ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಬೆಂಗಳೂರಿನಲ್ಲಿ ಹತ್ತೇ ದಿನಗಳಲ್ಲಿ ಹತ್ತು ಪಟ್ಟು ಹೆಚ್ಚಳ

ಸೋಂಕಿನಿಂದ ಸಾಯುವವರ ಪ್ರಮಾಣ ಶೇ 0.05ಕ್ಕೆ ಇಳಿಕೆ: ಶೇ 10ರ ಗಡಿ ದಾಟಿದ ಸೋಂಕು ಪತ್ತೆ ದರ
Last Updated 10 ಜನವರಿ 2022, 12:39 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಹತ್ತೇ ದಿನಗಳಲ್ಲಿ ಕೋವಿಡ್‌ ಸೋಂಕು ಹರಡುವಿಕೆ ಪ್ರಮಾಣ ಹತ್ತು ಪಟ್ಟು ಹೆಚ್ಚಳ ಕಂಡಿದೆ. ಬಿಬಿಎಂಪಿಯು ಕೋವಿಡ್‌ ವಾರ್‌ ರೂಂ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಭಾನುವಾರ ಒಂದೇ ದಿನ 9,020 ಮಂದಿಯಲ್ಲಿ ಕೋವಿಡ್‌ ದೃಢಪಟ್ಟಿದ್ದು, ಸೋಂಕು ಪತ್ತೆ ದರ ಶೇ 10.61ಕ್ಕೆ ಹೆಚ್ಚಳವಾಗಿದೆ.

ಆದರೆ, ಈ ಸೋಂಕಿನಿಂದ ಸತ್ತವರ ಪ್ರಮಾಣ 2021ರ ಕೊನೆಯ ವಾರದ ಸರಾಸರಿಗೆ (ಶೇ 77) ಹೋಲಿಸಿದರೆ ಈಗ ಶೇ 0.05ಕ್ಕೆ ಇಳಿಕೆ ಕಂಡಿದೆ. 2021ರ ಡಿ. 31ರಂದು 810 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದವು. ಆಗ ನಗರದಲ್ಲಿ ಸೋಂಕು ಪತ್ತೆ ದರದ ವಾರದ ಸರಾಸರಿ 0.88 ಮಾತ್ರ ಇತ್ತು. ಈಗ ಈ ಸರಾಸರಿಯು ಶೇ 6.41ರಷ್ಟಿದೆ.

ನಗರದ ಮಹದೇವಪುರ ವಲಯದ ಬೆಳ್ಳಂದೂರು ವಾರ್ಡ್‌, ಹಗದೂರು ವಾರ್ಡ್‌ ಬೊಮ್ಮನಹಳ್ಳಿ ವಲಯದ ಬೇಗೂರು ವಾರ್ಡ್‌ಗಳಲ್ಲಿ ನಿತ್ಯ ಸರಾಸರಿ 100ಕ್ಕೂ ಅಧಿಕ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿವೆ. ಹೊಸ ತಿಪ್ಪಸಂದ್ರ, ದೊಡ್ಡನೆಕ್ಕುಂದಿ, ಹಗದೂರು, ವರ್ತೂರು, ಎಚ್‌ಎಸ್‌ಆರ್‌ ಬಡಾವಣೆ, ಬೆಳ್ಳಂದೂರು, ಬೇಗೂರು ವಾರ್ಡ್‌ಗಳಲ್ಲಿ 500ಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ. ನಗರದಲ್ಲಿ ಕಂಟೈನ್‌ಮೆಂಟ್‌ ವಲಯಗಳ ಸಂಖ್ಯೆಯನ್ನು 382ಕ್ಕೆ ಹೆಚ್ಚಿಸಲಾಗಿದೆ.

ಅಂತರರಾಷ್ಟ್ರೀಯ ಪ್ರಯಾಣಕ್ಕೆ ನಿಯಂತ್ರಣ ಕ್ರಮಗಳನ್ನು ಬಿಗುಗೊಳಿಸಿದ ಬಳಿಕ ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ನಗರಕ್ಕೆ ಬರುವ ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ. ಆದರೆ, ಅವರಲ್ಲಿ ಸೋಂಕು ಪತ್ತೆ ಪ್ರಮಾಣ ಹೆಚ್ಚಳವಾಗಿದೆ. ವಾರದ ಹಿಂದೆ ಸಾವಿರಕ್ಕೂ ಅಧಿಕ ಪ್ರಯಾಣಿಕರು ನಗರಕ್ಕೆ ಬಂದಾಗಲೂ ಅವರಲ್ಲಿ 10ರಿಂದ 15 ಮಂದಿಗಷ್ಟೇ ಕೋವಿಡ್‌ ಸೊಂಕು ದೃಢಪಟ್ಟಿತ್ತು. ಜ. 4ರಂದು 995 ಮಂದಿ ಅಂತರರಾಷ್ಟ್ರೀಯ ಪ್ರಯಾಣಿಕರು ನಗರಕ್ಕೆ ಬಂದಿದ್ದು, ಅವರಲ್ಲಿ 10 ಮಂದಿಗೆ ಸೊಂಕು ಇತ್ತು. ಜ. 5ರಂದು ಬಂದಿದ್ದ 1,222 ಅಂತರರಾಷ್ಟ್ರೀಯ ಪ್ರಯಾಣಿಕರಲ್ಲಿ 14 ಮಂದಿ ಸೋಂಕು ಹೊಂದಿರುವುದು ದೃಢಪಟ್ಟಿತ್ತು. ಶನಿವಾರ 94 ಪ್ರಯಾಣಿಕರಷ್ಟೇ ಬಂದಿದ್ದರು. ಅವರಲ್ಲಿ ಐವರು ಸೋಂಕು ಹೊಂದಿರುವುದು ಪತ್ತೆಯಾಗಿತ್ತು. ಶುಕ್ರವಾರ 353 ಮಂದಿ ವಿಮಾನನಿಲ್ದಾಣದಲ್ಲಿ ಬಂದಿಳಿದಿದ್ದು, ಅವರಲ್ಲಿ ಏಳು ಮಂದಿ ಸೋಂಕು ಹೊಂದಿದ್ದರು.

ವೈದ್ಯಕೀಯ ಮೂಲಸೌಕರ್ಯ ಹೆಚ್ಚಳಕ್ಕೆ ಪ್ರಧಾನಿ ಮೋದಿ ಕರೆ
ನವದೆಹಲಿ (ಪಿಟಿಐ):ದೇಶದಲ್ಲಿ ಹೆಚ್ಚಳವಾಗುತ್ತಿರುವ ಕೋವಿಡ್‌ ಪ್ರಕರಣಗಳ ಪರಿಣಾಮಕಾರಿ ನಿರ್ವಹಣೆಗಾಗಿ ಜಿಲ್ಲಾ ಮಟ್ಟದಲ್ಲಿ ವೈದ್ಯಕೀಯ ಮೂಲಸೌಕರ್ಯವನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿರಾಜ್ಯಗಳಿಗೆ ಕರೆ ನೀಡಿದ್ದಾರೆ. ಜತೆಗೆ 15–18 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನವನ್ನು ಯುದ್ಧೋಪಾದಿಯಲ್ಲಿ ನಡೆಸಲು ಅವರು ಸೂಚಿಸಿದ್ದಾರೆ.

ದೇಶದಲ್ಲಿ ಕೋವಿಡ್‌ ಸ್ಥಿತಿ ಕುರಿತು ರಾಜ್ಯಗಳ ಮುಖ್ಯಮಂತ್ರಿಗಳ ಜತೆ ನಡೆದ ಸಭೆಯಲ್ಲಿ ಪ್ರಧಾನಿ ಈ ಮಾತು ಹೇಳಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯದ ಪ್ರಕಟಣೆ ಹೇಳಿದೆ.

ಕೊರೊನಾ ವೈರಾಣುವಿನ ರೂಪಾಂತರ ತಳಿಗಳ ಬಗ್ಗೆ ಸಂಶೋಧನೆಗಳು ಮುಂದುವರಿಯಬೇಕು. ಲಸಿಕೆ ಅಭಿವೃದ್ಧಿಗೆ ಒತ್ತು ನೀಡಬೇಕು. ವೈರಾಣು ಸಂರಚನೆ ವಿಶ್ಲೇಷಣೆಗೆ ಆದ್ಯತೆ ನೀಡಬೇಕು. ಕೋವಿಡ್‌ ಹರಡುವುದನ್ನು ತಡೆಯಲು ಎಲ್ಲರೂ ತಪ್ಪದೇ ಮಾಸ್ಕ್‌ ಧರಿಸಬೇಕು ಎಂದು ಮೋದಿ ಕರೆ ನೀಡಿದ್ದಾರೆ ಎಂದು ಪ್ರಕಟಣೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT