ಶುಕ್ರವಾರ, ಫೆಬ್ರವರಿ 26, 2021
18 °C
‘ಪ್ರಜಾಪ್ರಭುತ್ವದಲ್ಲಿ ಸಮಕಾಲೀನ ಮೌಲ್ಯಗಳು’ ಸಂವಾದ

‘ಚುನಾವಣಾ ಪದ್ಧತಿಯ ಕಪ್ಪುಚುಕ್ಕೆ ಪಕ್ಷಾಂತರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಜನರಿಂದ ಆಯ್ಕೆಯಾದವರು ಜನರನ್ನು ಲೆಕ್ಕಿಸದೇ ಹೋದರೆ, ಹಣವನ್ನು ಹಿಂಬಾಲಿಸಿದರೆ ಪ್ರಜಾಪ್ರಭುತ್ವಕ್ಕೆ ಮೌಲ್ಯವೇ ಇಲ್ಲದಂತಾಗುತ್ತದೆ. ಪಕ್ಷಾಂತರ ಎಂಬುದು ಚುನಾವಣಾ ಪದ್ಧತಿಯ ಕಪ್ಪುಚುಕ್ಕೆ ಇದ್ದಂತೆ’ ಎಂದು ಹಿರಿಯ ರಾಜಕಾರಣಿ ಮೈಕಲ್‌ ಫರ್ನಾಂಡಿಸ್‌ ಅಭಿಪ್ರಾಯಪಟ್ಟರು. 

ಗಾಂಧಿವಾದಿ ಮಹಾದೇವಿ ತಾಯಿ ಅವರ ಸ್ಮರಣೆಯ ಕಾರ್ಯಕ್ರಮದಲ್ಲಿ ಮಂಗಳವಾರ ‘ಪ್ರಜಾಪ್ರಭುತ್ವದಲ್ಲಿ ಸಮಕಾಲೀನ ಮೌಲ್ಯಗಳು’ ಕುರಿತು ಮಾತನಾಡಿದ ಅವರು, ‘ಆಯಾರಾಮ್‌, ಗಯಾರಾಮ್‌ಗಳ ನಿಯಂತ್ರಣಕ್ಕಾಗಿಯೇ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಯಿತು. ಆದರೂ, ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ಹೋಗುವ ಪ್ರವೃತ್ತಿ ಪ್ರಾರಂಭವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ನನಗೆ ಕಾರ್ಮಿಕ ಸಚಿವ ಸ್ಥಾನ ನೀಡಲು ಮುಂದಾಗಿದ್ದರು. ಬಿಜೆಪಿ ಜೊತೆ ಮೈತ್ರಿ ಇದ್ದುದರಿಂದ ಮಂತ್ರಿಗಿರಿಗೆ ಪೈಪೋಟಿ ಏರ್ಪಟ್ಟಿತ್ತು. ಹಾಗಾಗಿ ನಾನು ಅದನ್ನು ನಿರಾಕರಿಸಿದ್ದೆ’ ಎಂದರು.

‘ಕಾರ್ಮಿಕರ ಒಕ್ಕೂಟದ ಚುನಾವಣೆಗಳಲ್ಲಿಯೂ ಈಗ ಹಣದ ಆಟ ಶುರುವಾಗಿದೆ. ಮತ ಹಾಕುವುದಕ್ಕೆ ಮೊದಲು ಹಣ ಪಡೆದು, ಮತದಾನ ಮಾಡಿದ ವಿಡಿಯೊ ತೋರಿಸಿ ಮತ್ತೆ ಹಣ ಕೇಳುವಂತಹ ಬೆಳವಣಿಗೆಗಳು ನಡೆಯುತ್ತಿವೆ’ ಎಂದರು.

‘ಬಹುಸಂಖ್ಯಾತರು ಅಲ್ಪಸಂಖ್ಯಾತರನ್ನು ಯಾವ ರೀತಿ ಕಾಣುತ್ತಾರೆ ಎಂಬುದರ ಮೇಲೆ ಆ ದೇಶದ ನಾಗರಿಕತೆ ಎಂಥದ್ದು ಎಂಬುದು ತಿಳಿಯುತ್ತದೆ’ ಎಂದು ಹೇಳಿದರು.

ಹಿರಿಯ ರಾಜಕಾರಣಿ ಎಂ.ಪಿ.ನಾಡಗೌಡ, ‘ರಾಜಕಾರಣದಲ್ಲಿ ಮೌಲ್ಯಗಳು ಬದಲಾಗಿಲ್ಲ. ವ್ಯಕ್ತಿಗಳು ಅದನ್ನು ಹೊಲಸು ಮಾಡಿದ್ದಾರೆ’ ಎಂದರು. 

‘ನೂರಾರು ವರ್ಷಗಳ ಹೋರಾಟದ ನಂತರ ಪ್ರಜಾಪ್ರಭುತ್ವ ಸಿಕ್ಕಿದೆ. ಆದರೆ, ಈಗಿನ ಬೆಳವಣಿಗೆಗಳನ್ನು ನೋಡಿ, ಇದೇ ರಾಜಕಾರಣ ಎಂದು ಯುವ ಸಮೂಹ ಭಾವಿಸಬಾರದು’ ಎಂದು ಕಿವಿಮಾತು ಹೇಳಿದರು. 

‘ಮೀಸಲಾತಿ ಕುರಿತು ಈಗ ಅಪಪ್ರಚಾರ ನಡೆಯುತ್ತಿದೆ. ಆದರೆ, ಅದೊಂದು ಅವಕಾಶ ಅಷ್ಟೇ. ರಾಮಕೃಷ್ಣ ಹೆಗಡೆಯವರು ಮಹಿಳೆಯರಿಗೆ ರಾಜಕೀಯದಲ್ಲಿ ಶೇ 25ರಷ್ಟು ಮೀಸಲಾತಿ ನೀಡಲು ಮುಂದಾಗಿದ್ದರು. ಆಗ, ಮಹಿಳೆಯರು ರಾಜಕೀಯಕ್ಕೆ ಬಂದರೆ ಅವರ ಚಾರಿತ್ರ್ಯ ಹಾಳಾಗುವ ಸಾಧ್ಯತೆ ಇದೆ ಎಂದು ಪುರುಷರು ಆಕ್ಷೇಪ ವ್ಯಕ್ತಪಡಿಸಿದ್ದರು. ಮಹಿಳೆಯರಿಗೆ ಮಾತ್ರ ಚಾರಿತ್ರ್ಯ ಅನ್ವಯಿಸುತ್ತದೆಯೇ, ಪುರುಷರಿಗೆ ಅನ್ವಯಿಸುವುದಿಲ್ಲವೆ ಎಂದು ಹೆಗಡೆ ಪ್ರಶ್ನಿಸಿದ್ದರು’ ಎಂದು ನಾಡಗೌಡ ನೆನಪು ಮಾಡಿಕೊಂಡರು. 

ಗಾಂಧಿಭವನದ ಆವರಣದಲ್ಲಿ ನಿರ್ಮಿಸಿರುವ ಕಿರು ಸಭಾಂಗಣವನ್ನು ಉದ್ಘಾಟಿಸಲಾಯಿತು. 

‘ಮಲ ಸ್ವಚ್ಛಗೊಳಿಸಿದ್ದ ಹೆಗಡೆ’

‘ಗಾಂಧಿ ಮೌಲ್ಯಗಳ ಅಧ್ಯಯನಕ್ಕಾಗಿ ರಾಮಕೃಷ್ಣ ಹೆಗಡೆಯವರು ವಿನೋಬಾ ಭಾವೆಯವರ ಆಶ್ರಮಕ್ಕೆ ತೆರಳಿದ್ದರು. ಮಲ ಸ್ವಚ್ಛಗೊಳಿಸುವ ಕಾರ್ಯಕ್ಕೆ ಹೆಗಡೆಯವರನ್ನು ಬಾವೆ ನಿಯೋಜಿಸಿದ್ದರು’ ಎಂದು ನಾಡಗೌಡ ಸ್ಮರಿಸಿದರು. 

‘ಹೆಗಡೆ ಒಂದೆರಡು ವಾರಗಳ ಕಾಲ ಈ ಕಾರ್ಯವನ್ನು ಯಾವ ಮುಜುಗರವಿಲ್ಲದೆಯೇ ನಿರ್ವಹಿಸಿದರು. ನೀವು ಬ್ರಾಹ್ಮಣರಾಗಿರುವುದರಿಂದ ‘ನಾವೇ ಶ್ರೇಷ್ಠ’ ಎಂಬ ಭಾವನೆ ನಿಮ್ಮಲ್ಲಿರುತ್ತದೆ. ಅದಕ್ಕೆ ಈ ಕೆಲಸ ಮಾಡಿಸಿದೆ ಎಂದು ಹೇಳಿದ್ದ ಭಾವೆಯವರು, ಹೆಗಡೆಯವರನ್ನು ತಮ್ಮ ಆಶ್ರಮದಲ್ಲಿ ಉಳಿಸಿಕೊಂಡರು. ಸ್ವಚ್ಛ ಭಾರತ ಅಭಿಯಾನ ಆಗಲೇ ಚಾಲ್ತಿಯಲ್ಲಿತ್ತು’ ಎಂದು ಹೇಳಿದರು. 

‘ಹೆಗಡೆಯವರು ಮುಂದೆ ಗಾಂಧಿ, ಭಾವೆಯವರ ಮೌಲ್ಯಗಳಿಗೆ ಪೂರಕವಾಗಿಯೇ ಆಡಳಿತ ನಡೆಸಿದರು’ ಎಂದು ನಾಡಗೌಡ ಹೇಳಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.