ಗುರುವಾರ , ಡಿಸೆಂಬರ್ 1, 2022
27 °C
ಖಾಸಗಿ ಆಸ್ಪತ್ರೆಯಲ್ಲಿ 1.39 ಲಕ್ಷ ಕೋವಿಡ್ ಪೀಡಿತರಿಗೆ ವೈದ್ಯಕೀಯ ನೆರವು

ಹಾಸಿಗೆ ಸಮಸ್ಯೆ: ಸರ್ಕಾರಿ ಆಸ್ಪತ್ರೆಯಲ್ಲಿ ಸಿಗದ ಚಿಕಿತ್ಸೆ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯ ವೃದ್ಧಿಸಿ, ಸಾವಿರಾರು ಸಂಖ್ಯೆಯಲ್ಲಿ ಹಾಸಿಗೆಗಳನ್ನು ಮೀಸಲಿಟ್ಟಿರುವುದಾಗಿ ಹೇಳಿಕೊಂಡಿದ್ದ ಸರ್ಕಾರ, ಮೂರು ಅಲೆಗಳಲ್ಲಿ ರಾಜ್ಯದಲ್ಲಿ ಚಿಕಿತ್ಸೆ ನೀಡಲಾದ 2.88 ಲಕ್ಷ ಪ್ರಕರಣಗಳಲ್ಲಿ 1.39 ಲಕ್ಷ ಮಂದಿಗೆ ಖಾಸಗಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಒದಗಿಸಿದೆ.

ಈ ಪ್ರಕರಣಗಳಲ್ಲಿ ‘ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ’ ಯೋಜನೆಯಡಿ ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡ ಲಾಗಿದೆ. ಸರ್ಕಾರಿ ಆಸ್ಪತ್ರೆ ಗಳಲ್ಲಿ ತೀವ್ರ ನಿಗಾ ಘಟಕ ಹೊಂದಿದ (ಐಸಿಯು) ಹಾಸಿಗೆಗಳ ಕೊರತೆ, ವೆಂಟಿಲೇಟರ್ ಸಂಪರ್ಕ ಹೊಂದಿದ ಹಾಸಿಗೆಗಳ ಸಮಸ್ಯೆ ಸೇರಿ ವಿವಿಧ ಕಾರಣಗಳಿಂದ ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪೀಡಿತರನ್ನು ಶಿಫಾರಸು ಮಾಡಲಾಗಿದೆ. ಕೋವಿಡ್ ಕಾಣಿಸಿಕೊಂಡಾಗಿನಿಂದ 2022ರ ಜೂನ್ ಅಂತ್ಯಕ್ಕೆ 1.49 ಲಕ್ಷ ಮಂದಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಾಗಿದೆ.

ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದ 97,169 ಮಂದಿಯಲ್ಲಿ 70,755 ಮಂದಿಗೆ ಖಾಸಗಿ ಆಸ್ಪತ್ರೆಗಳಲ್ಲಿಯೇ ಶಿಫಾರಸು ಆಧಾರದಲ್ಲಿ ಚಿಕಿತ್ಸೆ ನೀಡಲಾಗಿದೆ. 20,414 ಮಂದಿಯನ್ನು ಮಾತ್ರ ಸರ್ಕಾರಿ ಆಸ್ಪತ್ರೆಗಳು ದಾಖಲಿಸಿಕೊಂಡು, ಚಿಕಿತ್ಸೆ ಒದಗಿಸಿವೆ. ಇದೇ ರೀತಿ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿಯೂ ಸರ್ಕಾರಿ ಆಸ್ಪತ್ರೆಗಳಿಗಿಂತ ಖಾಸಗಿ ಆಸ್ಪತ್ರೆಗಳಲ್ಲಿಯೇ ಅಧಿಕ ಮಂದಿಗೆ ಚಿಕಿತ್ಸೆ ಕಲ್ಪಿಸಲಾಗಿದೆ. 

ರಾಜ್ಯದಲ್ಲಿ 2020ರ ಮಾ.8ರಂದು ಮೊದಲ ಕೋವಿಡ್ ಪ್ರಕರಣ ವರದಿಯಾಗಿತ್ತು. ಬಳಿಕ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದ್ದರಿಂದ ಪ್ರಮುಖ ಸರ್ಕಾರಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್ ಚಿಕಿತ್ಸೆಗೆ ಹಾಸಿಗೆಗಳನ್ನು ನಿಗದಿಪಡಿಸಲಾಗಿತ್ತು. ಪ್ರಕರಣಗಳ ಸಂಖ್ಯೆ ಹೆಚ್ಚಳವಾದ ಬಳಿಕ ಬೆಂಗಳೂರಿನ ವಿಕ್ಟೋರಿಯಾ, ಬೌರಿಂಗ್ ಸೇರಿ ಕೆಲ ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿತ್ತು.

ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ಗಂಭೀರ ಸ್ವರೂಪ ಪಡೆದ ಬಳಿಕ, ಖಾಸಗಿ ಆಸ್ಪತ್ರೆಗಳಿಗೆ ದರ ನಿಗದಿಪಡಿಸಿ, ಶೇ 50 ರಷ್ಟು ಹಾಸಿಗೆಗಳನ್ನು ಶಿಫಾರಸು ಮಾಡುವ ರೋಗಿಗಳಿಗೆ ಮೀಸಲಿಡುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಕೋವಿಡ್ ಚಿಕಿತ್ಸೆಗೆ ಎರಡನೇ ಅಲೆಯಲ್ಲಿ 63,761 ಹಾಸಿಗೆಗಳನ್ನು ಮೀಸಲಿರಿಸಲಾಗಿತ್ತು. ಇಷ್ಟಾಗಿಯೂ ಎರಡೂ ಅಲೆ ಮುಗಿಯುವ ಹೊತ್ತಿಗೆ ರಾಜ್ಯದ 37 ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದರು.

‘ಕೋವಿಡ್ ಕಾಣಿಸಿಕೊಂಡ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ತ್ವರಿತ ಹಾಗೂ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವುದು ನಮ್ಮ ಆದ್ಯತೆಯಾಗಿತ್ತು. ಆದ್ದರಿಂದ ಖಾಸಗಿ ವ್ಯವಸ್ಥೆಯಡಿಯೂ ಹೆಚ್ಚಿನವರಿಗೆ ವೈದ್ಯಕೀಯ ಸೌಲಭ್ಯ ಒದಗಿಸಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. 

ಇಲಾಖೆ ಆಯುಕ್ತ ಡಿ. ರಂದೀಪ್ ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ಖಾಸಗಿ ನಿಯಂತ್ರಣದಲ್ಲಿದ್ದ ಹಾಸಿಗೆಗಳು
ಕೋವಿಡ್ ಮೂರನೇ ಅಲೆಯಲ್ಲಿ ಕೋವಿಡ್ ಚಿಕಿತ್ಸೆಗೆ ಸರ್ಕಾರ ಗೊತ್ತುಪಡಿಸಿದ 1.94 ಲಕ್ಷ ಹಾಸಿಗೆಗಳಲ್ಲಿ ಶೇ 73.71ರಷ್ಟು ಹಾಸಿಗೆಗಳು ಖಾಸಗಿಯವರ ನಿಯಂತ್ರಣದಲ್ಲಿಯೇ ಇದ್ದವು. 51,093 ಹಾಸಿಗೆಗಳು ಮಾತ್ರ ಸರ್ಕಾರಿ ವ್ಯವಸ್ಥೆಯಡಿಯಿತ್ತು. 1.43 ಲಕ್ಷ ಹಾಸಿಗೆಗಳು ಖಾಸಗಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳ ಅಡಿಯಲ್ಲಿ ಇದ್ದವು. ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಗಳಿಗೆ ಮೊದಲ ಮೂರು ಅಲೆಗಳಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ₹ 779.83 ಕೋಟಿ ಪಾವತಿಸಲಾಗಿದೆ.

*
ಐಸಿಯು ಚಿಕಿತ್ಸೆಗೆ ಸಂಬಂಧಿಸಿದಂತೆ ಶೇ 90ರಷ್ಟು ಪ್ರಕರಣಗಳನ್ನು ಖಾಸಗಿ ಆಸ್ಪತ್ರೆಗಳೇ ನಿರ್ವಹಿಸಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಎದುರಾದ್ದರಿಂದ ರೆಫರಲ್ ಆಧಾರ ಚಿಕಿತ್ಸೆ ನೀಡಿದ್ದೇವೆ.
-ಪ್ರಸನ್ನ ಎಚ್.ಎಂ., ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್‌ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು