ಬುಧವಾರ, ಜೂನ್ 23, 2021
22 °C
ಯಶವಂತಪುರದಲ್ಲಿ ಹೆಚ್ಚುವರಿ ಕಾಲ್ ಸೆಂಟರ್‌ ಆರಂಭ

ಕೋವಿಡ್‌: 1912 ಸಹಾಯವಾಣಿ ಬಲವರ್ಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಹಂಚಿಕೆ ಮಾಡಲು ಬಿಬಿಎಂಪಿಯ ಸಹಾಯವಾಣಿಯನ್ನು ( 1912) ಬಲವರ್ಧನೆ ಮಾಡಲಾಗುತ್ತಿದೆ. ಹೆಚ್ಚುವರಿ ಕಾಲ್ ಸೆಂಟರ್‌ಗಳನ್ನು ಸ್ಥಾಪಿಸಿ ಅವುಗಳನ್ನೂ ಈ ಸಹಾಯವಾಣಿಗೆ ಜೋಡಿಸಲಾಗುತ್ತಿದೆ.

ಯಶವಂತಪುರದಲ್ಲಿ ಬಿಬಿಎಂಪಿ ವತಿಯಿಂದ ಸ್ಥಾಪಿಸಿರುವ ಸಹಾಯವಾಣಿಯ (1912) ಹೆಚ್ಚುವರಿ ಕೇಂದ್ರವನ್ನು ಸಚಿವ ಅರವಿಂದ ಲಿಂಬಾವಳಿ ಶುಕ್ರವಾರ ಉದ್ಘಾಟಿಸಿದರು.

ಈ ಹಿಂದೆ 1912 ಸಹಾಯವಾಣಿ 60 ಸಂಪರ್ಕ ಮಾರ್ಗಗಳನ್ನು ಹೊಂದಿತ್ತು. ಈಗ ಅದಕ್ಕೆ ಹೆಚ್ಚುವರಿಯಾಗಿ 70 ಮಾರ್ಗಗಳನ್ನು ಸೇರಿಸಲಾಗಿದೆ. ಈವರೆಗೂ 1912 ಸಹಾಯವಾಣಿಗೆ ಕರೆ ಮಾಡಿದಾಗ ಸಂಪರ್ಕ ಪಡೆಯಲು ಐದಾರು ನಿಮಿಷ ಕಾಯಬೇಕಾಗುತ್ತಿತ್ತು. ಆದರೆ, ಈಗ ಹೆಚ್ಚುವರಿ ಸಂಪರ್ಕ ಮಾರ್ಗಗಳನ್ನು ಸೇರ್ಪಡೆಗೊಳಿಸಿರುವುದರಿಂದ ಕರೆ ಮಾಡಿದ ಕೂಡಲೇ ಸೇವೆ ಲಭ್ಯವಾಗಲಿದೆ. 10 ವೈದ್ಯರು ಹಾಗೂ 130 ಸಿಬ್ಬಂದಿ ದಿನದ 24 ಗಂಟೆಗಳ ಕಾಲ ಮೂರು ಪಾಳಿಗಳಲ್ಲಿ ಇಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಕೋವಿಡ್‌ ರೋಗಿಗಳು ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆಯೇ ಹೊಸ ರೋಗಿಗಳನ್ನು ದಾಖಲಿಸಲು ಇದು ಅನುಕೂಲ ಕಲ್ಪಿಸಲಿದೆ. ಅಲ್ಲದೇ, ಹಾಸಿಗೆ ಲಭ್ಯತೆಯ ನಿಖರ ಮಾಹಿತಿ, ಹಾಸಿಗೆಗಳ ಹಂಚಿಕೆಯಾಗಿರುವ ಬಗ್ಗೆ ವಾಸ್ತವ ವರದಿ ಪಡೆಯಲೂ ನೆರವಾಗುತ್ತದೆ. 

‘ಈ ಕಾಲ್ ಸೆಂಟರ್‌ನಲ್ಲಿ ವೈದರೇ ಖುದ್ದಾಗಿ ರೋಗಿಗಳ ಅಥವಾ ಅವರ ಬಂಧುಗಳ ಜೊತೆ ಮಾತನಾಡಿ ಅಗತ್ಯ ವೈದ್ಯಕೀಯ ಸಲಹೆ ನೀಡಲಿದ್ದಾರೆ. ತುರ್ತು ಚಿಕಿತ್ಸೆ ಅಗತ್ಯವಿರುವ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ದಾಖಲಾಗಲು ನೇರವಾಗಲಿದ್ದಾರೆ. ಇದಕ್ಕೆ ಪೂರಕ ವ್ಯವಸ್ಥೆಗಳನ್ನು ಇಲ್ಲಿ ಕಲ್ಪಿಸಲಾಗಿದೆ. ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯತೆಯ ವಾಸ್ತವ ಸ್ಥಿತಿ ಪರಿಶೀಲನೆಗೂ ನೆರವಾಗಲಿದೆ. ಇದು ಚಿಕಿತ್ಸಾ ನಿರ್ಧಾರ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ’ ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

‘ಈ ಕಾಲ್ ಸೆಂಟರ್‌ ಬಿಬಿಎಂಪಿಯ ಇತರ ವಲಯಗಳದ್ದೂ ಸೇರಿದಂತೆ ಒಟ್ಟು ಒಂಬತ್ತು ವಾರ್ ರೂಮ್‌ಗಳ ಮೇಲಿನ ಒತ್ತಡ ಕಡಿಮೆ ಮಾಡಲಿದೆ. ಇದರಿಂದ ವಾರ್ ರೂಮ್ ಮತ್ತು ಕಾಲ್ ಸೆಂಟರ್ ಗಳ ಕಾರ್ಯನಿರ್ವಹಣೆ ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯತೆಯ ವಾಸ್ತವ ಸ್ಥಿತಿಗತಿಗಳನ್ನು ತಿಳಿಯಲು ಈ ಕಾಲ್ ಸೆಂಟರ್ ಮೂಲಕ ಕರೆ ಮಾಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು