ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ತಿಂಗಳ ಬಳಿಕ ಕಾಲೇಜು ಆರಂಭ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಲರವ

Last Updated 26 ಜುಲೈ 2021, 21:24 IST
ಅಕ್ಷರ ಗಾತ್ರ

ಬೆಂಗಳೂರು: ಕಾರ್ಗಿಲ್‌ ವಿಜಯ ದಿವಸದ ಆಚರಣೆಯೊಂದಿಗೆ ನಗರದ ‍ಪದವಿ ಕಾಲೇಜುಗಳು ಸೋಮವಾರದಿಂದ ಪುನರಾರಂಭವಾದವು. ನಾಲ್ಕು ತಿಂಗಳುಗಳ ನಂತರ ಕಾಲೇಜು ಕ್ಯಾಂಪಸ್ ಪ್ರವೇಶಿಸಿದ ವಿದ್ಯಾರ್ಥಿಗಳು ಸಡಗರ, ಸಂಭ್ರಮದಿಂದ ತರಗತಿಗೆ ಹಾಜರಾದರು.

ನಗರದ ಬಹುತೇಕ ಕಾಲೇಜುಗಳಲ್ಲಿ ಶೇ 50ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಹಾಜರಿದ್ದರು. ಎನ್‌ಸಿಸಿ ಸೇರಿದಂತೆ ಮೊದಲ ದಿನವೇ ವಿವಿಧ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗಿಯಾದರು. ನಗರದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಮೊದಲ ದಿನವೇ ಶೇ 50ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು.

ಮಾರ್ಗಸೂಚಿ ಪಾಲನೆ:ವಿದ್ಯಾರ್ಥಿಗಳು ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆಯೇ ಎನ್ನುವುದನ್ನು ಪರೀಕ್ಷಿಸಲು ಕಾಲೇಜಿನ ಪ್ರವೇಶ ದ್ವಾರದಲ್ಲಿಯೇ, ವಿದ್ಯಾರ್ಥಿಗಳ ಮೊಬೈಲ್ ಸಂದೇಶವನ್ನು ಪರಿಶೀಲಿಸಲಾಗುತ್ತಿತ್ತು. ದೇಹದ ಉಷ್ಣಾಂಶ ಪರೀಕ್ಷಿಸಿದ ನಂತರವೇ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿತ್ತು. ಅಲ್ಲಲ್ಲಿ, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಪೋಷಕರಿಂದ ತಂದ ಒಪ್ಪಿಗೆ ಪತ್ರವನ್ನು ವಿದ್ಯಾರ್ಥಿಗಳಿಂದ ಕಾಲೇಜು ಸಿಬ್ಬಂದಿ ಪಡೆದರು. ಪ್ರಯೋಗಾಲಯದಲ್ಲಿಯೂ ಮೊದಲ ದಿನವೇ ವಿದ್ಯಾರ್ಥಿಗಳು ಹಾಜರಾಗಿ ಚಟುವಟಿಕೆಯಲ್ಲಿ ಮಗ್ನರಾಗಿದ್ದರು.

‘ಏ.28ರಿಂದ ಕಾಲೇಜುಗಳು ಬಂದ್ ಆಗಿದ್ದವು. ಮಕ್ಕಳು ಸಹ ಬೇಗ ಕಾಲೇಜು ಆರಂಭವಾಗಲಿ ಎಂದು ಆಸೆ ಪಟ್ಟಿದ್ದರು. ತುಂಬಾ ಹುರುಪಿನಿಂದಲೇ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದಾರೆ. ಕಾಲೇಜಿಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಪಾಠಗಳು ನಡೆಯುತ್ತಿವೆ. ಬಹುತೇಕ ಬೋಧಕ ಸಿಬ್ಬಂದಿಯು ಈಗಾಗಲೇ ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿದ್ದಾರೆ’ ಎಂದು ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕಿ ಟಿ. ಶಶಿಕಲಾ ಹೇಳಿದರು.

‘ಕಾಲೇಜು ಆರಂಭಕ್ಕೆ ಮೂರು ದಿನ ಮುನ್ನವೇ ಕೊಠಡಿಗಳು, ಡೆಸ್ಕ್‌ಗಳನ್ನು ಸ್ವಚ್ಛಗೊಳಿಸಲಾಗಿತ್ತು. ಒಂದು ಡೆಸ್ಕ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳು ಮಾತ್ರ ಕೂರುವ ವ್ಯವಸ್ಥೆ ಮಾಡಲಾಗಿದೆ. ಸದ್ಯಕ್ಕೆ ಡೆಸ್ಕ್‌ಗಳ ಕೊರತೆಯೇನೂ ಕಂಡು ಬಂದಿಲ್ಲ. ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿದರೆ, ಪರ್ಯಾಯ ದಿನಗಳಂದು, ಅಂದರೆ ದಿನ ಬಿಟ್ಟು ದಿನ, ಒಂದೊಂದು ತರಗತಿಯ ವಿದ್ಯಾರ್ಥಿಗಳನ್ನು ಕರೆಸುವ ಚಿಂತನೆ ಇದೆ. ಎಲ್ಲರನ್ನೂ ಏಕಕಾಲಕ್ಕೆ ಕರೆಸಿದರೆ ಅಂತರ ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ’ ಎಂದು ಅವರು ಹೇಳಿದರು.

ಲಸಿಕೆ ಕೊರತೆ:ಕಾಲೇಜಿಗೆ ಬರುವ ಮುನ್ನ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಸಲಹೆ ಮಾಡಲಾಗಿತ್ತು. ಮೊದಲ ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿತ್ತು. ಲಸಿಕೆ ಪಡೆಯದವರಿಗೆ ಪ್ರವೇಶ ನೀಡುತ್ತಿಲ್ಲ. ಕೆಲವು ಕಡೆಗಳಲ್ಲಿ ಲಸಿಕೆ ಕೊರತೆಯಾಗಿತ್ತು. ವಿದ್ಯಾರ್ಥಿಗಳಿಗೆ ಆದ್ಯತೆ ಮೇಲೆ ನೀಡುತ್ತಿದ್ದರೂ ಕಳೆದ ಒಂದು ವಾರದಿಂದ ಬಹುತೇಕ ಕಡೆಗಳಲ್ಲಿ ಲಸಿಕೆ ಲಭ್ಯವಾಗುತ್ತಿಲ್ಲ.

‘ಬೋಧಕ ಸಿಬ್ಬಂದಿ ಎಲ್ಲರೂ ಲಸಿಕೆ ಪಡೆದಿದ್ದಾರೆ. ಶೇ 75ರಷ್ಟು ವಿದ್ಯಾರ್ಥಿಗಳಿಗೂ ಲಸಿಕೆ ಹಾಕಲಾಗಿದೆ. ಉಳಿದ ಶೇ 25ರಷ್ಟು ವಿದ್ಯಾರ್ಥಿಗಳಿಗೆ ಬುಧವಾರ ಅಥವಾ ಗುರುವಾರದಂದು ಕಾಲೇಜಿನ ಆವರಣದಲ್ಲಿಯೇ ಲಸಿಕೆ ಹಾಕಿಸಲು ವ್ಯವಸ್ಥೆ ಮಾಡಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಉಪನ್ಯಾಸಕಿಯೊಬ್ಬರು ಹೇಳಿದರು.

ವಸತಿ ನಿಲಯಗಳೂ ಆರಂಭ:ಪದವಿ ಕಾಲೇಜುಗಳು ಮಾತ್ರವಲ್ಲದೆ, ವಿದ್ಯಾರ್ಥಿಗಳಿರುವ ವಸತಿ ನಿಲಯಗಳು ಕೂಡ ಸೋಮವಾರದಿಂದ ಪುನರಾರಂಭವಾದವು. ಆದರೆ, ಕೋವಿಡ್‌ ಆರೈಕೆ ಕೇಂದ್ರಗಳಾಗಿ ಮಾರ್ಪಡಿಸಲಾಗಿದ್ದ ಕೆಲವು ಹಾಸ್ಟೆಲ್‌ಗಳನ್ನು ಮುಂದಿನ ವಾರದಿಂದ ವಿದ್ಯಾರ್ಥಿಗಳಿಗಾಗಿ ತೆರೆಯಲಾಗುವುದು ಎಂದು ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ಹೇಳಿದೆ.

ಪದವಿ ಮೊದಲ ವರ್ಷದ ದಾಖಲಾತಿ ಚುರುಕು

ದ್ವಿತೀಯ ಪಿಯುಸಿಯಲ್ಲಿ ಶೇ 100ರಷ್ಟು ಫಲಿತಾಂಶ ಬಂದಿರುವುದರಿಂದ ಪದವಿ ಮೊದಲ ವರ್ಷದ ದಾಖಲಾತಿ ಚುರುಕುಗೊಂಡಿದೆ. ಅಗತ್ಯಕ್ಕಿಂತ ಹೆಚ್ಚು ಸೀಟುಗಳನ್ನು ಭರ್ತಿ ಮಾಡಿಕೊಳ್ಳಲು ಅನುಮತಿ ನಿರೀಕ್ಷೆಯಲ್ಲಿ ಕಾಲೇಜುಗಳು ಇವೆ.

ಸರ್ಕಾರಿ ಕಾಲೇಜುಗಳಲ್ಲಿಯೂ ದಾಖಲಾತಿ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಹೊಸ ವಿಭಾಗಗಳು (ಸೆಕ್ಷನ್‌) ಮತ್ತು ಕೋರ್ಸ್‌ಗಳನ್ನೂ ಪ್ರಾರಂಭಿಸಲಾಗುತ್ತಿದೆ. ವಾಣಿಜ್ಯ ಕೋರ್ಸ್‌ಗಳಿಗೆ ಹೆಚ್ಚು ಬೇಡಿಕೆ ಇದ್ದು, ಕಲಾ ವಿಭಾಗದಲ್ಲಿ ಅರ್ಥಶಾಸ್ತ್ರ ವಿಷಯ ಮುಖ್ಯವಾಗಿರುವ ಸಂಯೋಜನೆಯನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

‘ಸರ್ಕಾರಿ ಕಾಲೇಜುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಬಯಸುತ್ತಿದ್ದಾರೆ. ಹೆಚ್ಚುವರಿ ಸೆಕ್ಷನ್‌ಗಳನ್ನು ಪ್ರಾರಂಭಿಸಲು ಇಲಾಖೆಯಿಂದ ಅನುಮತಿ ಕೇಳಲಾಗಿದೆ. ಎಷ್ಟೇ ವಿದ್ಯಾರ್ಥಿಗಳು ಬಂದರೂ ಪ್ರವೇಶಾವಕಾಶ ಕಲ್ಪಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಸರ್ಕಾರಿ ಪದವಿ ಕಾಲೇಜುಗಳ ಅಧ್ಯಾಪಕರ ಸಂಘ ಡಾ.ಟಿ.ಎಂ. ಮಂಜುನಾಥ ಹೇಳಿದರು.

ಸಂತಸದಲ್ಲಿ ವಿದ್ಯಾರ್ಥಿಗಳು

ಆನ್‌ಲೈನ್‌ ಕಲಿಕೆ ಕಷ್ಟ

ಆನ್‌ಲೈನ್ ಶಿಕ್ಷಣದಲ್ಲಿ ಕೆಲವು ವಿಷಯಗಳು ಅರ್ಥವಾಗುತ್ತಿದ್ದವು ಕೆಲವು ಅರ್ಥವಾಗುತ್ತಿರಲಿಲ್ಲ. ಕಾಲೇಜು ಆರಂಭವಾಗಿರುವುದು ಖುಷಿ ಆಗಿದೆ. ನಾವೇ ಅಂತರವನ್ನು ಕಾಪಾಡಿಕೊಳ್ಳಬೇಕು. ಕೋವಿಡ್ ನಿಯಮಗಳನ್ನು ನಾವೇ ಸ್ವಯಂ ಪ್ರೇರಿತರಾಗಿ ಪಾಲಿಸಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ

- ಆರ್. ಬಸವರಾಜ, ಬಿಎ ಅಂತಿಮ ವರ್ಷದ ವಿದ್ಯಾರ್ಥಿ

***

ಖುಷಿ ನೀಡಿದೆ

ಕಾಲೇಜು ಆರಂಭವಾಗಿರುವುದು ನನಗೆ ಮತ್ತು ನನ್ನ ಬಹಳಷ್ಟು ಸ್ನೇಹಿತೆಯರಿಗೆ ಖುಷಿ ನೀಡಿದೆ. ಮೊದಲ ದಿನವೇ ಬಂದಿದ್ದೇವೆ. ಎಚ್ಚರಿಕೆಯಿಂದ ಇರುವಂತೆ ಪೋಷಕರು ಸಲಹೆ ನೀಡಿದ್ದಾರೆ. ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಅಧ್ಯಾಪಕರು ಸಹ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.

–ಪಿ. ಕಾವ್ಯ, ಪದವಿ ಅಂತಿಮ ವರ್ಷದ ವಿದ್ಯಾರ್ಥಿನಿ

***

‌ಮನೆಯಲ್ಲಿದ್ದು ಬೇಸರ

ಕಾಲೇಜುಗಳಲ್ಲಿ ಪಾಠಗಳು ಇಲ್ಲದೇ ಶಿಕ್ಷಣಕ್ಕೆ ತೊಂದರೆ ಆಗಿತ್ತು. ನೆಟ್‌ವರ್ಕ್‌ ಸಮಸ್ಯೆಯಿಂದ ಕಲಿಕೆ ಸರಿಯಾಗಲಿಲ್ಲ. ಅಲ್ಲದೆ, ಮನೆಯಲ್ಲಿದ್ದು ಬೇಸರವಾಗಿತ್ತು. ಗೆಳತಿಯರ ಜೊತೆ ಮಾತನಾಡಲು ಸಾಧ್ಯವಾಗಿರಲಿಲ್ಲ. ಕಾಲೇಜು ಆರಂಭವಾಗಿರುವುದು ನನಗಂತೂ ಹೆಚ್ಚಿನ ಖುಷಿ ಕೊಟ್ಟಿದೆ.

- ಸುನೀತಾ, ಬಿಎ ದ್ವಿತೀಯ ವರ್ಷದ ವಿದ್ಯಾರ್ಥಿನಿ

***

ಎರಡೂ ಸೆಮಿಸ್ಟರ್ ಪರೀಕ್ಷೆ ಕಷ್ಟ

ಕಾಲೇಜು ಪ್ರಾರಂಭಿಸಿರುವುದು ಸ್ವಾಗತಾರ್ಹ. ಇನ್ನು ಒಂದು ತಿಂಗಳ ಅವಧಿಯಲ್ಲಿ ವಿದ್ಯಾರ್ಥಿಗಳು ಎರಡೂ ಸೆಮಿಸ್ಟರ್ ಪರೀಕ್ಷೆ ಬರೆಯುವುದು ಕಷ್ಟ‌. ಈ ಬಗ್ಗೆ ಶಿಕ್ಷಣ ಸಚಿವರು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿ ಕ್ರಮ ಕೈಗೊಳ್ಳಬೇಕು.

- ವೈ.ಕೆ. ವಿಷ್ಣುವರ್ಧನ್‌, ಪದವಿ ಅಂತಿಮ ವರ್ಷದ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT