ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣ ಶುಲ್ಕ ಪಾವತಿಸದಿದ್ದರೆ ‘ಫಲಿತಾಂಶ’ ಇಲ್ಲ!

Last Updated 18 ಮೇ 2021, 18:27 IST
ಅಕ್ಷರ ಗಾತ್ರ

ಬೆಂಗಳೂರು: 2020–21ನೇ ಶೈಕ್ಷಣಿಕ ಸಾಲಿನ ಶುಲ್ಕವನ್ನು ಸಂಪೂರ್ಣ ಪಾವತಿಸಿಲ್ಲ ಎಂಬ ಕಾರಣಕ್ಕೆ ನಗರದ ಹಲವು ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿದಿವೆ ಎಂದು ಆರೋಪಿಸಲಾಗಿದೆ. ‌ಕೆಲವು ಶಿಶುವಿಹಾರಗಳು ಕೂಡಾ ಮಕ್ಕಳ ಫಲಿತಾಂಶವನ್ನು ನೀಡಿಲ್ಲ ಎಂದು ಪೋಷಕರು ದೂರಿದ್ದಾರೆ.

‘ನಿಮ್ಮ ಮಗುವಿನ ಯುಕೆಜಿ ಶುಲ್ಕವನ್ನು ಸಂಪೂರ್ಣ ಪಾವತಿಸದಿದ್ದರೆಮುಂದಿನ ತರಗತಿಗೆ ಬಡ್ತಿ ನೀಡುವುದಿಲ್ಲ’ ಎಂದು ವೈಟ್‌ ಫೀಲ್ಡ್‌ನಲ್ಲಿರುವ ಪ್ರತಿಷ್ಠಿತ ಶಾಲೆಯೊಂದು ಪೋಷಕರಿಗೆ ವಾಟ್ಸ್ಆ್ಯಪ್‌ ಸಂದೇಶ ಕಳುಹಿಸಿದೆ.

‘ರಾಜ್ಯ ಸರ್ಕಾರದ ನಿರ್ದೇಶನದಂತೆ ಒಟ್ಟು ಶುಲ್ಕದ ಶೇ 70ರಷ್ಟನ್ನು ನಾನು ಪಾವತಿಸಿದ್ದೆ. ಆದರೆ, ಈಗ, ನಿಮ್ಮ ಮಗುವಿಗೆ ಮುಂದಿನ ತರಗತಿಗೆ ಬಡ್ತಿನೀಡಬೇಕಿದ್ದರೆ ಪೂರ್ಣ ಶುಲ್ಕ ಪಾವತಿಸಬೇಕು ಎಂದು ಶಾಲೆಯವರು ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ವರ್ಗಾವಣೆ ಪ್ರಮಾಣಪತ್ರ ಕೂಡಾ ಕೊಡುತ್ತಿಲ್ಲ’ ಎಂದು ಪೋಷಕರೊಬ್ಬರು ದೂರಿದ್ದಾರೆ.

‘2020–21ನೇ ಶೈಕ್ಷಣಿಕ ಸಾಲಿನ ಫಲಿತಾಂಶ ಬುಧವಾರ (ಮೇ 19) ಪ್ರಕಟವಾಗಲಿದೆ. ಶುಲ್ಕ ಪಾವತಿಸಿದ ವಿದ್ಯಾರ್ಥಿಗಳ ಫಲಿತಾಂಶವನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಕಳುಹಿಸಲಾಗುವುದು. ಶುಲ್ಕ ಬಾಕಿ ಉಳಿಸಿಕೊಂಡವರು ಹಣವನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡಬೇಕು’ ಎಂದು ಶಾಲೆಯಿಂದ ಪೋಷಕರೊಬ್ಬರಿಗೆ ಮೊಬೈಲ್‌ ಸಂದೇಶ ಬಂದಿದೆ.

‘ಶುಲ್ಕ ಸಂಬಂಧಿಸಿದ ದೂರುಗಳ ಪರಿಶೀಲನೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ರಚಿಸಿದ ಸಮಿತಿ, ಇಂಥ ಶಾಲೆಗಳ ಮೇಲೆ ಕ್ರಮ ತೆಗೆದುಕೊಳ್ಳಲು ತಯಾರಿಲ್ಲ. ಯಾಕೆಂದರೆ, ಶೇ 70 ಶುಲ್ಕ ಸಂಗ್ರಹಿಸಬೇಕೆಂದು ಸರ್ಕಾರ ಹೊರಡಿಸಿರುವ ಆದೇಶ ವಿರುದ್ಧದ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ’ ಎಂದೂ ಪೋಷಕರು ಹೇಳಿದ್ದಾರೆ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಶುಲ್ಕ ಗೊಂದಲ: ಶಾಲೆಗಳಷ್ಟೆ ಅಲ್ಲದೆ, ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳೂ ಶುಲ್ಕ ಸಮಸ್ಯೆ ಎದುರಿಸುತ್ತಿದ್ದಾರೆ. ಶುಲ್ಕ ಪಾವತಿಸದ ಕಾರಣಕ್ಕೆ ಕೆಲವು ಪಾರ್ಮಸಿ ಕಾಲೇಜುಗಳು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಯನ್ನೇ ಸ್ಥಗಿತಗೊಳಿಸಿದ್ದು, ಕೆಲವರು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮನೋಹರ್‌ ನೇತೃತ್ವದ ಪ್ರವೇಶಾತಿ ಮೇಲುಸ್ತುವಾರಿ ಸಮಿತಿಗೆ ದೂರು ನೀಡಿದ್ದಾರೆ. ‘ಈ ಸಮಿತಿ ನೋಟಿಸ್‌ ನೀಡಿದ್ದರೂ ಕಾಲೇಜುಗಳು ಆನ್‌ಲೈನ್‌ ತರಗತಿ ಸ್ಥಗಿತಗೊಳಿಸಿದೆ’ ಎಂದು ಆಚಾರ್ಯ ಮತ್ತು ಬಿಎಂ ರೆಡ್ಡಿ ಕಾಲೇಜ್‌ ಆಫ್‌ ಪಾರ್ಮಸಿಯಲ್ಲಿ ಕಲಿಯುವ ವಿದ್ಯಾರ್ಥಿಯ ಪೋಷಕರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT