ಶುಕ್ರವಾರ, ಸೆಪ್ಟೆಂಬರ್ 25, 2020
23 °C

ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಕೊರೋನಾ ಸೋಂಕು ಪತ್ತೆಯಾಗುತ್ತಿರುವ ಹೊಸ ಪ್ರಕರಣಗಳು ಹಾಗೂ ಸಕ್ರಿಯ ಪ್ರಕರಣಗಳ ಸರಾಸರಿ ಏರಿಕೆಯು ಗರಿಷ್ಠ ಪ್ರಮಾಣವನ್ನು ತಲುಪಿ ನಂತರ ಇಳಿಮುಖವಾಗುತ್ತಿವೆ. ಕೋವಿಡ್‌ನಿಂದ ಉಂಟಾಗುವ ಸಾವಿನ ಪ್ರಕರಣಗಳಲ್ಲಿ ಏರುಪೇರಾಗಿದ್ದರೂ ಈಗ ಏರಿಕೆ ಸರಾಸರಿಯು ಜೂನ್‌ ಆರಂಭದಲ್ಲಿದ್ದಕ್ಕಿಂತ ಕಡಿಮೆ ಮಟ್ಟಕ್ಕೆ ಇಳಿದಿದೆ.

ಬಿಬಿಎಂಪಿಯು ಜೂನ್‌ 13ರಿಂದ ಆ. 8ರ ವರೆಗಿನ ಎಂಟು ವಾರಗಳ ಅವಧಿಯಲ್ಲಿ ಪ್ರತಿ 30 ದಿನಗಳ ಅಂಕಿ ಅಂಶಗಳ ಸರಾಸರಿಯನ್ನು ಹೋಲಿಸಿ ನೋಡಿದಾಗ ಈ ಪ್ರವೃತ್ತಿ ಕಂಡುಬಂದಿದೆ.

ಕೋವಿಡ್‌ ಸಕ್ರಿಯ ಪ್ರಕರಣಗಳ ಪ್ರಮಾಣ ಜುಲೈ ಮೊದಲ ವಾರದಲ್ಲಿ ಗರಿಷ್ಠ ಮಟ್ಟವನ್ನು ತಲುಪಿತ್ತು. ಪ್ರಸ್ತುತ ಜೂನ್‌ ಎರಡನೇ ವಾರದಲ್ಲಿದ್ದುದಕ್ಕಿಂತಲೂ ಕಡಿಮೆಯಾಗಿದೆ. ಹೊಸ ಪ್ರಕರಣಗಳ ಪತ್ತೆ ಪ್ರಮಾಣ ಜುಲೈ ಮೂರನೇ ವಾರದಲ್ಲಿ ಗರಿಷ್ಠ ಮಟ್ಟ ತಲುಪಿತ್ತು. ಈಗ ಜೂನ್‌ ಮೊದಲ ವಾರದಷ್ಟಕ್ಕೆ ಇಳಿಕೆಯಾಗಿದೆ. ಕೋವಿಡ್‌ನಿಂದ ಉಂಟಾದ ಸಾವಿನ ಪ್ರಮಾಣ ಜೂನ್‌ ನಾಲ್ಕನೇ ವಾರದಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿ ಮತ್ತೆ ಇಳಿಮುಖವಾಗಿತ್ತು. ನಂತರ ಜುಲೈ ಮೂರನೇ ವಾರದಲ್ಲಿ ಮತ್ತೆ ಏರಿಕೆಯಾಗಿತ್ತು. ನಂತರ ಇಳಿಮುಖವಾಗುತ್ತಾ ಸಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ‌ನಡೆಸಿರುವ ವಿಶ್ಲೇಷಣೆಗಳು ಹೇಳುತ್ತಿವೆ.

‘ನಾವು ಕೋವಿಡ್‌ ಪರೀಕ್ಷೆಗಳ ಪ್ರಮಾಣದಲ್ಲಿ ಸಾಕಷ್ಟು ಹೆಚ್ಚಳ ಮಾಡಿದ್ದೇವೆ. ಆದರೂ ಪತ್ತೆಯಾಗುತ್ತಿರುವ ಹೊಸ ಪ್ರಕರಣಗಳು ಪರೀಕ್ಷೆಯ ಹೆಚ್ಚಳದ ಅನುಪಾತದಲ್ಲಿ ಏರಿಕೆ ಕಂಡಿಲ್ಲ. ನಿತ್ಯ 3 ಸಾವಿರ ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಎಷ್ಟು ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದವೋ ಅಷ್ಟೇ ಪ್ರಕರಣಗಳು 10 ಸಾವಿರದಿಂದ 15 ಸಾವಿರ ಪರೀಕ್ಷೆಗಳನ್ನು ನಡೆಸಿದಾಗಲೂ ಪತ್ತೆಯಾಗುತ್ತಿವೆ. ಸೋಂಕು ಹಬ್ಬುವಿಕೆ ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದ ಲಕ್ಷಣಗಳಿವು’ ಎನ್ನುತ್ತಾರೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌.

‘ಪರೀಕ್ಷೆಯ ತಂತ್ರಗಾರಿಕೆಯನ್ನು ನಾವು ಬದಲಾಯಿಸಿಕೊಂಡಿದ್ದೇವೆ. ಒಬ್ಬ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾದರೆ ಅದಕ್ಕಿಂತ 10 ಪಟ್ಟು ಹೆಚ್ಚು ಮಂದಿಯನ್ನು ಪರೀಕ್ಷೆಗೆ ಒಳಪಡಿಸುವ ಉದ್ದೇಶ ನಮ್ಮದು. ಹೆಚ್ಚು ಪರೀಕ್ಷೆಗಳನ್ನು ನಡೆಸಿ, ಸೋಂಕಿತರನ್ನು, ಅವರ ಜೊತೆ ನೇರ ಹಾಗೂ ಪರೋಕ್ಷವಾಗಿ ಸಂಪರ್ಕಕ್ಕೆ ಬಂದವರನ್ನು ಪರೀಕ್ಷೆಗೆ ಒಳಪಡಿಸಿ ಅವರು ಇತರರಿಗೆ ಸೋಂಕು ಹರಡದಂತೆ ತಡೆಯುವುದು ನಮ್ಮ ಈಗಿನ ಕಾರ್ಯತಂತ್ರ’ ಎಂದು ವಿವರಿಸಿದರು.

‘ಸೋಂಕಿತರ ದೇಹಸ್ಥಿತಿ ಉಲ್ಪಣಗೊಂಡ ಬಳಿಕ ಆಸ್ಪತ್ರೆಗೆ ದಾಖಲಾದರೆ ಸಾವಿನ ಪ್ರಮಾಣ ಹೆಚ್ಚುತ್ತದೆ. ಇದನ್ನು ತಡೆಯಲು  50 ವರ್ಷ ಮೀರಿದವರು, ಜ್ವರ, ಶೀತ, ಕೆಮ್ಮು, ಉಸಿರಾಟದ ತೊಂದರೆ, ಹೃದ್ರೋಗ ಮತ್ತಿತರ ಕಾಯಿಲೆ ಇರುವವರನ್ನೂ ಆದ್ಯತೆ ಮೇರೆಗೆ ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ’ ಎಂದು ತಿಳಿಸಿದರು.

‘ಶನಿವಾರ ಒಟ್ಟು 16 ಸಾವಿರ ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿದ್ದೇವೆ. ನಿತ್ಯ ಕನಿಷ್ಠ 20 ಸಾವಿರ ಪರೀಕ್ಷೆಗಳನ್ನು ನಡೆಸುವ ಗುರಿ ನಮ್ಮದು. ಸಿಬ್ಬಂದಿ ಕೊರತೆಯ ನಡುವೆಯೂ ಇದನ್ನು ಸಾಧಿಸುವ ಸವಾಲು ನಮ್ಮ ಮುಂದಿದೆ’ಎಂದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು