ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022ರಲ್ಲಿ 65,893 ಸೈಬರ್ ಅಪರಾಧ ಪ್ರಕರಣ ವರದಿ: ₹ 7,480 ಕೋಟಿ ವಂಚನೆ

ಸೈಬರ್ ವಂಚನೆ ತಡೆಗೆ ಜಾಗೃತಿಯೇ ಪರಿಹಾರ: ಡಿಐಜಿ ಸಿ. ವಂಶಿಕೃಷ್ಣ
Published 18 ಫೆಬ್ರುವರಿ 2024, 0:30 IST
Last Updated 18 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಲ್ಲಿ 2022ರಲ್ಲಿ 65,893 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿದ್ದು, ₹ 7,480 ಕೋಟಿ ಹಣವನ್ನು ವಂಚಕರು ದೋಚಿದ್ದಾರೆ’ ಎಂದು ಸಿಐಡಿ ಡಿಐಜಿ ಸಿ. ವಂಶಿಕೃಷ್ಣ ಹೇಳಿದರು.

ನಗರದಲ್ಲಿರುವ ಐಎಎಸ್‌ ಅಧಿಕಾರಿಗಳ ಸಂಘದ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ‘ಸೈಬರ್ ಸುರಕ್ಷತೆ’ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

‘ಕರ್ನಾಟಕದಲ್ಲೂ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, 2022ರಲ್ಲಿ ₹ 617 ಕೋಟಿ ಹಣವನ್ನು ವಂಚಕರು ದೋಚಿದ್ದಾರೆ. ಸೈಬರ್ ಅಪರಾಧ ಪ್ರಕರಣಗಳಲ್ಲಿ ಶೇ 89ರಷ್ಟು ಸಂತ್ರಸ್ತರಿಗೆ ಹಣ ವಾಪಸು ಸಿಗುವುದಿಲ್ಲ. ಶೇ 11ರಷ್ಟು ಮಂದಿಗೆ ಮಾತ್ರ ಹಣ ಸಿಗುತ್ತಿದೆ’ ಎಂದು ಹೇಳಿದರು.

‘ಫೆಡೆಕ್ಸ್ ಕೊರಿಯರ್, ಮನೆಯಿಂದ ಕೆಲಸ, ಸಾಲದ ಆ್ಯಪ್, ಬೆತ್ತಲೆ ವಿಡಿಯೊ ಕರೆ ಬ್ಲ್ಯಾಕ್‌ಮೇಲ್ ಪ್ರಕರಣಗಳು ಹೆಚ್ಚಾಗುತ್ತಿವೆ. ಸೈಬರ್ ವಂಚನೆಗೆ ಕೃತಕ ಬುದ್ಧಿಮತ್ತೆ (ಎಐ) ಸಹ ಬಳಸಲಾಗುತ್ತಿದೆ. ಜನರು ಜಾಗೃತಿ ವಹಿಸಿದರೆ ಮಾತ್ರ ಸೈಬರ್ ಅಪರಾಧಗಳನ್ನು ನಿಯಂತ್ರಿಸಬಹುದು. ಯಾವುದೇ ಹೊಸ ಆ್ಯಪ್ ಅಥವಾ ತಂತ್ರಜ್ಞಾನವನ್ನು ಬಳಸುವ ಮುನ್ನ, ಅದರ ಕಾರ್ಯಾಚರಣೆ ಬಗ್ಗೆ ತಿಳಿದುಕೊಂಡು ಮುಂದುವರಿಯಬೇಕು’ ಎಂದು ಅವರು ಸಲಹೆ ನೀಡಿದರು.

2,138 ಕಂಪನಿ ದತ್ತಾಂಶ ಹ್ಯಾಕ್:

‘2022ರಲ್ಲಿ ಭಾರತದ 2,138 ಕಂಪನಿಗಳ ದತ್ತಾಂಶ ಹ್ಯಾಕ್ ಮಾಡಿ ಹಣಕ್ಕೆ ಬೇಡಿಕೆ ಇರಿಸಲಾಗಿತ್ತು. ಇದರಲ್ಲಿ ಶೇ 40ರಷ್ಟು ಕಂಪನಿಗಳು, ದತ್ತಾಂಶ ವಾಪಸು ಪಡೆಯಲು ಹಣ ನೀಡಿವೆ’ ಎಂದು ವಂಶಿಕೃಷ್ಣ ಹೇಳಿದರು.

ಎಲ್ಲರೂ ಸಂತ್ರಸ್ತರು:

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಸಿಐಡಿ ಡಿಜಿಪಿ ಎಂ.ಎ. ಸಲೀಂ, ‘ಮೊಬೈಲ್, ಕಂಪ್ಯೂಟರ್ ಹಾಗೂ ಇತರೆ ಪ್ರಕಾರದ ತಂತ್ರಜ್ಞಾನ ಬಳಸುವ ಎಲ್ಲರೂ ಸೈಬರ್ ವಂಚನೆ ಸಂತ್ರಸ್ತರು. ನಮ್ಮ ವೈಯಕ್ತಿಕ ದತ್ತಾಂಶವನ್ನು ಬಳಸಿಕೊಂಡು ವಂಚಕರು, ಯಾವಾಗ ಬೇಕಾದರೂ ಹಣ ದೋಚಬಹುದು. ಹೀಗಾಗಿ, ನಾವೆಲ್ಲರೂ ಹೆಚ್ಚು ಜಾಗೃತಿ ವಹಿಸಬೇಕು. ಅನುಮಾನಾಸ್ಪದ ಕರೆಗಳು ಬಂದರೆ, ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದರು.

ಪೊಲೀಸ್ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಕಾನೂನು ವಿದ್ಯಾರ್ಥಿಗಳಿಗಾಗಿ ಸಿಐಡಿ ಹಾಗೂ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ ಸಹಯೋಗದಲ್ಲಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

‘ಸಹಾಯವಾಣಿ–1930: ದಿನಕ್ಕೆ 50 ಸಾವಿರ ಕರೆ’

‘ಸೈಬರ್ ಅಪರಾಧಗಳ ಬಗ್ಗೆ ವರದಿ ಮಾಡಲು ರಾಷ್ಟ್ರಮಟ್ಟದಲ್ಲಿ 1930 ಸಹಾಯವಾಣಿ ತೆರೆಯಲಾಗಿದೆ. ಇದಕ್ಕೆ ನಿತ್ಯವೂ ಕನಿಷ್ಠ 50 ಸಾವಿರ ಕರೆಗಳು ಬರುತ್ತಿವೆ’ ಎಂದು ಸಿಐಡಿ ಡಿಐಜಿ ಸಿ. ವಂಶಿಕೃಷ್ಣ ಹೇಳಿದರು. ‘259 ಸಂಸ್ಥೆಗಳು ಸಹಾಯವಾಣಿ ಅಡಿಯಲ್ಲಿ ಕೆಲಸ ಮಾಡುತ್ತಿವೆ. ಸಾರ್ವಜನಿಕರು ಸೈಬರ್ ಅಪರಾಧ ನಡೆದ ತಕ್ಷಣ ತುರ್ತಾಗಿ ಮಾಹಿತಿ ನೀಡಬೇಕು. ಸಂಸ್ಥೆಗಳ ನೋಡಲ್ ಅಧಿಕಾರಿಗಳು ಅನುಮಾನಾಸ್ಪದ ಹಣದ ವಹಿವಾಟು ತಡೆಯಲಿದ್ದಾರೆ. ನಂತರ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದರೆ ಎಫ್‌ಐಆರ್ ದಾಖಲಾಗುತ್ತದೆ. ಆರೋಪಿ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸುತ್ತಾರೆ’ ಎಂದರು.

‘ಬ್ಯಾಂಕ್ ಖಾತೆ ಮಾರಾಟ: ₹ 10 ಕೋಟಿ ಗಳಿಕೆ’
‘ಸೈಬರ್ ಅಪರಾಧ ಪ್ರಕರಣವೊಂದರಲ್ಲಿ ಒಡಿಶಾ ಪೊಲೀಸರು ಪಶ್ಚಿಮ ಬಂಗಾಳದಲ್ಲಿ ಮೂವರನ್ನು ಇತ್ತೀಚೆಗೆ ಬಂಧಿಸಿದ್ದರು. ಈ ಮೂವರು ಗ್ರಾಮೀಣ ಭಾಗದ ಜನರ ವೈಯಕ್ತಿಕ ದಾಖಲೆಗಳನ್ನು ಖರೀದಿಸಿ ಬ್ಯಾಂಕ್ ಖಾತೆಗಳನ್ನು ತೆರೆದು ವಂಚಕರಿಗೆ ಮಾರುತ್ತಿದ್ದರು’ ಎಂದು ವಂಶಿಕೃಷ್ಣ ಹೇಳಿದರು. ‘ಜನರಿಂದ ದಾಖಲೆ ಪಡೆಯಲು ಒಬ್ಬರಿಗೆ ₹2000 ನೀಡುತ್ತಿದ್ದರು. ಜೊತೆಗೆ ಆರೋಪಿಗಳು ತಾವೇ ಸೃಷ್ಟಿಸುವ ಬ್ಯಾಂಕ್ ಖಾತೆಯನ್ನು ₹ 21000 ಹಣಕ್ಕೆ ವಂಚಕರಿಗೆ ಮಾರುತ್ತಿದ್ದರು. ಇಂಥ ಕೆಲಸದಿಂದಲೇ ಮೂವರು ಕೇವಲ ಎರಡು ತಿಂಗಳಿನಲ್ಲಿ ₹ 10 ಕೋಟಿ ಗಳಿಸಿದ್ದರು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT