ಮಂಗಳವಾರ, ಏಪ್ರಿಲ್ 20, 2021
26 °C

ಪಿಎಸ್‌ಐ ಮೇಲೆ ಲಾಂಗ್‌ನಿಂದ ಹಲ್ಲೆ ನಡೆಸಿ ಆರೋಪಿ ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಹಲವೆಡೆ ಕಳ್ಳತನ ಎಸಗಿದ್ದ ರೌಡಿ ಅಪೇನ್ ಅಲಿಯಾಸ್ ಜ್ಞಾನೇಶ್ (36) ಎಂಬಾತ, ತನ್ನನ್ನು ಬಂಧಿಸಲು ಬಂದ ಪಿಎಸ್ಐ ಹರಿನಾಥ್ ಮೇಲೆಯೇ ಲಾಂಗ್‌ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ಮಹದೇವಪುರ ಠಾಣೆ ಪಿಎಸ್‌ಐ ಹರಿನಾಥ್ ಹಾಗೂ ಸಿಬ್ಬಂದಿ, ಆರೋಪಿಯನ್ನು ಬಂಧಿಸಲು ಕೋಲಾರ ಜಿಲ್ಲೆಯ ಕೆ.ಜಿ.ಎಫ್‌. ಠಾಣೆ ವ್ಯಾಪ್ತಿಗೆ ಹೋದಾಗ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಗಾಯಗೊಂಡಿರುವ ಹರಿನಾಥ್ ಅವರನ್ನು ನಗರದ ಹಾಸ್ಮಟ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

‘ಪಿಎಸ್‌ಐ ಮೇಲೆ ಹಲ್ಲೆ ಮಾಡಿದ ಬಳಿಕ ಅಪೇನ್ ಪರಾರಿಯಾಗಿದ್ದಾನೆ. ಆತನ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಕೋಲಾರ ಹಾಗೂ ಬೆಂಗಳೂರು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ’ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಲಾಂಗ್ ಹಿಡಿದು ಪರಾರಿ: ‘ವೈಟ್‌ಫೀಲ್ಡ್ ಉಪವಿಭಾಗ ವ್ಯಾಪ್ತಿಯಲ್ಲಿ ಕಳ್ಳತನ ಎಸಗಿದ್ದ ಅಪೇನ್,  ಹಲವು ದಿನಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ. ಆತನನ್ನು ಬಂಧಿಸಲು ಪಿಎಸ್‌ಐ ಹಾಗೂ ಐವರು ಸಿಬ್ಬಂದಿ, ಕೆ.ಜಿ.ಎಫ್‌ಗೆ ಹೋಗಿದ್ದರು’ ಎಂದೂ ಅಧಿಕಾರಿ ತಿಳಿಸಿದರು.

‘ಆರೋಪಿ ಮನೆ ಬಳಿ ಹೋಗಿದ್ದ ಪೊಲೀಸರು, ಶರಣಾಗುವಂತೆ ಹೇಳಿದ್ದರು. ಅದಕ್ಕೆ ಒಪ್ಪದ ಆರೋಪಿ, ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ. ಲಾಂಗ್‌ನಿಂದ ಪಿಎಸ್‌ಐ ಕೈಗೆ ಹೊಡೆದಿದ್ದ. ಆತ್ಮರಕ್ಷಣೆಗಾಗಿ ಪಿಎಸ್‌ಐ ಗುಂಡು ಹಾರಿಸಿದ್ದರು. ತಪ್ಪಿಸಿಕೊಂಡಿದ್ದ ಆರೋಪಿ, ಲಾಂಗ್ ಹಿಡಿದುಕೊಂಡೇ ಸ್ಥಳದಿಂದ ಪರಾರಿಯಾದ. ಮಾರ್ಗಮಧ್ಯೆಯೇ ಆತ ಮತ್ತಷ್ಟು ಸಾರ್ವಜನಿಕರನ್ನು ಬೆದರಿಸಿರುವ ಸಾಧ್ಯತೆಯೂ ಇದೆ’ ಎಂದೂ ಹೇಳಿದರು.

ಕೆ.ಜಿ.ಎಫ್‌ ರೌಡಿ: ‘ಕೊಲೆ ಯತ್ನ, ಸುಲಿಗೆ,  ಜೀವ ಬೆದರಿಕೆ, ಕಳ್ಳತನ ಸೇರಿದಂತೆ 32 ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಅಪೇನ್ ಹೆಸರು, ಕೆ.ಜಿ.ಎಫ್‌ ಠಾಣೆಯ ರೌಡಿಪಟ್ಟಿಯಲ್ಲಿದೆ. ಸಹಚರನೊಬ್ಬನ ಜೊತೆ ಸೇರಿ ಆರೋಪಿ ಕೃತ್ಯ ಎಸಗುತ್ತಿದ್ದ’ ಎಂದೂ ಅಧಿಕಾರಿ ತಿಳಿಸಿದರು.

‘ಮಹದೇವಪುರ, ಕೆ.ಆರ್.ಪುರ, ಬಾಣಸವಾಡಿ ಹಾಗೂ ಸುತ್ತಮುತ್ತ ಠಾಣೆ ವ್ಯಾಪ್ತಿಯಲ್ಲೂ ಆರೋಪಿ ಅಪರಾಧ ಕೃತ್ಯ ಎಸಗಿದ್ದ ಮಾಹಿತಿ ಇದೆ. ಆತನ ವಿರುದ್ಧ ಕೆಲ ಪ್ರಕರಣಗಳ ತನಿಖೆಯನ್ನು ಸಿಸಿಬಿ ನಡೆಸುತ್ತಿದೆ’ ಎಂದೂ ಹೇಳಿದರು.


ಆರೋಪಿ ಅಪ್ಟೆನ್

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು