ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್‌ ಮಾಸ | ತರಹೇವಾರಿ ಖರ್ಜೂರ, ಆರೋಗ್ಯಕ್ಕೆ ಅಂಜೂರ

ರಂಜಾನ್‌ ತಿಂಗಳಲ್ಲಿ ನಗರದಲ್ಲೇ 500 ಟನ್‌ಗೂ ಹೆಚ್ಚು ಖರ್ಜೂರ ಮಾರಾಟದ ನಿರೀಕ್ಷೆ
Published 22 ಮಾರ್ಚ್ 2024, 23:58 IST
Last Updated 22 ಮಾರ್ಚ್ 2024, 23:58 IST
ಅಕ್ಷರ ಗಾತ್ರ

ಬೆಂಗಳೂರು: ರಂಜಾನ್‌ ಮಾಸದ ಅಂಗವಾಗಿ ನಗರದ ವಿವಿಧ ಮಾರುಕಟ್ಟೆಗೆ ದೇಶ–ವಿದೇಶದ ವಿಶಿಷ್ಟ ಖರ್ಜೂರದ ತಳಿಗಳು ಲಗ್ಗೆ ಇಟ್ಟಿವೆ. ಬೇಡಿಕೆಯನ್ನೂ ಪಡೆದಿವೆ. ವ್ಯಾಪಾರವೂ ಭರ್ಜರಿಯಾಗಿ ನಡೆಯುತ್ತಿದೆ.

ರಂಜಾನ್‌ ಮಾಸದಲ್ಲಿ ಖರ್ಜೂರಕ್ಕೆ ಹೆಚ್ಚು ಬೇಡಿಕೆ. ಈ ಸಮಯದಲ್ಲಿ ಮುಸ್ಲಿಮರು ಉಪವಾಸ ಮುಗಿಸುವುದೇ ಖರ್ಜೂರ ಸೇವಿಸುವ ಮೂಲಕ. ಈ ವ್ರತಾಚರಣೆ ವೇಳೆ, ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖರ್ಜೂರ ಮಾರಾಟವಾಗುತ್ತದೆ.

ಶಿವಾಜಿನಗರದ ರಸೆಲ್ ಮಾರುಕಟ್ಟೆ, ಯಶವಂತಪುರ ಎಪಿಎಂಸಿ ಮಾರುಕಟ್ಟೆ, ಮಲ್ಲೇಶ್ವರ, ಜಯನಗರ 4ನೇ ಬ್ಲಾಕ್, ಬಸವನಗುಡಿ, ಹಳೇ ತರಗುಪೇಟೆ, ಹೊಸ ತರಗುಪೇಟೆಗಳಲ್ಲಿ ಖರ್ಜೂರ ವ್ಯಾಪಾರ ನಡೆಯುತ್ತದೆ. ಸದ್ಯ ನಗರದಲ್ಲಿ ಖರ್ಜೂರ ಮಾರಾಟದ 200ಕ್ಕೂ ಹೆಚ್ಚು ಅಂಗಡಿಗಳಿವೆ. ಈ ಅವಧಿಯಲ್ಲಿ 500 ಟನ್‌ಗೂ ಅಧಿಕ ಖರ್ಜೂರ ಮಾರಾಟವಾಗುತ್ತದೆ ಎಂದು ಅಂದಾಜಿಸಲಾಗಿದೆ. ವಿದೇಶದ ಬಗೆಬಗೆಯ ಖರ್ಜೂರಗಳು ಈ ಮಾರುಕಟ್ಟೆಗಳಲ್ಲಿ ಲಭ್ಯ. ಮುಸ್ಲಿಮರ ಜತೆಗೆ ಬೇರೆ ಸಮುದಾಯದವರು ಖರ್ಜೂರ ಖರೀದಿಸುತ್ತಾರೆ. 

‘ರಂಜಾನ್‌’ ಅಂಗವಾಗಿ ಮುಸ್ಲಿಮರು ಒಂದು ತಿಂಗಳು ಉಪವಾಸ ವ್ರತ (ರೋಜಾ) ಕೈಗೊಳ್ಳುತ್ತಾರೆ. ಪ್ರವಾದಿ ಮೊಹಮ್ಮದ್‌ ಅವರು ಇಫ್ತಾರ್‌ ವೇಳೆ ಖರ್ಜೂರ ಸೇವಿಸಿ ರೋಜಾ ಮುಕ್ತಾಯಗೊಳಿಸುತ್ತಿದ್ದರು. ಮಸೀದಿ, ಮನೆಗಳಲ್ಲಿ ಸಂಜೆ ಆಯೋಜಿಸುವ ಇಫ್ತಾರ್‌ ಕೂಟಗಳಲ್ಲಿ ಖರ್ಜೂರಕ್ಕೆ ಮೊದಲ ಸ್ಥಾನವಿದೆ’ ಎನ್ನುತ್ತಾರೆ ಸಮುದಾಯದ ಹಿರಿಯರು. 

‘ಅಜೂವಾ ಖರ್ಜೂರ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಖರ್ಜೂರದ ಜೊತೆಗೆ, ಅಫ್ಗಾನಿಸ್ತಾನದ ಅಂಜೂರ, ಬಾದಾಮಿ, ಗೋಡಂಬಿ, ಪಿಸ್ತಾ, ಕ್ಯಾಲಿಫೋರ್ನಿಯಾದ ಅಕ್ರೂಟ್‌ ಕೂಟ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿವೆ. ರಂಜಾನ್‌ ಮಾಸದಲ್ಲಿ ನಮ್ಮ ಅಂಗಡಿಯಲ್ಲಿ ಡ್ರೈಫ್ರೂಟ್ಸ್‌ ಮತ್ತು ಖರ್ಜೂರ್‌ ಖರೀದಿಗೆ ವಿವಿಧ ಕೊಡುಗೆಗಳಿವೆ’ ಎಂದು ಶಿವಾಜಿನಗರದ ರಸೆಲ್‌ ಮಾರ್ಕೆಟ್‌ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಇದ್ರೀಸ್‌ ಚೌಧರಿ ಮಾಹಿತಿ ನೀಡಿದರು. 

‘ಖರ್ಜೂರಗಳಲ್ಲಿ ಔಷಧೀಯ ಗುಣಗಳಿವೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಖರ್ಜೂರ ಅಚ್ಚುಮೆಚ್ಚು. ಅಜುವಾ ಖರ್ಜೂರಕ್ಕೆ ವಿಶೇಷ ಶಕ್ತಿ ಇದೆ. ನಿಶ್ಶಕ್ತಿ, ಚರ್ಮರೋಗ, ದೃಷ್ಟಿ ದೋಷ ಕಾಯಿಲೆ ನಿವಾರಣೆಗೆ ಸಹಕಾರಿ ಎನ್ನಲಾಗಿದೆ. ದಕ್ಷಿಣ ಆಫ್ರಿಕಾ ಮೂಲದ ಮೆಡ್‌ಜೋಲ್ ಖರ್ಜೂರ ಹೆಚ್ಚು ಸಿಹಿಯಾಗಿದ್ದು, ಅಧಿಕ ತಿರುಳು ಹೊಂದಿರುತ್ತದೆ‘ ಎಂದು ಹೇಳಿದರು.

ರಸೆಲ್‌ ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಕಂಡುಬಂದ ವಿವಿಧ ಬಗೆಯ ಖರ್ಜೂರಗಳನ್ನು ಗ್ರಾಹಕರಿಗೆ ತೋರಿಸಿದರು. –ಪ್ರಜಾವಾಣಿ ಚಿತ್ರ/ಪ್ರಶಾಂತ್‌ ಎಚ್.ಜಿ

ರಸೆಲ್‌ ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಕಂಡುಬಂದ ವಿವಿಧ ಬಗೆಯ ಖರ್ಜೂರಗಳನ್ನು ಗ್ರಾಹಕರಿಗೆ ತೋರಿಸಿದರು. –ಪ್ರಜಾವಾಣಿ ಚಿತ್ರ/ಪ್ರಶಾಂತ್‌ ಎಚ್.ಜಿ 

‘ದಿನದ 12 ಗಂಟೆಯವರೆಗೂ ಉಪವಾಸ ಮಾಡುವುದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣ ಕುಂಠಿತಗೊಳ್ಳುತ್ತದೆ. ಇದನ್ನು ನಿವಾರಿಸಲು ಸಂಜೆ ಇಫ್ತಾರ್‌ ವೇಳೆಯಲ್ಲಿ ಖರ್ಜೂರ ಸೇವಿಸಲಾಗುತ್ತದೆ. ಇದರಿಂದ ನೈಸರ್ಗಿಕವಾದ ಸಕ್ಕರೆ ಅಂಶ ನಮ್ಮ ದೇಹಕ್ಕೆ ಸಿಗುವುದರ ಜೊತೆಗೆ ದೇಹದಲ್ಲಿ ಶಕ್ತಿಯ ಪ್ರಮಾಣವು ಹೆಚ್ಚಾಗುತ್ತದೆ’ ಎಂದು ಹಲಸೂರಿನ ಸುಲೇಮಾನ್‌ ಪಾಷಾ ಹೇಳಿದರು.

‘ವಿದೇಶಿ ಖರ್ಜೂರಕ್ಕೆ ಹೆಚ್ಚಿದ ಬೇಡಿಕೆ’

ಪ್ರಪಂಚದಲ್ಲಿ 350ಕ್ಕೂ ಹೆಚ್ಚು ಬಗೆಯ ಖರ್ಜೂರ ಬೆಳೆಯಲಾಗುತ್ತದೆ. ಶಿವಾಜಿನಗರದ ರಸೆಲ್‌ ಮಾರುಕಟ್ಟೆಯಲ್ಲಿಯೇ 42 ಬಗೆಯ ಖರ್ಜೂರಗಳು ದೊರೆಯುತ್ತವೆ. ‘ವಿದೇಶದ ಖರ್ಜೂರ ಹಾಗೂ ಒಣಹಣ್ಣುಗಳ ಖರೀದಿಗಾಗಿ ರಂಜಾನ್‌ಗಿಂತ ಒಂದು ತಿಂಗಳಿಂದ ಮುಂಚಿನಿಂದಲೇ ಬೇಡಿಕೆ ಇರುತ್ತದೆ. ಸೌದಿ ಅರೇಬಿಯಾ ಇರಾನ್ ಜೋರ್ಡಾನ್ ಬಾಗ್ದಾದ್ ಟ್ಯುನಿಷಿಯಾ ದಕ್ಷಿಣ ಆಫ್ರಿಕಾ ಖರ್ಜೂರಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಅದರಲ್ಲಿ ಅಜುವಾ ಸಕ್ಕರೆ ರಹಿತ ಮೆಡ್ಜಾಲ್‌ ರುತ್ಭ ಸುಖ್ರಿ ಸಖಾರಿ ಕಲ್ಮಿ ಇರಾನಿ ಅಂಬರ ಖುದ್ರಿ ಸಗಾಯಿ ಸೇರಿ ಹಲವಾರು ಬಗೆಯ ಖರ್ಜೂರಗಳು ಲಭ್ಯ. ಪ್ರತಿ ಕೆ.ಜಿ.ಗೆ ಕನಿಷ್ಠ ₹100ರಿಂದ ಗರಿಷ್ಠ ₹2ಸಾವಿರವರೆಗೆ ದರವಿದೆ. ರಂಜಾನ್‌ ತಿಂಗಳಲ್ಲಿ ನಾನು 12ರಿಂದ 15 ಟನ್‌ನಷ್ಟು ಖರ್ಜೂರ್‌ ಮಾರಾಟ ಮಾಡುತ್ತೇನೆ’ ಎಂದು ಮಹಮ್ಮದ್ ಇದ್ರೀಸ್‌ ಚೌಧರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT