ಶುಕ್ರವಾರ, ಜುಲೈ 30, 2021
28 °C
ಆಸ್ಪತ್ರೆ ಅವ್ಯವಸ್ಥೆ

ಪ್ರತ್ಯಕ್ಷ ಅನುಭವ | ಕೋವಿಡ್‌ ಪರೀಕ್ಷೆಗೆ ಹೋದವರು ಸೋಂಕಿನ ಭೀತಿಯೊಂದಿಗೆ ಬಂದರು!

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಕೊರೊನಾ ಪಿಡುಗು ಜನರನ್ನು ಹಿಂಡುತ್ತಿದೆ. ಜನರಿಗೆ ಸಾಂತ್ವನ ಹೇಳಬೇಕಿದ್ದ, ಧೈರ್ಯ ತುಂಬುವ ವ್ಯವಸ್ಥೆ ಮಾಡಬೇಕಿದ್ದ ಸರ್ಕಾರ ಅಕ್ಷರಶಃ ಎಡವಿದೆ. ಸೋಂಕಿನ ಭೀತಿಯಿಂದ ತಪಾಸಣೆಗೆಂದು ಆಸ್ಪತ್ರೆಗಳಿಗೆ ಹೋದವರು, ಸೋಂಕು ತಗುಲಿಯೇ ಬಿಟ್ಟಿದೆಯೇನೋ ಎಂಬ ಭಯದಿಂದ ಮನೆಗಳಿಗೆ ಹಿಂದಿರುಗುತ್ತಿದ್ದಾರೆ. ಬೆಂಗಳೂರಿನ ಆರೋಗ್ಯ ವ್ಯವಸ್ಥೆಯ ಲೋಪಗಳನ್ನು ಎತ್ತಿತೋರಿಸುವ ಪ್ರತ್ಯಕ್ಷ ಅನುಭವವೊಂದು ಇಲ್ಲಿದೆ. ಕೋವಿಡ್ ಪರೀಕ್ಷೆಗಾಗಿ ಆಸ್ಪತ್ರೆಗಳಿಗೆ ಅಲೆದ ತಂದೆ ಮಗನ ಅನುಭವವನ್ನು ಶ್ರದ್ಧೆಯಿಂದ ನಿರೂಪಿಸಿದ್ದಾರೆ ಆರ್‌. ಹರಿಶಂಕರ್. ಪರೀಕ್ಷೆಗೆ ಒಳಪಟ್ಟವರ ಗೌಪ್ಯತೆ ಕಾಪಾಡುವ ಉದ್ದೇಶದಿಂದ ಯಾರ ಹೆಸರನ್ನೂ ಲೇಖನದಲ್ಲಿ ಉಲ್ಲೇಖಿಸಿಲ್ಲ.

 

ಮೈಸೂರು ರಸ್ತೆಯ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುವ ನನ್ನ ತಂದೆಗೆ ಮತ್ತು ಅವರದೇ ಪಾಳಿಯಲ್ಲಿ ಕೆಲಸ ಮಾಡುವ ಅವರ ಗೆಳೆಯರಿಗೆ ಒಂದೇ ದಿನ ನೆಗಡಿ, ಜ್ವರ ಕಾಣಿಸಿಕೊಂಡಿತ್ತು. 

ಕಂಪೆನಿ ಕೆಲಸಕ್ಕಾಗಿಯೇ ಹುಬ್ಬಳ್ಳಿಗೆ ಹೋಗಿ ಬಂದಿದ್ದ ಅವರಿಬ್ಬರೂ ಮಾರ್ಗಮಧ್ಯೆ ಚಿತ್ರದುರ್ಗದಲ್ಲಿ ಕಾಫಿ ಕುಡಿದಿದ್ದರು. ಹುಬ್ಬಳ್ಳಿಯಿಂದ ಬಂದ ಮೇಲೆ ಇಬ್ಬರಿಗೂ ಜ್ವರ ಬಂತು. ನಾಲ್ಕೈದು ದಿನಗಳಲ್ಲಿ ಇಬ್ಬರೂ ತಕ್ಕಮಟ್ಟಿಗೆ ಸುಧಾರಣೆ ಕಂಡರಾದರೂ, ಜ್ವರ ಬಂದಿರುವ ಸಂದರ್ಭ ಸರಿ ಇಲ್ಲ ಎಂಬ ಕಾರಣಕ್ಕೆ ಕೋವಿಡ್‌ ಟೆಸ್ಟ್‌ಗೆ ಒಳಪಡುವುದಾಗಿ ನನ್ನ ತಂದೆ ಹೇಳಿದರು.

ಅವರಿಗೆ ಅಂಥ ಲಕ್ಷಣಗಳು ಇಲ್ಲದ್ದರಿಂದ ಟೆಸ್ಟ್‌ ಮಾಡಿಸುವುದು ಬೇಡ ಎಂದು ಮಕ್ಕಳಾದ ನಾವು ಹೇಳಿದೆವು. ನನ್ನ ತಂದೆ ಜೊತೆಗೇ ಜ್ವರದಿಂದ ಭಾದಿತರಾಗಿದ್ದ ಸಹೋದ್ಯೋಗಿ ಜುಲೈ 4 ರಂದು ಕೋವಿಡ್‌ ಟೆಸ್ಟ್‌ಗೆ ಒಳಪಟ್ಟರು. ಎರಡು ದಿನಗಳ ನಂತರ, ಜುಲೈ6 ರಂದು ಅವರ ಪರೀಕ್ಷಾ ವರದಿ ಬಂದು, ಅವರಿಗೆ ಕೋವಿಡ್‌ ಇರುವುದು ದೃಢವಾಯಿತು. 

ಅವರಿಗೆ ಪಾಸಿಟಿವ್‌ ಬರುತ್ತಲೇ ನನ್ನ ತಂದೆಯ ಆರೋಗ್ಯದ ಬಗ್ಗೆ ಮನೆಯಲ್ಲಿರುವ ಎಲ್ಲರಿಗೂ ಆತಂಕ ಹೆಚ್ಚಾಯಿತು. ಮನೆಯಲ್ಲಿ ನಾಲ್ಕು ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಇಬ್ಬರು ಮಕ್ಕಳು, ಬಿಪಿ, ಶುಗರ್‌ ಇರುವ ನನ್ನ ತಾಯಿ ಇದ್ದಾರೆ ಎಂಬುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿತು.

ಇದೇ ಹಿನ್ನೆಲೆಯಲ್ಲಿ ನಮ್ಮ ತಂದೆಯನ್ನು ಜುಲೈ 6ರಂದು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದೆ. ‘ಜ್ವರ ಬಂದು ಕಡಿಮೆಯಾಗಿದೆ. ಇವತ್ತಿಗೆ ಅವರ ಪರಿಸ್ಥಿತಿ ಚೆನ್ನಾಗಿದೆ. ಸುಧಾರಣೆ ಕಂಡಿದ್ದಾರೆ. ಅದರೆ, ಅವರೊಂದಿಗೇ ಕೆಲಸ ಮಾಡುವವರಿಗೆ ಕೋವಿಡ್‌ ಪಾಸಿಟಿವ್‌ ಬಂದಿದೆ’ ಎಂದು ಹೇಳಿದ್ದರಿಂದ ವೈದ್ಯರು ನನ್ನ ತಂದೆಗೂ ಕೋವಿಡ್‌ ಟೆಸ್ಟ್‌ ಮಾಡಿಸುವಂತೆ ಸಲಹೆ ನೀಡಿದರು. 

ವೈದ್ಯರ ಸಲಹೆಯಂತೇ ಅವರು ಸೂಚಿಸಿದ ಬನಶಂಕರಿ ಎರಡನೇ ಹಂತದ ಹೆರಿಗೆ ಆಸ್ಪತ್ರೆಯಲ್ಲಿರುವ ಕೋವಿಡ್‌ ಫೀವರ್‌ ಕ್ಲಿನಿಕ್‌‌ಗೆ ಪರೀಕ್ಷೆಗಾಗಿ ಹೋದೆವು. ಅಲ್ಲಿ ಹತ್ತಾರು ಮಂದಿ ಸಾಲುಗಟ್ಟಿ ನಿಂತಿದ್ದರು. ಅದರಲ್ಲಿ ಕೆಲವರು ಮಾಸ್ಕ್‌ ಹಾಕಿದ್ದರು. ಕೆಲವರು ಮಾಸ್ಕ್‌ಗಳನ್ನು ಕುತ್ತಿಗೆಗೆ ಹಾಕಿಕೊಂಡಿದ್ದರು. ಅಲ್ಲಿನ ಯಾರೊಬ್ಬರೂ ದೈಹಿಕ ಅಂತರ ಪಾಲಿಸದೇ ಅಕ್ಕಪಕ್ಕದಲ್ಲೇ ನಿಂತಿರುವುದು ಕಂಡು ನಮಗೆ ಭಯವಾಯಿತು. ನಮ್ಮ ತಂದೆಗೆ ಕೋವಿಡ್‌ ಇದೆಯೋ ಇಲ್ಲವೋ, ಆದರೆ, ಇಲ್ಲಿನ ಜನರನ್ನು ನೋಡಿದರೆ ಕೋವಿಡ್‌ ನಮಗೇ ಬರುವಂತೆ ಕಾಣುತ್ತಿದೆ ಎಂಬ ಭೀತಿ ನಮ್ಮಿಬ್ಬರಲ್ಲೂ ಆವರಿಸಿತು. 

ಸರಿ, ಬಂದದ್ದಾಗಿದೆ. ಕೋವಿಡ್‌ ಪರೀಕ್ಷೆ ಮಾಡಿಸಲೇಬೇಕೆಂದು ಸರತಿಯಲ್ಲಿ ನಿಂತೆವು. ನಮ್ಮ ಸರದಿಯೂ ಬಂತು. ಫೀವರ್‌ ಕ್ಲಿನಿಕ್‌ನ ಸಿಬ್ಬಂದಿಗೆ ವಿಷಯ ತಿಳಿಸಿದೆವು. ಎಲ್ಲವನ್ನೂ ಕೇಳಿದ ಅವರು. ‘ನಿಮಗೆ ಜ್ವರ ಬಂದು ವಾಸಿಯಾಗಿದೆ. ನಿಮಗ್ಯಾಕೆ ಪರೀಕ್ಷೆ’ ಎಂದು ಪ್ರಶ್ನಿಸಿದರು.

‘ನನ್ನೊಂದಿಗೆ ಕೆಲಸ ಮಾಡುವ ಸಹೋದ್ಯೋಗಿಗೂ ಕೋವಿಡ್‌ ಲಕ್ಷಣಗಳಿಲ್ಲ. ಆದರೆ, ಪರೀಕ್ಷೆ ಮಾಡಿಸಿದಾಗ ಅವರಿಗೆ ಪಾಸಿಟಿವ್‌ ಬಂದಿದೆ. ನಮ್ಮ ಮನೆಯಲ್ಲಿ ಮಕ್ಕಳಿದ್ದಾರೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ನಾನು ಪರೀಕ್ಷೆ ಮಾಡಿಸಲೇ ಬೇಕು. ಅಲ್ಲದೆ ವೈದ್ಯರೂ ಸಲಹೆ ನೀಡಿದ್ದಾರೆ’ ಎಂದು ನನ್ನ ತಂದೆ ವಿವರಿಸಿದರು.

'ಹಾಗಾದರೆ, ವೈದ್ಯರು ಬಂದು ನಿಮ್ಮನ್ನೊಮ್ಮೆ ಪರೀಕ್ಷಿಸುತ್ತಾರೆ. ಆಮೇಲೆ ಟೆಸ್ಟ್‌ ಮಾಡಿಸಿ’ ಎಂದು ಸಿಬ್ಬಂದಿ ಹೇಳಿದರು. ಸರಿ ಎಂದು ನಾವು ಕಾಯುತ್ತಾ ನಿಂತೆವು. ಸುಮಾರು ಒಂದು ಗಂಟೆ ನಂತರ ವೈದ್ಯರು ಬಂದರು. ದೂರದಿಂದಲೇ... 'ಏನು’  ಎಂದು ಕೇಳಿದರು. ಅವರಿಗೆ ಮತ್ತೊಮ್ಮೆ ನಮ್ಮ ಪರಿಸ್ಥಿತಿ ವಿವರಿಸಬೇಕಾಯಿತು. ಎಲ್ಲವನ್ನೂ ಕೇಳಿದ ಅವರದ್ದೂ ಅದೇ ಮಾತು. ‘ಜ್ವರ ಹೋಗಿದೆ. ಪರೀಕ್ಷೆ ಬೇಡ’ ಎಂದರು. ಆದರೆ, ಪರೀಕ್ಷೆ ಮಾಡಿಸಲೇ ಬೇಕಾದ ಅನಿವಾರ್ಯತೆಯನ್ನು ವಿವರಿಸಿದೆವು.

ಆಗ ವೈದ್ಯರು, 'ಇಲ್ಲಿ ಪರೀಕ್ಷೆ ಮಾಡುತ್ತಿಲ್ಲ. ನೀವು ಜಯನಗರದ ಸಾರ್ವಜನಿಕ ಆಸ್ಪತ್ರೆಗೆ ಹೋಗಿ. ಬೇಕಿದ್ದರೆ ಬರೆದು ಕೊಡುತ್ತೇನೆ’ ಎಂದರು. 'ಸರಿ ಬರೆದುಕೊಡಿ ನಾವು ಅಲ್ಲಿಗೇ ಹೋಗುತ್ತೇವೆ, ಎಂದು ಅವರಿಗೆ ತಿಳಿಸಿದೆವು.  ನಮ್ಮನ್ನು ಪರೀಕ್ಷಿಸದೆಯೇ ಅವರು ಜ್ವರ, ಕೆಮ್ಮು, ಕಫದ ಕುರಿತು ಅಂಕಿ ಸಂಖ್ಯೆಗಳನ್ನು ಮೆಡಿಕಲ್‌ ರಿಪೋರ್ಟ್‌ನಲ್ಲಿ ಬರೆದು ಅಲ್ಲಿಗೆ ಕಳುಹಿಸಿದರು. ಅವರು ಬರೆದುಕೊಟ್ಟ ವಿವರಗಳೊಂದಿಗೆ ಜಯನಗರ ಸಾರ್ವಜನಿಕ ಆಸ್ಪತ್ರೆಗೆ ಹೋದಾಗ ನಮ್ಮ ಭಯ ನೂರ್ಮಡಿ ಹೆಚ್ಚಿತು.

ಕೆಮ್ಮುತ್ತಾ, ಸೀನುತ್ತಾ, ಮೂಗು ಸೋರಿಸುತ್ತಾ ಹಲವರು ಆಸ್ಪತ್ರೆ ಎದುರು ಪರೀಕ್ಷೆಗಾಗಿ ಕಾದು ಕುಳಿತಿದ್ದರು. ಅವರು ಧರಿಸಿದ್ದ ಮಾಸ್ಕ್‌ಗಳು ನಿಜಕ್ಕೂ ರೋಗ ಹರಡುವುದನ್ನು ನಿಯಂತ್ರಿಸುತ್ತವೆಯೇ ಎಂಬ ಅನುಮಾನ ನಮ್ಮನ್ನು ಇನ್ನಿಲ್ಲದಂತೆ ಕಾಡಿತು. ಯಾಕೆಂದರೆ ಅಲ್ಲಿದ್ದವರು ಧರಿಸಿದ್ದಿದ್ದೆಲ್ಲ ಕಳಪೆ ಫೇಸ್‌ ಮಾಸ್ಕ್‌ಗಳು. 

ಆಸ್ಪತ್ರೆಯೊಳಗೆ ಹೋಗಿ ‘ಪರೀಕ್ಷೆ ಮಾಡಿಸಬೇಕು’ ಎಂದು ಮಾದರಿ ಸಂಗ್ರಹಿಸುವವರ ಬಳಿ ಹೇಳಿದೆವು. ‘ನಿಮ್ಮ ಕೈಲಿರುವ ಹೆಲ್ತ್‌ ರಿಪೋರ್ಟ್‌ಗೆ ವೈದ್ಯಾಧಿಕಾರಿಯ ಸಹಿ ಹಾಕಿಸಿಕೊಂಡು ಬನ್ನಿ’ ಎಂದು ಅವರು ಹೇಳಿದರು. ಸಹಿಗಾಗಿ ವೈದ್ಯಾಧಿಕಾರಿ ಬಳಿಗೆ ಹೋದರೆ ಅಲ್ಲಿಯೂ ಸಾಲು. ಸಾಲಿನಲ್ಲಿ ನಮ್ಮ ಮುಂದೆ ವ್ಯಕ್ತಿಯೊಬ್ಬರು ಬೇಸರದ ಮುಖದೊಂದಿಗೆ ನಿಂತಿದ್ದರು. ಅವರ ಕಣ್ಣು ಕೆಂಪಾಗಿತ್ತು, ಮೂಗು ಸೋರುತ್ತಿತ್ತು. ಆ ವ್ಯಕ್ತಿ ಪದೇ ಪದೆ ಮಾಸ್ಕ್‌ ತೆಗೆದು ಕರವಸ್ತ್ರದಿಂದ ಮೂಗನ್ನು ಒರೆಸಿಕೊಳ್ಳುತ್ತಿದ್ದರು. ಸಾಲಿನಲ್ಲಿ ಒಟ್ಟಿಗೇ ನಿಂತಿದ್ದರಿಂದ ನಮ್ಮೊಂದಿಗೆ ಅವರು ಮಾತನಾಡಲು ಆರಂಭಿಸಿದರು.

'ಏನ್‌ ಸರ್‌ ಪ್ರತಿಯೊಂದಕ್ಕೂ ಸೈನು, ಪ್ರೊಸೀಜರ್ರು ಅಂದ್ರೆ ಹೇಗೆ. ಇಲ್ಲಿ ಪೇಷೆಂಟ್‌ಗಳು ಸಾಯುತ್ತಿದ್ದಾರೆ’ ಎಂದು ಆತ ಹೇಳಿದರು.

ನಮಗೂ ಎರಡೆರಡು ಕಡೆ ಸಾಲಿನಲ್ಲಿ ನಿಂತಿದ್ದರಿಂದ ಬೇಸರವನ್ನು ಅವರೊಂದಿಗೆ ಹಂಚಿಕೊಂಡೆವು. ನಮಗಿಂತ ಮುಂದೆ ಇದ್ದ ಆ ವ್ಯಕ್ತಿ ವೈದ್ಯಾಧಿಕಾರಿಗಳ ಬಳಿ ಹೋಗುತ್ತಲೇ ಗೊಳೋ ಎಂದು ಅಳಲಾರಂಭಿಸಿದರು. 'ವಯಸ್ಸಾದ ನನ್ನ ತಂದೆ ಕೋವಿಡ್‌ನಿಂದ ತೀವ್ರ ಭಾದೆಗೆ ಒಳಗಾಗಿದ್ದಾರೆ. ಅವರಿಗೆ ಉಸಿರಾಡಲೂ ಆಗುತ್ತಿಲ್ಲ. ಸ್ಯಾಚುರೇಷನ್‌ ಲೆವೆಲ್‌ ಕಡಿಮೆಯಾಗಿದೆ. ಅವರನ್ನು ಆಸ್ಪತ್ರೆಗೆ ಸೇರಿಸಿಕೊಳ್ಳಿ. ಆಕ್ಸಿಜನ್‌ ಕೊಡಿ ಎಂದು ಗೋಳಾಡಿದರು’ ಅವರ ಗೋಳಾಟ ನಮ್ಮಲ್ಲಿ ಮರುಕ ಮತ್ತು ಭಯಗಳನ್ನು ತುಂಬಿಸಿತು.

‘ಇವರ ತಂದೆಗೇ ಸೋಂಕಿದೆ ಎಂದರೆ, ನೆಗಡಿ, ಸೀನು ಇರುವ ಈ ವ್ಯಕ್ತಿಯಲ್ಲಿ ಸೋಂಕು ಇರದೇ?’ ಎಂಬುದು ನಮ್ಮ ಪ್ರಶ್ನೆಯಾಗಿತ್ತು. ಅದು ನಮ್ಮನ್ನು ತೀವ್ರ ಆತಂಕಕ್ಕೆ ದೂಡಿತು. ‌ನಂತರ, ವೈದ್ಯಾಧಿಕಾರಿಗಳ ಬಳಿ ಸಹಿ ಹಾಕಿಸಿಕೊಳ್ಳಲು ನಮ್ಮ ಸರದಿ ಬಂತು.

ನಾವಿನ್ನೇನು ಒಳಗೆ ಹೋಗಬೇಕು ಎನ್ನುವುದರೊಳಗೇ ಅಲ್ಲಿಗೆ ಬಂದ ಮಹಿಳಾ ಆರೋಗ್ಯ ಸಿಬ್ಬಂದಿಯೊಬ್ಬರು ವೈದ್ಯಾಧಿಕಾರಿಗಳ ಬಳಿ ಹೋಗಿ ಜೋರು ಮಾಡಿದರು. ‘ನೀವು ಎಲ್ಲರಿಗೂ ಸಹಿ ಹಾಕಿ ಕಳಿಸಿ ಬಿಡ್ತೀರಿ. ಎಲ್ಲರಿಗೂ ಪರೀಕ್ಷೆ ಮಾಡಲು ಇಲ್ಲಿ ಆಗಬೇಕಲ್ಲ. ಟ್ರಿಪ್‌ಗಳಿಗೆ ಹೋದವರು, ಕೆಲಸಕ್ಕೆ ರಜೆ ಹಾಕಿಕೊಂಡವರು, ಕಂಪನಿಗಳಿಗೆ ಒದಗಿಸಲು ಕೋವಿಡ್‌ ಸರ್ಟಿಫಿಕೆಟ್ ಪಡೆದುಕೊಳ್ಳಲು ಹಲವರು ಇಲ್ಲಿಗೆ ಬಂದಿದ್ದಾರೆ. ನೂರು ಮಂದಿಗೆ ಪರೀಕ್ಷೆ ಮಾಡಿದರೆ, ಹತ್ತು ಮಂದಿಗೆ ಪಾಸಿಟಿವ್‌ ಬರುತ್ತಿದೆ. ಇವರಿಗೆಲ್ಲ ಪರೀಕ್ಷೆಗೆ ಬರೆಯಬೇಡಿ’ ಎಂದು ಗದರಿಬಿಟ್ಟರು.

ಅವರು ಗದರಿದ ನಂತರ ಬಂದ ಮೊದಲಿಗರು ನಾವೇ ಆದ ಕಾರಣಕ್ಕೋ ಏನೋ ವೈದ್ಯಾಧಿಕಾರಿ ನಮಗೆ ಟೆಸ್ಟ್‌ಗೆ ಬರೆಯುವ ಬದಲು ‘ಮೊದಲು ಫೀವರ್‌ ಕ್ಲಿನಿಕ್‌ನಲ್ಲಿ ತೋರಿಸಿ’ ಎಂದರು. ನಾವು ಫೀವರ್‌ ಕ್ಲಿನಿಕ್‌‌ನಿಂದಲೇ ಬಂದಿದ್ದೇವೆ ಎಂದು ಹೇಳಿದರು ಅವರು ಕೇಳಲಿಲ್ಲ. ‘ನಿಮಗೇನೂ ಆಗಿಲ್ಲ. ಕೋವಿಡ್‌ ಇರುವವರು ಹೀಗೆ ನಿಂತುಕೊಳ್ಳಲೂ ಆಗುವುದಿಲ್ಲ. ಅವರಿಗೆ ಉಸಿರಾಡಲೂ ಆಗುವುದಿಲ್ಲ ಎಂದು ನಮ್ಮನ್ನು ಸಮಾಧಾನ ಮಾಡಲು ಯತ್ನಿಸಿದರು. ನಾವು ಪರೀಕ್ಷೆ ಮಾಡಿಸಲೇಬೇಕು ಎಂದು ಕೇಳಿಕೊಂಡರೂ ಅವರು ಸಮ್ಮತಿಸಲಿಲ್ಲ. 'ಪಕ್ಕದಲ್ಲೇ ಇರುವ ಫೀವರ್‌ ಕ್ಲಿನಿಕ್‌‌ಗೆ ಮೊದಲು ಹೋಗಿ ಬನ್ನಿ’ ಎಂದು ಹೇಳಿದರು. 

ಅಲ್ಲೇ ಪಕ್ಕದಲ್ಲೇ ಇದ್ದ ಫೀವರ್‌ ಕ್ಲಿನಿಕ್‌ ಕಡೆಗೆ ಹೊರಟೆವು. ನಮಗಿಂತಾ ಮೊದಲು ವೈದ್ಯಾಧಿಕಾರಿ ಬಳಿ ತನ್ನ ತಂದೆಯ ಪರಿಸ್ಥಿತಿಯನ್ನು ಗೋಳಾಡುತ್ತಾ ವಿವರಿಸಿದ್ದ ವ್ಯಕ್ತಿ ತನ್ನ ವೃದ್ಧ ತಂದೆಯನ್ನು ಸ್ಟ್ರೆಚರ್‌ನಲ್ಲಿ ಕರೆದುಕೊಂಡು ನಮ್ಮೆದುರಿಗೇ ಹೋದರು. ಎದೆ ಬಡಿದುಕೊಳ್ಳುತ್ತಿದ್ದ, ತೀವ್ರ ಉಸಿರಾಟದ ತೊಂದರೆಯಿಂದ ನರಳುತ್ತಿದ್ದ, ಮಾಸ್ಕ್‌ ಕೂಡಾ ಹಾಕದ ಆ ಕೋವಿಡ್‌ ರೋಗಿ ನಮ್ಮ ಪಕ್ಕದಲ್ಲೇ ಸಾಗಿದರು. ನಮಗೂ ಅವರಿಗೂ ಒಂದು ಅಡಿ ಅಂತರವೂ ಇರಲಿಲ್ಲ. ಹೀಗಾಗಿ ನಾವು ನೇರವಾಗಿ ಅವರಿಗೆ ಎಕ್ಸ್‌ಪೋಸ್‌ ಆಗಬೇಕಾಯಿತು. ಆ ರೋಗಿಯನ್ನು ಪಕ್ಕದಲ್ಲೇ, ಕಣ್ಣಾರೆ ನೋಡಿ, ಫೀವರ್‌ ಕ್ಲಿನಿಕ್‌‌ ಕಡೆಗೆ ಹೆಜ್ಜೆ ಹಾಕಿದೆವು.

ಅಲ್ಲಿ ಹೋದರೆ, ಮತ್ತೆ ಅದೇ ಕತೆ. ಮೂಗು ಸೋರುವವರು, ಕೆಮ್ಮುವವರು, ಜ್ವರ ಬಂದವರು ಸರತಿಯಲ್ಲಿ ನಿಂತಿದ್ದರು. ಹೀಗಿರುವಾಗಲೇ, ಪಿಪಿಇ ಕಿಟ್ ಧರಿಸಿದ್ದ ಚಾಲಕರು ಟಿಟಿ ವಾಹನದಲ್ಲಿ ದಂಡುದಂಡಾಗಿ ಜನರನ್ನು ಕರೆತಂದು ಅವರನ್ನು ನಮ್ಮ ಸರತಿಯಲ್ಲೇ ನಿಲ್ಲಿಸಿದರು. ಅವರೆಲ್ಲರೂ ಸೋಂಕಿತರ ಸಂಪರ್ಕಕ್ಕೆ ಬಂದ ಮೊದಲಿಗರಾಗಿದ್ದರು. ಈ ವಿಷಯ ಕೇಳಿ ನಮಗೆ ಗಾಬರಿಯಾಯಿತು.

ಸಾಲು ದೊಡ್ಡದಿತ್ತು, ನಮ್ಮ ಸುತ್ತಲೂ ಇದ್ದವರ ಆರೋಗ್ಯದ ಬಗ್ಗೆ ಅನುಮಾನಗಳು ಕಾಡಲಾರಂಭಿಸಿದವು. ಕೋವಿಡ್‌ ಪರೀಕ್ಷೆಗಾಗಿ ಬಂದ ನಾವು ಕೋವಿಡ್‌ಗೆ ತೆರೆದುಕೊಳ್ಳುತ್ತಿದ್ದೇವೆಯೇ ಎಂಬ ಪ್ರಶ್ನೆ ಕಾಡಲಾರಂಭಿತು. ದುಗುಡ ಹೆಚ್ಚಾಗುತ್ತಾ ಹೋಯಿತು. ರೋಗಿಗಳ ದೂರದ ಸಾಲಿನಲ್ಲಿ ನಿಂತಿದ್ದ ನನ್ನ ತಂದೆಯನ್ನು ನೋಡಿ ಕರುಳು ಚುರುಕ್ ಅಂದಿತು. ಕೂಡಲೇ ಖಾಸಗಿ ಆಸ್ಪತ್ರೆಯೊಂದರ ಸಹಾಯವಾಣಿಗೆ ಕರೆ ಮಾಡಿ ‘ಕೋವಿಡ್‌ ಟೆಸ್ಟ್‌ ಮಾಡ್ತೀರಾ?’ ಎಂದು ಕೇಳಿದೆ. ಅವರು, 'ಹೌದು ಮಾಡುತ್ತೇವೆ’ ಎಂದರು. ‘ಥ್ರೋಟ್‌ ಸ್ವಾಬ್‌ ಕಲೆಕ್ಟ್‌ ಮಾಡ್ತೀರಾ ತಾನೆ?’ ಎಂದು ಪ್ರಶ್ನಿಸಿದೆ. 'ಹೌದು ಮಾಡ್ತೀವಿ' ಅಂದರು. ಕೂಡಲೇ ಸಾಲಿನಲ್ಲಿ ನಿಂತಿದ್ದ ನನ್ನ ತಂದೆಯ ಬಳಿಗೆ ಹೋದ ನಾನು 'ನಡಿ ಮೊದಲು ಇಲ್ಲಿಂದ. ಇಲ್ಲಿ ಹೆಚ್ಚು ಹೊತ್ತು ಇದ್ದರೆ. ನಿನಗೆ ಕೋವಿಡ್‌ ಖಚಿತವಾಗಿ ಬರುತ್ತೆ’ ಎಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದೆ.

ಅಲ್ಲಿಗೆ ಹೋದರೆ ಮತ್ತೊಂದು ಕತೆ. ಹೆಲ್ಪ್‌ ಲೈನ್‌ನಲ್ಲಿ ಕೋವಿಡ್‌ ಟೆಸ್ಟ್‌ ಮಾಡುತ್ತೇನೆ ಎಂದವರು ಆಸ್ಪತ್ರೆಯ ಎಮರ್ಜೆನ್ಸಿಗೆ ಹೋದರೆ ಇಲ್ಲ ಎಂದರು. ಅಲ್ಲಿನ ಸಿಬ್ಬಂದಿ ಎದುರೇ, ಆಸ್ಪತ್ರೆಯ ಹೆಲ್ಪ್‌ಲೈನ್‌ಗೆ ಕರೆ ಮಾಡಿ ಲೌಡ್‌ ಸ್ಪೀಕರ್‌ ಹಾಕಿ ಅವರಿಗೇ ಕೇಳಿಸಿದೆ. ಹೆಲ್ಪ್‌ಲೈನ್‌ ಸಿಬ್ಬಂದಿ ಆಗಲೂ ‘ಹೌದು ಕೋವಿಡ್‌ ಟೆಸ್ಟ್‌ ಮಾಡುತ್ತೇವೆ' ಎಂದರು. ಒಂದೇ ಆಸ್ಪತ್ರೆಯ ಎರಡು ವಿಭಾಗದವರು ವ್ಯತಿರಿಕ್ತ ಹೇಳಿಕೆ ನೀಡಿದರು. ಆದರೆ, ಅಲ್ಲಿ ಟೆಸ್ಟ್‌ ಮಾಡಲಿಲ್ಲ. ಕೋಪದಿಂದ ಅಲ್ಲಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಕೋಣನಕುಂಟೆ ಸರ್ಕಾರಿ ಆಸ್ಪತ್ರೆಯ ಕಡೆ ನಡೆದೆವು. 

ಕೋಣನಕುಂಟೆ ಸರ್ಕಾರಿ ಆಸ್ಪತ್ರೆ ಸಣ್ಣದು. ಹಾಗಾಗಿ ಅಲ್ಲಿ ಹೆಚ್ಚಿನ ಜನರಿರಲಿಲ್ಲ. ಅಲ್ಲಿನ ಸಿಬ್ಬಂದಿಯೂ ದೈಹಿಕ ಅಂತರದ ನಿಯಮಗಳನ್ನು ಸಮರ್ಥವಾಗಿ ಜಾರಿಗೆ ತಂದಿದ್ದರು. ಅಲ್ಲಿ ಹೆಸರು ಬರೆಸಿದೆವು. ಒಂದರ್ಧ ಗಂಟೆಯಲ್ಲಿ ಅವರು ಪರೀಕ್ಷೆಯನ್ನೂ ನಡೆಸಿದರು. ಅಲ್ಲಿಗೆ ಬೆಂಗಳೂರಿನಂಥ ಬೆಂಗಳೂರಿನಲ್ಲಿ ಕೋವಿಡ್‌ ಟೆಸ್ಟ್‌ ಎಂಬುದು ಪ್ರಹಸನದಂತೆ ಆಯಿತು. 

‘ಕೋವಿಡ್‌ ಮಹಾಮಾರಿಯನ್ನು ನಾವು ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ. ಇಡೀ ರಾಷ್ಟ್ರಕ್ಕೆ ಹೋಲಿಸಿಕೊಂಡರೆ ನಮ್ಮಲ್ಲಿ ಕೋವಿಡ್‌ ಕಡಿಮೆ ಇದೆ. ಪರೀಕ್ಷೆಗಳನ್ನು ಚೆನ್ನಾಗಿ ಮಾಡುತ್ತಿದ್ದೇವೆ. ಚಿಕಿತ್ಸೆ ಸಮರ್ಥವಾಗಿ ನೀಡುತ್ತಿದ್ದೇವೆ. ರಾಜ್ಯದಲ್ಲಿ ಏನೂ ತೊಂದರೆ ಇಲ್ಲ’ ಎಂಬ ಸರ್ಕಾರದ ಮಾತುಗಳು ನಮ್ಮ ಅನುಭವದ ಹಿನ್ನೆಲೆಯಲ್ಲಿ ಸಂಪೂರ್ಣ ಸುಳ್ಳು ಎನಿಸಿತು.

ರಾಜ್ಯ ರಾಜಧಾನಿಯಲ್ಲಿ ಸೋಂಕು ಪತ್ತೆ ಪರೀಕ್ಷೆಗೇ ಇಷ್ಟು ಕಷ್ಟ ಪಡಬೇಕಾದರೆ, ಚಿಕಿತ್ಸೆಗೆ ಇನ್ನೆಷ್ಟು ಕಷ್ಟಪಡಬೇಕು? ಕೋವಿಡ್‌ ಎಂಬುದು ಒಬ್ಬೊಬ್ಬರಲ್ಲಿ ಒಂದೊಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಒಬ್ಬೊಬ್ಬರಿಗೆ ಲಕ್ಷಣಗಳೇ ಇರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಸೋಂಕಿನ ಲಕ್ಷಣಗಳೇ ಇಲ್ಲದವರನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆಗೆ ಒಳಪಡಿಸುತ್ತಿಲ್ಲ. ಇದು ಬೇಜವಾಬ್ದಾರಿಯಾಗುವುದಿಲ್ಲವೇ? ಒಂದರ್ಥದಲ್ಲಿ ಸರ್ಕಾರವೇ ಸೋಂಕು ಹರಡಲು ಕಾರಣವಾಗುತ್ತಿದೆಯೇ? ನಮಗಂತೂ ಉತ್ತರ ಸಿಗಲಿಲ್ಲ.

ಇದೆಲ್ಲದ್ದಕ್ಕೂ ಮುಖ್ಯವಾಗಿ ಕೋವಿಡ್‌ ಪರೀಕ್ಷೆಗೆ ಹೋದವರು ಕೋವಿಡ್‌ ಅಂಟಿಸಿಕೊಂಡು ಬರುತ್ತಾರೆ ಎಂಬುದು ನನ್ನ ಸ್ವಂತ ಅನುಭವದ ಮಾತಷ್ಟೇ. ಸೋಂಕು ಬಂದಿರಬಹುದೆಂಬ ಶಂಕೆಯಿಂದ ಆಸ್ಪತ್ರೆಗೆ ಹೋದರೆ, ಸೋಂಕಿತರಾಗಿ ಮನೆಗೆ ಹಿಂದಿರುಗುವ ಭಯ. ಸರ್ಕಾರ ಇನ್ನಾದರೂ ಇತ್ತ ಕಣ್ತೆರೆದು ನೋಡಲಿ. ವ್ಯವಸ್ಥೆ ಸರಿಪಡಿಸಲಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು