ಮಂಗಳವಾರ, ಡಿಸೆಂಬರ್ 7, 2021
20 °C
ಚೇತರಿಕೆ ಹಾದಿಯಲ್ಲಿ ವಾಣಿಜ್ಯ ಚಟುವಟಿಕೆ

ಬಾಡಿಗೆ ಮನೆಗಳಿಗೆ ಮತ್ತೆ ಕುದುರುತ್ತಿದೆ ಬೇಡಿಕೆ

ಸಚ್ಚಿದಾನಂದ ಕುರಗುಂದ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಸಂಕಷ್ಟಕ್ಕೆ ತತ್ತರಿಸಿದ್ದ ಜನಜೀವನ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ ಖಾಲಿ ಬಿದ್ದಿದ್ದ ಬಾಡಿಗೆ ಮನೆಗಳಿಗೆ ಈಗ ನಿಧಾನವಾಗಿ ಬೇಡಿಕೆ ಮತ್ತೆ ಕುದುರುತ್ತಿದೆ.

ಕೋವಿಡ್‌ ಕಾಣಿಸಿಕೊಂಡ ನಂತರ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು, ಕಟ್ಟಡ ಕಾರ್ಮಿಕರು, ಗಾರ್ಮೆಂಟ್ಸ್‌ ಕಾರ್ಖಾನೆಗಳ ಕಾರ್ಮಿಕರು ಸೇರಿದಂತೆ ವಿವಿಧ ವಲಯಗಳಲ್ಲಿ ದುಡಿಯುತ್ತಿದ್ದವರು ಊರಿಗೆ ಮರಳಿದ್ದರು. ನಂತರದ ಬಹುತೇಕ ಬಡಾವಣೆಗಳಲ್ಲಿ ‘ಮನೆ ಖಾಲಿ ಇದೆ’ ಎನ್ನುವ ಫಲಕಗಳು ಅಲ್ಲಲ್ಲಿ ರಾರಾಜಿಸುತ್ತಿದ್ದವು.

‘ಬಾಡಿಗೆ ಮನೆ’ಗಳು ಹಲವರ ಬದುಕಿನ ಆಧಾರ ಸ್ತಂಭಗಳಾಗಿವೆ. ಆದಾಯ ತಂದು ಕೊಡುವ ಈ ಮನೆಗಳು ಖಾಲಿ ಬಿದ್ದಾಗ ಮಾಲೀಕರ ದೈನಂದಿನ ಬದುಕಿನ ನಿರ್ವಹಣೆಗೂ ಪೆಟ್ಟು ಬಿದ್ದಿತ್ತು.

ಈಗ ಮತ್ತೆ ಎಲ್ಲ ವಲಯಗಳ ಚಟುವಟಿಕೆಗಳು ಎಂದಿನಂತೆ ನಡೆಯುತ್ತಿದ್ದು, ವಾಣಿಜ್ಯ ವಹಿವಾಟು ಕ್ರಮೇಣ ಚೇತರಿಸಿಕೊಳ್ಳುತ್ತಿದೆ. ಮಾಹಿತಿ ತಂತ್ರಜ್ಞಾನ ಕಂಪನಿಗಳು ಮನೆಯಿಂದಲೇ ಕೆಲಸ (ವರ್ಕ್‌ ಫ್ರಂ ಹೋಮ್‌) ವ್ಯವಸ್ಥೆಯನ್ನು ಹಂತ ಹಂತವಾಗಿ ಸ್ಥಗಿತಗೊಳಿಸಿ ಕಚೇರಿಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ಸಿದ್ಧತೆ ನಡೆಸಿವೆ. ಉದ್ಯೋಗಿಗಳಿಗೆ ಕಚೇರಿ ಬರುವಂತೆ ನೌಕರರಿಗೆ ಸೂಚನೆ ನೀಡಿವೆ.

ಟಿಸಿಎಸ್‌ ಸೇರಿದಂತೆ ಕೆಲವು ಕಂಪನಿಗಳಲ್ಲಿ ವ್ಯವಸ್ಥಾಪಕರ ಹಂತದ ಹುದ್ದೆಗಳಲ್ಲಿರುವವರು ಕಚೇರಿಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ ಉದ್ಯೋಗಿಗಳಿಗೂ ನವೆಂಬರ್‌ನಿಂದ ಹಂತ ಹಂತವಾಗಿ ಕಚೇರಿಗೆ ಬರಲು ಸೂಚಿಸಿವೆ. ಕೆಲವು ಕಂಪನಿಗಳು ವಾರದಲ್ಲಿ ಎರಡು ಅಥವಾ ಮೂರು ದಿನ ಮಾತ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸಬೇಕು. ಉಳಿದ ದಿನ ಮನೆಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿವೆ. 

‘ನಮಗೆ ಡಿಸೆಂಬರ್‌ನಿಂದ ಕಚೇರಿಗೆ ಬರಲು ಸೂಚನೆ ನೀಡಿದ್ದಾರೆ. ಕೋವಿಡ್‌ ಮೊದಲನೇ ಅಲೆಯ ಸಂದರ್ಭದಲ್ಲಿ ನಾನು ಬೆಂಗಳೂರಿನಲ್ಲಿ ಮನೆ ಖಾಲಿ ಮಾಡಿದ್ದೆ. ಈಗ ಮುಂದಿನ ತಿಂಗಳು ಬಾಡಿಗೆ ಮನೆ ನೋಡಬೇಕಾಗಿದೆ’ ಎಂದು ಹುಬ್ಬಳ್ಳಿಯಲ್ಲಿರುವ ಸಾಫ್ಟ್‌ವೇರ್‌ ಎಂಜಿನಿಯರ್‌ ಮೇಘಾ ತಿಳಿಸಿದರು.

ಹೊಟೇಲ್‌, ಕಟ್ಟಡ ನಿರ್ಮಾಣದ ಚಟುವಟಿಕೆಗಳು ಸಹ ಚುರುಕುಗೊಂಡಿವೆ. ಊರಿಗೆ ತೆರಳಿದವರು ಮತ್ತೆ ಮರಳಿ ಬಂದು ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಬಾಡಿಗೆ ಮನೆಗಳೂ ಭರ್ತಿ ಆಗುತ್ತಿವೆ.

‘ಬಾಡಿಗೆ ಮನೆಗಳಿಗೆ ಮತ್ತೆ ಬೇಡಿಕೆ ಹೆಚ್ಚಾಗುತ್ತಿದೆ. ಇದು ಮಾಲೀಕರ ಮೇಲೆಯೂ ಅವಲಂಬನೆಯಾಗಿದೆ. ಮನೆ ಮಾಲೀಕರಲ್ಲಿ ಬಹುತೇಕರು ಮುಂಗಡ ಠೇವಣಿ ಮೊತ್ತವನ್ನು ಕಡಿಮೆ ಮಾಡುತ್ತಿದ್ದಾರೆ. ಉದಾಹರಣೆಗೆ ₹50 ಸಾವಿರ ತೆಗೆದುಕೊಳ್ಳುವವರು ₹30 ಸಾವಿರಕ್ಕೂ ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ಬಾಡಿಗೆ ಕಡಿಮೆ ಮಾಡಲು ಸಿದ್ಧರಿಲ್ಲ’ ಎಂದು ರಿಯಲ್‌ ಎಸ್ಟೇಟ್‌ ಬ್ರೋಕರ್‌ ಶಿವಾನಂದ್‌ ತಿಳಿಸಿದರು.

ಪೀಣ್ಯದಲ್ಲಿರುವ ಸೋಮಶೇಖರ್‌, ತಮ್ಮ ಐದು ಮನೆಗಳನ್ನು ಕಡಿಮೆ ಬಾಡಿಗೆಗೆ ನೀಡಿದ್ದಾರೆ. ಕೋವಿಡ್‌ ಬಳಿಕ ಈ ಐದು ಮನೆಗಳು ಖಾಲಿ ಉಳಿದಿದ್ದರಿಂದ ಬಾಡಿಗೆಯಿಂದ ದೊರೆಯುವ ಆದಾಯ ಸಂಪೂರ್ಣ ಸ್ಥಗಿತಗೊಂಡಿತ್ತು. ಮನೆ ನಿರ್ಮಿಸಲು ಮಾಡಿದ್ದ ಸಾಲ ಪಾವತಿಸುವುದು ಸಹ ಇವರಿಗೆ ಕಷ್ಟವಾಗಿತ್ತು.

‘ಬಾಡಿಗೆ ಮನೆಗಳನ್ನು ಖಾಲಿ ಉಳಿಸುವ ಬದಲು ಕಡಿಮೆ ಬಾಡಿಗೆಗೆ ನೀಡಿದ್ದೇನೆ. ಮುಂಗಡ ಠೇವಣಿಯಲ್ಲೂ ಕಡಿಮೆ ಮಾಡಿದ್ದೇನೆ. ವರಮಾನದಲ್ಲಿ ಕಡಿಮೆಯಾದರೂ ಖಾಲಿ ಬಿಡುವುದು ಒಳ್ಳೆಯದಲ್ಲ’ ಎಂದು ಸೋಮಶೇಖರ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು