ಭಾನುವಾರ, ಆಗಸ್ಟ್ 1, 2021
27 °C

ಕೋವಿಡ್–19 | ಬೆಂಗಳೂರಿನಲ್ಲಿ 16 ದಿನಗಳ ಮಗು ಸೇರಿ 45 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಕೋವಿಡ್‌ ಪ್ರಕರಣಗಳ ಜತೆಗೆ ಸೋಂಕಿನಿಂದ ಮೃತಪಡುವವರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಸೋಂಕಿನಿಂದ 16 ದಿನಗಳ ಮಗು ಸೇರಿದಂತೆ 45 ಮಂದಿ ಮೃತಪಟ್ಟಿರುವುದು ಭಾನುವಾರ ದೃಢಪಟ್ಟಿದ್ದು, ಸಾವಿಗೀಡಾದವರ ಸಂಖ್ಯೆ 274ಕ್ಕೆ ತಲುಪಿದೆ. 

ಸೋಂಕಿನ ತೀವ್ರತೆಗೆ ಮಧ್ಯವಯಸ್ಕರು ಕೂಡ ಸಾವಿಗೀಡಾಗುತ್ತಿದ್ದಾರೆ. ಹೊಸದಾಗಿ ದೃಢಪಟ್ಟ ಸಾವಿನ ಪ್ರಕರಣಗಳಲ್ಲಿ 15 ಮಂದಿ 50 ವರ್ಷದೊಳಗಿನವರು. ಬಹುತೇಕರಿಗೆ ಬೇರೆ ಕಾಯಿಲೆಗಳು ಇಲ್ಲದಿದ್ದರೂ ಜ್ವರದ ತೀವ್ರತೆಗೆ ನಿಧನರಾಗಿದ್ದಾರೆ. ಇದರಲ್ಲಿ 17 ವರ್ಷದ ಬಾಲಕಿ ಕೂಡ ಸೇರಿದ್ದಾಳೆ. ಇನ್ನೊಂದೆಡೆ, ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಮತ್ತೆ 1,523 ಮಂದಿಗೆ ಸೋಂಕು ತಗುಲಿದೆ. ಇದರಿಂದಾಗಿ ಕೋವಿಡ್ ಪೀಡಿತರ ಸಂಖ್ಯೆ 18,387ಕ್ಕೆ ತಲುಪಿದೆ. 

ಒಂದು ವಾರದಲ್ಲಿ 8,807 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಈ ಅವಧಿಯಲ್ಲಿ 129 ಮಂದಿ ಮೃತಪಟ್ಟಿದ್ದಾರೆ. ಭಾನುವಾರ 302 ಮಂದಿ ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ. ಇದರಿಂದ ಗುಣಮುಖರಾದವರ ಸಂಖ್ಯೆ 1,267ಕ್ಕೆ ಏರಿಕೆಯಾಗಿದೆ. 

132 ರೋಗಿಗಳ ಸ್ಥಿತಿ ಗಂಭೀರ: ನಗರದಲ್ಲಿ 132 ರೋಗಿಗಳ ಸ್ಥಿತಿ ಗಂಭೀರವಾಗಿದೆ. ಅವರಿಗೆ ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಸಂಖ್ಯೆ ಏಕಾಏಕಿ ಹೆಚ್ಚಳವಾದ ಪರಿಣಾಮ ಸಕ್ರೀಯ ಪ್ರಕರಣಗಳ ಸಂಖ್ಯೆ 14,067ಕ್ಕೆ ಏರಿಕೆಯಾಗಿದೆ. ರಾಜ್ಯದ ಒಟ್ಟು ಸೋಂಕಿತರಲ್ಲಿ ಶೇ 47 ರಷ್ಟು ಮಂದಿ ಬೆಂಗಳೂರಿನಲ್ಲಿಯೇ ಇದ್ದಾರೆ. ನಗರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ವೈದ್ಯರು, ಶೂಶ್ರೂಷಕರು ಸೇರಿದಂತೆ ಐದು ಮಂದಿಗೆ ಸೋಂಕು ತಗುಲಿದೆ. ಅಲ್ಲಿ ಕೋವಿಡ್ ಪೀಡಿತರಾದವರ ಸಂಖ್ಯೆ 30ಕ್ಕೆ ತಲುಪಿದೆ.

‘ನಲ್ಲಿಯ ನೀರನ್ನೇ ಕುಡಿಯಬೇಕು’
ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯ ವ್ಯವಸ್ಥೆಯ ಬಗ್ಗೆ ಸೋಂಕು ಶಂಕಿತ 62 ವರ್ಷದ ವ್ಯಕ್ತಿಯೊಬ್ಬರ ಪುತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ, ರೋಗಿಗಳು ನಲ್ಲಿಯ ನೀರನ್ನೇ ಕುಡಿಯಬೇಕಾದ ಪರಿಸ್ಥಿತಿ ಇದೆ ಎಂದು ಆರೋಪಿಸಿದ್ದಾರೆ. 

‘ಖಾಸಗಿ ಆಸ್ಪತ್ರೆಯಲ್ಲಿ ತಂದೆ ಗಂಟಲ ದ್ರವ ನೀಡಿದ್ದರು. ಸೋಂಕಿನ ಲಕ್ಷಣಗಳು ಗೋಚರಿಸಿದ ಹಿನ್ನೆಲೆಯಲ್ಲಿ ಇಎಸ್‌ಐ ಆಸ್ಪತ್ರೆಗೆ ದಾಖಲಾಗುವಂತೆ ಖಾಸಗಿ ಆಸ್ಪತ್ರೆಯವರು ಶಿಫಾರಸು ಮಾಡಿದರು. ಅದರಂತೆ ದಾಖಲಿಸಲಾಯಿತು. ಅವರಿಗೆ ನ್ಯುಮೋನಿಯಾ ಕೂಡ ಇದೆ. ಸಿಬ್ಬಂದಿಯೊಂದಿಗೆ ಗಲಾಟೆ ನಡೆಸಿದ ಬಳಿಕ ಆಕ್ಸಿಜನ್ ಸಂಪರ್ಕ ಕಲ್ಪಿಸಿದ್ದಾರೆ. ಆಸ್ಪತ್ರೆಯಲ್ಲಿ ಕುಡಿಯಲು ಬಿಸಿನೀರಿನ ವ್ಯವಸ್ಥೆ ಕೂಡ ಇಲ್ಲ. ನಲ್ಲಿ ನೀರನ್ನೇ ಕುಡಿಯಬೇಕಾದ ‍ಪರಿಸ್ಥಿತಿಯಿದೆ’ ಎಂದು ಬೇಸರ ವ್ಯಕ್ತಪಡಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು