಸಲು ವಿಕ್ಟೋರಿಯಾ ಆಸ್ಪತ್ರೆ ಸೇರಿ ನಗರದ ಪ್ರಮುಖ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಹಾಸಿಗೆಗಳ ಕೊರತೆ ಇದೆ ಎಂಬ ಕಾರಣಕ್ಕೆ ಆಸ್ಪತ್ರೆಯವರು ರೋಗಿಗೆ ಚಿಕಿತ್ಸೆ ನಿರಾಕರಿಸಿದರು. ಕೊನೆಗೆ ಪ್ರಕ್ರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT