ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮಕ್ಕೆ ಕೈಜೋಡಿಸಿದವರ ಬಡ್ತಿಗೆ ಕತ್ತರಿ

ಕೊನೆಗೂ ಕ್ರಮ ಕೈಗೊಂಡ ನಗರಾಭಿವೃದ್ಧಿ ಇಲಾಖೆ l ತಪ್ಪಿತಸ್ಥರಿನ್ನು ಕಾರ್ಯ ನಿರ್ವಾಹಕೇತರ ಹುದ್ದೆಗೆ ಸೀಮಿತ
Last Updated 21 ನವೆಂಬರ್ 2019, 19:26 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ಮಲ್ಲೇಶ್ವರ, ಗಾಂಧಿನಗರ ಹಾಗೂ ರಾಜರಾಜೇಶ್ವರಿನಗರ ವಿಭಾಗಗಳಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ನೇತೃತ್ವದ ಸಮಿತಿಯಿಂದ ತಪ್ಪಿತಸ್ಥರು ಎಂದು ಗುರುತಿಸಲಾದ ಅಧಿಕಾರಿಗಳ ವಿರುದ್ಧ ನಗರಾಭಿವೃದ್ಧಿ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.

ಈ ಮೂರು ವಿಭಾಗಗಳ ಅಕ್ರಮಗಳ ಕುರಿತು ಸಿಐಡಿ 2014 ಮಾರ್ಚ್‌ 10ರಂದು ಸಲ್ಲಿಸಿದ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಇದರಲ್ಲಿ ತಪ್ಪಿತಸ್ಥರೆಂದು ಗುರುತಿಸಲಾಗಿದ್ದ ಎಂಜಿನಿಯರ್‌ಗಳಿಗೆ ಆ ಬಳಿಕ ನೀಡಿದ ಎಲ್ಲ ಬಡ್ತಿಗಳನ್ನು ಇಲಾಖೆ ವಾಪಸ್‌ ಪಡೆದಿದೆ ಹಾಗೂ ಅವರನ್ನು ಕಾರ್ಯ ನಿರ್ವಾಹಕೇತರ (ನಾನ್‌ ಎಕ್ಸಿಕ್ಯುಟಿವ್‌) ಹುದ್ದೆಗಳಲ್ಲಿ ಮಾತ್ರ ಮುಂದುವರಿಸಬೇಕು ಎಂದು ಬುಧವಾರ ಆದೇಶ ಮಾಡಿದೆ. ಅದರ ಪ್ರತಿ ‘ಪ್ರಜಾವಾಣಿ’ಗೆ ಲಭಿಸಿದೆ.

ತಪ್ಪಿತಸ್ಥರೆಂದು ಗುರುತಿಸಲಾದ ಎಂಜಿನಿಯರ್‌ಗಳಲ್ಲಿ ಅನೇಕರು ಲೊಕೋಪಯೋಗಿ (ಪಿಡಬ್ಲ್ಯುಡಿ) ಇಲಾಖೆಯಿಂದ ಎರವಲು ಸೇವೆಯಿಂದ ಪಾಲಿಕೆಗೆ ಬಂದಿದ್ದರು. ಅವರನ್ನು ಮಾತೃ ಇಲಾಖೆಗೆ ಕಳುಹಿಸಿರುವ ನಗರಾಭಿವೃದ್ಧಿ ಇಲಾಖೆ, ಅವರಿಗೆ 2014ರ ಮಾರ್ಚ್‌ 10ರ ಬಳಿಕ ನೀಡಿದ್ದ ಬಡ್ತಿ ವಾಪಸ್‌ ಪಡೆಯಲು ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅವರಿಗೆ ಪತ್ರ ಬರೆದಿದೆ.

ಲೋಕೋಪಯೋಗಿ ಇಲಾಖೆಯು 2019ರ ನ. 8ರಂದು ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಮುಂಬಡ್ತಿಗೆ ಪರಿಗಣಿಸಿದವರ ಪಟ್ಟಿಯಲ್ಲಿ ನ್ಯಾ.ನಾಗಮೋಹನ ದಾಸ್‌ ನೇತೃತ್ವದ ಸಮಿತಿಯ ತನಿಖಾ ವರದಿಯಲ್ಲಿ ಆಪಾದಿತರೆಂದು ಗುರುತಿಸಿರುವ ಎಂಜಿನಿಯರ್‌ಗಳ ಹೆಸರಿದ್ದರೆ ಅವುಗಳನ್ನು ಕೈಬಿಡಬೇಕು ಎಂದು ಹೇಳಿದೆ.

ಲೆಕ್ಕಪತ್ರ ಇಲಾಖೆಯ ಲೆಕ್ಕಾಧೀಕ್ಷಕರಾದ ಕೃಷ್ಣಯ್ಯ, ನಾಗರಾಜ್‌ ಬಿ.ಎನ್‌. ಮತ್ತು ಬಿ.ಆರ್‌.ಚಿಕ್ಕಪ್ಪ ಅವರನ್ನೂ ಆಪಾದಿತರೆಂದು ಗುರುತಿಸಲಾಗಿದೆ. ಹಾಗಾಗಿ ಅವರರನ್ನು (ಸೇವೆಯಲ್ಲಿದ್ದಲ್ಲಿ) ಕಾರ್ಯನಿರ್ವಹಣೇತರ ಹುದ್ದೆಗೆ ವರ್ಗಾಯಿಸಬೇಕು ಎಂದು ಸೂಚಿಸಿದೆ.

ಮತ್ತೆ 8 ಎಂಜಿನಿಯರ್‌ಗಳು ಪಿಡಬ್ಲ್ಯುಡಿಗೆ

ಸಿಐಡಿ ಆರೋಪ ಪಟ್ಟಿಯಲ್ಲಿದ್ದ ಲೋಕೋಪಯೋಗಿ ಇಲಾಖೆಯ ಎಂಟು ಎಂಜಿನಿಯರ್‌ಗಳನ್ನು ಬಿಬಿಎಂಪಿ ನಗರಾಭಿವೃದ್ಧಿ ಇಲಾಖೆಗೆ ವಾಪಸ್‌ ಕಳುಹಿಸಿತ್ತು. ನಗರಾಭಿವೃದ್ಧಿ ಇಲಾಖೆಯು ಅವರನ್ನು ಲೋಕೋಪಯೋಗಿ ಇಲಾಖೆಗೆ ಮಂಗಳವಾರ (ನ.19) ಹಿಂದಕ್ಕೆ ಕಳುಹಿಸಿ ಅದೇಶ ಮಾಡಿದೆ. ಈ ಎಂಜಿನಿಯರ್‌ಗಳು ಅಕ್ರಮ ನಡೆದ ಅವಧಿಯಲ್ಲಿ ಪಾಲಿಕೆಯ ಸಹಾಯಕ ಎಂಜಿನಿಯರ್‌ಗಳಾಗಿದ್ದರು.

ಪಿಡಬ್ಲ್ಯುಡಿ ಇಲಾಖೆಗೆ ಮರಳಲಿರುವ ಎಂಜಿನಿಯರ್‌ಗಳು (ಸಿಐಡಿ ದೋಷಾರೋಪ ಪಟ್ಟಿ ಪ್ರಕಾರ)

ಅಧಿಕಾರಿ, ಈಗಿನ ಹುದ್ದೆ

ಎಚ್‌.ಶಿವಮಲ್ಲು (ಎಇಇ ಕಸ ನಿರ್ವಹಣೆ ಹೆಬ್ಬಾಳ)

ಕೆ.ಎಂ.ಕುಮಾರಸ್ವಾಮಿ (ಜಂಟಿ ನಿರ್ದೇಶಕ, ಕಟ್ಟಡ ಪರವಾನಗಿ ಕೋಶ ಉತ್ತರ),

ಡಿ.ಹರೀಶ್‌ ಕುಮಾರ್‌ (ಎ.ಇ ಯೋಜನೆ ಕೇಂದ್ರ)

ವಿ.ಮೋಹನ್‌ (ಎ.ಇ, ಗಾಂಧಿನಗರ)

ಜೆ.ಆರ್‌.ಕುಮಾರ್‌ (ಎಇಇ, ಗಾಳಿ ಆಂಜನೇಯ ದೇವಸ್ಥಾನ ಉಪವಿಭಾಗ)

ಎನ್‌.ಎಸ್‌.ರೇವಣ್ಣ (ಎಇಇ, ಕಾಟನ್‌ಪೇಟೆ)

ಎಂ.ಕೆ.ಹರೀಶ್‌ (ಎಇಇ, ಕೇಂದ್ರ ಕಚೇರಿಯ ಮುಖ್ಯ ಎಂಜಿನಿಯರ್‌ (ಯೋಜನೆ) ಕಚೇರಿ)

ಬಿ.ಎ.ಮೋಹನ (ಎಇಇ ಮಹಾಲಕ್ಷ್ಮಿ ಲೇಔಟ್‌)

ಮುಖ್ಯ ಎಂಜಿನಿಯರ್‌ಗಳಿಗೆ ಹಿಂಬಡ್ತಿ?

ಮೂರು ವಿಭಾಗಗಗಳಲ್ಲಿ ನಡೆದಿರುವ ಅಕ್ರಮಗಳಲ್ಲಿ ಆಪಾದಿತರು ಎಂದು ಒಟ್ಟು 254 ಎಂಜಿನಿಯರ್‌ಗಳನ್ನು ಗುರುತಿಸಲಾಗಿದೆ. ಇವರಲ್ಲಿ ಬಹುತೇಕರು ಈಗಾಗಲೇ ನಿವೃತ್ತರಾಗಿದ್ದಾರೆ. ಅನೇಕರು ಮಾತೃ ಇಲಾಖೆಗೆ ಮರಳಿದ್ದು, ಪಾಲಿಕೆಯಲ್ಲಿ ಈಗ ಕಾರ್ಯ ನಿರ್ವಹಿಸುತ್ತಿಲ್ಲ. ಒಟ್ಟು 42 ಮಂದಿ ಈಗಲೂ ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಟ್ಟಡ ಪರವಾನಗಿ ಕೋಶದ ಜಂಟಿ ನಿರ್ದೇಶಕ ದೇವರಾಜು, ಬೊಮ್ಮನಹಳ್ಳಿ ವಲಯದ ಮುಖ್ಯ ಎಂಜಿನಿಯರ್‌ (ಸಿಇ) ಸಿದ್ದೇಗೌಡ, ಇದೇ ವಲಯದಲ್ಲಿ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಜಯಕುಮಾರ್‌, ದಾಸರಹಳ್ಳಿ ವಲಯದ ಮುಖ್ಯ ಎಂಜಿನಿಯರ್‌ ಎ.ಬಿ.ದೊಡ್ಡಯ್ಯ, ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಹರೀಶ್‌ಕುಮಾರ್‌, ಕೇಂದ್ರ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ಗಳಾದ ರಾಧಾಕೃಷ್ಣಯ್ಯ, ಹರೀಶ್‌ ಎಂ.ಕೆ., ಮಹದೇವಪುರದ ಪ್ರಭಾರ ಮುಖ್ಯ ಎಂಜಿನಿಯರ್‌ ಎಸ್‌.ಪಿ.ರಂಗನಾಥ್‌ ಮತ್ತಿತರರು ಈ ಪಟ್ಟಿಯಲ್ಲಿ ಹೆಸರು ಇರುವ ಪ್ರಮುಖರು. ಇವರಲ್ಲಿ ಅನೇಕರು ಸಿಐಡಿ ದೋಷಾರೋಪ ಪಟ್ಟಿ ಸಲ್ಲಿಕೆ ಆದ ಬಳಿಕ ಬಡ್ತಿ ಪಡೆದಿದ್ದಾರೆ. ಅವರೀಗ ಹಿಂಬಡ್ತಿ ಹೊಂದುವ ಅಪಾಯ ಎದುರಿಸುತ್ತಿದ್ದಾರೆ.

‘ಪ್ರಜಾವಾಣಿ’ ವರದಿ ಬಳಿಕ ಎಚ್ಚೆತ್ತ ಸರ್ಕಾರ

ಈ ಅಕ್ರಮಗಳ ಸಮಗ್ರ ತನಿಖೆ ನಡೆಸಿದ್ದ ನ್ಯಾ.ಎಚ್‌.ಎನ್‌.ನಾಗಮೋಹನ ದಾಸ್‌ ನೇತೃತ್ವದಲ್ಲಿ ಸಮಿತಿ 2018ರ ಡಿಸೆಂಬರ್‌ನಲ್ಲಿ ಆಗಿನ ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರಿಗೆ ಅಂತಿಮ ವರದಿ ಸಲ್ಲಿಸಿತ್ತು. ಈ ವರದಿಯನ್ನು ಆಧರಿಸಿ ‘ಪ್ರಜಾವಾಣಿ’ 2019ರ ಸೆಪ್ಟೆಂಬರ್‌ ತಿಂಗಳಲ್ಲಿ ‘ಬ್ರಹ್ಮಾಂಡ ಭ್ರಷ್ಟಾಚಾರ’ ಶೀರ್ಷಿಕೆಯಲ್ಲಿ 11 ಸರಣಿ ವರದಿಗಳನ್ನು ಪ್ರಕಟಿಸಿ ಅಕ್ರಮದ ಇಂಚಿಂಚನ್ನೂ ವಿವರಿಸಿತ್ತು. ಆ ಬಳಿಕ, ಈ ಮೂರು ವಿಭಾಗಗಳಲ್ಲಿ ನಡೆದಿರುವ ಅಕ್ರಮಗಳನ್ನು ಶಾಸಕ ರಾಮದಾಸ್‌ ಅಧ್ಯಕ್ಷತೆಯ ವಿಧಾನ ಮಂಡಲದ ಅಧೀನ ಶಾಸನ ರಚನಾ ಸಮಿತಿ ಗಂಭೀರವಾಗಿ ಪರಿಗಣಿಸಿತ್ತು. ನ.5, ನ.11 ಹಾಗೂ ನ.19 ರಂದು ಸಭೆ ನಡೆಸಿದ್ದ ಸಮಿತಿ ಈ ಅಕ್ರಮಗಳ ಕುರಿತಂತೆ ನಾಗಮೋಹನದಾಸ ಸಮಿತಿಯ ವರದಿಯನ್ನು ಜಾರಿಗೊಳಿಸುವಂತೆ ಹಾಗೂ ಈ ಅಕ್ರಮಗಳ ಕುರಿತು ಸಿಐಡಿ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಹೆಸರಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಟ್ಟು ಹಿಡಿದಿತ್ತು.

‘ಇಲಾಖಾ ವಿಚಾರಣೆ ಪ್ರಸ್ತಾವನೆ ಕಳಿಸಿ’

ನ್ಯಾ.ಎಚ್‌.ಎನ್‌.ನಾಗಮೋಹನದಾಸ್‌ ಸಮಿತಿಯ ಮಧ್ಯಂತರ ವರದಿಯಲ್ಲಿ ಹಾಗೂ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ನಿರ್ದೇಶಕರು ನೀಡಿರುವ ಲೆಕ್ಕ ಪರಿಶೋಧನೆ ವರದಿಯಲ್ಲಿ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿರುವುದು ಸಾಬೀತಾಗಿರುವುದರಿಂದ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿಗೆ ಈ ಹಿಂದೆ ಸೂಚಿಸಿತ್ತು. ‘ಬಿಬಿಎಂಪಿಯಿಂದ ಇದುವರೆಗೂ ಇಲಾಖಾ ವಿಚಾರಣೆ ಸಂಬಂಧ ಪರಿಪೂರ್ಣ ಪ್ರಸ್ತಾವನೆ ಬಂದಿಲ್ಲ. ಹಾಗಾಗಿ ಇಲಾಖಾ ವಿಚಾರಣೆಗೆ ಸಂಬಂಧಿಸಿ ದೋಷಾರೋಪ ಪಟ್ಟಿಯನ್ನು ಒಳಗೊಂಡ ಪರಿಪೂರ್ಣವಾದ ಪ್ರಸ್ತಾವನೆಯನ್ನು ತುರ್ತಾಗಿ ಕಳುಹಿಸಬೇಕು’ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ ಅವರು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ ಕುಮಾರ್‌ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT