ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌-– 19: ವೈದ್ಯಕೀಯ ಪರೀಕ್ಷೆಗೆ ಒಳಪಟ್ಟ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ

ಸಚಿವ ಡಾ.ಕೆ.ಸುಧಾಕರ್
Last Updated 5 ಮಾರ್ಚ್ 2020, 19:46 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌–19 ಸೋಂಕು ಭೀತಿಯ ಹಿನ್ನೆಲೆಯಲ್ಲಿ ಮುಖಗವಸಿಗೆ ಬೇಡಿಕೆ ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ.ಸೋಂಕಿತರು ಹಾಗೂ ಅವರೊಂದಿಗೆ ಒಡನಾಟ ಹೊಂದಿರುವವರು ಮಾತ್ರ ಎನ್‌ –95 ಮಾಸ್ಕ್‌ಗಳನ್ನು ಧರಿಸಿ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸಾಮಾನ್ಯರು ಮೂರು ಪದರಗಳ ಮಾಸ್ಕ್‌ಗಳನ್ನು ಬಳಕೆ ಮಾಡಿದರೆ ಸಾಕು. ಈವರೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ. ಹಾಗಾಗಿ ಆತಂಕ ಪಡಬೇಕಾಗಿಲ್ಲ.ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವದಂತಿ ಹರಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆಸೈಬರ್‌ ಕ್ರೈಂ ಪೊಲೀಸರಿಗೆ ತಿಳಿಸಲಾಗಿದೆ. ಸೋಂಕು ಪ್ರಕರಣಗಳು ವರದಿಯಾದ 77 ದೇಶಗಳಿಗೆಕಳೆದ 15 ದಿನಗಳಲ್ಲಿ ಪ್ರಯಾಣಿಸಿ, ವಾಪಸ್ ಆದವರು ಪರೀಕ್ಷೆ ಮಾಡಿಸಿಕೊಳ್ಳಬೇಕು.ಆ ದೇಶಗಳ ಪ್ರಜೆಗಳ ಜತೆಗೆ ಸಂಪರ್ಕ ಹೊಂದಿದ್ದವರೂ ತಪಾಸಣೆಗೆ ಒಳಪಡಬೇಕು’ ಎಂದರು.

‘ಸಾಮಾನ್ಯರು ಜ್ವರ, ಶೀತ, ಕೆಮ್ಮು, ಉಸಿರಾಟದ ಸಮಸ್ಯೆಯಂತಹ ಲಕ್ಷಣ ಕಂಡು ಬಂದಲ್ಲಿ ಆಸ್ಪತ್ರೆಗೆ ತೆರಳಿ, ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೆಲವರು ಅನಗತ್ಯವಾಗಿ ಸೋಂಕಿನ ಭೀತಿಯಿಂದ ಆಸ್ಪತ್ರೆಗೆ ತೆರಳುತ್ತಿದ್ದಾರೆ. ಇದರಿಂದ ಜನದಟ್ಟಣೆ ಉಂಟಾಗುತ್ತಿದೆ’ ಎಂದರು.

’ಸುಲಿಗೆ ನಡೆಸಿದರೆ ಕ್ರಮ’: ‘ಮುಖಗವಸುಗಳ (ಮಾಸ್ಕ್‌) ಬೆಲೆ ಏರಿಕೆ ಮಾಡುತ್ತಿರುವ ಕಂಪನಿಗಳು ಹಾಗೂ ವಿತರಕರ ವಿರುದ್ಧಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

‘ಕೆಲವರು ಮಾಸ್ಕ್‌ಗಳು ಮತ್ತು ಔಷಧಿಗಳ ಕೊರತೆ ಸೃಷ್ಟಿಸಿ, ಬೆಲೆ ಏರಿಕೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ’ ಎಂದು ಹೇಳಿದರು.

ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್‌ಕುಮಾರ್ ಪಾಂಡೆ, ‘ಮಾಸ್ಕ್‌ಗ‌ಳಿಗೆ ಹೆಚ್ಚಿನ ಹಣ ವಸೂಲಿ ಮಾಡಿದಲ್ಲಿ ಆರೋಗ್ಯ ಸಹಾಯವಾಣಿ 104ಕ್ಕೆ ದೂರು ಸಲ್ಲಿಸಿ ಎಂದ ಅವರು, 4 ಲಕ್ಷ ಸರ್ಜಿಕಲ್‌ ಮಾಸ್ಕ್‌ಗಳು ಹಾಗೂ 40 ಸಾವಿರ ಎನ್‌–95 ಮಾಸ್ಕ್‌ಗಳು ಲಭ್ಯವಿದೆ’ ಎಂದು ತಿಳಿಸಿದರು.

ಕಾರ್ಮಿಕರು ಸೋಂಕಿಗೆ ಒಳಗಾದಲ್ಲಿ 28 ದಿನಗಳು ವೇತನ ಸಹಿತ ರಜೆ ನೀಡುವಂತೆ ರಾಜ್ಯ ಕಾರ್ಮಿಕ ಇಲಾಖೆ ಸುತ್ತೋಲೆ ಹೊರಡಿಸಿದೆ.

ದೂರು ನೀಡಿದರೆ ಕ್ರಮ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್‌ಕುಮಾರ್ ಪಾಂಡೆ, ‘ಈ ಸೋಂಕಿನ ಬಗ್ಗೆ ಹರಡುತ್ತಿರುವ ವದಂತಿಗಳಿಗೆ ಕಿವಿಗೊಡಬಾರದು. ಮಾಸ್ಕ್‌ಗಳು ಹಾಗೂ ಔಷಧಿಗಳಿಗೆ ಹೆಚ್ಚಿನ ಹಣ ಪಡೆದಲ್ಲಿಸಹಾಯವಾಣಿ ‘104’ಕ್ಕೆ ಕರೆ ಮಾಡಿ, ದೂರು ಸಲ್ಲಿಸಿ.ಜನೌಷಧಿ ಕೇಂದ್ರಗಳಲ್ಲಿ ಮಾಸ್ಕ್‌
ಗಳನ್ನು ಒದಗಿಸುವ ಸಂಬಂಧ ಕೇಂದ್ರ ಸರ್ಕಾರದ ಜತೆಗೆ ಮಾತನಾಡಲಾಗುವುದು’ ಎಂದು ತಿಳಿಸಿದರು.

‘ಸಾಮಾನ್ಯ ಜ್ವರ ಇರುವವರು ಅನಗತ್ಯವಾಗಿ ಆತಂಕಕ್ಕೆ ಒಳಗಾಗುತ್ತಿರುವುದು ಗಮನಕ್ಕೆ ಬಂದಿದೆ. ಆರೋಗ್ಯವಂತ ಮಕ್ಕಳು ಶಾಲೆಗೆ ರಜೆ ಹಾಕಬಾರದು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ, ಕೈಗಳನ್ನು ತೊಳೆದುಕೊಳ್ಳಬೇಕು’ ಎಂದರು.

ವೃದ್ಧರೊಬ್ಬರಿಗೆ ಚಿಕಿತ್ಸೆ
ಉಡುಪಿ:
ಈಚೆಗೆ ಇಸ್ರೇಲ್‌ ನಿಂದ ಮರಳಿದ್ದ ಕಾರ್ಕಳದ ಮುನಿಯಾಲುವಿನ ವೃದ್ಧರೊಬ್ಬರಲ್ಲಿ ಶಂಕಿತ ಕೋವಿಡ್‌–19 ಲಕ್ಷಣಗಳು ಕಾಣಿಸಿಕೊಂಡಿದ್ದು, ಜಿಲ್ಲಾ ಆಸ್ಪತ್ರೆಯ ಐಸೊಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಡಾ.ಸುಧೀರ್ ಚಂದ್ರ ತಿಳಿಸಿದರು.

’ದಕ್ಷಿಣ ಏಷ್ಯಾದಿಂದ ಬೇಡಿಕೆ‘
‘ಸೋಂಕಿನ ಭೀತಿಯಿಂದ ಮಾಸ್ಕ್‌ಗಳಿಗೆ ಎಲ್ಲೆಡೆಯಿಂದ ಬೇಡಿಕೆ ಬರುತ್ತಿದೆ. ದಕ್ಷಿಣ ಏಷ್ಯಾದ ರಾಷ್ಟ್ರಗಳು ಮುಂಗಡವಾಗಿ ಲಕ್ಷಾಂತರ ಮಾಸ್ಕ್‌ಗಳನ್ನು ಬುಕ್ಕಿಂಗ್ ಮಾಡುತ್ತಿವೆ. ಆದರೆ, ಅಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಒಂದು ಯಂತ್ರದಿಂದ ನಿತ್ಯ 1ಲಕ್ಷ ಮಾಸ್ಕ್‌ಗಳನ್ನು ಮಾತ್ರ ಉತ್ಪಾದಿಸಲು ಸಾಧ್ಯ. ಕಚ್ಚಾ ಪದಾರ್ಥದ ಕೊರತೆಯಿಂದ ಅಷ್ಟು ಪ್ರಮಾಣದಲ್ಲಿ ತಯಾರಿ ಆಗುತ್ತಿಲ್ಲ’ ಎಂದು ವಿತರಕರೊಬ್ಬರು ತಿಳಿಸಿದರು.

‘ಕೋರಿಯಾದ ಕಂಪನಿಯೊಂದು ನಾಲ್ಕು ತಿಂಗಳಿಗೆ ಸಾಕಾಗುವಷ್ಟು ಬೇಡಿಕೆ ಇಟ್ಟಿದೆ.ಎರಡು ಮೂರು ದಿನಗಳಿಂದ ಸ್ಥಳೀಯ ಮಟ್ಟದಲ್ಲಿಯೂ ಬೇಡಿಕೆ ಹೆಚ್ಚಿದೆ. ತಮಿಳುನಾಡಿನಲ್ಲಿ ಹೊಲಿದ ಮಾಸ್ಕ್‌ಗಳನ್ನು ವಿತರಿಸಲಾಗುತ್ತಿದೆ. ದರ ಏರಿಕೆಗೆ ಕಡಿವಾಣ ಹಾಕಲು ಸರ್ಕಾರವೇ ನಿಗದಿತ ಕಾನೂನು ತರಬೇಕು’ ಎಂದರು.

‘ಗಂಟೆಗಳಲ್ಲಿ ಮಾಸ್ಕ್‌ಗಳು ಖಾಲಿ’
ಔಷಧಿ ಮಳಿಗೆಗಳಲ್ಲಿ ನಿತ್ಯ ಸರಾಸರಿ 200ರಿಂದ 300 ಮುಖಗವಸುಗಳು ಮಾರಾಟವಾಗುತ್ತಿವೆ. ಬಹುತೇಕ ಮಳಿಗೆಗಳಲ್ಲಿ ದಾಸ್ತಾನು ಇಲ್ಲ. ‘ಈ ಹಿಂದೆ ನಿತ್ಯ ಒಂದು ಮಾಸ್ಕ್‌ ಮಾರಾಟ ಮಾಡುವುದೂ ಕಷ್ಟವಾಗಿತ್ತು. ನಾಲ್ಕು ತಿಂಗಳಿಗೊಮ್ಮೆ ಬೇಡಿಕೆ ಸಲ್ಲಿಸುತ್ತಿದ್ದೆವು. ಈಗ ಪ್ರತಿನಿತ್ಯ ಸರಾಸರಿ 250 ಮುಖಗವಸುಗಳು ಮಾರಾಟವಾಗುತ್ತಿವೆ. ಇಷ್ಟಾಗಿಯೂ ಕೆಲವರನ್ನು ವಾಪಸ್ ಕಳಿಸಬೇಕಾಗಿದೆ. ನಾವು ಬೇಡಿಕೆ ಸಲ್ಲಿಸಿದಷ್ಟು ವಿತರಕರು ನೀಡುತ್ತಿಲ್ಲ’ ಎಂದು ಬನಶಂಕರಿಯ ಓಂ ಶ್ರೀ ಔಷಧಿ ಮಳಿಗೆಯ ನಾಗೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT