ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕ್ಟೋರಿಯಾ: ಶುಶ್ರೂಷಕರಿಗೆ ಆರೈಕೆ ಸವಾಲು

ಎರಡನೇ ಅಲೆಯಲ್ಲಿ 66 ಮಂದಿಗೆ ಸೋಂಕು l ವಿಶ್ರಾಂತಿಯಲ್ಲಿರುವವರಿಗೆ ಕಾರಣ ಕೇಳಿ ನೋಟಿಸ್
Last Updated 23 ಮೇ 2021, 20:51 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳ ದಟ್ಟಣೆ ಉಂಟಾಗಿದೆ. ಇದರಿಂದಾಗಿ ಶುಶ್ರೂಷಕರ ಕೊರತೆ ಎದುರಾಗಿದ್ದು, ವಿಶ್ರಾಂತಿ ಅವಧಿಯಲ್ಲಿಯೂಕರ್ತವ್ಯಕ್ಕೆ ಹಾಜರಾಗಲು ಅವರಿಗೆ ಸೂಚಿಸಲಾಗುತ್ತಿದೆ.

ಕೋವಿಡ್‌ ಮೊದಲನೇ ಅಲೆ ಕಾಣಿಸಿಕೊಂಡ ಬಳಿಕ ಸೋಂಕಿತರಿಗೆ ಒಂದೆಡೆ ಚಿಕಿತ್ಸೆ ದೊರೆಯಬೇಕೆಂಬ ಉದ್ದೇಶದಿಂದ ವಿಕ್ಟೋರಿಯಾ ಆಸ್ಪತ್ರೆಯನ್ನು ಪೂರ್ಣ ಪ್ರಮಾಣದ ಕೋವಿಡ್‌ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಯಿತು. ಜೂನ್ ಬಳಿಕ ಸೋಂಕಿತರ ಸಂಖ್ಯೆ ಏರಿಕೆ ಕಂಡಿದ್ದರೂ ಕೋವಿಡ್‌ ಪೀಡಿತರು ಅಷ್ಟಾಗಿ ಅಸ್ವಸ್ಥರಾಗಿರದ ಕಾರಣ ವಿಶೇಷ ಆರೈಕೆ ಅಗತ್ಯವಿರಲಿಲ್ಲ. ಇದರಿಂದಾಗಿ ಆ ವೇಳೆ ಶುಶ್ರೂಷಕರಿಗೆ 7 ದಿನ ಸಾಂಸ್ಥಿಕ ಪ್ರತ್ಯೇಕ ವಾಸ ಹಾಗೂ 7 ದಿನ ಮನೆಯಲ್ಲೇ ಪ್ರತ್ಯೇಕವಾಸಕ್ಕೆ ಅವಕಾಶ ನೀಡಲಾಗುತ್ತಿತ್ತು. ಈಗ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾದ ಕಾರಣ ಕೋವಿಡ್ ಕರ್ತವ್ಯದಲ್ಲಿರುವವರಿಗೆ ಒಂದು ವಾರ ಮಾತ್ರ ವಿಶ್ರಾಂತಿಗೆ ಅವಕಾಶ ನೀಡಲಾಗುತ್ತಿದೆ.

ವಿಕ್ಟೋರಿಯಾ ಆವರಣದಲ್ಲಿರುವ ಟ್ರಾಮಾ ಕೇರ್‌ ಸೆಂಟರ್, ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಆಸ್ಪತ್ರೆಯಲ್ಲಿನ ಹಾಸಿಗೆಗಳನ್ನು ಕೂಡ ಕೋವಿಡ್ ಚಿಕಿತ್ಸೆಗೆ ಮೀಸಲಿಡಲಾಗಿದೆ. ಸದ್ಯ ಅಲ್ಲಿ 450ಕ್ಕೂ ಅಧಿಕ ಕೋವಿಡ್ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 40 ತೀವ್ರ ನಿಗಾ ಘಟಕ (ಐಸಿಯು) ಹಾಸಿಗೆಗಳು ಹಾಗೂ 60 ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳು ಭರ್ತಿಯಾಗಿದೆ. ಹೆಚ್ಚಿನ ರೋಗಿಗಳು ತೀವ್ರ ಆರೋಗ್ಯ ಸಮಸ್ಯೆ ಹೊಂದಿರುವ ಕಾರಣ ಶುಶ್ರೂಷಕರಿಗೆ ವಿಶ್ರಾಂತಿ ಸಿಗದಂತಾಗಿದೆ.

40 ಮಂದಿಗೆ ನೋಟಿಸ್: ವಿಕ್ಟೋರಿಯಾ ಆಸ್ಪತ್ರೆಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳೆರಡರಿಂದಲೂ ಶುಶ್ರೂಷಕರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಅದೇ ರೀತಿ, ಗುತ್ತಿಗೆ ಆಧಾರದ ಮೇಲೂ ನಿಯೋಜಿಸಿಕೊಳ್ಳಲಾಗಿದೆ. ಆರೋಗ್ಯ ಇಲಾಖೆಯಿಂದ ನೇಮಕವಾದವರಲ್ಲಿ ಬಹುತೇಕರು 10 ಹಾಗೂ ಅದಕ್ಕಿಂತ ಹೆಚ್ಚು ವರ್ಷಗಳ ಸೇವಾ ಅನುಭವ ಹೊಂದಿದ್ದಾರೆ. ಅವರನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿಲ್ಲ. ಇದರಿಂದ ಉಳಿದವರಿಗೆ ವಿಶ್ರಾಂತಿ ಸಿಗುತ್ತಿಲ್ಲ ಎಂಬ ಆರೋಪ ಕೂಡ ಶುಶ್ರೂಷಕರ ವಲಯದಿಂದ ಕೇಳಿ ಬಂದಿದೆ.

ಈ ನಡುವೆ, ಕರ್ತವ್ಯ ಪೂರೈಸಿ ಒಂದು ವಾರ ವಿಶ್ರಾಂತಿಗೆ ತೆರಳಿದ್ದ 60 ಶುಶ್ರೂಷಕರಿಗೆ ಐದನೇ ದಿನಕ್ಕೆ ಹಾಜರಾಗಲು ಸೂಚಿಸಿ ಹಾಗೂ ವಿವಿಧ ಕಾರಣಗಳಿಂದ ಕರ್ತವ್ಯಕ್ಕೆ ಬಾರದ 40 ಮಂದಿಗೆ ಕಾರಣ ಕೇಳಿ ಷೋಕಾಸ್ ನೋಟಿಸ್ ನೀಡಲಾಗಿದೆ.

‘ಆರೋಗ್ಯ ಇಲಾಖೆಯಡಿ ನೇಮಕರಾದವರಿಗೆ ಕೋವಿಡ್‌ ವಾರ್ಡ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸುತ್ತಿಲ್ಲ. ತಾರತಮ್ಯ ಮಾಡಲಾಗುತ್ತಿದ್ದು, ಕೆಲವರಿಗೆ ಒಂದು ವಾರ ಕೆಲಸ ಮಾಡಿದ ಬಳಿಕ ಎರಡು ವಾರಗಳು ಕೂಡ ವಿಶ್ರಾಂತಿ ನೀಡಲಾಗುತ್ತಿದೆ. ಶುಶ್ರೂಷಕರ ಮೇಲ್ವಿಚಾರಕರು ತಮಗೆ ಬೇಕಾದವರಿಗೆ ಕೋವಿಡ್‌ ಸೇವೆಯಿಂದ ವಿನಾಯಿತಿ ನೀಡುತ್ತಿದ್ದಾರೆ. ಇದರಿಂದ ನಮಗೆ ಒಂದು ವಾರ ಕೂಡ ವಿಶ್ರಾಂತಿ ಸಿಗುತ್ತಿಲ್ಲ’ ಎಂದು ನೋಟಿಸ್ ಪಡೆದ ಶುಶ್ರೂಷಕರೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಮೊದಲನೇ ಅಲೆಯಲ್ಲಿ ಪ್ರತ್ಯೇಕ ವಾಸಕ್ಕೆ ವ್ಯವಸ್ಥೆ ಇದ್ದ ಕಾರಣ ಕೆಲಸ ನಿಭಾಯಿಸಲು ಸಾಧ್ಯವಾಗುತ್ತಿತ್ತು. ಆದರೆ, ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಕೆಲಸದೊತ್ತಡ ಅಧಿಕವಾಗಿದೆ. ಈ ನಡುವೆ ನಡೆಯುತ್ತಿರುವ ತಾರತಮ್ಯದಿಂದ ಬೇಸತ್ತು ಹೋಗಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಶ್ರೂಷಕರೊಬ್ಬರು ತಿಳಿಸಿದರು.

‘50 ವರ್ಷ ಮೇಲ್ಪಟ್ಟವರಿಗೆ ಸಮಸ್ಯೆ’
‘ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಎಂದು ಶುಶ್ರೂಷಕರ ಮೇಲೆ ತಾರತಮ್ಯ ಮಾಡಲು ಸಾಧ್ಯವಿಲ್ಲ. ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ಶುಶ್ರೂಷಕರು ಅಗತ್ಯ ಸಂಖ್ಯೆಯಲ್ಲಿ ಇರಬೇಕಾಗುತ್ತದೆ. ಆರೋಗ್ಯ ಇಲಾಖೆಯಡಿ ನೇಮಕವಾದವರಲ್ಲಿ ಬಹುತೇಕರು 50 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನವವರು. ಕೋವಿಡ್ ಮೊದಲನೆ ಅಲೆ ಕಾಣಿಸಿಕೊಂಡು, ಪ್ರಕರಣಗಳ ಸಂಖ್ಯೆ ಇಳಿಕೆ ಕಂಡಾಗ ಕೋವಿಡ್ ವಾರ್ಡ್‌ನಲ್ಲಿ ಕಾರ್ಯನಿರ್ವಹಿಸಿದವರಿಗೆ ಎರಡರಿಂದ ಮೂರು ತಿಂಗಳು ವಿಶ್ರಾಂತಿ ನೀಡಿ, ವೇತನ ನೀಡಲಾಗಿತ್ತು’ ಎಂದು ಶುಶ್ರೂಷಕರ ಮೇಲ್ವಿಚಾರಕಿ ಕವಿತಾ ಎನ್. ತಿಳಿಸಿದರು.

‘ವಿವಿಧ ದೀರ್ಘಾವಧಿ ಕಾಯಿಲೆ ಎದುರಿಸುತ್ತಿರುವವರು, ಗರ್ಭಿಣಿಯರು, 50 ವರ್ಷ ಮೇಲ್ಪಟ್ಟವರು ಸೇರಿದಂತೆ ಕೆಲವರಿಗೆ ವಿನಾಯಿತಿ ನೀಡಬೇಕಾಗುತ್ತದೆ. ಅಷ್ಟಾಗಿಯೂ 50 ವರ್ಷ ಮೇಲ್ಪಟ್ಟ ಕೆಲವರು ಕೋವಿಡ್ ಸೇವೆಯಲ್ಲಿ ನಿರತರಾಗಿದ್ದಾರೆ. ಕುಟುಂಬದ ಸದಸ್ಯರು ಕೋವಿಡ್‌ ಪೀಡಿತರಾಗಿರುವ ಕಾರಣ, ಅನಾರೋಗ್ಯ ಸೇರಿದಂತೆ ವಿವಿಧ ಕಾರಣಗಳಿಂದ ಕೆಲವರು ಗೈರಾಗುತ್ತಿದ್ದಾರೆ. ಮಕ್ಕಳಿಗೆ ಅನಾರೋಗ್ಯ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿದಾಗ ರಜೆ ನೀಡಬೇಕಾಗುತ್ತದೆ’ ಎಂದರು.

66 ಮಂದಿಗೆ ಸೋಂಕು
ಕೋವಿಡ್‌ ಕರ್ತವ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕರಲ್ಲಿ ಕೆಲವರು ಕೋವಿಡ್‌ ಪೀಡಿತರಾಗುತ್ತಿದ್ದಾರೆ. ಎರಡನೇ ಅಲೆ ಕಾಣಿಸಿಕೊಂಡ ಬಳಿಕವೇ 66 ಮಂದಿ ಸೋಂಕಿತರಾಗಿದ್ದಾರೆ. ಹಸಿರು ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರು ಮಂದಿಯೂ ಇದರಲ್ಲಿ ಸೇರಿದ್ದಾರೆ. ಇದರಿಂದಾಗಿ ಶುಶ್ರೂಷಕರ ಕೊರತೆ ಮತ್ತಷ್ಟು ಬಿಗಡಾಯಿಸಿದೆ. ಗುತ್ತಿಗೆ ಆಧಾರದಲ್ಲಿ ನೇಮಕವಾದವರಲ್ಲೂ ಕೆಲವರು ಕೆಲಸ ತೊರೆದಿದ್ದಾರೆ.

***

ಇರುವ ಶುಶ್ರೂಷಕರಲ್ಲಿಯೇ ಸಮಸ್ಯೆಯಾಗದಂತೆ ಕೋವಿಡ್ ಸೇವೆ ನೀಡಲಾಗುತ್ತಿದೆ. ಕ್ವಾರಂಟೈನ್‌ಗೆ ಕೂಡ ಯೋಜನೆ ರೂಪಿಸುತ್ತಿದ್ದೇವೆ.
-ಡಾ.ಸಿ.ಆರ್. ಜಯಂತಿ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT