ಭಾನುವಾರ, ಏಪ್ರಿಲ್ 11, 2021
32 °C

ಅಕ್ಕನ ಮನೆಯಲ್ಲಿ ಕಳವು; ತಂಗಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಕ್ಕನ ಮನೆಯಲ್ಲಿ ಕಳವು ಮಾಡಿದ್ದ ಆರೋಪದಡಿ ಶಶಿಕಲಾ (35) ಎಂಬುವರನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

’ಲಗ್ಗೆರೆ ಚೌಡೇಶ್ವರಿನಗರದ ನಿವಾಸಿ ಶಶಿಕಲಾ, ಅಕ್ಕ ಮೀನಾ ಅವರ ಮನೆಯಲ್ಲಿ ಕಳವು ಮಾಡಿದ್ದರು. ಅವರಿಂದ ₹ 9 ಲಕ್ಷ ಮೌಲ್ಯದ 220 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕಟ್ಟಡದ ಕೆಳ ಮಹಡಿಯಲ್ಲಿ ಮೀನಾ ಹಾಗೂ ಅವರ ಮಗ ವಿಜಯ್‌ಕುಮಾರ್ ವಾಸವಿದ್ದಾರೆ. ಮೊದಲ ಮಹಡಿಯಲ್ಲಿ ಆರೋಪಿ ಶಶಿಕಲಾ ನೆಲೆಸಿದ್ದಾರೆ. ಮೀನಾ ಅವರಿಗೆ ಕಿವಿ ಕೇಳಿಸುವುದಿಲ್ಲ. ಮಾತನಾಡಲೂ ಬರುವುದಿಲ್ಲ. ಅಜ್ಜಿಯ ಮನೆಗೆ ಹೊರಟಿದ್ದ ವಿಜಯ್‌ಕುಮಾರ್, ಮಾ. 3ರಂದು ಮನೆಯ ಬೀರು ತೆರೆದಿದ್ದರು. ಆದರೆ, ಬೀರುವಿನಲ್ಲಿ ಆಭರಣಗಳು ಇರಲಿಲ್ಲ.’

‘ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಶಶಿಕಲಾ ಅವರೇ ಕೃತ್ಯ ಎಸಗಿರುವ ಅನುಮಾನ ವ್ಯಕ್ತಪಡಿಸಿ ವಿಜಯ್‌ಕುಮಾರ್ ದೂರು ನೀಡಿದ್ದರು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡರು’ ಎಂದು ಪೊಲೀಸರು ತಿಳಿಸಿದರು.

ಅಕ್ಕ ಮಲಗಿದ್ದಾಗ ಕೃತ್ಯ: ‘ಮೀನಾ ಅವರು ಬೀರುವಿನ ಕೀಯನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುತ್ತಿದ್ದರು. ಅದನ್ನು ತಿಳಿದುಕೊಂಡಿದ್ದ ಆರೋಪಿ, ಮೀನಾ ಮಲಗಿದ್ದ ವೇಳೆಯಲ್ಲೇ ಮನೆಯೊಳಗೆ ಹೋಗಿದ್ದರು. ದಿಂಬಿನ ಕೆಳಗಿದ್ದ ಕೀ ತೆಗೆದುಕೊಂಡು ಬೀರುವಿನ ಬಾಗಿಲು ತೆರೆದು ಚಿನ್ನಾಭರಣ ಕದ್ದೊಯ್ದಿದ್ದರು’ ಎಂದೂ ಪೊಲೀಸರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು