ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ | ಸೋಂಕಿತರಿಗಿಂತ ಗುಣಮುಖರೇ ಅಧಿಕ

ಹೊಸದಾಗಿ 1,893 ಕೋವಿಡ್ ಪ್ರಕರಣಗಳು ದೃಢ * ಚೇತರಿಸಿಕೊಳ್ಳುವವರ ಸಂಖ್ಯೆ ಇನ್ನಷ್ಟು ಏರಿಕೆ ಸಾಧ್ಯತೆ
Last Updated 13 ಆಗಸ್ಟ್ 2020, 23:07 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ 1,893 ಕೋವಿಡ್ ಪ್ರಕರಣಗಳು ಗುರುವಾರ ವರದಿಯಾಗಿದ್ದು, ಮತ್ತೆ 2,212 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಕಳೆದ ಕೆಲ ದಿನಗಳಿಂದ ಗುಣಮುಖರ ಸಂಖ್ಯೆ ಏರುಗತಿ ಪಡೆದಿದೆ. 13 ದಿನಗಳಲ್ಲಿ 26,189 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಅದೇ ಅವಧಿಯಲ್ಲಿ 30,350 ಮಂದಿ ಚೇತರಿಸಿಕೊಂಡಿದ್ದಾರೆ. ಈ ತಿಂಗಳಲ್ಲಿ ಪ್ರತಿನಿತ್ಯ ಸರಾಸರಿ 2,014 ಮಂದಿ ಸೋಂಕಿತರಾಗುತ್ತಿದ್ದಾರೆ. 2,334 ಮಂದಿ ಗುಣಮುಖರಾಗಿ ಮನೆಗೆ ತೆರಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಚೇತರಿಸಿಕೊಳ್ಳುವವರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸದ್ಯ ನಗರದಲ್ಲಿ ಸೋಂಕು ದೃಢ ಪ್ರಮಾಣ ಶೇ 17.71 ರಷ್ಟಿದೆ. ಸೋಂಕಿತರಲ್ಲಿ ಮತ್ತೆ 22 ಮಂದಿ ಮೃತಪಟ್ಟಿದ್ದು, ಸಾವಿಗೀಡಾದವರ ಸಂಖ್ಯೆ 1,338ಕ್ಕೆ ಏರಿಕೆಯಾಗಿದೆ. ಹೊಸದಾಗಿ ದೃಢಪಟ್ಟ ಮರಣ ಪ್ರಕರಣಗಳಲ್ಲಿ 22 ವರ್ಷದ ಯುವತಿ ಹಾಗೂ 35 ವರ್ಷದ ಪುರುಷ ಕೂಡ ಸೇರಿದ್ದಾರೆ. 19 ಮಂದಿ 50 ವರ್ಷ ಮೇಲ್ಪಟ್ಟವರಾಗಿದ್ದು, ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಕಾಯಿಲೆಗಳನ್ನು ಹೊಂದಿದ್ದರು. ಈವರೆಗೆ 47 ಸಾವಿರಕ್ಕೂ ಅಧಿಕ ಮಂದಿ ಚೇತರಿಸಿಕೊಂಡಿದ್ದು, 33 ಸಾವಿರಕ್ಕೂ ಅಧಿಕ ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹತ್ತು ದಿನಗಳಿಂದ ಪಶ್ಚಿಮ ವಲಯದಲ್ಲಿ ಪ್ರಕರಣಗಳು ಹೆಚ್ಚುತ್ತಿದ್ದು, ಈ ಅವಧಿಯಲ್ಲಿ ನಗರದಲ್ಲಿ ಸೋಂಕಿತರಾದವರಲ್ಲಿ ಶೇ 25 ರಷ್ಟು ಮಂದಿ ಆ ಭಾಗಕ್ಕೆ ಸೇರಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ ಶೇ 18 ರಷ್ಟು ಪ್ರಕರಣಗಳು ವರದಿಯಾಗಿವೆ. 328 ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ನಗರದ ಜ್ವರ ಚಿಕಿತ್ಸಾಲಯಗಳಲ್ಲಿ ಒಂದೇ ದಿನ 4,750 ಮಂದಿಯನ್ನು ತಪಾಸಣೆ ಮಾಡಲಾಗಿದೆ. ಈವರೆಗೆ ಒಂದು ದಿನದ ಅವಧಿಯಲ್ಲಿ ನಡೆಸಿದ ಗರಿಷ್ಠ ತಪಾಸಣೆಗಳು ಇವಾಗಿವೆ. ಈ ಚಿಕಿತ್ಸಾಲಯಗಳಲ್ಲಿ
ಈವರೆಗೆ ಒಟ್ಟು 96 ಸಾವಿರ ಮಂದಿಯನ್ನು ಪರೀಕ್ಷೆ ಮಾಡಲಾಗಿದೆ.

ಬೂತ್ ಮಟ್ಟಗಳಲ್ಲಿ ಮನೆ ಮನೆ ಸಮೀಕ್ಷೆ ಆರಂಭ: ಸೋಂಕು ತಡೆಗಟ್ಟುವ ಸಲುವಾಗಿ ಬಿಬಿಎಂಪಿ ವ್ಯಾಪ್ತಿಯ ಬೂತ್ ಮಟ್ಟಗಳಲ್ಲಿ ಮನೆ ಮನೆಯ ಸಮೀಕ್ಷೆ ಆರಂಭ ಮಾಡಲಾಗುವುದು ಎಂದು ಪೂರ್ವ ವಲಯದ ಕೋವಿಡ್‌ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಸೋಂಕಿತರ ಚಿಕಿತ್ಸೆ ಹಾಗೂ ಕಾಯಿಲೆ ನಿಯಂತ್ರಣದ ಬಗ್ಗೆ ಗುರುವಾರ ನಡೆದ ಪೂರ್ವ ವಲಯದ ಸಭೆಯಲ್ಲಿ ಮಾತನಾಡಿದರು.

‘ನಗರದ ವ್ಯಾಪ್ತಿಯಲ್ಲಿ ಪರೀಕ್ಷೆಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ‘ ಎಂದು ಹೇಳಿದರು.

ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್, ವಸತಿ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ಮತ್ತು ಪೂರ್ವ ವಲಯದ ಜಂಟಿ ಆಯುಕ್ತರಾದ ಪಲ್ಲವಿ ಇದ್ದರು.

ವೈದ್ಯರಿಗೆ ‘ಡಾಕ್ಟರ್ಸ್‌ ಕಿಚನ್‌’
ಬೆಂಗಳೂರು: ನಗರದ ವಿವಿಧ ಆಸ್ಪತ್ರೆಗಳಲ್ಲಿರುವ ಕೋವಿಡ್‌ ವಾರ್ಡ್‌ಗಳಲ್ಲಿ ಕೆಲಸ ಮಾಡುವ ವೈದ್ಯರು, ನರ್ಸ್‌ ಗಳು ಮತ್ತು ಸಹಾಯಕರು ಮತ್ತಿತರ ಕೊರೊನಾ ವಾರಿಯರ್ಸ್‌ಗೆ ಸ್ವಯಂಸೇವಕರ ತಂಡವೊಂದು ‘ಡಾಕ್ಟರ್ಸ್‌ ಕಿಚನ್‌’ ಆರಂಭಿಸಿ ಸದ್ದಿಲ್ಲದೆ ಸಿದ್ಧ ಆಹಾರ ಪೂರೈಸುತ್ತಿದೆ.

15 ದಿನಗಳಿಂದ ಈ ಕೆಲಸ ಮಾಡುತ್ತಿರುವ ತಂಡ, ಆಗಸ್ಟ್ 11ರವರೆಗೆ 23,500 ಸಿದ್ಧ ಆಹಾರದ ಪ್ಯಾಕೇಟ್‌ ಸಿದ್ಧಪಡಿಸಿ ಪೂರೈಸಿದೆ. ರಿಚ್ಮಂಡ್‌ ವೃತ್ತದಲ್ಲಿರುವ ‘ಬೀಜಿಂಗ್‌ ಬೈಟ್ಸ್‌’ ಗ್ರೂಪ್‌ ಆಫ್‌ ಹೋಟೆಲ್‌ನ ಶಾಖೆಯ ಅಡುಗೆ ಕೆಲಸಗಾರರು, ಉದ್ಯಮಿ ಖುರ್ಷಿದ್ ಇರಾನಿ, ಪತ್ರಕರ್ತ ವಿಜಯ್‌ ಗ್ರೋವರ್‌, ಯೋಜನೆಗೆ ನಿಧಿ ಸಂಗ್ರಹಿಸಲು ಮಹತ್ವದ ಪಾತ್ರ ವಹಿಸಿರುವ ಡಾ. ಶಮಾ ಶರೀಫ್ ನಿರಂತರ ಶ್ರಮದಿಂದ ಇದು ಸಾಧ್ಯವಾಗಿದೆ. ‘ಹೆಲ್ಪ್‌ ಬೆಂಗಳೂರು’ ಸಂಘಟನೆಯ ಸ್ವಯಂಸೇವಕ ಆ್ಯಂಜಿಲ್‌ ದಾಸ್‌ ಅವರು ಸಿದ್ಧ ಆಹಾರವನ್ನು ಆಸ್ಪತ್ರೆಗಳಿಗೆ ಸರಬರಾಜು ಮಾಡುವ ಹೊಣೆ ಹೊತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವಿಜಯ್‌ ಗ್ರೋವರ್‌, ‘ವಿಕ್ಟೋರಿಯಾ ಆಸ್ಪತ್ರೆಯ ಡೀನ್‌ ಜೊತೆ ಮಾತನಾಡಿದಾಗ ವೈದ್ಯರಿಗೆ ಆಹಾರ ಸಮಸ್ಯೆ ಎದುರಾಗಿರುವ ವಿಷಯ ಪ್ರಸ್ತಾಪವಾಯಿತು. ಸೋಂಕು ಆರಂಭಗೊಂಡ ಬಳಿಕ ಹೆಚ್ಚಿನ ಸಿಬ್ಬಂದಿ ಕೆಲಸ ತ್ಯಜಿಸಿದ್ದಾರೆ. ಸಿಬ್ಬಂದಿ ಕೊರತೆ ಮತ್ತು ಶೇ 100ರಷ್ಟು ಹಾಸಿಗೆಗಳು ಭರ್ತಿಯಾಗಿರುವ ಸಂಗತಿ ಗೊತ್ತಾಯಿತು. ಈ ಕಾರಣಕ್ಕೆ ವೈದ್ಯರಿಗೆ ಸಿದ್ಧ ಆಹಾರ ಪೂರೈಸುವ ಕೆಲಸಕ್ಕೆ ಮುಂದಾದೆವು’ ಎಂದರು.

‘ಬೀಜಿಂಗ್‌ ಬೈಟ್ಸ್’ ನಿರ್ದೇಶಕ ಮೊಹ್ಮದ್‌ ಇಬ್ರಾಹಿಂ ಅಕ್ರಂ ಅವರು ತಮ್ಮ ಅಡುಗೆ ಕೊಠಡಿಯನ್ನು ಕೊಡಲು ಮುಂದೆ ಬಂದರು. ಹೀಗೆ ಆರಂಭಗೊಂಡ ‘ಡಾಕ್ಟರ್ಸ್‌ ಕಿಚನ್‌’ ವಿಕ್ಟೋರಿಯಾ ಆಸ್ಪತ್ರೆ, ಸಿ.ವಿ. ರಾಮನ್‌ ಆಸ್ಪತ್ರೆ, ಬೌರಿಂಗ್, ಲೇಡಿ ಕರ್ಜನ್‌ ಮತ್ತು ಹೆಬ್ಬಾಳದಲ್ಲಿರುವ ಕೋವಿಡ್‌ ಆರೈಕೆ ಕೇಂದ್ರಗಳಿಗೆ ಮಧ್ಯಾಹ್ನ ಮತ್ತು ರಾತ್ರಿ ತಲಾ 280 ಸಿದ್ಧ ಆಹಾರ ಪೂರೈಸುತ್ತಿದೆ.

‘ಬೀಜಿಂಗ್‌ ಬೈಟ್ಸ್‌, ಸತ್ಯಸಾಯಿ ಟ್ರಸ್ಟ್‌ ಮತ್ತು ಮನೆಯಲ್ಲೇ ಅಡುಗೆ ಮಾಡಿ ಪೂರೈಸುವ ನೌಶೀನ್‌ ತಾಜ್‌ನಿಂದ ಆಹಾರದ ಕಿಟ್‌ಗಳನ್ನು ತೆಗೆದುಕೊಂಡು ಆಸ್ಪತ್ರೆಗಳಿಗೆ ತಲುಪಿಸಲಾಗುತ್ತದೆ’ ಎಂದು ಆ್ಯಂಜೆಲ್‌ ದಾಸ್‌ ಹೇಳಿದರು.

ದಾನಿಗಳಿಂದ ಅಕ್ಕಿ, ಮೊಟ್ಟೆ ಸಂಗ್ರಹಿಸಲಾಗುತ್ತದೆ. ಡಾ. ಶಮಾ ಶರೀಫ್‌ ಅವರು ₹ 60 ಸಾವಿರ, 1000 ಕೆ.ಜಿ. ಅಕ್ಕಿ ಮೂಟೆ, 200 ಲೀಟರ್‌ ಅಡುಗೆ ಎಣ್ಣೆ ಸಂಗ್ರಹಿಸಿದ್ದಾರೆ. ‘ಈ ಉದ್ದೇಶಕ್ಕಾಗಿ ಈಗಾಗಲೇ ಹಲವರು ದಿನಸಿ ಸಾಮಗ್ರಿ, ಹಣ ದೇಣಿಗೆ ನೀಡಿದ್ದಾರೆ. ಯಲಹಂಕದಲ್ಲಿರುವ ಶ್ರೀರಾಮ್‌ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಹೆಚ್ಚಿನ ಸಹಾಯ ನೀಡಿದ್ದಾರೆ’ ಎಂದು ಶಮಾ ಶರೀಫ್‌ ಹೇಳಿದರು.

ಒಬ್ಬ ವೈದ್ಯರಿಗೆ ಒಂದು ವಾರ ಸಿದ್ಧಪಡಿಸಿದ ಆಹಾರ ವಿತರಿಸಲು ನೆರವಾಗುವವರು ಈ ವೆಬ್‌ಸೈಟ್‌ ಕ್ಲಿಕ್‌ ಮಾಡಬಹುದು. https://fundraisers.giveindia.org/campaigns/doctors-kitchen.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT