ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ವಂಚನೆ: ಶಂಕರ್ ಬಿದರಿ ಇ–ಮೇಲ್ ಹ್ಯಾಕ್ ಮಾಡಿದ್ದ ಆರೋಪಿಗಳು ಬಂಧನ

Last Updated 10 ಮಾರ್ಚ್ 2021, 22:05 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕರ ಇ–ಮೇಲ್‌ ಹಾಗೂ ಸಾಮಾಜಿಕ ಜಾಲತಾಣ ಖಾತೆಗಳನ್ನು ಹ್ಯಾಕ್ ಮಾಡಿ ಅವರ ಹೆಸರಿನಲ್ಲಿ ಹಣ ಪಡೆದುಕೊಂಡು ವಂಚಿಸುತ್ತಿದ್ದ ನಾಗಾಲ್ಯಾಂಡ್‌ ಮಹಿಳೆ ಸೇರಿ ಮೂವರನ್ನು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಆನ್‌ಲೈನ್ ವಂಚನೆ ಪ್ರಕರಣ ಸಂಬಂಧ ನಾಗಲ್ಯಾಂಡ್‌ನ ರುಬಿಕಾ ಅಲಿಯಾಸ್ ಇಸ್ಟರ್ ಕೊನ್ಯಾಕ್ (28), ಥಿಯಾ (31) ಹಾಗೂ ಸೆರೋಪಾ (27) ಎಂಬುವರನ್ನು ಬಂಧಿಸಲಾಗಿದೆ. ಅವರಿಂದ 4 ಮೊಬೈಲ್, 13 ಪಾನ್ ಕಾರ್ಡ್, 6 ಆಧಾರ್ ಕಾರ್ಡ್, 2 ಎಟಿಎಂ ಕಾರ್ಡ್ ಹಾಗೂ 20ಕ್ಕೂ ಹೆಚ್ಚು ಬ್ಯಾಂಕ್‌ ಖಾತೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು
ಹೇಳಿದರು.

‘ನಿವೃತ್ತ ಡಿಜಿ–ಐಜಿಪಿ ಶಂಕರ್ ಬಿದರಿ ಅವರ ಇ–ಮೇಲ್ ಹ್ಯಾಕ್ ಮಾಡಿದ್ದ ಆರೋಪಿಗಳು, ಸ್ನೇಹಿತರಿಗೆ ಸಂದೇಶ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದನ್ನು ನಂಬಿದ್ದ ಸ್ನೇಹಿತರೊಬ್ಬರು ಆರೋಪಿಗಳು ನೀಡಿದ್ದ ಬ್ಯಾಂಕ್ ಖಾತೆಗೆ ₹ 25 ಸಾವಿರ ನಗದು ಸಹ ಜಮೆ ಮಾಡಿದ್ದರು. ಇದು ಗೊತ್ತಾಗುತ್ತಿದ್ದಂತೆ ಶಂಕರ್ ಬಿದರಿ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದರು’ ಎಂದೂ ತಿಳಿಸಿದರು.

‘ಗ್ಯಾಂಗ್‌ನ ರೂವಾರಿಗಳಾಗಿರುವ ಜೇಮ್ಸ್ ಹಾಗೂ ಪೀಟರ್ ಎಂಬುವರು ತಲೆಮರೆಸಿಕೊಂಡಿದ್ದಾರೆ’ ಎಂದೂ ಹೇಳಿದರು.

ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ: ‘ನಾಲ್ಕು ವರ್ಷಗಳ ಹಿಂದೆ ನಾಗಾಲ್ಯಾಂಡ್‌ನಿಂದ ನಗರಕ್ಕೆ ಬಂದಿದ್ದ ರುಬಿಕಾ, ಬ್ಯೂಟಿ ಪಾರ್ಲರ್‌ಗಳಲ್ಲಿ ಕೆಲಸಕ್ಕೆ ಸೇರಿದ್ದಳು. ಆಕೆಗೆ ಫೇಸ್‌ಬುಕ್‌ನಲ್ಲಿ ಜೇಮ್ಸ್ ಹಾಗೂ ಪೀಟರ್ ಪರಿಚಯವಾಗಿತ್ತು. ನಂತರ, ಅವರಿಬ್ಬರ ಆನ್‌ಲೈನ್‌ ವಂಚನೆ ಕೃತ್ಯಕ್ಕೆ ರುಬಿಕಾ ಸಹಾಯ ಮಾಡಲಾರಂಭಿಸಿದ್ದಳು’ ಎಂದು ಪೊಲೀಸರು ತಿಳಿಸಿದರು.

‘ನಾಗಾಲ್ಯಾಂಡ್‌ನ ನಿರುದ್ಯೋಗಿ ಯುವಕರನ್ನು ಸಂಪರ್ಕಿಸುತ್ತಿದ್ದ ರುಬಿಕಾ, ಅವರಿಗೆ ಹಣದ ಆಮಿಷವೊಡ್ಡಿ ದಾಖಲಾತಿಗಳನ್ನು ಪಡೆಯುತ್ತಿದ್ದಳು. ಅದೇ ದಾಖಲಾತಿ ಬಳಸಿಕೊಂಡು ನಗರದ ಹಲವು ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆದಿದ್ದಳು. ಆ ಖಾತೆ ವಿವರವನ್ನು ಪ್ರಮುಖ ಆರೋಪಿಗಳಾದ ಜೇಮ್ಸ್ ಹಾಗೂ ಪೀಟರ್‌ಗೆ ನೀಡುತ್ತಿದ್ದಳು.’

‘ಸಾರ್ವಜನಿಕರ ಇ–ಮೇಲ್ ಹಾಗೂ ಸಾಮಾಜಿಕ ಜಾಲತಾಣಗಳ ಖಾತೆ ಹ್ಯಾಕ್‌ ಮಾಡುತ್ತಿದ್ದ ಜೇಮ್ಸ್ ಹಾಗೂ ಪೀಟರ್, ರುಬಿಕಾ ನೀಡಿದ್ದ ಖಾತೆಗಳ ಸಂಖ್ಯೆಯನ್ನೇ ಬಳಸಿಕೊಂಡು ಹಣ ಹಾಕಿಸಿಕೊಳ್ಳುತ್ತಿದ್ದರು. ಅದರಲ್ಲಿ ರುಬಿಕಾಳಿಗೂ ಪಾಲು ನೀಡುತ್ತಿದ್ದರು. ಶಂಕರ್ ಬಿದರಿ ಮಾತ್ರವಲ್ಲದೇ ಹಲವು ವ್ಯಕ್ತಿಗಳ ಹೆಸರಿನಲ್ಲಿ ಆರೋಪಿಗಳು ವಂಚಿಸಿರುವ ಮಾಹಿತಿ ಇದೆ’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT