ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಗೆದ್ದವರ ಕಥೆ | ದೇಹ, ಮನಸ್ಸನ್ನು ಪರೀಕ್ಷೆಗೊಡ್ಡುವ ಕೋವಿಡ್: ಚಂದ್ರಕಾಂತ

Last Updated 14 ಮೇ 2021, 3:27 IST
ಅಕ್ಷರ ಗಾತ್ರ

ಬೆಂಗಳೂರು: ‘ಎರಡು ವಾರಗಳ ಅತಂತ್ರ, ಅಸಹಾಯಕ, ಅವಲಂಬನೆಯ ಬದುಕಿನಿಂದ ಹೊರಬಂದಾಗ ಜಗತ್ತು ಹೊಸದಾಗಿ ಕಾಣುವ ಪರಿ ನಿಜಕ್ಕೂ ಅನನ್ಯ. ಕೋವಿಡ್ ಕಾಯಿಲೆಯು ದೇಹಕ್ಕಿಂತ ಮನಸ್ಸನ್ನು ಹೆಚ್ಚು ಕಾಡುತ್ತದೆ. ಹಾಗಾಗಿ, ಇದು ಮನುಷ್ಯನನ್ನು ಮಾನಸಿಕವಾಗಿ ಗಟ್ಟಿಗೊಳಿಸುವ ಪ್ರಕ್ರಿಯೆಯೂ ಹೌದು.’

‘ಕಳೆದ ಏ.17ರಂದು ಮಗಳು ನಿಹಾರಿಕಾ ಮತ್ತು ಅಳಿಯ ಶ್ರೇಯಸ್‌ಗೆ ಜ್ವರ-ನೆಗಡಿ ಕಾಣಿಸಿಕೊಂಡಿತು. ಅವರಿಬ್ಬರ ಜತೆಗೆ ನಾನು ಮತ್ತು ಮಗ ಅನಿಕೇತನ್ ಕೂಡ ಯಲಚೇನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಆರ್‌ಟಿ–ಪಿಸಿಆರ್ ಪರೀಕ್ಷೆ ಮಾಡಿಸಿಕೊಂಡೆವು. ಮೂರು ದಿನಗಳ ಬಳಿಕ ಸೋಂಕಿತರಾಗಿರುವ ಬಗ್ಗೆ ವರದಿ ಬಂದಿತು. ಆ ಕ್ಷಣ ನನ್ನ ಧೈರ್ಯ, ಸ್ಥಿತಪ್ರಜ್ಞೆ ಮರೆಯಾಗಿ ತಲ್ಲಣಿಸಿದ್ದು ನಿಜ. ಹತ್ತು ನಿಮಿಷ ಯಾರಿಗೂ ವಿಷಯ ಬಿಟ್ಟುಕೊಡದೆ ಒಬ್ಬನೇ ಮೌನವಾಗಿ ಮುಂದಿನ ಕ್ರಮಗಳ ಬಗ್ಗೆ ಯೋಜಿಸಿದೆ. ಮಡದಿ ಲತಾರಾಣಿಯ ಪರೀಕ್ಷೆ ಮಾಡಿಸಿರಲಿಲ್ಲ.’

‘ಎಲ್ಲರೂ ಆಸ್ಪತ್ರೆ ಅಥವಾ ಕೋವಿಡ್ ಆರೈಕೆ ಕೇಂದ್ರ ಸೇರಬೇಕು ಅಂದುಕೊಂಡೆ. ಆದರೆ, ಮನೆಯಲ್ಲೇ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯಲು ಸೌಲಭ್ಯವಿತ್ತು. ಹೀಗಾಗಿ, ಆಸ್ಪತ್ರೆಗೆ ಹೋದರೆ ತುರ್ತಾಗಿ ಚಿಕಿತ್ಸೆ ಅಗತ್ಯ ಇರುವವರಿಗೆ ಹಾಸಿಗೆಯ ಸಮಸ್ಯೆಯಾಗಲಿದೆ ಎಂದ ಯೋಚಿಸಿ, ನಾನು, ಮಗಳು ಮತ್ತು ಮಗ ಮನೆ ಆರೈಕೆಗೆ ಒಳಗಾದೆವು. ಮರುದಿನ ಪತ್ನಿಯ ಕೋವಿಡ್ ಪರೀಕ್ಷೆ ನಡೆಯಿತು. ಸೋಂಕು ತಗುಲಿಲ್ಲ ಎನ್ನುವುದು ದೃಢಪಟ್ಟಿತು. ಐದು ದಿನ ಕಳೆದರೂ ಅಳಿಯನ ವರದಿ ಬರಲಿಲ್ಲ. ಕೊನೆಗೆ ನಮ್ಮ ವಲಯದ ಉಸ್ತುವಾರಿ ಸಚಿವರಾದ ಸುರೇಶ್ ಕುಮಾರ್ ಅವರ ನೆರವಿನಿಂದ ಅಳಿಯನ ಪಾಸಿಟಿವ್ ವರದಿ ಕೈಸೇರಿತು.’

‘ಮನೆ ಆರೈಕೆ ವೇಳೆ ಮನಸ್ಸನ್ನು ಏಕಾಗ್ರವಾಗಿರಿಸುವುದು ಕಷ್ಟವಾಯಿತು. ಸುತ್ತಲಿನ ಸರಣಿ ಸಾವುಗಳು ತಲ್ಲಣಗೊಳಿಸುತ್ತಿದ್ದವು. ಈ ನಡುವೆ ವೃತ್ತಿಯ ಕರ್ತವ್ಯ ನಿರ್ವಹಿಸುವ ಅನಿವಾರ್ಯತೆ ಮತ್ತಷ್ಟು ಒತ್ತಡಕ್ಕೆ ಒಳಪಡಿಸಿತು. ಜ್ವರ ಮತ್ತು ಆಮ್ಲಜನಕ ಮಾಪಕಗಳ ಬಗ್ಗೆಯೇ ಅಪನಂಬಿಕೆ ಉಂಟಾಗುತ್ತಿತ್ತು. ಬದುಕಿನ ಕವಲು ಹಾದಿಗಳಲ್ಲಿ ಸಂಪರ್ಕ ಕಡಿದುಹೋಗಿದ್ದ ಎಷ್ಟೋ ಹಳೆಯ ಸಂಗಾತಿಗಳು ಹಾರೈಸುವ ನೆಪದಲ್ಲಿ ಮತ್ತೆ ಹತ್ತಿರ ಬಂದರು. ನನಗೆ ವೈಯಕ್ತಿಕವಾಗಿ ಕೋವಿಡ್ ರೋಗದ ಬಹುದೊಡ್ಡ ಕೊಡುಗೆ ಇದು.’

‘ಯುದ್ಧ ಗೆದ್ದ ವಿಜಯೋತ್ಸಾಹದ ಬದಲು ಸೋಂಕು ನಿವಾರಿಸಿಕೊಂಡ ದೃಢತೆ ಮತ್ತು ಸ್ವವಿಶ್ವಾಸ ಇಮ್ಮಡಿಸಿಕೊಂಡ ವಿನಮ್ರತೆ ಉಳಿದಿದೆ’.

-ಚಂದ್ರಕಾಂತ ವಡ್ಡು, ಹಿರಿಯ ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT