ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಹಾಸಿಗೆಗೆ ‘ಪ್ರಭಾವಿ’ಗಳ ಕಾಟ !

ಸೌಮ್ಯ ಲಕ್ಷಣಗಳು ಕಾಣಿಸಿಕೊಂಡರೂ ಪ್ರಭಾವ ಬಳಸಿ ಕೋವಿಡ್‌ ಆಸ್ಪತ್ರೆಗೆ ದಾಖಲು
Last Updated 21 ಏಪ್ರಿಲ್ 2021, 19:47 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಆದರೆ, ಸೌಮ್ಯ ಸ್ವಭಾವದ ಲಕ್ಷಣಗಳು ಕಾಣಿಸಿಕೊಂಡರೂ ‘ಪ್ರಭಾವಿ’ಗಳ ಪರಿಚಯ ಬಳಸಿಕೊಂಡು ಕೋವಿಡ್‌ ಆಸ್ಪತ್ರೆಗೆ ದಾಖಲಾಗುತ್ತಿರುವವ ಸಂಖ್ಯೆ ಹೆಚ್ಚಾಗುತ್ತಿದೆ. ಹಾಸಿಗೆಗಳ ಕೊರತೆ ಉಂಟಾಗಲು ಇದೂ ಕಾರಣ ಎನ್ನುತ್ತಾರೆ ಅಧಿಕಾರಿಗಳು.

‘ಸಣ್ಣದಾಗಿ ಕೆಮ್ಮು, ನೆಗಡಿ ಕಾಣಿಸಿಕೊಂಡರೂ ತಮಗಿರುವ ‘ಪ್ರಭಾವ’ ಬಳಸಿಕೊಂಡು ಅನೇಕರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಮುಂಜಾಗ್ರತೆಯ ನೆಪದಲ್ಲಿ ಆಸ್ಪತ್ರೆಗಳಲ್ಲಿ ಬಂದು ಮಲಗುತ್ತಿದ್ದಾರೆ. ತೀರಾ ಅಗತ್ಯವಿರುವ, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಇದರಿಂದ ತೊಂದರೆಯಾಗುತ್ತಿದೆ. ಹಾಸಿಗೆಗಳ ಕೃತಕ ಅಭಾವ ಸೃಷ್ಟಿಗೂ ಇದು ಕಾರಣವಾಗುತ್ತಿದೆ’ ಎಂದು ಹೆಸರು ಬಹಿರಂಗ ಪಡಿಸದ ಐಎಎಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವೆಂಟಿಲೇಟರ್‌ ಮತ್ತು ವೈದ್ಯಕೀಯ ಆಮ್ಲಜನಕ ವ್ಯವಸ್ಥೆ ಹೊಂದಿರುವ ಹಾಸಿಗೆಗಳಿಗೆ ಅಗತ್ಯ ತುಂಬಾ ಇದೆ. ಆದರೆ, ಹೋಂ ಐಸೋಲೇಷನ್‌ನಲ್ಲಿ ಇದ್ದುಕೊಂಡು ಗುಣಮುಖರಾಗುವ ಸಾಧ್ಯತೆ ಇರುವವರೂ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ’ ಎಂದೂ ಅವರು ಹೇಳಿದರು.

ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚು:

‘ಪ್ರಭಾವ ಬಳಸಿ ದಾಖಲಾಗುತ್ತಿರುವವರ ಸಂಖ್ಯೆ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು. ತಾವೇ ಬಯಸಿ ಆಸ್ಪತ್ರೆಗೆ ದಾಖಲಾಗುವುದರಿಂದ ಶುಲ್ಕ ಎಷ್ಟೇ ಆದರೂ ಇಂತಹ ರೋಗಿಗಳು ಚಿಂತೆ ಮಾಡುವುದಿಲ್ಲ. ಪ್ರಭಾವ ಬಳಸುವವರು ಆರ್ಥಿಕವಾಗಿಯೂ ಸಬಲರಾಗಿರುವ ಸಾಧ್ಯತೆ ಇರುವುದರಿಂದ ಖಾಸಗಿ ಆಸ್ಪತ್ರೆಗಳು ಇಂಥವರನ್ನು ದಾಖಲು ಮಾಡಿಕೊಳ್ಳಲು ಆದ್ಯತೆ ನೀಡುತ್ತವೆ’ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.

‘ಖಾಸಗಿ ಆಸ್ಪತ್ರೆಗಳಲ್ಲಿ ಶೇ 50ರಷ್ಟು ಹಾಸಿಗೆಗಳನ್ನು ಕೋವಿಡ್‌ ರೋಗಿಗಳಿಗೆ ನೀಡಬೇಕು ಎಂದು ಸರ್ಕಾರ ಆದೇಶಿಸಿದೆ. ಈ ಮೀಸಲು ಪ್ರಮಾಣದಲ್ಲಿ ಬಹುತೇಕರು ಹೀಗೆ ಪ್ರಭಾವ ಬಳಸಿ ದಾಖಲಾದವರೇ ಇದ್ದಾರೆ’ ಎಂದೂ ಅವರು ಹೇಳಿದರು.

‘ಸರ್ಕಾರದ ಕೋಟಾದಡಿ ದಾಖಲು ಮಾಡಿಕೊಂಡ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರ ನಂತರದಲ್ಲಿ ಪಾವತಿಸುತ್ತದೆ. ಅಂದರೆ, ಚಿಕಿತ್ಸೆ ನೀಡಿದ ನಂತರ ಹಣಕ್ಕಾಗಿ ಸರ್ಕಾರದ ಕಚೇರಿಗಳಿಗೆ ಅಲೆಯಬೇಕು. ಇಂತಹ ರೋಗಿಗಳನ್ನು ದಾಖಲಿಸಿಕೊಂಡರೆ ಮೀಸಲು ನಿಯಮ ಪಾಲಿಸಿದಂತೆಯೂ ಆಗುತ್ತದೆ, ಸರ್ಕಾರಿ ಕಚೇರಿಗಳಿಗೆ ಅಲೆಯುವುದೂ ತಪ್ಪುತ್ತದೆ ಎಂಬ ಯೋಚನೆಯಲ್ಲಿ ಖಾಸಗಿ ಆಸ್ಪತ್ರೆಗಳು ಈ ರೀತಿ ಮಾಡುತ್ತಿವೆ’ ಎಂದು ಅವರು ವಿವರಿಸಿದರು.

‘ಆಸ್ಪತ್ರೆಗೆ ದಾಖಲಿಸುವ ಚೌಚಿತ್ಯ ಪರಿಶೀಲನೆ ಅಗತ್ಯ’

‘ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಅಗತ್ಯ ಇದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸುವ ವ್ಯವಸ್ಥೆ ತರಬೇಕು. ಪರಿಣಿತ ವೈದ್ಯರ ತಂಡವೊಂದನ್ನು ರಚಿಸಿ, ಅದರ ಮೂಲಕ ಈ ಕಾರ್ಯ ಮಾಡಬೇಕು’ ಎಂಬ ಸಲಹೆಯನ್ನು ತಜ್ಞರು ನೀಡುತ್ತಾರೆ.

‘ಸೋಂಕಿತರಾದವರನ್ನೆಲ್ಲ ಆಸ್ತತ್ರೆಗೆ ದಾಖಲು ಮಾಡಿಕೊಳ್ಳುತ್ತಿರುವುದರಿಂದ ತೊಂದರೆಯಾಗುತ್ತಿದೆ. ಅನ್ಯರೋಗದಿಂದ ಬಳಲುತ್ತಿರುವವರಿಗೆ ಕೋವಿಡ್‌ ದೃಢಪಟ್ಟಿದ್ದರೆ, ಉಸಿರಾಟಕ್ಕೆ ತೊಂದರೆಯಾಗಿದ್ದರೆ ಅಂಥವರನ್ನು ಮಾತ್ರ ದಾಖಲು ಮಾಡಿಕೊಳ್ಳುವಂತಾದರೆ ಹಾಸಿಗೆ ಸಮಸ್ಯೆ ಶೇ 50ರಷ್ಟು ಕಡಿಮೆ ಆಗುತ್ತದೆ’ ಎಂದೂ ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT