ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿನ 91 ಪಶು ವೈದ್ಯಾಧಿಕಾರಿಗಳ ಹುದ್ದೆಗಳಲ್ಲಿನ ಎಲ್ಲವೂ ಭರ್ತಿ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿನ 129 ಹುದ್ದೆಗಳಲ್ಲಿ 110 ಖಾಲಿ, ಸದ್ಯ ಕಾರ್ಯನಿರ್ವಹಿಸುತ್ತಿರುವವರಲ್ಲಿ ಹಲವರು ನಿಯೋಜನೆ ಮೇಲೆ ಇತರ ಇಲಾಖೆಗಳಲ್ಲಿ ಕಾರ್ಯನಿರ್ವಹಣೆ...
ಪಶು ಸಂಗೋಪನಾ ಇಲಾಖೆಯಲ್ಲಿನ ಪರಿಸ್ಥಿತಿಯನ್ನು ವಿಧಾನ ಪರಿಷತ್‌ನಲ್ಲಿ ವಿವರಿಸಿದ ಸಚಿವ ಕೆ. ವೆಂಕಟೇಶ್ ಅವರು, ‘ರಾಜ್ಯದಲ್ಲಿ ಮಂಜೂರಾದ ಒಟ್ಟು 3,235 ಹುದ್ದೆಗಳಲ್ಲಿ 1974 ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, 1,261 ಹುದ್ದೆಗಳು ಖಾಲಿ ಉಳಿದಿವೆ’ ಎಂದು ತಿಳಿಸಿದರು.
ಬಿಜೆಪಿಯ ಎಸ್.ವಿ. ಸಂಕನೂರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘400 ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಕೈಗೊಳ್ಳುವಂತೆ ಕರ್ನಾಟಕ ಲೋಕ ಸೇವಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ಮೀಸಲಾತಿ ಗೊಂದಲದಿಂದ ವಿಳಂಬವಾಗಿದೆ. ಆಯೋಗದಿಂದ ಶೀಘ್ರ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಡಿಸೆಂಬರ್ ಒಳಗೆ ಮುಗಿಯುವ ಸಾಧ್ಯತೆ ಇದೆ’ ಎಂದು ತಿಳಿಸಿದರು.
‘ಬೆಂಗಳೂರು ಸೇರಿದಂತೆ ಅನಗತ್ಯ ಸ್ಥಳಗಳಲ್ಲಿರುವವರನ್ನು ಬದಲಾವಣೆ ಮಾಡಲಾಗುವುದು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹುದ್ದೆ ಸೇರಿದಂತೆ ವಿವಿಧ ಇಲಾಖೆಗಳಿಗೆ ನಿಯೋಜನೆ ಮೇರೆಗೆ ತೆರಳಿದವರನ್ನು ಸಹ ವಾಪಸ್ ಕರೆಯಿಸಿಕೊಳ್ಳಲಾಗುವುದು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.