ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಂಸ್ಕೃತಿಕ ಅಕಾಡೆಮಿಗಳಿಗೆ ಹೆಚ್ಚಿನ ಅನುದಾನ ಅಗತ್ಯ: ಹಂ.ಪ.ನಾಗರಾಜಯ್ಯ

ಸಜ್ಜನರ ಸಲ್ಲಾಪ ಕಾರ್ಯಕ್ರಮದಲ್ಲಿ ಸಾಹಿತಿ ಹಂ.ಪ.ನಾಗರಾಜಯ್ಯ ಅಭಿಮತ
Published : 29 ಆಗಸ್ಟ್ 2024, 16:13 IST
Last Updated : 29 ಆಗಸ್ಟ್ 2024, 16:13 IST
ಫಾಲೋ ಮಾಡಿ
Comments

ಬೆಂಗಳೂರು: ‘ಸಾಂಸ್ಕೃತಿಕ ಅಕಾಡೆಮಿಗಳಿಗೆ ಆರ್ಥಿಕ ಬೆಂಬಲ ಇಲ್ಲದಿದ್ದರೆ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸರ್ಕಾರವು ಎಲ್ಲ ಅಕಾಡೆಮಿಗಳಿಗೆ ವರ್ಷಕ್ಕೆ ಕನಿಷ್ಠ ₹ 5 ಕೋಟಿಯಾದರೂ ಅನುದಾನ ಒದಗಿಸಬೇಕು’ ಎಂದು ಸಾಹಿತಿ ಹಂ.ಪ.ನಾಗರಾಜಯ್ಯ ತಿಳಿಸಿದರು. 

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ನಗರದಲ್ಲಿ ಗುರುವಾರ ಹಮ್ಮಿಕೊಂಡ ‘ಕಳತಾವೂರ್ ಮಳಾವ್–01 (ಸಜ್ಜನರ ಸಲ್ಲಾಪ–01) ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದರು. 

‘ಹಿಂದೆ ಕೆರೆಗಳೆಲ್ಲ ಬತ್ತಿ ಹೋಗಿದ್ದರೂ ಸರ್ಕಾರದ ಆರ್ಥಿಕ ಸ್ಥಿತಿ ಉತ್ತಮವಾಗಿತ್ತು. ಈಗ ಆರ್ಥಿಕ ಸ್ಥಿತಿ ಬತ್ತಿ ಹೋಗಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ ಹೆಚ್ಚಿನ ಅನುದಾನ ಅಕಾಡೆಮಿಗಳಿಗೆ ದೊರೆಯುತ್ತಿಲ್ಲ. ವಾರ್ಷಿಕ ₹ 30 ಲಕ್ಷ ಅನುದಾನ ನೀಡಿದರೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಅರ್ಧದಷ್ಟು ಹಣ ಸಿಬ್ಬಂದಿ ವೆಚ್ಚಕ್ಕೇ ಹೋಗಲಿದೆ. ಹೊಸದಾಗಿ ಕಾರ್ಯಕಾರಿ ಸಮಿತಿ ನೇಮಕಗೊಂಡ ಬಳಿಕ ಎಲ್ಲ ಅಕಾಡೆಮಿಗಳಿಗೆ ₹ 5 ಕೋಟಿ ಅನುದಾನ ಒದಗಿಸಿದರೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಈ ಬಗ್ಗೆ ಎಲ್ಲ ಅಕಾಡೆಮಿಗಳ ಅಧ್ಯಕ್ಷರನ್ನು ಒಳಗೊಂಡ ನಿಯೋಗವು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಬೇಕು’ ಎಂದು ಸಲಹೆ ನೀಡಿದರು.

‘ಬಂಜಾರ ಭಾಷಿಕರು ದೇಶದ ಉದ್ದಗಲಕ್ಕೂ ಹರಡಿದ್ದಾರೆ. ಅವರು ಪ್ರಾದೇಶಿಕ, ಸಾಂಸ್ಕೃತಿಕ ಲಕ್ಷಣವನ್ನು ಮೈಗೂಡಿಸಿಕೊಂಡಿದ್ದಾರೆ. ಬಂಜಾರರಿಗೆ ಸಂಬಂಧಿಸಿದಂತೆ ವಸ್ತು ಸಂಗ್ರಹಾಲಯ ನಿರ್ಮಿಸಬೇಕಿದೆ. ಬಂಜಾರ ಇತಿಹಾಸ ಓದಿದರೆ ರೋಮಾಂಚನವಾಗುತ್ತದೆ’ ಎಂದು ಹೇಳಿದರು. 

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಎ.ಆರ್. ಗೋವಿಂದಸ್ವಾಮಿ ಮಾತನಾಡಿ, ‘ಬಂಜಾರ ಸಂಸ್ಕೃತಿ ಮತ್ತು ಭಾಷೆಗೆ ಸಂಬಂಧಿಸಿದಂತೆ ಅಕಾಡೆಮಿಯು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹಚ್ಚೆ, ತೊಗಲುಗೊಂಬೆ ಕಲೆ ಕಲಿಸುವಿಕೆಯ ಕಾರ್ಯಾಗಾರದ ಜತೆಗೆ ಕಸೂತಿ, ಮಾಲೆಗಳ ನಿರ್ಮಾಣದ ಬಗ್ಗೆ ತರಬೇತಿಯನ್ನೂ ಒದಗಿಸಲಾಗುವುದು’ ಎಂದು ತಿಳಿಸಿದರು.

ಅಕಾಡೆಮಿ ರಿಜಿಸ್ಟ್ರಾರ್ ಬಿ. ನೀಲಮ್ಮ, ಕರ್ನಾಟಕ ಪ್ರದೇಶ (ಬಂಜಾರ) ಸೇವಾ ಸಂಘದ ಅಧ್ಯಕ್ಷ ಎನ್.ಆರ್. ನಾಯಕ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT