ನೇಮಕಾತಿಗೆ ಇನ್ಫೊಸಿಸ್‌ನಿಂದ ವಿಳಂಬ: ಪರಿಶೀಲನೆಗೆ ಕೇಂದ್ರ ಸೂಚನೆ
ಸೋನಲ್ ಚೌಧರಿ
Published : 5 ಸೆಪ್ಟೆಂಬರ್ 2024, 20:27 IST
Last Updated : 5 ಸೆಪ್ಟೆಂಬರ್ 2024, 20:27 IST
ಫಾಲೋ ಮಾಡಿ
Comments
ಬೆಂಗಳೂರು: ಐ.ಟಿ. ಸೇವಾ ಕಂಪನಿ ಇನ್ಫೊಸಿಸ್ ‘ಐ.ಟಿ. ಪದವೀಧರರನ್ನು ಶೋಷಣೆಗೆ ಗುರಿಪಡಿಸಿದೆ’ ಎಂಬ ಆರೋಪದ ಬಗ್ಗೆ ಪರಿಶೀಲನೆ ನಡೆಸುವಂತೆ ಕೇಂದ್ರ ಕಾರ್ಮಿಕ ಸಚಿವಾಲಯವು ರಾಜ್ಯದ ಕಾರ್ಮಿಕ ಇಲಾಖೆಗೆ ಸೂಚನೆ ನೀಡಿದೆ.
ಸಿಸ್ಟಂ ಎಂಜಿನಿಯರ್ ಮತ್ತು ಡಿಜಿಟಲ್ ಸ್ಪೆಷಲಿಸ್ಟ್ ಎಂಜಿನಿಯರ್ ಹುದ್ದೆಗಳಿಗೆ (ಒಟ್ಟು 2,500 ಮಂದಿಗೆ) ನೇಮಕ ಮಾಡಿಕೊಳ್ಳುವುದಾಗಿ ಕಂಪನಿಯು 2022ರಲ್ಲಿಯೇ ಹೇಳಿದ್ದರೂ, ಇನ್ನೂ ನೇಮಕಾತಿ ಆಗಿಲ್ಲ ಎಂಬ ಆರೋಪಕ್ಕೆ ಇದು ಸಂಬಂಧಿಸಿದೆ.
ಐ.ಟಿ. ಉದ್ಯೋಗಿಗಳ ಸಂಘಟನೆಯಾದ ಎನ್‌ಐಟಿಇಎಸ್‌ನ ಅಧ್ಯಕ್ಷ ಹರಪ್ರೀತ್ ಸಿಂಗ್ ಸಲುಜಾ ಅವರು ಇ–ಮೇಲ್ ಮೂಲಕ ಸಲ್ಲಿಸಿದ ದೂರಿಗೆ ಪ್ರತಿಯಾಗಿ ಕೇಂದ್ರವು, ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ರಾಜ್ಯಕ್ಕೆ ಸೆಪ್ಟೆಂಬರ್ 3ರಂದು ಬರೆದ ಪತ್ರದಲ್ಲಿ ಹೇಳಿದೆ.
ಎನ್‌ಐಟಿಇಎಸ್ ಸಂಘಟನೆಯು ಜೂನ್ ತಿಂಗಳಲ್ಲಿ ಹಾಗೂ ಆಗಸ್ಟ್‌ನಲ್ಲಿ ಕೇಂದ್ರದ ಮಧ್ಯಪ್ರವೇಶಕ್ಕೆ ಕೋರಿಕೆ ಸಲ್ಲಿಸಿತ್ತು. ಇದಾದ ನಂತರದಲ್ಲಿ ಇನ್ಫೊಸಿಸ್ ಕಂಪನಿಯು, ಸರಿಸುಮಾರು ಎರಡು ಸಾವಿರ ಮಂದಿಗೆ ಈ ವರ್ಷದ ಅಕ್ಟೋಬರ್‌ನಲ್ಲಿ ಕೆಲಸಕ್ಕೆ ಸೇರುವಂತೆ ಪತ್ರ ರವಾನಿಸಿದೆ.
ಆದರೆ, ಸರಿಸುಮಾರು 500 ಮಂದಿಗೆ ಕೆಲಸಕ್ಕೆ ಸೇರಿಕೊಳ್ಳುವ ದಿನಾಂಕ ಯಾವುದು ಎಂಬುದು ಕಂಪನಿಯ ಕಡೆಯಿಂದ ಇನ್ನೂ ಖಚಿತವಾಗಿಲ್ಲ. ಈ ವಿಚಾರವಾಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಲು ಇನ್ಫೊಸಿಸ್ ನಿರಾಕರಿಸಿದೆ.
ಕೆಲಸಕ್ಕೆ ಸೇರಿಕೊಳ್ಳುವ ದಿನಾಂಕ ಯಾವುದು ಎಂಬುದು ಎರಡು ವರ್ಷಗಳಿಂದಲೂ ಖಚಿತವಾಗದೆ ಇದ್ದ ಕಾರಣಕ್ಕೆ, ಅಭ್ಯರ್ಥಿಗಳು ಪುಣೆ ಮೂಲದ ಎನ್‌ಐಟಿಇಎಸ್‌ನ ನೆರವು ಯಾಚಿಸಿದ್ದರು.