ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಮೂರು ಸಹಕಾರ ಬ್ಯಾಂಕ್‌ ಹಗರಣ: ಸಿಬಿಐ ತನಿಖೆಗೆ ಆದೇಶ

Published 2 ಡಿಸೆಂಬರ್ 2023, 13:14 IST
Last Updated 2 ಡಿಸೆಂಬರ್ 2023, 13:14 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌, ಶ್ರೀ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್‌ ಕೋ ಆಪರೇಟಿವ್‌ ಲಿಮಿಟಡ್‌ ಮತ್ತು ಶ್ರೀ ವಸಿಷ್ಠ ಸೌಹಾರ್ದ ಕ್ರೆಡಿಟ್‌ ಕೋ ಆಪರೇಟಿವ್‌ ಲಿಮಿಟಡ್‌ಗಳಲ್ಲಿ ನಡೆದಿರುವ ಬಹುಕೋಟಿ ಹಗರಣಗಳನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ.

ಮೂರೂ ಸಹಕಾರಿ ಸಂಸ್ಥೆಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಅಕ್ರಮಗಳು ನಡೆದಿವೆ. ಸಿಐಡಿ ಪೊಲೀಸರು ಈ ಪ್ರಕರಣಗಳ ತನಿಖೆ ನಡೆಸುತ್ತಿದ್ದರು. ಸಹಕಾರ ಇಲಾಖೆಯ ಶಿಫಾರಸಿನಂತೆ ಈ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಿ ಗೃಹ ಇಲಾಖೆ ಶನಿವಾರ ಆದೇಶ ಹೊರಡಿಸಿದೆ.

ಈ ಮೂರು ಸಹಕಾರಿ ಸಂಸ್ಥೆಗಳ ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆಸಿರುವ ಅಕ್ರಮಗಳ ಕುರಿತು ತನಿಖೆ ನಡೆಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪ್ರಕರಣಗಳಲ್ಲಿ ಭಾಗಿಯಾಗಿರುವ ಎಲ್ಲ ವ್ಯಕ್ತಿಗಳನ್ನು ಪತ್ತೆ ಹಚ್ಚುವಂತೆ ಸಿಬಿಐಗೆ ಸೂಚಿಸಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದ ದತ್ತಾಂಶ, ಮಾಹಿತಿ ಮತ್ತು ಕಡತಗಳನ್ನು ಸಿಬಿಐ ಅಧಿಕಾರಿಗಳಿಗೆ ಹಸ್ತಾಂತರಿಸುವಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

₹ 1,200 ಕೋಟಿ ಹಗರಣ

ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ ಮತ್ತು ಶ್ರೀ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್‌ ಕೋ ಆಪರೇಟಿವ್‌ ಲಿಮಿಟಡ್‌ನಲ್ಲಿ ₹ 1,200 ಕೋಟಿಗೂ ಹೆಚ್ಚು ಮೊತ್ತದ ಹಗರಣ ನಡೆದಿರುವುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿತ್ತು.

ಬ್ಯಾಂಕ್‌ ಅಧ್ಯಕ್ಷ ಕೆ. ರಾಮಕೃಷ್ಣ, ಉಪಾಧ್ಯಕ್ಷರೂ ಆಗಿದ್ದ ಅವರ ಮಗ ಕೆ.ಆರ್‌. ವೇಣುಗೋಪಾಲ್‌ ಸೇರಿದಂತೆ 27 ಮಂದಿ ₹ 920.46 ಕೋಟಿ ಮೊತ್ತದ ಸಾಲ ಪಡೆದು ವಂಚಿಸಿರುವುದು ತನಿಖೆಯಲ್ಲಿ ಕಂಡುಬಂದಿತ್ತು. ಎರಡೂ ಸಹಕಾರ ಸಂಸ್ಥೆಗಳ ಆಡಳಿತ ಮಂಡಳಿಗಳ ಹಲವು ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಯನ್ನು ಬಂಧಿಸಲಾಗಿತ್ತು.

ಶ್ರೀ ವಸಿಷ್ಠ ಸೌಹಾರ್ದ ಕ್ರೆಡಿಟ್‌ ಕೋ ಆಪರೇಟಿವ್‌ ಲಿಮಿಟಡ್‌ನಲ್ಲಿ ₹ 85 ಕೋಟಿಗೂ ಹೆಚ್ಚು ಮೊತ್ತದ ಅವ್ಯವಹಾರ ನಡೆದಿರುವ ಆರೋಪವಿದೆ. ಬ್ಯಾಂಕ್‌ ಅಧ್ಯಕ್ಷ ವೆಂಕಟನಾರಾಯಣ ಮತ್ತು ನಿರ್ದೇಶಕ ಕೃಷ್ಣಪ್ರಸಾದ್‌ ಈ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದರು.

ಈ ಮೂರೂ ಸಹಕಾರ ಸಂಸ್ಥೆಗಳಲ್ಲಿ ನಡೆದಿರುವ ಹಣಕಾಸು ಅವ್ಯವಹಾರಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸುವಂತೆ ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಯು.ಬಿ. ವೆಂಕಟೇಶ್‌ ಸೇರಿದಂತೆ ಹಲವರು ಆಗ್ರಹಿಸಿದ್ದರು. ವಿಧಾನಮಂಡಲದ ಕಳೆದ ಅಧಿವೇಶನದಲ್ಲೂ ಈ ವಿಷಯ ಪ್ರಸ್ತಾಪವಾಗಿತ್ತು. ಸಿಬಿಐ ತನಿಖೆಗೆ ವಹಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT