ಮಂಗಳವಾರ, ನವೆಂಬರ್ 24, 2020
19 °C
ವಾಣಿವಿಲಾಸ ಆಸ್ಪತ್ರೆಯಲ್ಲಿ ಮೂಲಸೌಕರ್ಯ ಸಜ್ಜಾದರೂ ಸೇವೆಗೆ ಬ್ಯಾಂಕ್‌ ಅಲಭ್ಯ

ಎದೆ ಹಾಲು ಬ್ಯಾಂಕ್‌: ಕೋವಿಡ್ ವಿಘ್ನ!

ವರುಣ್‌ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಾಣಿವಿಲಾಸ ಆಸ್ಪತ್ರೆಯಲ್ಲಿ ನಿರ್ಮಿಸಲಾಗಿರುವ ‘ಎದೆ ಹಾಲು ಬ್ಯಾಂಕ್‌’ನ ಕಾರ್ಯಾರಂಭಕ್ಕೆ ಕೋವಿಡ್‌
ನಿಂದಾಗಿ ಅಡ್ಡಿ‍ ಉಂಟಾಗಿದೆ. ತಾಯಂದಿರ ಎದೆ ಹಾಲಿನಿಂದ ವಂಚಿತರಾದ ಶಿಶುಗಳಿಗೆ ಈ ಕೊರತೆ ನೀಗಿಸುವ ಅವಕಾಶ ಇದ್ದರೂ ಅದು ಬಳಕೆಗೆ ಲಭಿಸುತ್ತಿಲ್ಲ.

ತಾಯಿಯ ಎದೆ ಹಾಲಿನಲ್ಲಿ ಮಗುವಿನ ಬೆಳವಣಿಗೆಗೆ ಬೇಕಾದ ಪೌಷ್ಟಿಕಾಂಶ, ಖನಿಜಾಂಶ ಮತ್ತು ಹೇರಳವಾದ ನೀರಿನ ಅಂಶಗಳು ಅಡಕವಾಗಿರುತ್ತವೆ. ಮಗು ಹುಟ್ಟಿದ ಗಂಟೆಯೊಳಗೆ ಹಾಲುಣಿಸಲು ಪ್ರಾರಂಭಿಸಿ, ಆರು ತಿಂಗಳವರೆಗೆ ಎದೆ ಹಾಲನ್ನು ಮಾತ್ರ ನೀಡಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ, ತಾಯಂದಿರ ಅನಾರೋಗ್ಯ, ನಿಗದಿತ ಪ್ರಮಾಣದಲ್ಲಿ ಹಾಲು ಉತ್ಪತ್ತಿಯಾಗದಿರುವುದು ಸೇರೆದಂತೆ ವಿವಿಧ ಕಾರಣಗಳಿಂದ ಕೆಲ ಶಿಶುಗಳಿಗೆ ಎದೆ ಹಾಲು ದೊರೆಯುತ್ತಿಲ್ಲ. ಅದೇ ರೀತಿ, ಕೆಲ ಶಿಶುಗಳಿಗೆ ಹೆಚ್ಚುವರಿ ಹಾಲಿನ ಅಗತ್ಯವೂ ಇರುತ್ತದೆ. ಅಂತಹವರಿಗೆ ವೈದ್ಯರು ದ್ರವರೂಪದ ಆಹಾರವನ್ನು ಶಿಫಾರಸು ಮಾಡುತ್ತಿದ್ದಾರೆ.

ಎಲ್ಲ ಮಕ್ಕಳಿಗೂ ತಾಯಂದಿರ ಎದೆ ಹಾಲು ದೊರೆಯಬೇಕೆಂಬ ಉದ್ದೇಶದಿಂದಲೇ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿ (ಬಿಎಂಸಿಆರ್‌ಐ) ಕಾರ್ಯನಿರ್ವಹಿಸುತ್ತಿರುವ ವಾಣಿ ವಿಲಾಸ ಆಸ್ಪತ್ರೆಯಲ್ಲಿ ₹ 1 ಕೋಟಿ ವೆಚ್ಚದಲ್ಲಿ ‘ತಾಯಂದಿರ ಎದೆ ಹಾಲಿನ ಬ್ಯಾಂಕ್‌’ ನಿರ್ಮಿಸಲಾಗಿದೆ. ಇದು ರಾಜ್ಯದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಸ್ಥಾಪಿಸಲಾದ ತಾಯಂದಿರ ಎದೆ ಹಾಲಿನ ಮೊದಲ ಬ್ಯಾಂಕ್ ಎಂಬ ಹಿರಿಮೆಗೂ ಭಾಜನವಾಗಲಿದೆ. ಯಂತ್ರೋಪಕರಣಗಳ ಖರೀದಿಯ ಟೆಂಡರ್ ಪ್ರಕ್ರಿಯೆ ವಿಳಂಬ ಸೇರಿದಂತೆ ವಿವಿಧ ಕಾರಣಗಳು ಕಾರ್ಯಾರಂಭಕ್ಕೆ ಹಿನ್ನಡೆಯಾಗಿದ್ದವು. ಈಗ ಮೂಲ ಸೌಕರ್ಯವು ಸಜ್ಜಾಗಿದ್ದರೂ ಕೋವಿಡ್‌ ನಿಂದಾಗಿ ಸಿಬ್ಬಂದಿಯ ನೇಮಕಾತಿ ಸೇರಿದಂತೆ ವಿವಿಧ ಪ್ರಕ್ರಿಯೆಗಳು ಪೂರ್ಣಗೊಂಡಿಲ್ಲ.

ನಾಲ್ಕು ತಿಂಗಳು ಸಂಗ್ರಹ: ‘ಆಸ್ಪತ್ರೆಯಲ್ಲಿ ಹೆರಿಗೆ ಆದವರು ಹಾಗೂ ಸ್ವ ಇಚ್ಛೆಯಿಂದ ಹೊರಗಿನಿಂದ ಬರುವ ತಾಯಂದಿರಿಂದ ಎದೆ ಹಾಲನ್ನು ಸಂಗ್ರಹಿಸಲಾಗುತ್ತದೆ. ಇದಕ್ಕೂ ಮೊದಲು ಅವರಿಗೆ ವೈದ್ಯಕೀಯ ಪರೀಕ್ಷೆಗಳನ್ನು ಕೂಡ ನಡೆಸಲಾಗುತ್ತದೆ. ಸಂಗ್ರಹಿಸಿದ ಹಾಲನ್ನು ಪ್ಯಾಶ್ಚರೀಕರಿಸಿದ ಬಳಿಕ ಪ್ಯಾಕ್‌ ಮಾಡಿ, ಸುಮಾರು 120 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂರಕ್ಷಿಸಿ ಇಡಬೇಕಾಗುತ್ತದೆ. ಮಗುವಿಗೆ ಕುಡಿಸುವಾಗ ಅದನ್ನು ಸಾಮಾನ್ಯ ಉಷ್ಣಾಂಶಕ್ಕೆ ತರಬೇಕಾಗುತ್ತದೆ’ ಎಂದು ಆಸ್ಪತ್ರೆಯ ವೈದ್ಯ ಅಧೀಕ್ಷಕಿ ಡಾ. ಗೀತಾ ಶಿವಮೂರ್ತಿ ತಿಳಿಸಿದರು.

‘ಸಂಗ್ರಹಿಸದ ಹಾಲನ್ನು ಮೂರರಿಂದ ನಾಲ್ಕು ತಿಂಗಳು ಇಡಬಹುದು ಎಂದು ಹೇಳಲಾಗುತ್ತದೆ. ಈ ಬ್ಯಾಂಕ್ ಪ್ರಾರಂಭದ ಬಳಿಕ ನಮ್ಮಲ್ಲಿ ಜನಿಸಿದ ಯಾವ ಮಗುವೂ ಎದೆ ಹಾಲಿನಿಂದ ವಂಚಿತವಾಗುವದಿಲ್ಲ’ ಎಂದರು.

ಕೋವಿಡ್‌ ಬಳಿಕ ಎದೆ ಹಾಲಿಗೆ ಬೇಡಿಕೆ

ಕೆಲ ಗರ್ಭಿಣಿಯರು ಹಾಗೂ ಬಾಣಂತಿಯರು ಕೂಡ ಕೋವಿಡ್ ಪೀಡಿತರಾಗುತ್ತಿರುವ ಪರಿಣಾಮ ಎದೆ ಹಾಲಿಗೆ ಬೇಡಿಕೆ ಹೆಚ್ಚುತ್ತಿದೆ. ತಾಯಂದಿರು ಕೋವಿಡ್ ಪೀಡಿತರಾದರೂ ಸುರಕ್ಷಿತ ಸ್ತನ್ಯಪಾನಕ್ಕೆ ಆರೋಗ್ಯ ಇಲಾಖೆಯು ಅವಕಾಶ ನೀಡಿದೆ. ಆದರೆ, ಸೋಂಕಿನಿಂದ ಅಧಿಕ ‍ಪ್ರಮಾಣದಲ್ಲಿ ಅಸ್ವಸ್ಥರಾದವರಿಗೆ ಎದೆಹಾಲು ಉಣಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಕೆಲ ಮಕ್ಕಳು, ತಾಯಂದಿರು ಚೇತರಿಸಿಕೊಳ್ಳುವವರೆಗೂ ಎದೆ ಹಾಲಿನಿಂದ ವಂಚಿತವಾಗುತ್ತಿವೆ. ವಾಣಿವಿಲಾಸ ಆಸ್ಪತ್ರೆಯ ವೈದ್ಯರೇ 200ಕ್ಕೂ ಅಧಿಕ ಕೋವಿಡ್ ಪೀಡಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ್ದಾರೆ.

ಕೋವಿಡ್ ಕಾಣಿಸಿಕೊಳ್ಳುವ ಮೊದಲು ವಾಣಿವಿಲಾಸ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 1,200ಕ್ಕೂ ಅಧಿಕ ಹೆರಿಗೆಗಳು ನಡೆಯುತ್ತಿದ್ದವು. ಈಗ 800ರಿಂದ 900 ಹೆರಿಗೆಗಳನ್ನು ಮಾಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಜನಿಸುವ ಮಕ್ಕಳಲ್ಲಿ ಕನಿಷ್ಠ 150 ಶಿಶುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಎದೆ ಹಾಲು ಅಗತ್ಯವಿರುತ್ತದೆ. ಎದೆ ಹಾಲು ಬ್ಯಾಂಕ್ ಪ್ರಾರಂಭವಾದ ಬಳಿಕ ಈ ಕೊರತೆ ನೀಗಿಸುವ ಜತೆಗೆ ಬೇರೆ ಆಸ್ಪತ್ರೆಗಳಿಗೆ ಕೂಡ ಹಾಲು ಪೂರೈಕೆ ಮಾಡಬಹುದು ಎನ್ನುತ್ತಾರೆ ಆಸ್ಪತ್ರೆಯ ವೈದ್ಯರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು