ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್ ಕ್ರೈಂ: 3 ವರ್ಷದಲ್ಲಿ ಎಂಟೇ ಚಾರ್ಜ್‌ಶೀಟ್

ವಂಚಕರ ಪತ್ತೆ ಕಷ್ಟ ಎನ್ನುತ್ತಿರುವ ಪೊಲೀಸರು * ಪ್ರಕರಣಗಳ ತನಿಖೆಗೆ ಸಿಬ್ಬಂದಿ ಕೊರತೆ ಅಡ್ಡಿ
Last Updated 14 ಮಾರ್ಚ್ 2020, 22:33 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಅಂತರ್ಜಾಲದ ಮೂಲಕ ನಡೆಯುವ ವಂಚನೆ ಪ್ರಕರಣಗಳ ತನಿಖೆಗೆಂದು ನಗರ ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲಿ ಸೈಬರ್ ಕ್ರೈಂ ಠಾಣೆ ಆರಂಭಿಸಿ ಮೂರು ವರ್ಷಗಳಾಗಿದ್ದು, ಇಲ್ಲಿಯ ಪ್ರಕರಣಗಳ ತನಿಖಾ ಸಾಧನೆ ಮಾತ್ರ ತೀರಾ ಕಳಪೆ ಆಗಿದೆ.

ಸಿಬ್ಬಂದಿ ಕೊರತೆ, ಆಧುನಿಕ ತಂತ್ರಜ್ಞಾನದ ಅಲಭ್ಯತೆಯಿಂದಾಗಿ ಸೈಬರ್ ಕ್ರೈಂಪ್ರಕರಣಗಳ ಪತ್ತೆ ದಿನದಿಂದ ದಿನಕ್ಕೆ ಕಷ್ಟವಾಗುತ್ತಿರುವುದಾಗಿ ಪೊಲೀಸರೇ ಒಪ್ಪಿಕೊಳ್ಳುತ್ತಾರೆ. ಸಾರ್ವಜನಿಕರ ಮುಗ್ಧತೆ ಹಾಗೂ ಪೊಲೀಸರ ತನಿಖಾ ವೈಫಲ್ಯದಿಂದಾಗಿ ನಿತ್ಯವೂ ಸೈಬರ್ ಕ್ರೈಂ ವಂಚನೆ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ.

ಕೊಲೆ, ಸುಲಿಗೆ, ಕಳ್ಳತನ ಸೇರಿ ಗಂಭೀರ ಅಪರಾಧ ಪ್ರಕರಣಗಳಿಗಿಂತಲೂ ಹೆಚ್ಚಾಗಿ ಇಂದು ಸೈಬರ್ ಕ್ರೈಂ ಪ್ರಕರಣಗಳು ವರದಿಯಾಗುತ್ತಿದೆ. ಬ್ಯಾಂಕ್‌ ಖಾತೆಗೆ ಕನ್ನ, ಆನ್‌ಲೈನ್‌ ವಂಚನೆಗೆ ಸಂಬಂಧಪಟ್ಟಂತೆ ನಿತ್ಯವೂ 20ರಿಂದ 30 ಮಂದಿ ದೂರು ನೀಡುತ್ತಿದ್ದಾರೆ.

ಸೈಬರ್ ಅಪರಾಧಗಳ ತನಿಖೆಗೆಂದು ಸಿಐಡಿ ಕಚೇರಿಯಲ್ಲಿ 2001ರಲ್ಲಿ ಪ್ರತ್ಯೇಕ ಸೈಬರ್‌ ಕ್ರೈಂ ವಿಭಾಗ ತೆರೆಯಲಾಗಿತ್ತು. ಪ್ರಕರಣಗಳು ಹೆಚ್ಚಾಗಿದ್ದರಿಂದ 2017ರಲ್ಲಿ ಕಮಿಷನರ್ ಕಚೇರಿ ಆವರಣದಲ್ಲಿ ಪ್ರತ್ಯೇಕ ಠಾಣೆಯನ್ನೂ ಆರಂಭಿಸಲಾಯಿತು. ಇದುವರೆಗಿನ ಠಾಣೆಯ ಅಂಕಿ–ಅಂಶಗಳನ್ನು ಗಮನಿಸಿದಾಗ, ಈ ಠಾಣೆ ಕೆಲಸ ನಿರಸದಾಯಕವಾಗಿದೆ.

ಮೂರು ವರ್ಷದಲ್ಲಿ 17,190 ಪ್ರಕರಣಗಳು ದಾಖಲಾಗಿದ್ದು, 8 ಪ್ರಕರಣಗಳಲ್ಲಿ ಮಾತ್ರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 763 ಪ್ರಕರಣಗಳಲ್ಲಿ ‘ಸಿ’ ರಿಪೋರ್ಟ್ (ಕೃತ್ಯ ನಡೆದಿದೆ. ಆರೋಪಿ ಪತ್ತೆ ಆಗಿಲ್ಲ) ಸಲ್ಲಿಕೆ ಆಗಿದೆ. 16,230 ಪ್ರಕರಣಗಳ ತನಿಖೆ ಇನ್ನೂ ನಡೆಯುತ್ತಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿದಾರ ಎಸ್‌.ಭಾಸ್ಕರನ್ ಅವರಿಗೆ ನೀಡಿರುವ ಮಾಹಿತಿಯನ್ನು ಪೊಲೀಸರು, ಅಂಕಿ–ಅಂಶಗಳ ಬಗ್ಗೆ ತಿಳಿಸಿದ್ದಾರೆ.

‘ಇಂತಹ ಪ್ರಕರಣಗಳ ಪತ್ತೆಗೆ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ. ತಂತ್ರಜ್ಞಾನದ ನೆರವನ್ನು ಪಡೆಯುತ್ತಿಲ್ಲ. ದೂರು ನೀಡಿದವರೇ ಮಾಹಿತಿ ನೀಡಬೇಕು ಎಂದು ಒತ್ತಡ ಹೇರುತ್ತಾರೆ. ಬಳಿಕ ಪ್ರಕರಣದ ತನಿಖೆ ನಡೆಸುವ ಗೋಜಿಗೆ ಹೋಗುವುದಿಲ್ಲ’ ಎಂದು ಭಾಸ್ಕರನ್‌ ದೂರಿದರು.

ಯಾವ ರೀತಿ ವಂಚನೆ

*ಕ್ಯೂಆರ್‌ ಕೋಡ್: ಒಎಲ್‌ಎಕ್ಸ್, ಕ್ವಿಕ್ಕರ್ ಸೇರಿ ಹಲವು ಜಾಲತಾಣಗಳಲ್ಲಿ ವಸ್ತುಗಳ ಮಾರಾಟ ಹಾಗೂ ಖರೀದಿ ಸೋಗಿನಲ್ಲಿ ಕ್ಯೂಆರ್‌ ಕೋಡ್ ಕಳುಹಿಸಿ ಬ್ಯಾಂಕ್ ಖಾತೆಗೆ ಕನ್ನ ಹಾಕಲಾಗುತ್ತಿದೆ. ಪ್ರತಿಷ್ಠಿತ ಕಂಪನಿ ಪ್ರತಿನಿಧಿಗಳು, ಬ್ಯಾಂಕ್ ಅಧಿಕಾರಿಗಳು, ಸೇವೆಗಳು, ಉಡುಗೊರೆ... ಹೀಗೆ ನಾನಾ ಸೋಗಿನಲ್ಲಿ ಸೈಬರ್ ವಂಚಕರು ಕೃತ್ಯ ಎಸಗುತ್ತಿದ್ದಾರೆ.

*ಕ್ರೆಡಿಟ್, ಡೆಬಿಟ್ ಕಾರ್ಡ್ ವಂಚನೆ: ಬ್ಯಾಂಕ್ ಪ್ರತಿನಿಧಿಗಳ ಸೋಗಿನಲ್ಲಿ ಕರೆ ಮಾಡಿ, ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ನಿಷ್ಕ್ರಿಯವಾಗಿದೆ ಹಾಗೂ ಬದಲಾವಣೆ ಮಾಡಬೇಕೆಂದು ಹೇಳಿ ವಂಚಿಸಲಾಗುತ್ತಿದೆ. ಗ್ರಾಹಕರಿಂದಲೇ ಒಟಿಪಿ (ಒನ್‌ ಟೈಂ ಪಾಸ್‌ವರ್ಡ್‌) ಪಡೆದು ವಂಚಕರು ಬ್ಯಾಂಕ್ ಖಾತೆಯಿಂದ ತಮ್ಮ ಖಾತೆಗೆ ಹಣ ವರ್ಗಾಯಿಸಿಕೊಳ್ಳುತ್ತಿದ್ದಾರೆ.

*ವೈವಾಹಿಕ ಜಾಲತಾಣ: ಜೀವನ್‌ಸಾಥಿ, ಶಾದಿ... ಹೀಗೆ ಹಲವು ಜಾಲತಾಣಗಳ ಮೂಲಕ ಯುವಕ–ಯುವತಿಯರನ್ನು ಪರಿಚಯ ಮಾಡಿಕೊಂಡು ವಂಚಿಸುವವರೂ ಹೆಚ್ಚಾಗುತ್ತಿದ್ದಾರೆ. ನಕಲಿ ಖಾತೆಗಳನ್ನು ತೆರೆದು ಯಾರದ್ದೋ ಫೋಟೊಗಳನ್ನು ಪ್ರೊಫೈಲ್‌ಗೆ ಹಾಕಿ ಮದುವೆ ಆಗುವ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಲಾಗುತ್ತಿದೆ.

*ಸ್ಕಿಮ್ಮರ್ ಬಳಸಿ ನಕಲಿ ಕಾರ್ಡ್: ಎಟಿಎಂ ಯಂತ್ರಗಳಲ್ಲಿ ಸ್ಕಿಮ್ಮರ್ ಹಾಗೂ ಚಿಕ್ಕದಾದ ಕ್ಯಾಮೆರಾವನ್ನು ಅಳವಡಿಸಿ ಸಾರ್ವಜನಿಕರ ಎಟಿಎಂ ಕಾರ್ಡ್‌ಗಳ ಮಾಹಿತಿ ಕದಿಯುವ ಗ್ಯಾಂಗ್‌ಗಳೂ ಇವೆ. ಅದೇ ಮಾಹಿತಿ ಬಳಸಿ ನಕಲಿ ಎಟಿಎಂ ಕಾರ್ಡ್‌ಗಳನ್ನು ಸೃಷ್ಟಿಸಿ ಗ್ರಾಹಕರ ಖಾತೆಯಲ್ಲಿದ್ದ ಹಣವನ್ನು ಕ್ಷಣಮಾತ್ರದಲ್ಲೇ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಾರೆ.

*ಉದ್ಯೋಗದ ಆಮಿಷ: ಉದ್ಯೋಗಕ್ಕಾಗಿ ಹುಡುಕಾಟ ನಡೆಸುವ ಯುವಕರು, ನೌಕರಿ ಸೇರಿ ಹಲವು ಜಾಲತಾಣಗಳಲ್ಲಿ ತಮ್ಮ ವ್ಯಕ್ತಿಗತ ವಿವರ (ರೆಸ್ಯುಮ್‌) ಅಪ್‌ಲೋಡ್‌ ಮಾಡುತ್ತಿದ್ದಾರೆ. ಅಂಥ ವ್ಯಕ್ತಿಗತ ವಿವರಗಳ ಮಾಹಿತಿ ಪಡೆದುಕೊಂಡು ಯುವಕರನ್ನು ಸಂಪರ್ಕಿಸುವ ವಂಚಕರು, ಉದ್ಯೋಗದ ಆಮಿಷವೊಡ್ಡಿ ಶುಲ್ಕದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದಾರೆ.

*ಕಾಲ್‌ ಗರ್ಲ್ ಹಾಗೂ ಬಾಯ್‌ ಡೇಟಿಂಗ್: ‘ಹುಡುಗಿಯರು ಇದ್ದಾರೆ’ ಹಾಗೂ ‘ಶ್ರೀಮಂತ ಮಹಿಳೆಯರಿಗೆ ಹುಡುಗರು ಬೇಕಾಗಿದ್ದಾರೆ’ ಎಂದು ಜಾಹೀರಾತುಗಳನ್ನು ಕಳುಹಿಸುವ ವಂಚಕರು, ಅದಕ್ಕೆ ಪ್ರತಿಕ್ರಿಯಿಸುವ ಸಾರ್ವಜನಿಕರಿಂದ ಶುಲ್ಕದ ಹೆಸರಿನಲ್ಲಿ ಹಣ ಪಡೆದು ವಂಚಿಸುತ್ತಿದ್ದಾರೆ.

*ಲಾಟರಿ, ಬಹುಮಾನ: ಹಲವು ಕಂಪನಿಗಳ ಹೆಸರಿನಲ್ಲಿ ಬಹುಮಾನದ ಆಮಿಷವೊಡ್ಡಿ ವಂಚಿಸಲಾಗುತ್ತಿದೆ. ‘ಕೋಟ್ಯಂತರ ರೂಪಾಯಿ ಗೆದ್ದಿದ್ದಿರಾ. ನೋಂದಣಿ ಶುಲ್ಕ ಹಾಗೂ ತೆರಿಗೆ ಕಟ್ಟಿದರೆ ಹಣ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುವುದು’ ಎಂದು ಹೇಳಿ ವಂಚಕರು ಹಣ ಪಡೆದು ನಾಪತ್ತೆಯಾಗುತ್ತಿದ್ದಾರೆ.

‘ಸೆನ್‌’ ಠಾಣೆಗಳೂ ಅಷ್ಟಕ್ಕಷ್ಟೇ
‘ಸೈಬರ್ ಕ್ರೈಂ ಠಾಣೆ ಕೆಲಸವನ್ನು ಹಂಚಿಕೆ ಮಾಡುವ ಉದ್ದೇಶದಿಂದ ನಗರದಲ್ಲಿ ವಿಭಾಗವಾಗವಾರು ‘ಸೈಬರ್‌, ಆರ್ಥಿಕ ಅಪರಾಧ ಹಾಗೂ ಮಾದಕ ವಸ್ತು (ಸಿಇಎನ್‌)’ ಠಾಣೆಗಳನ್ನು ತೆರೆಯಲಾಗಿದೆ. ಆದರೆ, ಮೂಲಸೌಕರ್ಯ ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಈ ಠಾಣೆಗಳು ಇದ್ದು ಇಲ್ಲದಂತಾಗಿವೆ.

ಆನ್‌ಲೈನ್‌ ಅಪರಾಧಗಳು, ಮಾದಕ ವಸ್ತುಗಳ ಮಾರಾಟ ಪ್ರಕರಣಗಳ ಸಂಬಂಧ ದೂರು ಸ್ವೀಕರಿಸಲು ಹಾಗೂ ಅವುಗಳ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸುವುದಕ್ಕಾಗಿ ಈ ಠಾಣೆಗಳನ್ನು ಆರಂಭಿಸಲಾಗಿದೆ. ಆದರೆ, ಪ್ರತ್ಯೇಕ ದೂರುಗಳನನ್ನು ದಾಖಲಿಸಿಕೊಳ್ಳಲು ಠಾಣೆ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT