ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೋಟಾ ನೋಟು: ರೆಸ್ಟೋರೆಂಟ್ ವಿರುದ್ಧ ಎಫ್‌ಐಆರ್

Published 28 ಏಪ್ರಿಲ್ 2024, 0:51 IST
Last Updated 28 ಏಪ್ರಿಲ್ 2024, 0:51 IST
ಅಕ್ಷರ ಗಾತ್ರ

ಬೆಂಗಳೂರು: ನೃಪತುಂಗ ರಸ್ತೆಯಲ್ಲಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪ್ರಾದೇಶಿಕ ಕಚೇರಿಯ ಕರೆನ್ಸಿ ವಿಭಾಗಕ್ಕೆ ಜಮೆ ಮಾಡಲು ತಂದಿದ್ದ ನೋಟುಗಳಲ್ಲಿ ₹ 500 ಮುಖಬೆಲೆಯ 10 ಖೋಟಾ ನೋಟುಗಳು ಪತ್ತೆಯಾಗಿದ್ದು, ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಇಂಡಸ್‌ ಇಂಡ್ ಬ್ಯಾಂಕ್ ಕರೆನ್ಸಿ ವಿಭಾಗದ (ಚೆಸ್ಟ್) ಉಪ ವ್ಯವಸ್ಥಾಪಕ ಎಸ್‌. ಮಂಜುನಾಥ್ ಅವರು ಖೋಟಾ ನೋಟುಗಳ ಬಗ್ಗೆ ದೂರು ನೀಡಿದ್ದಾರೆ. ಖೋಟಾ ನೋಟುಗಳನ್ನು ಬ್ಯಾಂಕ್‌ಗೆ ಜಮೆ ಮಾಡಿದ್ದ ಯಶವಂತಪುರದಲ್ಲಿರುವ ‘ನಮ್ಮ ಅನ್ನಪೂರ್ಣ ರೆಸ್ಟೋರೆಂಟ್’ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಇಂಡಸ್‌ ಇಂಡ್ ಬ್ಯಾಂಕ್‌ನ ಯಶವಂತಪುರ ಶಾಖೆಯಲ್ಲಿ ಸಂಗ್ರಹವಾಗಿದ್ದ ನೋಟುಗಳನ್ನು ಆರ್‌ಬಿಐ ಪ್ರಾದೇಶಿಕ ಕಚೇರಿ ಕರೆನ್ಸಿ ವಿಭಾಗಕ್ಕೆ ಏಪ್ರಿಲ್ 24ರಂದು ಜಮೆ ಮಾಡಲಾಗಿತ್ತು. ಮರುದಿನ ನೋಟುಗಳ ಪರಿಶೀಲನೆ ನಡೆಸಲಾಗಿತ್ತು. ಇದೇ ಸಂದರ್ಭದಲ್ಲಿಯೇ, ₹ 500 ಮುಖಬೆಲೆಯ 10 ಖೋಟಾ ನೋಟುಗಳು ಪತ್ತೆಯಾಗಿವೆ’ ಎಂದು ಮೂಲಗಳು ತಿಳಿಸಿವೆ.

‘ಖೋಟಾ ನೋಟುಗಳ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆಹಾಕಿದ್ದರು. ಇಂಡಸ್ ಇಂಡ್ ಬ್ಯಾಂಕ್‌ನ ಯಶವಂತಪುರ ಶಾಖೆಯಲ್ಲಿರುವ ‘ನಮ್ಮ ಅನ್ನಪೂರ್ಣ ರೆಸ್ಟೋರೆಂಟ್‌’ ಖಾತೆಗೆ ಖೋಟಾ ನೋಟುಗಳು ಜಮೆ ಆಗಿರುವುದು ಗೊತ್ತಾಗಿದೆ. ಹೀಗಾಗಿ, ರೆಸ್ಟೋರೆಂಟ್ ವಿರುದ್ಧ ದೂರು ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಗ್ರಾಹಕರು ನೀಡಿರುವ ಶಂಕೆ: ‘ರೆಸ್ಟೋರೆಂಟ್‌ಗೆ ಬಂದಿದ್ದ ಗ್ರಾಹಕರು, ಖೋಟಾ ನೋಟುಗಳನ್ನು ನೀಡಿರುವ ಮಾಹಿತಿ ಇದೆ. ಅದೇ ನೋಟುಗಳನ್ನು ರೆಸ್ಟೋರೆಂಟ್ ಸಿಬ್ಬಂದಿ ಬ್ಯಾಂಕ್‌ಗೆ ತುಂಬಿದ್ದಾರೆ. ಖೋಟಾ ನೋಟುಗಳನ್ನು ಕೊಟ್ಟ ಗ್ರಾಹಕ ಯಾರು ? ಎಲ್ಲಿ ಮುದ್ರಿಸಲಾಗಿತ್ತು? ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT