ಶುಕ್ರವಾರ, ಜನವರಿ 22, 2021
24 °C
ಡೆಮು ರೈಲು ಸಂಚಾರ ಆರಂಭ: ಹೊಸ ಹಾಲ್ಟ್ ಸ್ಟೇಷನ್‌ ಲೋಕಾರ್ಪಣೆ

ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲು ಪ್ರಯಾಣ ಕನಸು ನನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಮಾನ ನಿಲ್ದಾಣ ಹಾಲ್ಟ್ ಸ್ಟೇಷನ್‌ಗೆ ಬಂದ ಡೆಮು ರೈಲು

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಪ್ರಯಾಣದ ಕನಸು ಸೋಮವಾರ ಸಾಕಾರಗೊಂಡಿದೆ. ಕೆಎಸ್‌ಆರ್‌ ರೈಲು ನಿಲ್ದಾಣದಿಂದ ದೇವನಹಳ್ಳಿಗೆ ಡೆಮು ರೈಲು ಸಂಚಾರ ಆರಂಭವಾಗಿದೆ.

ಕೆಎಸ್‌ಆರ್ ರೈಲು ನಿಲ್ದಾಣದಿಂದ ಬೆಳಿಗ್ಗೆ 4.45ಕ್ಕೆ ಹೊರಟ ಡೆಮು ರೈಲು, ವಿಮಾನ ನಿಲ್ದಾಣ ಬಳಿಯ ಹಾಲ್ಟ್ ಸ್ಟೇಷನ್‌ಗೆ ಬೆಳಿಗ್ಗೆ 6.02ಕ್ಕೆ ತಲುಪಿತು. ಆ ಮೂಲಕ ಹೊಸ ಹಾಲ್ಟ್ ಸ್ಟೇಷನ್‌ ಸಾರ್ವಜನಿಕರ ಸೇವೆಗೆ ಮುಕ್ತವಾಯಿತು.

ಇದೇ ರೈಲಿನಲ್ಲಿ ಸಂಸದ ಪಿ.ಸಿ. ಮೋಹನ್ ಮತ್ತು ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಪ್ರಯಾಣಿಸಿದರು. ಹಾಲ್ಟ್ ಸ್ಟೇಷನ್‌ನಿಂದ ವಿಮಾನ ನಿಲ್ದಾಣಕ್ಕೆ 3 ಕಿಲೋ ಮೀಟರ್ ದೂರವಿದ್ದು, ಅಲ್ಲಿಗೆ ಹೋಗಲು ಉಚಿತ ಬಸ್‌ ವ್ಯವಸ್ಥೆಯನ್ನು ವಿಮಾನ ನಿಲ್ದಾಣ ಪ್ರಾಧಿಕಾರವೇ ಕಲ್ಪಿಸಿದೆ. ರೈಲಿನಲ್ಲಿ ಮೊದಲ ಬಾರಿಗೆ ವಿಮಾನ ನಿಲ್ದಾಣ ತಲುಪಿದ ಪ್ರಯಾಣಿಕರು ಸಂತಸಪಟ್ಟರು.


ಹಾಲ್ಟ್ ಸ್ಟೇಷನ್‌ನಿಂದ ವಿಮಾಣ ನಿಲ್ದಾಣಕ್ಕೆ ಉಚಿತವಾಗಿ ಪ್ರಯಾಣಿಕರನ್ನು ಕರೆದೊಯ್ಯುವ ಬಸ್

ರೈಲುಗಳ ವೇಳಾಪಟ್ಟಿ, ಪ್ರಯಾಣಿಕರ ಆಸನ ವ್ಯವಸ್ಥೆ, ಟಿಕೆಟ್ ಕೌಂಟರ್, ಕಾಫಿ ಶಾಪ್, ಶೌಚಾಲಯಗಳು ಸೇರಿ ಎಲ್ಲ ಸೌಲಭ್ಯಗಳನ್ನು ಒಳಗೊಂಡು ಸುಸಜ್ಜಿತ ರೈಲು ನಿಲ್ದಾಣ ಇದಾಗಿದೆ.

‘ವಿಮಾನಗಳ ದಟ್ಟಣೆಗೆ ಅನುಗುಣ ವಾಗಿ ಈ ರೈಲುಗಳ ವೇಳಾಪಟ್ಟಿಯನ್ನು ಸಿದ್ದಪಡಿಸಲಾಗಿದೆ. ಸದ್ಯ ಪ್ರತಿದಿನ 5 ರೈಲುಗಳು ಸಂಚರಿಸಲಿವೆ. ವಿಮಾನಗಳು ಹೆಚ್ಚು ಸಂಚರಿಸುವ ವೇಳೆ ಉಪನಗರ ರೈಲುಗಳು ಕಾರ್ಯಾಚರಣೆ ಮಾಡಲಿವೆ. ಕೆಎಸ್‌ಆರ್‌ ರೈಲು ನಿಲ್ದಾಣದಿಂದ ₹10 ಮತ್ತು  ಕಂಟೋನ್ಮೆಂಟ್‌ ರೈಲು ನಿಲ್ದಾಣ ದಿಂದ ₹15 ದರದಲ್ಲಿ ವಿಮಾನ ನಿಲ್ದಾಣ ತಲುಪಬಹುದು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಈ ಕುರಿತು ಟ್ವೀಟ್ ಮಾಡಿರುವ ರೈಲ್ವೆ ಸಚಿವ ಪಿಯೂಷ್‌ ಗೋಯಲ್, ‘ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲು ನಿಲ್ದಾಣ ಪ್ರಯಾಣಿಕರ ಸೇವೆಗೆ ಮುಕ್ತವಾಗಿದೆ. ಇದರಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದ್ದು, ಸಂಚಾರ ದಟ್ಟಣೆ ತಗ್ಗಿಸಲು ಸಹಕಾರಿಯಾಗಲಿದೆ’ ಎಂದಿದ್ದಾರೆ.

‘ಸಂಚಾರ ದಟ್ಟಣೆಯ ಕಿರಿಕಿರಿ ಇಲ್ಲದೆ ವಿಮಾನ ನಿಲ್ದಾಣಕ್ಕೆ ತಲುಪಲು ಅತ್ಯಂತ ಸುಲಭದ ಮಾರ್ಗ ಇದು. ವಿಮಾನ ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣ ಸಿಬ್ಬಂದಿಗೆ ಅನುಕೂಲವಾಗಲಿದೆ’ ಎಂದು ಸಂಸದ ಪಿ.ಸಿ. ಮೋಹನ್ ತಿಳಿಸಿದರು.

‘2020ರಲ್ಲೇ ಹೊಸ ರೈಲು ನಿಲ್ದಾಣ ಕಾರ್ಯಾರಂಭಗೊಳ್ಳಬೇಕಿತ್ತು. ಕೋವಿಡ್ ಕಾರಣದಿಂದ ವಿಳಂಬ ವಾಯಿತು’ ಎಂದು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಶೋಕ್‌ಕುಮಾರ್ ವರ್ಮ ಹೇಳಿದರು.

* ಸಂಚಾರ ದಟ್ಟಣೆಯಿಂದಾಗಿ ವಿಮಾನ ನಿಲ್ದಾಣಕ್ಕೆ ಸಾಗುವುದೇ ದೊಡ್ಡ ಕೆಲಸವಾಗುತ್ತಿತ್ತು. ರೈಲು ಸಂಚಾರ ಆರಂಭಿಸಿರುವುದು ಸಂತಸ ತಂದಿದೆ.

- ಚಂದ್ರಶೇಖರ್, ವಿಮಾನ ನಿಲ್ದಾಣ ಲಾಜಿಸ್ಟಿಕ್ ವಿಭಾಗದ ಉದ್ಯೋಗಿ

* ರೈಲು ಸಂಚಾರ ಆರಂಭವಾಗಿರುವ ಕಾರಣ ಕಡಿಮೆ ಖರ್ಚು ಮತ್ತು ಕಡಿಮೆ ಸಮಯದಲ್ಲಿ ವಿಮಾನ ನಿಲ್ದಾಣ ತಲುಪಬಹುದಾಗಿದೆ. ಮೊದಲ ದಿನವೇ ರೈಲಿನಲ್ಲಿ ಪ್ರಯಾಣ ಮಾಡಿರುವುದು ಖುಷಿ ಕೊಟ್ಟಿದೆ.

-ಜಗದೀಶ್, ಪ್ರಯಾಣಿಕ

ವಿಮಾನ ನಿಲ್ದಾಣಕ್ಕೆ ಐದು ರೈಲು

* ರಾತ್ರಿ 9 ಗಂಟೆಗೆ ಕೆಎಸ್‌ಆರ್‌ ಬೆಂಗಳೂರು ರೈಲು (ಗಾಡಿ ಸಂಖ್ಯೆ 06283) ನಿಲ್ದಾಣದಿಂದ ಹೊರಡುವ ರೈಲು ಕಂಟೋನ್ಮೆಂಟ್‌, ಬೈಯಪ್ಪನಹಳ್ಳಿ, ಯಲಹಂಕ, ಬೆಟ್ಟಹಲಸೂರು, ವಿಮಾನ ನಿಲ್ದಾಣ ಹಾಲ್ಟ್ ಸ್ಟೇಷನ್ ಮಾರ್ಗದಲ್ಲಿ ರಾತ್ರಿ 10.20ಕ್ಕೆ ದೇವನಹಳ್ಳಿ ತಲುಪಲಿದೆ. ದೇವನಹಳ್ಳಿಯಿಂದ ರಾತ್ರಿ 10.30ಕ್ಕೆ ಹೊರಡುವ ರೈಲು(ಗಾಡಿ ಸಂಖ್ಯೆ 06286) ಅದೇ ಮಾರ್ಗದಲ್ಲಿ 11.55ಕ್ಕೆ ಕೆಎಸ್‌ಆರ್‌ ನಿಲ್ದಾಣಕ್ಕೆ ಬರಲಿದೆ.

*ಬೆಳಿಗ್ಗೆ 4.45ಕ್ಕೆ ಕೆಎಸ್‌ಆರ್ ರೈಲು(ಗಾಡಿ ಸಂಖ್ಯೆ 06285) ನಿಲ್ದಾಣದಿಂದ ಹೊರಟು ಕಂಟೋನ್ಮೆಂಟ್‌, ಬೈಯಪ್ಪನಹಳ್ಳಿ, ಯಲಹಂಕ, ಬೆಟ್ಟಹಲಸೂರು, ವಿಮಾನ ನಿಲ್ದಾಣ ಹಾಲ್ಟ್ ಸ್ಟೇಷನ್ ಮಾರ್ಗದಲ್ಲಿ 6.05ಕ್ಕೆ ದೇವನಹಳ್ಳಿ ತಲುಪಲಿದೆ. ದೇವನಹಳ್ಳಿಯಿಂದ ಬೆಳಿಗ್ಗೆ 7.45ಕ್ಕೆ ಹೊರಟು (ಗಾಡಿ ಸಂಖ್ಯೆ 06284) ಅದೇ ಮಾರ್ಗದಲ್ಲಿ 8.50ಕ್ಕೆ ಕಂಟೋನ್ಮೆಂಟ್ ನಿಲ್ದಾಣಕ್ಕೆ ಬರಲಿದೆ.

* ಬೆಳಿಗ್ಗೆ 6.15ಕ್ಕೆ ದೇವನಹಳ್ಳಿಯಿಂದ ಹೊರಡುವ ಮತ್ತೊಂದು ರೈಲು (ಗಾಡಿ ಸಂಖ್ಯೆ 06288) ವಿಮಾನ ನಿಲ್ದಾಣ ಹಾಲ್ಟ್ ಸ್ಟೇಷನ್, ದೊಡ್ಡಜಾಲ ಮಾರ್ಗದಲ್ಲಿ 6.35ಕ್ಕೆ ಯಲಹಂಕ ತಲುಪಲಿದೆ. ಬೆಳಿಗ್ಗೆ 7 ಗಂಟೆಗೆ ಯಲಹಂಕದಿಂದ ಹೊರಟು (ಗಾಡಿ ಸಂಖ್ಯೆ 06287) ಅದೇ ಮಾರ್ಗದಲ್ಲಿ ದೇವನಹಳ್ಳಿಗೆ 7.35ಕ್ಕೆ ತಲುಪಲಿದೆ.

* ಬೆಂಗಳೂರು ಕಂಟೋನ್ಮೆಂಟ್‌ನಿಂದ ಸಂಜೆ 5.55ಕ್ಕೆ ಹೊರಡುವ ರೈಲು (ಗಾಡಿ ಸಂಖ್ಯೆ 06269) ಬೆಂಗಳೂರು ಪೂರ್ವ, ಬೈಯಪ್ಪನಹಳ್ಳಿ, ಚನ್ನಸಂದ್ರ, ಯಲಹಂಕ, ಬೆಟ್ಟಹಲಸೂರು, ವಿಮಾನ ನಿಲ್ದಾಣ, ದೇವನಹಳ್ಳಿ, ಚಿಕ್ಕಬಳ್ಳಾಪುರ, ಕೋಲಾರ ಮೂಲಕ ರಾತ್ರಿ 9.45ಕ್ಕೆ ಬಂಗಾರಪೇಟೆ ತಲುಪಲಿದೆ. ಬಂಗಾರಪೇಟೆಯಿಂದ ಬೆಳಿಗ್ಗೆ 5.30ಕ್ಕೆ ಹೊರಟು(ಗಾಡಿ ಸಂಖ್ಯೆ 06270) 9.25ಕ್ಕೆ ಯಶವಂತಪುರಕ್ಕೆ ಬರಲಿದೆ.

* ಯಶವಂತಪುರದಿಂದ ಬೆಳಿಗ್ಗೆ 8.30ಕ್ಕೆ ಹೊರಡುವ ರೈಲು (ಗಾಡಿ ಸಂಖ್ಯೆ 06279) ಲೊಟ್ಟೆಗೊಲ್ಲಹಳ್ಳಿ, ಯಲಹಂಕ, ವಿಮಾನ ನಿಲ್ದಾಣ, ದೇವನಹಳ್ಳಿ, ನಂದಿ ಹಾಲ್ಟ್, ಚಿಕ್ಕಬಳ್ಳಾಪುರ, ಕೋಲಾರ ಮೂಲಕ ಬಂಗಾರಪೇಟೆಗೆ 12.30ಕ್ಕೆ ತಲುಪಲಿದೆ. ಬಂಗಾರಪೇಟೆಯಿಂದ ಸಂಜೆ 4 ಗಂಟೆಗೆ ಹೊರಟು (ಗಾಡಿ ಸಂಖ್ಯೆ 06280) 8.30ಕ್ಕೆ ಕಂಟೋನ್ಮೆಂಟ್ ರೈಲು ನಿಲ್ದಾಣ ತಲುಪಲಿದೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು