ಬುಧವಾರ, ಜುಲೈ 28, 2021
20 °C
ಭಯ ದೂರಮಾಡಿದ ಆಸ್ಪತ್ರೆಯ ಅನುಭವ ಹಂಚಿಕೊಂಡ ಚಿಕ್ಕಪೇಟೆಯ ವರ್ತಕ

ಕೊರೊನಾ: ಸೋಂಕು ಇರುವುದು ಒಂದೇ ದಿನದಲ್ಲಿ ಮರೆಯಿತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Coronavirus

ಬೆಂಗಳೂರು: ‘ಕೊರೊನಾ ಸೋಂಕಿತನಾಗಿದ್ದ ನಾನು ಕೇವಲ ಮೂರು ದಿನಗಳಲ್ಲಿಯೇ ಚೇತರಿಸಿಕೊಂಡು, 10 ದಿನಗಳ ಆಸ್ಪತ್ರೆ ವಾಸ ಮುಗಿಸಿ, ಈಗ ಮನೆಗೆ ಬಂದಿದ್ದೇನೆ. ನನಗೆ ಕೊರೊನಾ ಸೋಂಕು ತಗುಲಿತ್ತು ಎನ್ನುವುದನ್ನು ಈಗ ನಂಬಲೂ ಸಾಧ್ಯವಾಗುತ್ತಿಲ್ಲ. ಕೋವಿಡ್‌–19 ಕುರಿತ ಭಯ ಹಾಗೂ ತಪ್ಪುಕಲ್ಪನೆ ಕೋವಿಡ್‌ ಆರೈಕೆ ಆಸ್ಪತ್ರೆಗೆ ದಾಖಲಾದ ಮೊದಲ ದಿನವೇ ದೂರವಾಯಿತು’ ಎಂದು ಚಿಕ್ಕಪೇಟೆಯ 45 ವರ್ಷದ ನಿವಾಸಿಯೊಬ್ಬರು ವಿವರಿಸಿದರು. 

‘ನಾನು ವ್ಯಾಪಾರಸ್ಥ. ನಗರದ ಬೇರೆ ಬೇರೆ ಕಡೆಯಿಂದ, ಹೊರಗಡೆಯಿಂದ ಬರುವ ಹಲವರನ್ನು ನಿತ್ಯ ಭೇಟಿ ಮಾಡಬೇಕಾಗುತ್ತಿತ್ತು. ಹೀಗಾಗಿ ಯಾರಿಂದ ನನಗೆ ಸೋಂಕು ತಗುಲಿತು ಎನ್ನುವುದು ನಿಖರವಾಗಿ ಪತ್ತೆಯಾಗಿಲ್ಲ. ಕೆಮ್ಮು ಶುರುವಾದ ಬಳಿಕ ಜ್ವರದ ಲಕ್ಷಣಗಳು ಕಾಣಿಸಿಕೊಂಡವು.  ಖಾಸಗಿ ಆಸ್ಪ‍ತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದೆ. ಒಂದು ವೇಳೆ ನನಗೆ ಸೋಂಕು ತಗುಲಿದಲ್ಲಿ ಮನೆಯವರಿಗೆ ಹರಡಬಾರದು ಎಂಬ ಕಾರಣಕ್ಕೆ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದೆ. ಮೂರು ದಿನಗಳ ಬಳಿಕ ನನಗೆ ಸೋಂಕು ಇರುವುದು ದೃಢಪಟ್ಟಿತು. ಆಗ ಕುಟುಂಬದ ಸದಸ್ಯರು ಸಹಜವಾಗಿಯೇ ಆತಂಕಕ್ಕೆ ಒಳಗಾಗಿದ್ದರು’ ಎಂದು ತಿಳಿಸಿದರು. 

‘ಆಂಬುಲೆನ್ಸ್‌ನಲ್ಲಿ ಸಾಗುವಾಗ ನನ್ನಲ್ಲೂ ಭಯವಿತ್ತು. ಕೆ.ಸಿ.ಜನರಲ್ ಆಸ್ಪ‍ತ್ರೆಗೆ ದಾಖಲಿಸಿದರು. ಅಲ್ಲಿ ನನಗಿಂತ ಮೊದಲೇ ದಾಖಲಾಗಿದ್ದ ಸೋಂಕಿತರು ಪರಸ್ಪರ ಕುಶಲೋಪರಿ ವಿಚಾರಿಸುತ್ತಾ, ಹರಟೆ ಹೊಡೆಯುತ್ತಿದ್ದುದನ್ನು ಕಂಡು ಸ್ವಲ್ಪ ಧೈರ್ಯ ಬಂತು. ಯಾವುದೇ ಚುಚ್ಚುಮದ್ದು, ವಿಶೇಷ ಚಿಕಿತ್ಸೆ ನೀಡುತ್ತಿರಲಿಲ್ಲ. ಸಮಯಕ್ಕೆ ಸರಿಯಾಗಿ ಊಟ–ತಿಂಡಿ ಬರುತ್ತಿತ್ತು. ಹೀಗಾಗಿ ದಿನದ ಬಹುತೇಕ ಹೊತ್ತು ಹರಟೆ ಹೊಡೆಯುತ್ತಾ ಕಳೆಯುತ್ತಿದ್ದೆವು. ಅಲ್ಲಿರುವವರೊಂದಿಗೆ ಬೆರೆತ ಕಾರಣ ಸೋಂಕು ಇದೆ ಎಂಬುದು ಒಂದೇ ದಿನದಲ್ಲಿ ಮರೆತು ಹೋಗಿತ್ತು’ ಎಂದು ವಿವರಿಸಿದರು. 

‘ಕೊರೊನಾ ಬಗ್ಗೆ ಹೊರಗಡೆ ಅನಗತ್ಯ ಭಯದ ವಾತಾವರಣ ಸೃಷ್ಟಿಸಲಾಗಿದೆ. ಆಸ್ಪತ್ರೆಯಲ್ಲಿ ಎಂದೂ ನನಗೆ ಜೀವಕ್ಕೆ ಅಪಾಯವಿದೆ ಎಂದೆನಿಸಲಿಲ್ಲ. ವೈದ್ಯರು ಹಾಗೂ ಶುಶ್ರೂಷಕರು ಚೆನ್ನಾಗಿ ಆರೈಕೆ ಮಾಡಿದರು. ಪೊಂಗಲ್, ದೋಸೆ, ಇಡ್ಲಿ ಮುಂತಾದ ಸ್ವಾದಿಷ್ಟ ಉಪಾಹಾರವನ್ನು ಬೆಳಿಗ್ಗೆ ನೀಡುತ್ತಿದ್ದರು. ಚಪಾತಿ, ಅನ್ನ–ಸಾರು ಒಳಗೊಂಡ ರಾತ್ರಿ ಊಟ 7 ಗಂಟೆಗೆ ಬರುತ್ತಿತ್ತು. ಹೀಗಾಗಿ ಊಟ–ತಿಂಡಿಯ ಸಮಸ್ಯೆ ಯಾವತ್ತೂ ಆಗಿಲ್ಲ. ಎಷ್ಟೋ ಮಂದಿಗೆ ಅರಿವಿಲ್ಲದೆಯೇ ಈ ಸೋಂಕು ಬಂದುಹೋಗಿದೆ. ಭಯಕ್ಕೆ ಒಳಗಾದಲ್ಲಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಇದು ಕೂಡ ಸಾಮಾನ್ಯವಾದ ಸೋಂಕು ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು