ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19: ಬೆಂಗಳೂರಿನಲ್ಲಿ ಒಂದೇ ದಿನ 2,125 ಪ್ರಕರಣಗಳು

Last Updated 18 ಜುಲೈ 2020, 21:13 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ನಗರದಲ್ಲಿ 2,125 ಮಂದಿಗೆ ಕೊರೊನಾ ಸೋಂಕು ತಗಲಿರುವುದು ಹಾಗೂ ಮತ್ತೆ 49 ಮಂದಿ ಮೃತಪಟ್ಟಿರುವುದು ಶನಿವಾರ ದೃಢಪ‍ಟ್ಟಿದೆ.

ಲಾಕ್‌ಡೌನ್ ಜಾರಿಯಾದ ಐದು ದಿನಗಳ ಅವಧಿಯಲ್ಲಿ ನಗರದಲ್ಲಿ 8,652 ಕೋವಿಡ್ ಪ್ರಕರಣಗಳು ಬೆಳಕಿಗೆ ಬಂದಿವೆ. ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಿದ ಬೆನ್ನಲ್ಲೇ ಸೋಂಕಿತರ ಸಂಖ್ಯೆ ಕೂಡ ಅಧಿಕವಾಗುತ್ತಿದೆ. 18 ದಿನಗಳಲ್ಲೇ 24,706 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಇದೇ ಅವಧಿಯಲ್ಲಿ 536 ಮಂದಿ ಮೃತಪಟ್ಟಿದ್ದಾರೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 29,261 ಹಾಗೂ ಮೃತರ ಸಂಖ್ಯೆ 631ಕ್ಕೆ ಏರಿಕೆಯಾಗಿದೆ.

ಶನಿವಾರ 250 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ನಗರದಲ್ಲಿ ಈವರೆಗೆ 6,540 ಮಂದಿ ಗುಣಮುಖರಾಗಿದ್ದಾರೆ. ರೋಗಿಗಳಲ್ಲಿ 332 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹೊಸದಾಗಿ ಖಚಿತಪಟ್ಟ ಸಾವು ಪ್ರಕರಣಗಳಲ್ಲಿ 6 ಮಂದಿ 50 ವರ್ಷದೊಳಗಿನವರು. ಇದರಲ್ಲಿ 20 ವರ್ಷದ ಯುವತಿ ಹಾಗೂ 22 ವರ್ಷದ ಯುವಕ ಕೂಡ ಸೇರಿದ್ದಾರೆ.

ಸರ್ಕಾರಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ 390 ಹಾಸಿಗೆಗಳು ಖಾಲಿಯಿವೆ. ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ 2,019 ಹಾಸಿಗೆಗಳು ಭರ್ತಿಯಾಗಿದ್ದು, ಇನ್ನೂ5,096 ಹಾಸಿಗೆಗಳಿವೆ.

15 ದಿನಗಳಲ್ಲಿ ಖಾಸಗಿ ಆಸ್ಪತ್ರೆಗೆಚಿಕಿತ್ಸಾ ಶುಲ್ಕ: ಸೋಮಶೇಖರ್‌
‘ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಕೊರೊನಾ ಸೋಂಕಿತರಿಗೆ ತಗುಲುವ ಚಿಕಿತ್ಸಾ ಶುಲ್ಕವನ್ನು 15 ದಿನಗಳಲ್ಲಿ ಪಾವತಿ ಮಾಡುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗಿದ್ದು, ಶೀಘ್ರದಲ್ಲೇ ಕ್ರಮ ವಹಿಸಲಾಗುವುದು’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ರಾಜರಾಜೇಶ್ವರಿನಗರ ವಲಯದ ಪಾಲಿಕೆ ಸದಸ್ಯರು, ಖಾಸಗಿ ಆಸ್ಪತ್ರೆಗಳು, ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಪಾಲಿಕೆ ಅಧಿಕಾರಿಗಳ ಜೊತೆಗೆ ಶನಿವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ‘ಯಾವುದೇ ಅಧಿಕಾರಿ ಜನರಿಗೆ ಬೆದರಿಕೆ ಹಾಕಿದಲ್ಲಿ, ಕ್ರಮ ಕೈಗೊಳ್ಳಲಾಗುವುದು’ ಎಂದರು.

ರಾಜರಾಜೇಶ್ವರಿನಗರ ವಲಯ ಕೋವಿಡ್ ನಿಯಂತ್ರಣ ವಿಭಾಗದ ಮುಖ್ಯಸ್ಥ ವಿಶಾಲ್, ‘ಖಾಸಗಿ ಆಸ್ಪತ್ರೆಗಳು ಸರ್ಕಾರದ ನಿಯಮದಂತೆ ಕೋವಿಡ್‌ ರೋಗಿಗಳಿಗೆ ಶೇ 50ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು’ ಎಂದರು.

‘ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಣರಹಿತ ಸೋಂಕಿತರ ದಾಖಲು ಇಲ್ಲ’
ಬೆಂಗಳೂರು: ‘ಲಕ್ಷಣರಹಿತ ಕೊರೊನಾ ಸೋಂಕಿತರನ್ನು ಖಾಸಗಿ ಆಸ್ಪತ್ರೆಗಳು ದಾಖಲು ಮಾಡಿಕೊಳ್ಳುವಂತಿಲ್ಲ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಇಲ್ಲಿ ಮಾತನಾಡಿದ ಅವರು, ‘ಲಕ್ಷಣರಹಿತ ಮತ್ತು ಕಡಿಮೆ ಲಕ್ಷಣ ಇರುವ ಸೋಂಕಿತರನ್ನು ಕೋವಿಡ್ ಆರೈಕೆ ಕೇಂದ್ರ ಮತ್ತು ಹೋಂ ಐಸೋಲೇಷನ್ ಮಾಡುವ ನಿಟ್ಟಿನಲ್ಲಿ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ’ ಎಂದರು.

‘ರಾಜ್ಯದಲ್ಲಿ ಸದ್ಯ 85 ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳಿವೆ. ಮುಂದಿನ ದಿನಗಳಲ್ಲಿ ಇನ್ನೂ 25 ಪ್ರಯೋಗಾಲಯ ಸ್ಥಾಪಿಸುವ ಚಿಂತನೆ ಇದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT