ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಲಸಿಕೆ ಪಡೆಯಲು ಎಲ್ಲೆಲ್ಲೂ ಸಾಲು

Last Updated 13 ಮೇ 2021, 21:35 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಲಸಿಕೆ ಕೊರತೆ ಹೆಚ್ಚುತ್ತಿರುವ ಬೆನ್ನಲ್ಲೇ ನಗರದಲ್ಲಿ ಲಸಿಕೆ ಪಡೆಯಲು ಆಸ್ಪತ್ರೆಗಳಿಗೆ ಜನರು ಮುಗಿ ಬೀಳುವುದು ಹೆಚ್ಚುತ್ತಿದೆ. ಎಲ್ಲ ಲಸಿಕಾ ಕೇಂದ್ರಗಳ ಎದುರು ಜನರ ಸಾಲು ಗುರುವಾರವೂ ಮುಂದುವರಿದಿತ್ತು.

ಕೆ.ಸಿ. ಜನರಲ್ ಆಸ್ಪತ್ರೆ ಎದುರು ಬೆಳಿಗ್ಗೆಯಿಂದಲೂ ಜನರು ಸಾಲುಗಟ್ಟಿ ನಿಂತಿದ್ದರು. 18 ವರ್ಷ ಮೇಲ್ಪಟ್ಟವರು ಗುರುತಿನ ಚೀಟಿ ಹಿಡಿದು ಲಸಿಕೆ ಪಡೆಯಲು ಮುಂದಾಗಿದ್ದರು. ಹಿರಿಯ ನಾಗರಿಕರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.

ಮೈಕ್‌ನಲ್ಲಿ ಘೋಷಣೆ ಮಾಡಿ ಹಿರಿಯ ನಾಗರಿಕರನ್ನು ಒಳಕ್ಕೆ ಕರೆದು ಆಸ್ಪತ್ರೆ ಸಿಬ್ಬಂದಿ ಲಸಿಕೆ ವ್ಯವಸ್ಥೆ ಮಾಡಿದರು. ಉಳಿದವರು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ಲಸಿಕೆ ಪಡೆದರು.

‘ಕೋವಿಡ್‌ನಿಂದ ಪ್ರಾಣ ಉಳಿಸಿಕೊಳ್ಳಲು ಲಸಿಕೆ ಪಡೆಯುವುದು ಮುಖ್ಯ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಲಸಿಕೆ ನೀಡಲು ಸರಿಯಾದ ತಯಾರಿ ಮಾಡಿಕೊಂಡಿಲ್ಲ. ಲಸಿಕೆ ಪಡೆಯಲು ಬಂದು ಈ ನೂಕುನುಗ್ಗಲಿನಲ್ಲಿ ಸೋಂಕು ಅಂಟಿಸಿಕೊಂಡು ಹೋಗುವ ಅಪಾಯ ಇದೆ. ಸೋಂಕು ತಗುಲಿದರೆ ಚಿಕಿತ್ಸೆ ದೊರಕುವುದು ಖಾತ್ರಿ ಇಲ್ಲ. ಇಂತಹ ಸ್ಥಿತಿಯಲ್ಲಿ ಜನ ಏನು ಮಾಡಬೇಕು’ ಎಂದು ವಿದ್ಯಾಪೀಠ ವೃತ್ತದ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆಯಲು ಸಾಲಿನಲ್ಲಿ ನಿಂತಿದ್ದ ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.

‘ರಾಜಕಾರಣಿಗಳು ಮೊದಲ ಕಂತಿನಲ್ಲೇ ಲಸಿಕೆ ಹಾಕಿಸಿಕೊಂಡಿದ್ದಾರೆ. ಅವರಿಗೆ ಮತ ಹಾಕಿದವರಿಗೆ ಲಸಿಕೆ ವ್ಯವಸ್ಥೆ ಮಾಡದೆ ಬೀದಿಯಲ್ಲಿ ನಿಲ್ಲಿಸಿದ್ದಾರೆ. ಇದ್ಯಾವ ನ್ಯಾಯ’ ಎಂದು ಅವರು ಪ್ರಶ್ನಿಸಿದರು.

ಮಲ್ಲತಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಲಸಿಕೆಗಾಗಿ ಗುರುವಾರವೂ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಜಮಾಯಿಸಿದ್ದರು.

7 ಕಿಲೋ ಮೀಟರ್ ನಡೆದರೂ ಲಸಿಕೆ ಸಿಗಲಿಲ್ಲ

ಕೋವಿಡ್ ಲಸಿಕೆ ಪಡೆಯಲು 7 ಕಿಲೋ ಮೀಟರ್ ನಡೆದರೂ ಲಸಿಕೆ ಇಲ್ಲದೆ ವ್ಯಕ್ತಿಯೊಬ್ಬರು ವಾಪಸ್ ಹೋಗಬೇಕಾಯಿತು.

ಲಾಕ್‌ಡೌನ್ ಇರುವ ಕಾರಣ ಬೈಕ್‌ನಲ್ಲಿ ಹೋದರೆ ಪೊಲೀಸರು ಅಡ್ಡಗಟ್ಟುವ ಸಾಧ್ಯತೆ ಇರುವ ಕಾರಣ ನಡೆದುಕೊಂಡೇ ಯಲಹಂಕದ ಲಸಿಕಾ ಕೇಂದ್ರಕ್ಕೆ ಬಂದಿದ್ದರು. ಆದರೆ, ಕೋವ್ಯಾಕ್ಸಿನ್ ಲಸಿಕೆ ಇಲ್ಲ ಎಂದು ಹೇಳಿದ ಕಾರಣ ಅವರು ವಾಪಸ್ ಹೋಗಬೇಕಾಯಿತು.

‘ಲಸಿಕೆ ಅಭಾವ ಸೃಷ್ಟಿಸಿಕೊಂಡು ಸರ್ಕಾರ ಈ ರೀತಿಯ ಅವಾಂತರ ಸೃಷ್ಟಿಸುತ್ತಿದೆ. ಎರಡನೇ ಅಲೆಯಲ್ಲಿ ಸಾಕಷ್ಟು ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಮೂರನೇ ಅಲೆ ವೇಳೆಗೆ ಎಲ್ಲರಿಗೂ ಲಸಿಕೆ ಲಭ್ಯವಾಗದಿದ್ದರೆ ಮತ್ತಷ್ಟು ಜನರು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಲಸಿಕಾ ಕೇಂದ್ರದ ಮುಂದಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದರು.

7 ಕಿ.ಮೀ. ನಡೆದರೂ ಲಸಿಕೆ ಸಿಗಲಿಲ್ಲ: ಕೋವಿಡ್ ಲಸಿಕೆ ಪಡೆಯಲು 7 ಕಿಲೋ ಮೀಟರ್ ನಡೆದರೂ ಲಸಿಕೆ ಇಲ್ಲದೆ ವ್ಯಕ್ತಿಯೊಬ್ಬರು ವಾಪಸ್ ಹೋಗಬೇಕಾಯಿತು.

ಲಾಕ್‌ಡೌನ್ ಇರುವ ಕಾರಣ ಬೈಕ್‌ನಲ್ಲಿ ಹೋದರೆ ಪೊಲೀಸರು ಅಡ್ಡಗಟ್ಟುವ ಸಾಧ್ಯತೆ ಇರುವ ಕಾರಣ ನಡೆದುಕೊಂಡೇ ಯಲಹಂಕದ ಲಸಿಕಾ ಕೇಂದ್ರಕ್ಕೆ ಬಂದಿದ್ದರು. ಆದರೆ, ಕೋವ್ಯಾಕ್ಸಿನ್ ಲಸಿಕೆ ಇಲ್ಲ ಎಂದು ಹೇಳಿದ ಕಾರಣ ಅವರು ವಾಪಸ್ ಹೋಗಬೇಕಾಯಿತು.

‘ಲಸಿಕೆ ಅಭಾವ ಸೃಷ್ಟಿಸಿಕೊಂಡು ಸರ್ಕಾರ ಈ ರೀತಿಯ ಅವಾಂತರ ಸೃಷ್ಟಿಸುತ್ತಿದೆ. ಎರಡನೇ ಅಲೆಯಲ್ಲಿ ಸಾಕಷ್ಟು ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಮೂರನೇ ಅಲೆ ವೇಳೆಗೆ ಎಲ್ಲರಿಗೂ ಲಸಿಕೆ ಲಭ್ಯವಾಗದಿದ್ದರೆ ಮತ್ತಷ್ಟು ಜನರು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಲಸಿಕಾ ಕೇಂದ್ರದ ಮುಂದಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT