ಶನಿವಾರ, ಜುಲೈ 24, 2021
27 °C
ಸಂಬಂಧಿಕರು, ವಕೀಲರ ನೇರ ಭೇಟಿಗೆ ನಿರ್ಬಂಧ

‘ಪ್ರಿಸನ್ ಕಾಲ್’ಗೆ ಬೇಡಿಕೆ: ನಿತ್ಯ 300 ಕೈದಿಗಳಿಂದ ಕರೆ

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ವೈರಾಣು ಆತಂಕ ಕಾರಾಗೃಹದಲ್ಲಿರುವ ಕೈದಿಗಳನ್ನೂ ಕಾಡುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಪ್ರತಿಯೊಂದು ಜೈಲಿನಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಸಂಬಂಧಿಕರು ಹಾಗೂ ವಕೀಲರ ಭೇಟಿಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು, ಕೈದಿಗಳಿಗೆ ‘ಪ್ರಿಸನ್ ಕಾಲ್’ ವ್ಯವಸ್ಥೆ ಬಳಸಲು ಅವಕಾಶ ಮಾಡಿಕೊಡಲಾಗಿದೆ.

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ವರದಿಯಾಗುತ್ತಿದ್ದಂತೆ ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದಂತೆ ರಾಜ್ಯದ ಬಹುತೇಕ ಕಾರಾಗೃಹಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಈ ಸಂಬಂಧ ಕಾರಾಗೃಹ ಹಾಗೂ ಸುಧಾರಣಾ ಸೇವೆ ಡಿಜಿಪಿ ಅಲೋಕ್ ಮೋಹನ್ ಮಾರ್ಚ್‌ನಲ್ಲೇ ಸುತ್ತೋಲೆ ಹೊರಡಿಸಿದ್ದಾರೆ.

ಕೇಂದ್ರ, ಜಿಲ್ಲಾ, ಬಯಲು ಹಾಗೂ ತಾಲ್ಲೂಕು ಕಾರಾಗೃಹಗಳ ಅಧಿಕಾರಿಗಳು, ಕೈದಿಗಳ ಆರೋಗ್ಯ ಕಾಪಾಡಲು ಗಮನಹರಿಸಿದ್ದಾರೆ.

ಸಂಬಂಧಿಕರು ಹಾಗೂ ವಕೀಲರು ಕೈದಿಗಳನ್ನು ನೇರವಾಗಿ ಕಾರಾಗೃಹದಲ್ಲಿ ಭೇಟಿಯಾಗಲು ಅವಕಾಶವಿಲ್ಲ. ಬೆಂಗಳೂರು, ಬೆಳಗಾವಿ, ಕಲಬುರ್ಗಿ, ಮೈಸೂರು, ಧಾರವಾಡ, ವಿಜಯಪುರ, ಬಳ್ಳಾರಿ ಕೇಂದ್ರ ಕಾರಾಗೃಹಗಳು ಮತ್ತು ಮಹಿಳಾ ಕೇಂದ್ರ ಕಾರಾಗೃಹಗಳಲ್ಲಿರುವ ‘ಪ್ರಿಸನ್ ಕಾಲ್’ ವ್ಯವಸ್ಥೆ ಮೂಲಕವಷ್ಟೇ ಮಾತನಾಡಲು ಅನುಕೂಲ  ಮಾಡಿಕೊಡಲಾಗಿದೆ. ಈ ಕಾರಾಗೃಹಗಳಲ್ಲಿರುವ ಬಂದಿಗಳು, ಸರದಿ ಪ್ರಕಾರವಾಗಿ ವ್ಯವಸ್ಥೆ ಬಳಸಿಕೊಂಡು ಸಂಬಂಧಿಕರು ಹಾಗೂ ವಕೀಲರ ಜೊತೆ ಮಾತನಾಡುತ್ತಿದ್ದಾರೆ .

‘ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಿತ್ಯವೂ 250ರಿಂದ 300 ಕೈದಿಗಳು ಪ್ರಿಸನ್ ಕಾಲ್ ವ್ಯವಸ್ಥೆ
ಯನ್ನು ಬಳಸುತ್ತಿದ್ದಾರೆ’ ಎಂದು ಕಾರಾಗೃಹದ ಅಧೀಕ್ಷಕ ವಿ. ಶೇಷಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಾರ್ಚ್‌ ತಿಂಗಳಿನಿಂದಲೇ ಜೈಲಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೊಸದಾಗಿ ವಿಚಾರಣಾಧೀನ ಕೈದಿಗಳು ಅಥವಾ ವಿದೇಶಿ ಪ್ರಜೆಗಳು ಬಂದರೆ  ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸಿ ಕೊರೊನಾ ತಪಾಸಣೆಗೆ ಕಳುಹಿಸಲಾಗುತ್ತಿದೆ. ಕಾರಾಗೃಹದ ಬ್ಯಾರಕ್ ಹಾಗೂ ಆವರಣವನ್ನೂ ನಿತ್ಯವೂ ಸ್ಯಾನಿಟೈಸ್ ಮಾಡಿ ಸ್ವಚ್ಛವಾಗಿಟ್ಟುಕೊಳ್ಳಲಾಗುತ್ತಿದೆ’ ಎಂದೂ ಹೇಳಿದರು.

ಏನಿದು ‘ಪ್ರಿಸನ್ ಕಾಲ್’?
ಸಂಬಂಧಿಕರು ಹಾಗೂ ವಕೀಲರ ಜೊತೆ ದೂರವಾಣಿ ಮೂಲಕ ಮಾತನಾಡಲು ಅನುಕೂಲವಾಗುವಂತೆ ಕಾರಾಗೃಹದಲ್ಲಿರುವ ಕೈದಿಗಳಿಗೆ ಕಲ್ಪಿಸಿರುವ ವ್ಯವಸ್ಥೆಯೇ ಈ ಪ್ರಿಸನ್ ಕಾಲ್.

‘ಕರೆ ಮಾಡಲು ಇಚ್ಛಿಸುವ ಕೈದಿಯು ₹ 60 ರಿಚಾರ್ಜ್ ಮಾಡಿಸಿಕೊಳ್ಳಬೇಕು. ಯಾವುದಾದರೂ 3 ದೂರವಾಣಿ/ಮೊಬೈಲ್ ಸಂಖ್ಯೆಗೆ (ಕೈದಿಗಳ ಇಚ್ಛೆಗೆ ಬಿಟ್ಟದ್ದು) ಮಾತ್ರ ಮಾತನಾಡಲು ಅವಕಾಶವಿರುತ್ತದೆ. ಅದು ಸಹ ನಿತ್ಯ 5 ನಿಮಿಷ ಮಾತ್ರ ಮಾತನಾಡಬೇಕು. ರಿಚಾರ್ಜ್ ಹಣ ಖಾಲಿ ಆಗುವವರೆಗೂ ವ್ಯವಸ್ಥೆ ಬಳಸಬಹುದು. ನಂತರ, ಪುನಃ ರಿಚಾರ್ಜ್ ಮಾಡಿಸಿಕೊಳ್ಳಬೇಕು’ ಎಂದು ಅಧೀಕ್ಷಕ ಶೇಷಮೂರ್ತಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು